ಮುಸ್ಲಿಂ ಸಮುದಾಯದವರಿಂದ ತಂಪು ಪಾನಿಯ ವಿತರಣೆ
ಭದ್ರಾವತಿ ಹೊಸಮನೆ ಶಿವಾಜಿ ವೃತ್ತದಲ್ಲಿ ಶ್ರೀ ರಾಮಮಂದಿರ, ಬಜರಂಗದಳ ಮತ್ತು ಓಂ ಹಿಂದೂ ಕೋಟೆ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ವಿನಾಯಕ ಸ್ವಾಮಿಯ ವಿಸರ್ಜನೆ ಭಾನುವಾರ ವಿಜೃಂಭಣೆಯಿಂದ ಜರುಗಿತು.
ಭದ್ರಾವತಿ, ಸೆ. ೧೮: ನಗರದ ಹೊಸಮನೆ ಶಿವಾಜಿ ವೃತ್ತದಲ್ಲಿ ಶ್ರೀ ರಾಮಮಂದಿರ, ಬಜರಂಗದಳ ಮತ್ತು ಓಂ ಹಿಂದೂ ಕೋಟೆ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ವಿನಾಯಕ ಸ್ವಾಮಿಯ ವಿಸರ್ಜನೆ ಭಾನುವಾರ ವಿಜೃಂಭಣೆಯಿಂದ ಜರುಗಿತು.
ನಗರದ ಪ್ರಮುಖ ವಿನಾಯಕ ಮೂರ್ತಿಗಳಲ್ಲಿ ಇದು ಸಹ ಒಂದಾಗಿದ್ದು, ಪ್ರತಿ ವರ್ಷ ವಿಭಿನ್ನ ಮತ್ತು ಆಕರ್ಷಕವಾಗಿ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ. ಧಾರ್ಮಿಕ ಆಚರಣೆಗಳೊಂದಿಗೆ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಸಹ ಯಶಸ್ವಿಯಾಗಿ ನೆರವೇರಿಸಿಕೊಂಡು ಬರಲಾಗುತ್ತಿದೆ.
ಮಧ್ಯಾಹ್ನ ೩.೩೦ಕ್ಕೆ ಕಲಾತಂಡಗಳೊಂದಿಗೆ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆ ಆರಂಭಗೊಂಡಿತು. ಮೆರವಣಿಗೆ ರಂಗಪ್ಪ ವೃತ್ತ, ಮಾಧವಚಾರ್ ವೃತ್ತ ಮೂಲಕ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದ ವರೆಗೆ ಸಾಗಿ ಪುನಃ ಹಿಂದಿರುಗಿ ನಗರಸಭೆ ಮುಂಭಾಗ ಭದ್ರಾ ನದಿಯಲ್ಲಿ ಮೂರ್ತಿ ವಿಸರ್ಜನೆ ನಡೆಯಿತು.
ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಈ ಭಾಗದ ಭಕ್ತರು ಮೆರವಣಿಗೆ ಪಾಲ್ಗೊಂಡು ಸಂಭ್ರಮಿಸಿದರು. ಸೇವಾಕರ್ತರಿಂದ ಪಾನಕ, ಮಜ್ಜಿಗೆ, ಪ್ರಸಾದ ವಿತರಣೆ ನಡೆಯಿತು.
ಮುಸ್ಲಿಂ ಸಮುದಾಯದವರಿಂದ ತಂಪು ಪಾನಿಯ ವಿತರಣೆ :
ಇಲ್ಲಿ ಪ್ರತಿವರ್ಷ ವಿನಾಯಕ ಮೂರ್ತಿ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ಸಹ ಸೇವಾಕರ್ತರಾಗಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾ ಹಾಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಮತ್ತು ಮುಸ್ಲಿಂ ಯುವಕರಿಂದ ತಂಪು ಪಾನಿಯ ವಿತರಿಸಲಾಯಿತು. ಅಮೀರ್ ಪಾಷಾ, ಜಮೀರ್, ಜಬಿಉಲ್ಲಾ, ಕಲಿಮುಲ್ಲಾ ಸೇರಿದಂತೆ ಇನ್ನಿತರರು ಸೇವಾಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಗಮನ ಸೆಳೆದರು. ಅಮೀರ್ ಪಾಷಾ ಅವರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾಗಿದ್ದು, ಪ್ರತಿವರ್ಷ ತಂಪು ಪಾನಿಯ ವಿತರಿಸುವ ಮೂಲಕ ಸೌಹಾರ್ದತೆ ಕಾಯ್ದುಕೊಂಡು ಬಂದಿದ್ದಾರೆ.
ಆಕರ್ಷಕ ವಿನಾಯಕ ಮೂರ್ತಿ ಕಣ್ತುಂಬಿಕೊಂಡ ಭಕ್ತರು :
ಈ ಬಾರಿ ವಿಶೇಷವಾಗಿ ಶ್ರೀರಾಮನ ಪರಮ ಭಕ್ತ, ಹಿಂದುಗಳ ಆರಾಧ್ಯ ದೈವ ಹನುಮನ ತೊಡೆಯ ಮೇಲೆ ಕುಳಿತ ಬಾಲ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಆಕರ್ಷಕ ವಿನಾಯಕ ಮೂರ್ತಿ ದರ್ಶನ ಪಡೆಯುವ ಮೂಲಕ ಭಕ್ತರು ಕಣ್ತುಂಬಿಕೊಂಡರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಭದ್ರಾವತಿ ಹೊಸಮನೆ ಶಿವಾಜಿ ವೃತ್ತದಲ್ಲಿ ಶ್ರೀ ರಾಮಮಂದಿರ, ಬಜರಂಗದಳ ಮತ್ತು ಓಂ ಹಿಂದೂ ಕೋಟೆ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ವಿನಾಯಕ ಸ್ವಾಮಿಯ ವಿಸರ್ಜನೆ ಭಾನುವಾರ ವಿಜೃಂಭಣೆಯಿಂದ ಜರುಗಿತು. ಈ ಸಂಬಂಧ ಜರುಗಿದ ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯದವರು ಭಕ್ತರಿಗೆ ತಂಪು ಪಾನಿಯ ವಿತರಿಸಿ ಗಮನ ಸೆಳೆದರು.