Sunday, September 25, 2022

ರ‍್ಯಾಮ್ಕೋಸ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ : ಅಭಿನಂದನೆ

ಭದ್ರಾವತಿಯಲ್ಲಿ ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾನುವಾರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಸೆ. ೨೫ : ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾನುವಾರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಸಂಘದ ಅಧ್ಯಕ್ಷ ಸಿ. ಮಲ್ಲೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಕಾರ್ಯನಿರ್ವಾಹಕ ಎಂ. ವಿರುಪಾಕ್ಷಪ್ಪ, ಪ್ರಸಕ್ತ ಸಾಲಿನ ವರ್ಷಾಂತ್ಯಕ್ಕೆ ೧೮೯ ಲಕ್ಷ ಷೇರುಧನ, ೩೬೬೩ ಸದಸ್ಯರನ್ನು ಸಂಘ ಹೊಂದಿದೆ. ೧೪೪ ಲಕ್ಷ ಆಪದ್ಧನನಿಧಿ ಹೊಂದಿದ್ದು, ಸುಮಾರು ೨೭ ಕೋ. ರು. ವಿವಿಧ ಠೇವಣಿಗಳನ್ನು ಒಳಗೊಂಡಿದೆ.  ೯೨೭೭ ಕ್ವಿಂಟಾಲ್(೧೩೨೫೩ ಚೀಲ)  ರು. ೪೩ ಕೋ. ಅಡಕೆ ವಹಿವಾಟು ನಡೆಸಿದ್ದು, ದಲ್ಲಾಳಿ ರು. ೫೩.೬೦ ಲಕ್ಷ ಗಳಿಸಿದೆ. ಸಂಘದ ಎಲ್ಲಾ ಖರ್ಚುವೆಚ್ಚಗಳನ್ನು ಕಳೆದು ರು.೧೦೪.೫೪ ಲಕ್ಷ ನಿವ್ವಳ ಲಾಭ ಗಳಿಸಿದೆ. ಇದು ಸಂಘದ ೨೮ ವರ್ಷದಲ್ಲೇ ಅತ್ಯಂತ ಗರಿಷ್ಠ ಲಾಭವಾಗಿದೆ ಎಂದರು.
    ಉಪಾಧ್ಯಕ್ಷ ಎಚ್.ಟಿ ಉಮೇಶ್, ನಿರ್ದೇಶಕರಾದ ಜಿ.ಈ ಚನ್ನಪ್ಪ, ಯು. ಗಂಗನಗೌಡ, ಎಚ್.ಆರ್ ತಿಮ್ಮಪ್ಪ, ಸಿ. ಹನುಮಂತು, ಬಿ.ಜಿ ಜಗದೀಶ್‌ಗೌಡ, ಮಹೇಶ್, ಎಚ್.ಎಲ್ ಷಡಾಕ್ಷರಿ, ಎಂ.ಎಸ್ ಬಸವರಾಜಪ್ಪ, ಎಚ್.ಎಸ್ ಸಂಜೀವಕುಮಾರ್, ಎಸ್. ಮಹೇಶ್ವರಪ್ಪ, ಉಮಾ, ಲಲಿತಮ್ಮ ಸೇರಿದಮತೆ ಇನ್ನಿತರರು ಉಪರಿದ್ದರು. ನಿರ್ದೇಶಕ ಎಂ. ಪರಮೇಶ್ವರಪ್ಪ ಸ್ವಾಗತಿಸಿದರು.

