Saturday, September 17, 2022

ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಶಿಕ್ಷಣವಂತರಾಗುವ ಜೊತೆಗೆ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳಿ

ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಮತ್ತು ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್, ಕಾಲೇಜಿನ ಪ್ರಾಂಶುಪಾಲ ಡಾ. ಧನಜಂಜಯ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಸೆ. ೧೭: ವಿದ್ಯಾರ್ಥಿಗಳು ಶಿಕ್ಷಣವಂತರಾಗುವ ಜೊತೆಗೆ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಶನಿವಾರ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಮತ್ತು ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಪ್ರಸ್ತುತ ಸಮಾಜದಲ್ಲಿ ಒಳ್ಳೆಯ ಗುಣಗಳನ್ನು ಹೊಂದಿರುವವರನ್ನು ಜನರು ಗುರುತಿಸುತ್ತಾರೆ. ಉತ್ತಮ ಪ್ರಜೆಯಾಗಿ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸುವಂತೆ ಸಲಹೆ ನೀಡಿದರು.
    ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ ಮಾತನಾಡಿ, ಸಾವಿರಾರು ಜನರಿಗೆ ಶಿಕ್ಷಣ ನೀಡಿರುವ ಈ ಕಾಲೇಜು ತನ್ನದೇ ಆದ ಪರಂಪರೆ, ವಿಶಿಷ್ಟತೆಯನ್ನು ಹೊಂದಿದೆ. ನಾನು ಸಹ ಈ ಕಾಲೇಜಿನಲ್ಲಿಯೇ ವಿದ್ಯಾಭ್ಯಾಸ ಮಾಡುವ ಮೂಲಕ ಸಮಾಜದಲ್ಲಿ ಎಲ್ಲಾ ರೀತಿಯಿಂದಲೂ ಬೆಳವಣಿಗೆ ಹೊಂದಲು ಈ ಕಾಲೇಜಿನ ಶಿಕ್ಷಣ ವ್ಯವಸ್ಥೆ ಇಂದಿಗೂ ಪೂರಕವಾಗಿದೆ. ಇಂತಹ ಕಾಲೇಜಿನ ಪರಿಸರವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪೂರಕವಾದ ಎಲ್ಲಾ ಸೌಲಭ್ಯಗಳನ್ನು ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ವೈದ್ಯ ಡಾ. ನರೇಂದ್ರ ಭಟ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯರಾದ ಬಿ.ಪಿ ಸರ್ವಮಂಗಳ, ಮಣಿ ಎಎನ್‌ಎಸ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಅನಿಲ್‌ಕುಮಾರ್, ಎ. ಚಂದ್ರಶೇಖರ್, ಜಯರಾಜ್, ಅಭಿದಾಲಿ, ಪ್ರಾನ್ಸಿಸ್, ಬಿ.ಕೆ ಪ್ರಮೋದ್‌ಕುಮಾರ್, ಎಂ. ಮುಸ್ವೀರ್ ಬಾಷಾ, ಜಿ. ಕಿರಣ್, ಇಸ್ರಾಯಿಲ್, ವಿನೋದ್ ವಿನ್ಸಂಟ್ ಮತ್ತು ಕೆ. ಮೋಹನ್ ರಾಜ್, ಅಮೋಸ್, ಎಸ್.ಎಸ್ ಭೈರಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


    ಕಾಲೇಜಿನ ಪ್ರಾಂಶುಪಾಲ ಡಾ. ಧನಂಜಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಡಾ. ವರದರಾಜ ನಿರೂಪಿಸಿದರು. ಪ್ರಾಧ್ಯಾಪಕರಾದ ಡಾ. ಬಿ.ಎಂ ನಾಸಿರ್‌ಖಾನ್, ಡಾ. ಡಿ. ಶಿವಲಿಂಗೇಗೌಡ, ಎಂ. ವೆಂಕಟೇಶ್, ಆರ್. ಸೀಮಾ, ಬಿ. ಗುರುಪ್ರಸಾದ್, ಡಾ. ದ್ರಾಕ್ಷಾಯಿಣಿ ಎಂ. ಡೋಂಗ್ರೆ ಮತ್ತು ಆರ್. ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಇದಕ್ಕೂ ಕಾಲೇಜಿನ ಮುಖ್ಯದ್ವಾರದಲ್ಲಿ ಕಾಲೇಜಿನ ಆವರಣದಲ್ಲಿ ಕೈಗೊಳ್ಳಲಾಗಿರುವ ಹಲವು ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿದರು. ಮಧ್ಯಾಹ್ನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಎಸ್‌ಎವಿ ಸರ್ಕಲ್ ವಿನಾಯಕಮೂರ್ತಿ ವಿಸರ್ಜನೆ

ಭದ್ರಾವತಿ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ (ಎಸ್‌ಎವಿ ಸರ್ಕಲ್)ಬಳಿ ಪ್ರತಿಷ್ಠಾಪಿಸಲಾಗಿರುವ ಶ್ರೀ ವಿನಾಯಕ ಮೂರ್ತಿ ವಿಸರ್ಜನೆ ಶನಿವಾರ ನಡೆಯಿತು. 
    ಭದ್ರಾವತಿ, ಸೆ. ೧೭: ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ (ಎಸ್‌ಎವಿ ಸರ್ಕಲ್)ಬಳಿ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಶ್ರೀ ವಿನಾಯಕ ಮೂರ್ತಿ ವಿಸರ್ಜನೆ ಶನಿವಾರ ನಡೆಯಿತು. 
ಪ್ರತಿವರ್ಷದಂತೆ ಈ ಬಾರಿ ಸಹ ವಿನಾಯಕ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿಕೊಂಡು ಬರಲಾಗಿದೆ. ವಿಸರ್ಜನೆ ಅಂಗವಾಗಿ ಅನ್ನಸಂತರ್ಪಣೆ ನೆರವೇರಿತು. ಈ ಭಾಗದ ಪ್ರಮುಖ ರಸ್ತೆಗಳಲ್ಲಿ ಡೊಳ್ಳು ಕುಣಿತ, ಮಂಗಳ ವಾದ್ಯ ಸೇರಿದಂತೆ ಇನ್ನಿತರ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಓಂ ಚಿತ್ತಾರ ಹಾಗು ಮಡಕೆ ಒಡೆಯುವ ಸ್ಪರ್ಧೆಯೊಂದಿಗೆ ಯುವಕರು ಕುಣಿದು ಸಂಭ್ರಮಿಸಿದರು. 


ಕಲಾವಿದ ವಿಷ್ಣು ಅವರ ಆಂಜನೇಯ ಕಲಾಕೃತಿ ಮೆರವಣಿಗೆಯ ಆಕರ್ಷಕ ಕೇಂದ್ರ ಬಿಂದುವಾಗಿ ಕಂಡು ಬಂದಿತು. ಹಿರಿಯೂರು ಚಾನಲ್‌ನಲ್ಲಿ ಮೂರ್ತಿ ವಿಸರ್ಜಿಸಲಾಯಿತು. 