ನಗರಸಭೆ ವತಿಯಿಂದ ಸೆ.೨೬ರಿಂದ ನಾಡಹಬ್ಬ ದಸರಾ ಆಚರಣೆ

ಭದ್ರಾವತಿಯಲ್ಲಿ ನಗರಸಭೆ ವತಿಯಿಂದ ೧೦ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆ ಹಿನ್ನಲೆಯಲ್ಲಿ ನಗರದ ಪ್ರಮುಕ ವೃತ್ತಗಳಲ್ಲಿ ಮಹಾದ್ವಾರ ನಿರ್ಮಿಸಿರುವುದು.
    ಭದ್ರಾವತಿ, ಸೆ. ೨೫ : ನಗರಸಭೆ ವತಿಯಿಂದ ೧೦ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆಗೆ ಸೆ.೨೬ರಂದು ಬೆಳಿಗ್ಗೆ ೧೧ ಗಂಟೆಗೆ ನಗರಸಭೆ ಆವರಣದಲ್ಲಿ ಚಾಲನೆ ದೊರೆಯಲಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ ಕಾರ್ಮಿಕ ಹೋರಾಟಗಾರ ಡಿ.ಸಿ ಮಾಯಣ್ಣ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ ನಾರಾಯಣಗೌಡ, ಗೃಹ ಸಚಿವ ಅರಗಜ್ಞಾನೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ಎಸ್ ಭೋಜೆಗೌಡ, ಎಸ್. ರುದ್ರೇಗೌಡ, ಭಾರತಿ ಶೆಟ್ಟಿ, ಡಿ.ಎಸ್ ಅರುಣ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಎಚ್.ಎಂ ಮನುಕುಮಾರ್ ಹಾಗು ನಗರಸಭೆ ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಮೊದಲ ಬಾರಿಗೆ ನಗರಸಭೆ ಆವರಣದಲ್ಲಿ ದಸರಾ ಹಬ್ಬಕ್ಕೆ ಚಾಲನೆ :
    ನಗರಸಭೆ ಆವರಣದಲ್ಲಿ ನೂತನವಾಗಿ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನ ನಿರ್ಮಾಣಗೊಂಡ ನಂತರ ಮೊದಲ ಬಾರಿಗೆ ದಸರಾ ಆಚರಣೆಗೆ ಚಾಲನೆ ನೀಡಲಾಗುತ್ತಿದೆ. ಈ ಹಿಂದೆ ೩೩ ಗ್ರಾಮಗಳ ಅದಿದೇವತೆ ಹಳೇನಗರದ ಶ್ರೀ ಹಳದಮ್ಮ ದೇವಿ ದೇವಸ್ಥಾನದಲ್ಲಿ ನಾಡಹಬ್ಬಕ್ಕೆ ಚಾಲನೆ ನೀಡಲಾಗುತ್ತಿತ್ತು. ನಗರಸಭೆ ವತಿಯಿಂದ ಕೆಲವು ವರ್ಷಗಳ ಹಿಂದೆ ಪಂಚ ಲೋಹದಿಂದ ಕೂಡಿದ ಶ್ರೀ ಚಾಮುಂಡೇಶ್ವರಿ ದೇವಿ ವಿಗ್ರಹ ಖರೀದಿಸಲಾಗಿದ್ದು, ದಸರಾ ಉತ್ಸವ ಮೆರವಣಿಗೆಯಲ್ಲಿ ಈ ವಿಗ್ರಹವನ್ನು ಬಳಸಲಾಗುತ್ತಿದೆ. ಇದಕ್ಕೂ ಮೊದಲು ಚಾಮುಂಡೇಶ್ವರಿ ವಿಗ್ರಹವನ್ನು ಬಾಡಿಗೆಗೆ ಪಡೆಯಲಾಗುತ್ತಿತ್ತು.
    ಪ್ರಮುಖ ವೃತ್ತಗಳಲ್ಲಿ ಮಹಾದ್ವಾರ ನಿರ್ಮಾಣ :
    ೧೦ ದಿನಗಳ ನಾಡಹಬ್ಬ ದಸರಾ ಆಚರಣೆ ಹಿನ್ನಲೆಯಲ್ಲಿ ನಗರದ ಅಂಬೇಡ್ಕರ್ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ.
    ರಂಗಪ್ಪ ವೃತ್ತದಲ್ಲಿ ಅಳವಡಿಸಲಾಗಿರುವ ಮಹಾದ್ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಬಿ.ವೈ ರಾಘವೇಂದ್ರ ಹಾಗು ಶಾಸಕ ಬಿ.ಕೆ ಸಂಗಮೇಶ್ವರ್ ಅವರ ಬೃಹತ್ ಭಾವಚಿತ್ರಗಳು ರಾರಾಜಿಸುತ್ತಿವೆ.