Friday, September 16, 2022

೩೨ನೇ ವರ್ಷದ ವಿನಾಯಕ ಮೂರ್ತಿ ವಿಸರ್ಜನೆ : ಸೆ.೧೭ರಂದು ಅನ್ನಸಂತರ್ಪಣೆ

ಭದ್ರಾವತಿ ನ್ಯೂಟೌನ್ ಕೂಲಿಬ್ಲಾಕ್ ಶೆಡ್ ಶ್ರೀರಾಮ ಮಂದಿರದ ಬಳಿ ಶ್ರೀರಾಮ ಹಿಂದೂ ಸೇವಾ ಸಮಿತಿ ವತಿಯಿಂದ ೩೨ನೇ ವರ್ಷದ ಅಂಗವಾಗಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ.
    ಭದ್ರಾವತಿ, ಸೆ. ೧೬ : ನ್ಯೂಟೌನ್ ಕೂಲಿಬ್ಲಾಕ್ ಶೆಡ್  ಶ್ರೀರಾಮ ಮಂದಿರದ ಬಳಿ ಶ್ರೀರಾಮ ಹಿಂದೂ ಸೇವಾ ಸಮಿತಿ ವತಿಯಿಂದ ೩೨ನೇ ವರ್ಷದ ಅಂಗವಾಗಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ವಿಸರ್ಜನೆ ಸೆ.೧೮ರಂದು ನಡೆಯಲಿದೆ.
    ವಿಸರ್ಜನೆ ಅಂಗವಾಗಿ ಸೆ.೧೭ರಂದು ಪ್ರತಿ ವರ್ಷದಂತೆ ಈ ಬಾರಿ ಬೆಳಿಗ್ಗೆ ಹೋಮ-ಹವನ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ. ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸೆ.೧೮ರಂದು ಬೆಳಿಗ್ಗೆ ಪ್ರಮುಖ ರಸ್ತೆಗಳಲ್ಲಿ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಮಹಾಬಲಿ ಚಿತ್ರದ ನಿರ್ದೇಶಕ, ನಿರ್ಮಾಪಕ ಮಲ್ಲೇಶ್ ಹುಟ್ಟುಹಬ್ಬ ಆಚರಣೆ

ಮಹಾಬಲಿ ಚಿತ್ರದ ನಿರ್ದೇಶಕ, ನಿರ್ಮಾಪಕ ಮಲ್ಲೇಶ್ ಅವರ ಹುಟ್ಟುಹಬ್ಬದ ನಗರಸಭೆ ವ್ಯಾಪ್ತಿಯ ಸಿದ್ದಾಪುರದ ಸುರಕ್ಷಾ ವೃದ್ಧಾಶ್ರಮ ಮತ್ತು ಅನಾಥಾಶ್ರಮದಲ್ಲಿ ನಡೆಯಿತು. 
    ಭದ್ರಾವತಿ, ಸೆ. ೧೬ : ಮಹಾಬಲಿ ಚಿತ್ರದ ನಿರ್ದೇಶಕ, ನಿರ್ಮಾಪಕ ಮಲ್ಲೇಶ್ ಅವರ ಹುಟ್ಟುಹಬ್ಬದ ನಗರಸಭೆ ವ್ಯಾಪ್ತಿಯ ಸಿದ್ದಾಪುರದ ಸುರಕ್ಷಾ ವೃದ್ಧಾಶ್ರಮ ಮತ್ತು ಅನಾಥಾಶ್ರಮದಲ್ಲಿ ನಡೆಯಿತು.  
    ಸುರಕ್ಷಾ ಸೇವಾ ಟ್ರಸ್ಟ್ ವತಿಯಿಂದ ಸುರಕ್ಷಾ ವೃದ್ಧಾಶ್ರಮ ಮತ್ತು ಅನಾಥಾಶ್ರಮ ನಡೆಸಲಾಗುತ್ತಿದ್ದು, ವೃದ್ಧರು ಮತ್ತು ಅನಾಥರೊಂದಿಗೆ ಮಲ್ಲೇಶ್ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ವಿಶೇಷವಾಗಿ ಗಮನ ಸೆಳೆದರು. ಟ್ರಸ್ಟ್ ಹಾಗು ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ಮಲ್ಲೇಶ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಮಹಾಬಲಿ ಚಿತ್ರದ ನಾಯಕ ಪೃಥ್ವಿರಾಜ್ ಹಾಗು ತಂಡದವರು, ಸುರಕ್ಷಾ ಸೇವಾ ಟ್ರಸ್ಟ್ ಟ್ರಸ್ಟಿಗಳು ಮತ್ತು ಸಲಹಾ ಮಂಡಳಿ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಕಾಲುವೆಗೆ ಬಿದ್ದ ತಂದೆ-ಮಗ : ಇಬ್ಬರ ಸಾವು

    ಭದ್ರಾವತಿ, ಸೆ. ೧೬:  ತಾಲೂಕಿನ ಮಾವಿನಕೆರೆ ಕಾಲೋನಿಯ ತಂದೆ-ಮಗ ಇಬ್ಬರು ಕಾಲುವೆಯಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
    ಮಾವಿನಕೆರೆ ಕಾಲೋನಿ ನಿವಾಸಿಗಳಾದ ಮಹಮ್ಮದ್ ಆಸಂ(೬೭) ಮತ್ತು ಮಹಮ್ಮದ್ ಸನಾಉಲ್ಲಾ (೨೨) ಸಾವನ್ನಪ್ಪಿದ ತಂದೆ-ಮಗ ಎಂದು ಗುರುತಿಸಲಾಗಿದೆ.
    ಮನೆ ಸಮೀಪದಲ್ಲಿಯೇ ಕಾಲುವೆ ಇದ್ದು, ಮಹಮ್ಮದ್ ಆಸಂ ಅವರಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು, ಈ ಪೈಕಿ ಕೊನೆಯ ಮಗನಾದ ಮಹಮ್ಮದ್ ಸನಾಉಲ್ಲಾ  ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದನು ಎನ್ನಲಾಗಿದೆ. ಮಗನ ಆರೈಕೆಯನ್ನು ತಂದೆಯೇ ನೋಡಿಕೊಳ್ಳುತ್ತಿದ್ದರು. ಕಳೆದ ೩ ದಿನಗಳ ಹಿಂದೆ ಸನಾಉಲ್ಲಾ ಕಾಲುವೆಗೆ ಬಿದ್ದಿದ್ದು, ಈ ಸಂದರ್ಭದಲ್ಲಿ ತಂದೆ ಅಸಂ ಸಹ ಕಾಲುವೆ ಬಿದ್ದಿದ್ದಾರೆ ಎನ್ನಲಾಗಿದೆ. ಆದರೆ ಕಾಲುವೆಗೆ ಬೀಳಲು ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.
    ಎರಡು ದಿನ ಕಾಲುವೆಯಲ್ಲಿ ಹುಡುಕಾಟ ನಡೆಸಿದರೂ ಇಬ್ಬರ ಮೃತದೇಹ ಪತ್ತೆಯಾಗಿರಲಿಲ್ಲ .ಅಸಂ ಮೃತದೇಹ ಕಾಲುವೆಗೆ ಬಿದ್ದ ಜಾಗದಿಂದ ಅರ್ಧ ಕಿ.ಮೀ ದೂರದಲ್ಲಿ  ಹಾಗು ಮಗ ಸನಾಉಲ್ಲಾ ಮೃತದೇಹ ಹೊಳೆಹೊನ್ನೂರು ಠಾಣಾ ವ್ಯಾಪ್ತಿಯ ಹಂಚಿನ ಸಿದ್ದಾಪುರದಲ್ಲಿ ಪತ್ತೆಯಾಗಿದೆ. ಈ ಸಂಬಂಧ ಕುಟುಂಬಸ್ಥರು ಹೊಳೆಹೊನ್ನೂರು ಮತ್ತು ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಭದ್ರಾವತಿ ನಗರಸಭೆ ಸಾಮಾನ್ಯ ಸಭೆ : ಬಹುತೇಕ ಪ್ರಸ್ತಾವನೆಗಳಿಗೆ ಅನುಮೋದನೆ