Saturday, September 24, 2022

ಕಾಂಗ್ರೆಸ್ ಒಬಿಸಿ ನಗರ ಘಟಕದಿಂದ ಮಧು ಬಂಗಾರಪ್ಪಗೆ ಸ್ವಾಗತ

ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ(ಒಬಿಸಿ) ಘಟಕದ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ಶನಿವಾರ ಭದ್ರಾವತಿನಗರದ ಬೈಪಾಸ್ ರಸ್ತೆ ಬಿಳಿಕಿ ವೃತ್ತದಲ್ಲಿ ಹಿಂದುಳಿದ ನಗರ ಘಟಕದ ಪ್ರಮುಖರು ಸ್ವಾಗತಿಸುವ ಮೂಲಕ ಅಭಿನಂದಿಸಿದರು.
    ಭದ್ರಾವತಿ, ಸೆ. ೨೪: ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ(ಒಬಿಸಿ) ಘಟಕದ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ಶನಿವಾರ ನಗರದ ಬೈಪಾಸ್ ರಸ್ತೆ ಬಿಳಿಕಿ ವೃತ್ತದಲ್ಲಿ ಹಿಂದುಳಿದ ನಗರ ಘಟಕದ ಪ್ರಮುಖರು ಸ್ವಾಗತಿಸುವ ಮೂಲಕ ಅಭಿನಂದಿಸಿದರು.
    ಹಿಂದುಳಿದ ನಗರ ಘಟಕದ ಅಧ್ಯಕ್ಷ ಬಿ. ಗಂಗಾಧರ್ ನೇತೃತ್ವದಲ್ಲಿ ಮಧು ಬಂಗಾರಪ್ಪ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಉಪಾಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಜಗದೀಶ್, ಕಾರ್ಯದರ್ಶಿ ಸತೀಶ್, ಜಿಲ್ಲಾ ಕಾರ್ಯದರ್ಶಿ ಕೃಷ್ಣರಾಜ್, ಯುವ ಕಾಂಗ್ರೆಸ್ ವಕ್ತಾರ ಅಮೋಸ್, ನ್ಯಾಯವಾದಿ ಬಸವರಾಜ್, ತಾಲೂಕು ಮಡಿವಾಳ ಸಮಾಜದ ಉಪಾಧ್ಯಕ್ಷ ಮಂಜಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸೆ.೨೬ರಂದು ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ, ಸಭೆ

    ಭದ್ರಾವತಿ, ಸೆ. ೨೪: ಕೇಂದ್ರ ಸರ್ಕಾರದ ವಿದ್ಯುಚ್ಛಕ್ತಿ ಖಾಸಗೀಕರಣ ಮತ್ತು ರೈತರ ಐ.ಪಿ ಸೆಟ್ಟುಗಳಿಗೆ ಮೀಟರ್ ಅಳವಡಿಸುವ ರೈತ ವಿರೋಧಿ ನೀತಿಯನ್ನು ಖಂಡಿಸಿ ಸೆ.೨೬ರಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾ ಶಾಖೆವತಿಯಿಂದ ರೈತರ ಬೃಹತ್ ಪ್ರತಿಭಟನೆ ಮತ್ತು ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
    ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆ ಮತ್ತು ಸಭೆಯಲ್ಲಿ ರೈತರು, ಮಹಿಳೆಯರು, ಕಾರ್ಮಿಕರು, ವಿದ್ಯಾರ್ಥಿಗಳು, ಯುವಕ-ಯುವತಿಯರು, ಚಿಂತಕರು, ಬರಹಗಾರರು ಸೇರಿದಂತೆ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ತಾಲೂಕು ಅಧ್ಯಕ್ಷ ಎಚ್.ಪಿ ಹಿರಿಯಣಯ್ಯ, ಕಾರ್ಯದರ್ಶಿ ರಾಮಚಂದ್ರರಾವ್ ಹಾಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್ ಕೋರಿದ್ದಾರೆ. 