ಅನುದಾನ ಹಂಚಿಕೆಯಲ್ಲಿ ತಾರತಮ್ಯ ಜೆಡಿಎಸ್ ಸದಸ್ಯರಿಂದ ಧರಣಿ

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಪ್ರಭಾರ ಅಧ್ಯಕ್ಷ ಚನ್ನಪ್ಪ ಅವರ ಅಧ್ಯಕ್ಷತೆಯಲ್ಲಿ  ಸಾಮಾನ್ಯ ಸಭೆ ನಡೆಯಿತು.
    ಭದ್ರಾವತಿ, ಸೆ. ೧೬: ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಪ್ರಭಾರ ಅಧ್ಯಕ್ಷ ಚನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯ ಆರಂಭದಲ್ಲಿ ಜೆಡಿಎಸ್ ಸದಸ್ಯರು ೧೫ನೇ ಹಣಕಾಸು ಅನುದಾನವನ್ನು ಎಲ್ಲಾ ೩೫ ವಾರ್ಡ್‌ಗಳಿಗೂ ಸಮಾನವಾಗಿ ಅನುದಾನ ಹಂಚಿಕೆ ಮಾಡುವಂತೆ ಆಗ್ರಹಿಸಿ ಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
    ಜೆಡಿಎಸ್ ಸದಸ್ಯ ಬಸವರಾಜ ಬಿ. ಆನೇಕೊಪ್ಪ ನೇತೃತ್ವದಲ್ಲಿ ಜೆಡಿಎಸ್ ಸದಸ್ಯರು ಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸುವ ಮೂಲಕ ನಗರಸಭೆ ೧೫ನೇ ಹಣಕಾಸು ಯೋಜನೆಯಡಿ ೩೫ ವಾರ್ಡಿಗಳಿಗೂ ಸಮಾನವಾಗಿ ಅನುದಾನ ಬಿಡುಗಡೆಗೊಳಿಸಬೇಕು. ಆದರೆ ಕಾಂಗ್ರೆಸ್ ಪಕ್ಷದ ಸದಸ್ಯರ ವಾರ್ಡ್‌ಗಳಿಗೆ ಮಾತ್ರ ಹೆಚ್ಚಿನ ಅನುದಾನ ಬಿಡುಗೊಳಿಸುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಇದಕ್ಕೆ ಧ್ವನಿಗೂಡಿಸಿದ ಉಳಿದ ಜೆಡಿಎಸ್ ನಗರಸಭಾ ಸದಸ್ಯರು ತಾರತಮ್ಯ ನೀತಿ ತಕ್ಷಣ ಸರಿಪಡಿಸುವಂತೆ ಆಗ್ರಹಿಸಿ ಧರಣಿ ನಡೆಸಿದರು. ಈ ನಡುವೆ ಕಾಂಗ್ರೆಸ್ ಸದಸ್ಯ ಬಿ.ಕೆ ಮೋಹನ್ ಸಾಮಾನ್ಯ ಸಭೆಯಲ್ಲಿ ಜೆಡಿಎಸ್ ಸದಸ್ಯರು ಸಭೆ ಸುಗಮವಾಗಿ ನಡೆಯಲು ಅವಕಾಶ ನೀಡದೆ ಪ್ರದರ್ಶನಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆಂದು ಹೇಳಿಕೆ ನೀಡುವ ಮೂಲಕ ಧರಣಿನಿರತರು ಅದರಲ್ಲೂ ಮಹಿಳಾ ಸದಸ್ಯರು ಮತ್ತಷ್ಟು ಆಕ್ರೋಶಗೊಳ್ಳಲು ಕಾರಣರಾದರು. ಈ ನಡುವೆ ಬಿ.ಕೆ ಮೋಹನ್ ಅಜೆಂಡಾದಲ್ಲಿರುವ ಪ್ರಸ್ತಾವನೆಗಳನ್ನು ಪಾಸ್ ಮಾಡುವಂತೆ ಮತ್ತೊಂದು ಹೇಳಿಕೆ ನೀಡಿದ್ದು, ಈ ಹಿನ್ನಲೆಯಲ್ಲಿ ಜೆಡಿಎಸ್ ಸದಸ್ಯೆ ವಿಜಯ ಅವರು ಆಕ್ರೋಶಗೊಂಡು ಅಧ್ಯಕ್ಷರು ಮತ್ತು ಆಯುಕ್ತರಿಗೆ ಧಿಕ್ಕಾರ ಹಾಕಿದರು.


ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಪ್ರಭಾರ ಅಧ್ಯಕ್ಷ ಚನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯ ಆರಂಭದಲ್ಲಿ ಜೆಡಿಎಸ್ ಸದಸ್ಯರು ೧೫ನೇ ಹಣಕಾಸು ಅನುದಾನವನ್ನು ಎಲ್ಲಾ ೩೫ ವಾರ್ಡ್‌ಗಳಿಗೂ ಸಮಾನವಾಗಿ ಅನುದಾನ ಹಂಚಿಕೆ ಮಾಡುವಂತೆ ಆಗ್ರಹಿಸಿ ಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
    ಅಧ್ಯಕ್ಷ ಚನ್ನಪ್ಪ ಧರಣಿನಿರತ ಜೆಡಿಎಸ್ ಸದಸ್ಯರಿಗೆ ತಮ್ಮ ಸ್ಥಳಗಳಿಗೆ ತೆರಳಿದರೆ ಉತ್ತರಿಸುವುದಾಗಿ ತಿಳಿಸಿದ್ದು, ಈ ಹಿನ್ನಲೆಯಲ್ಲಿ ತಮ್ಮ ಸ್ಥಳಿಗಳಿಗೆ ತೆರಳಿದರು. ಆದರೂ ಉತ್ತರಿಸುವಲ್ಲಿ ವಿಳಂಬ ಮಾಡಿದ ಹಿನ್ನಲೆಯಲ್ಲಿ ಪುನಃ ೨ನೇ ಬಾರಿಗೆ ಪ್ರತಿಭಟನೆಗೆ ಮುಂದಾದರು. ಅಂತಿಮವಾಗಿ ಅನುದಾನ ನೀಡುವ ಭರವಸೆ ನೀಡಲಾಯಿತು.
ಇದಕ್ಕೂ ಮೊದಲು ಈ ಬಾರಿ ೯ದಿನಗಳ ಕಾಲ ನಾಡಹಬ್ಬ ದಸರಾ ಆಚರಣೆ ಅದ್ದೂರಿಯಾಗಿ ಆಚರಿಸುವ ಸಂಬಂಧ ಮೆಸ್ಕಾಂ, ಪೊಲೀಸ್ ಹಾಗು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ದಸರಾ ಹಬ್ಬ ಆಚರಣೆಯಲ್ಲಿ ಶಾಲಾ ಮಕ್ಕಳ ಪಾಲ್ಗೊಳ್ಳುವಿಕೆ, ವಿದ್ಯುತ್ ದೀಪ ಅಳವಡಿಕೆ ಹಿನ್ನಲೆಯಲ್ಲಿ ಯಾವುದೇ ದುರ್ಘಟನೆ ನಡೆಯದಂತೆ ಮುನ್ನಚ್ಚರಿಕೆವಹಿಸುವುದು. ದಸರಾ ಮೆರವಣಿಗೆಯಲ್ಲಿ ಪೊಲೀಸ್ ಹಾಗು ಆರ್‌ಎಎಫ್ ಸಿಬ್ಬಂದಿಗಳಿಂದ ಪಥಸಂಚನ ನಡೆಸುವುದು ಇತ್ಯಾಧಿ ವಿಷಯ ಕುರಿತು ಚಿರ್ಚಿಸಲಾಯಿತು.  
. ಕಸ ವಿಲೇವಾರಿಗೆ ಒದಗಿಸಲಾಗಿದ್ದ ವಾಹನದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಹಿನ್ನಲೆಯಲ್ಲಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ನಗರಸಭೆ ವತಿಯಿಂದ ಪರಿಹಾರ ನೀಡಲು ಆದೇಶವಾಗಿರುವ ಹಿನ್ನಲೆಯಲ್ಲಿ ಸಲ್ಲಿಕೆಯಾದ ಪ್ರಸ್ತಾವನೆಗೆ ಸಂಬಂಧಿಸಿದಂತೆ ಸದಸ್ಯರು ಮಾತನಾಡಿ, ನಗರಸಭೆಯಲ್ಲಿ ಕಸವಿಲೇವಾರಿಗೆ ಬಳಸುತ್ತಿರುವ ವಾಹನಗಳು ಚಾಲನಾ ಪರವಾನಗಿ, ವಿಮೆ ಸೇರಿದಂತೆ ಅಗತ್ಯವಿರುವ ಸಮರ್ಪಕವಾದ ದಾಖಲಾತಿಗಳನ್ನು ಹೊಂದಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ದಾಖಲಾತಿಗಳು ಇಲ್ಲದಿದ್ದಲ್ಲಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತ ಮನುಕುಮಾರ್ ದಾಖಲಾತಿಗಳ ಪರಿಶೀಲನೆ ಹಾಗು ಅಗತ್ಯ ಕ್ರಮ ಕೈಗೊಳ್ಳಲು ೫೦ ಲಕ್ಷ ರು. ಅನುದಾನ ಮೀಸಲಿಡಲಾಗಿದೆ. ಶೀಘ್ರದಲ್ಲಿಯೇ ವಾಹನಗಳ ದಾಖಲಾತಿ ಪರಿಶೀಲನೆ ನಡೆಯಲಿದೆ ಎಂದರು.
ಸದಸ್ಯರೊಬ್ಬರು ಮಾತನಾಡಿ, ಒಟ್ಟು ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಕೇವಲ ಒಂದೇ ಒಂದು ಮುಕ್ತಿವಾಹನವಿದೆ. ಇದರಿಂದಾಗಿ ಸಮಸ್ಯೆ ಎದುರಾಗಿದೆ ಈ ಹಿನ್ನಲೆಯಲ್ಲಿ ಇನ್ನೊಂದು ಮುಕ್ತಿವಾಹಿನಿ ವಾಹನ ಖರೀದಿಸುವಂತೆ ಮನವಿ ಮಾಡಿದರು. ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಹಳೇನಗರದ ಕನಕಮಂಟಪ ಮೈದಾನದಲ್ಲಿ ಮಹಿಳೆಯರಿಗಾಗಿ ಇನ್ನೊಂದು ಶೌಚಾಲಯದ ಅಗತ್ಯವಿದ್ದು, ಯಾವುದಾದರೂ ಅನುದಾನದಲ್ಲಿ ಶೌಚಾಲಯ ನಿರ್ಮಿಸುವಂತೆ ಒತ್ತಾಯಿಸಿದರು.