ಸೆ.೨೬ರಂದು ಅಮಾನತ್ತುಗೊಂಡಿರುವ ನ್ಯಾಯಬೆಲೆಗಳನ್ನು ರದ್ದುಪಡಿಸಲು ಆಗ್ರಹಿಸಿ ಪಾದಯಾತ್ರೆ

    ಭದ್ರಾವತಿ, ಸೆ. ೨೪ : ನಗರ ವ್ಯಾಪ್ತಿಯ ೭ ನ್ಯಾಯಬೆಲೆ ಅಂಗಡಿಗಳನ್ನು ವ್ಯಾಪಕ ಭ್ರಷ್ಟಾಚಾರ ಹಿನ್ನಲೆಯಲ್ಲಿ ಅಮಾನತ್ತುಗೊಳಿಸಲಾಗಿದ್ದು, ಈ ನ್ಯಾಯಬೆಲೆ ಅಂಗಡಿಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ಸೆ.೨೬ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
    ನಗರ ವ್ಯಾಪ್ತಿಯ ಸುಪ್ರೀಂ, ನ್ಯಾಷನಲ್ ಮತ್ತು ಜನತಾ ನ್ಯಾಯಬೆಲೆ ಅಂಗಡಿ ಸೇರಿದಂತೆ ಒಟ್ಟು ೭ ನ್ಯಾಯಬೆಲೆ ಅಂಗಡಿಗಳನ್ನು ವ್ಯಾಪಕ ಭ್ರಷ್ಟಾಚಾರದ ಹಿನ್ನಲೆಯಲ್ಲಿ ಅಮಾನತ್ತುಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ಈ ನ್ಯಾಯಬೆಲೆ ಅಂಗಡಿಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ಬೆಳಿಗ್ಗೆ ೧೧.೩೦ಕ್ಕೆ  ಜನತಾದಳ(ಸಂಯುಕ್ತ) ಕರ್ನಾಟಕ ವತಿಯಿಂದ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಹಾಗು ಕೆಆರ್‌ಎಸ್ ಪಕ್ಷ ಸಹಕಾರದೊಂದಿಗೆ ಬಿ.ಎಚ್ ರಸ್ತೆ ಅಂಡರ್‌ಬಿಡ್ಜ್ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಛೇರಿವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
    ಪಾದಯಾತ್ರೆ ನಂತರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ ಮನವಿ ಮಾಡಿದ್ದಾರೆ. 