ಸದಸ್ಯ ಆರ್. ಮೋಹನ್‌ಕುಮಾರ್ ಸೇರಿದಂತೆ ಇನ್ನಿತರ ಸದಸ್ಯರು ಮಾತನಾಡಿ, ನಗರಸಭೆ ಅಧಿಕಾರಿಗಳು ಸದಸ್ಯರಿಗೆ ಸರಿಯಾಗಿ ಗೌರವ ನೀಡುತ್ತಿಲ್ಲ. ಸದಸ್ಯರು ನೀಡುವ ಅರ್ಜಿಗಳಿಗೂ ಸಹ ಯಾವುದೇ ಬೆಲೆ ಇಲ್ಲದಂತೆ ವರ್ತಿಸುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಒಟ್ಟು ೨೦ ಪ್ರಸ್ತಾವನೆಗಳ ಕುರಿತು ಚರ್ಚಿಸಲಾಯಿತು. ಬಹುತೇಕ ಪ್ರಸ್ತಾವನೆಗಳಿಗೆ ಒಪ್ಪಿಗೆ ಸೂಚಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್ ಉಪಸ್ಥಿತರಿದ್ದರು.

ಆಂಜನೇಯ ಅಗ್ರಹಾರದಲ್ಲಿ ೫೦ನೇ ವರ್ಷದ ವಿನಾಯಕ ಮೂರ್ತಿ ಪ್ರತಿಷ್ಠಾಪನೆ

ಭದ್ರಾವತಿ ನಗರಸಭೆ ವಾರ್ಡ್ ನಂ. ೨೭ರ ಆಂಜನೇಯ ಅಗ್ರಹಾರ(ಕೂಲಿಬ್ಲಾಕ್ ಶೆಡ್)ದ ೨ನೇ ಕ್ರಾಸ್‌ನಲ್ಲಿ ಕಳೆದ ೫೦ ವರ್ಷಗಳಿಂದ ಗೆಳೆಯರ ಯುವಕ ಸಂಘದ ವತಿಯಿಂದ ವಿಶಿಷ್ಟವಾಗಿ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬರುವ ಮೂಲಕ ಎಲ್ಲರ ಗಮನ ಸೆಳೆಯಲಾಗುತ್ತಿದೆ.
    ಭದ್ರಾವತಿ, ಸೆ. ೧೬: ನಗರಸಭೆ ವಾರ್ಡ್ ನಂ. ೨೭ರ ಆಂಜನೇಯ ಅಗ್ರಹಾರ(ಕೂಲಿಬ್ಲಾಕ್ ಶೆಡ್)ದ ೨ನೇ ಕ್ರಾಸ್‌ನಲ್ಲಿ ಕಳೆದ ೫೦ ವರ್ಷಗಳಿಂದ ಗೆಳೆಯರ ಯುವಕ ಸಂಘದ ವತಿಯಿಂದ ವಿಶಿಷ್ಟವಾಗಿ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬರುವ ಮೂಲಕ ಎಲ್ಲರ ಗಮನ ಸೆಳೆಯಲಾಗುತ್ತಿದೆ.
    ಈ ಭಾಗದಲ್ಲಿ ಎಲ್ಲಾ ಧರ್ಮದ, ಎಲ್ಲಾ ಜಾತಿಯ ಬಡವರು ಹೆಚ್ಚಾಗಿ ವಾಸಿಸುತ್ತಿದ್ದು, ಪ್ರತಿ ವರ್ಷ ವಿನಾಯಕ ಚತುರ್ಥಿಯನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳ ಅಥವಾ ವ್ಯಕ್ತಿಗಳ ಮೇಲೆ ಅವಲಂಬಿತವಾಗದೆ ಈ ಭಾಗದ ನಿವಾಸಿಗಳೇ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
    ಈ ಬಾರಿ ೫೦ನೇ ವರ್ಷದ ವಿನಾಯಕ ಮಹೋತ್ಸವ ಅಂಗವಾಗಿ ಪೇಟ ಧರಿಸಿ, ತ್ರಿಶೂಲ ಹಾಗು ಖಡ್ಗ ಹಿಡಿದ ಬೃಹತ್ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ವಿಶೇಷ ಎಂದರೆ ಯಾವುದೇ ಪ್ರತಿಷ್ಠೆಯಿಂದ ಹಬ್ಬ ಆಚರಿಸುತ್ತಿಲ್ಲ. ಬದಲಾಗಿ ಧಾರ್ಮಿಕ ಆಚರಣೆಯಲ್ಲಿ ನಂಬಿಕೆ ಹೊಂದಿ ಸೌಹಾರ್ದತೆ ಕಂಡುಕೊಂಡಿದ್ದಾರೆ. ಈ ನಡುವೆ ಸುಳ್ಳು ಮಾಹಿತಿಯಿಂದ ಈ ಭಾಗದಲ್ಲಿ ಗೊಂದಲ ಉಂಟು ಮಾಡುವ ಪ್ರಯತ್ನ ಸಹ ನಡೆಯುತ್ತಿದ್ದು, ಇವುಗಳಿಗೆ ಕಿವಿಗೊಡದಿರುವಂತೆ ಶಾಂತಿಯುತವಾಗಿ ಹಬ್ಬ ಆಚರಿಸಲು ಎಲ್ಲರೂ ಸಹಕಾರ ನೀಡುವಂತೆ ಇಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.