ಪೌರಕಾರ್ಮಿಕರು ದುಶ್ಚಟಗಳಿಂದ ದೂರವಿದ್ದು ಮಕ್ಕಳನ್ನು ವಿದ್ಯಾವಂತರನ್ನಾಗಿಸಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ಬಿ.ಎಚ್ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ ಉದ್ಘಾಟಿಸಿದರು.  
    ಭದ್ರಾವತಿ, ಸೆ. ೨೪ :  ಪೌರಕಾರ್ಮಿಕರಲ್ಲಿ ಬಹಳಷ್ಟು ಮಂದಿ ಇಂದಿಗೂ ದುಶ್ಚಟಗಳಿಂದ ಹೊರಬಂದಿಲ್ಲ. ಇದರಿಂದಾಗಿ ಅವರ ಕುಟುಂಬಗಳಲ್ಲಿ ನೆಮ್ಮದಿ ಕಾಣಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ವಿಷಾದ ವ್ಯಕ್ತಪಡಿಸಿದರು.
    ಅವರು ನಗರದ ಬಿ.ಎಚ್ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಸಮಾಜದಲ್ಲಿ ಶ್ರಮಜೀವಿಗಳಾಗಿರುವ ಪೌರಕಾರ್ಮಿಕರು ಇಂದಿಗೂ ನ್ಯಾಯಯುತವಾದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಅವರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
    ಬಹಳಷ್ಟು ಪೌರಕಾರ್ಮಿಕರು ಇಂದಿಗೂ ಬದಲಾಗಿಲ್ಲ. ದುಶ್ಚಟಗಳಿಂದ ದೂರವಿದ್ದು, ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳುವ ಜೊತೆಗೆ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಕುಟುಂಬದಲ್ಲಿ ಶಾಂತಿ, ನೆಮ್ಮದಿ ಕಂಡುಕೊಳ್ಳಬೇಕು. ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಿಸಲಾಗುತ್ತಿದೆ. ಪೌರಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇವುಗಳ ಸದುಪಯೋಗಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
    ನಗರಸಭೆ ಉಪಾಧ್ಯಕ್ಷ ಚನ್ನಪ್ಪ ಮಾತನಾಡಿ, ಪೌರಕಾರ್ಮಿಕರು ತಮ್ಮ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕು. ಬಾಬಾ ಸಾಹೇಬ್ ಅಂಬೇಡ್ಕರ್‌ರವರು  ಈ ದೇಶಕ್ಕೆ ನೀಡಿರುವ ಸಂವಿಧಾನದ ಫಲವಾಗಿ ಪೌರಕಾರ್ಮಿಕರು ಸಹ  ನೆಮ್ಮದಿಯಾಗಿ ಬದಕಲು ಸಾಧ್ಯವಾಗಿದೆ. ಅಂಬೇಡ್ಕರ್‌ರವರ ಆಶಯದಂತೆ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಹೋರಾಟ, ಸಂಘಟನೆ ಮತ್ತು ಶಿಕ್ಷಣ ಅಗತ್ಯವಾಗಿದೆ. ಇದನ್ನು ಪೌರಕಾರ್ಮಿಕರು ಅರಿತುಕೊಂಡು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದರು.
    ಪೌರಾಯುಕ್ತ ಮನುಕುಮಾರ್ ಮಾತನಾಡಿ, ನಾವುಗಳು ಸಮಾಜದಲ್ಲಿ ಹೆಚ್ಚಿನ ಶ್ರಮ ಜೀವಿಗಳಾಗಿದ್ದೇವೆ. ಆದರೆ ಶ್ರಮಕ್ಕೆ ತಕ್ಕಂತೆ ಗೌರವ ಲಭಿಸುತ್ತಿಲ್ಲ. ನಮ್ಮ ವೃತ್ತಿ ಗೌರವ, ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕಾಗಿದೆ. ಕಾಲಘಟ್ಟಗಳು ಬದಲಾದಂತೆ ನಾವುಗಳು ಸಹ ಬದಲಾಗಬೇಕಾಗಿದೆ. ನಮ್ಮ ಮಕ್ಕಳನ್ನು ಸಹ ವಿದ್ಯಾವಂತರನ್ನಾಗಿ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು. ಆಗ ಮಾತ್ರ ನಮ್ಮ ವೃತ್ತಿ ಬದುಕು ಸಾರ್ಥಕವಾಗುತ್ತದೆ ಎಂದರು.  
    ನಗರಸಭೆ ಸದಸ್ಯರಾದ ಬಿ.ಕೆ ಮೋಹನ್, ಜಾರ್ಜ್ ಸೇರಿದಂತೆ ಇನ್ನಿತರರು ಮಾತನಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಜಾರ್ಜ್, ಆರ್. ಮೋಹನ್‌ಕುಮಾರ್, ಉದಯ್‌ಕುಮಾರ್, ಲತಾ ಚಂದ್ರಶೇಖರ್, ಟಿಪ್ಪು ಸುಲ್ತಾನ್, ಕೋಟೇಶ್ವರರಾವ್, ಬಸವರಾಜ ಬಿ. ಆನೇಕೊಪ್ಪ, ಮಣಿ ಎಎನ್‌ಎಸ್, ಮಂಜುಳ ಸುಬ್ಬಣ್ಣ, ಅನುಪಮ ಚನ್ನೇಶ್, ಶಶಿಕಲಾ ನಾರಾಯಣಪ್ಪ, ಶೃತಿ ವಸಂತ್, ನಾಗರತ್ನ, ಬಿ.ಎಂ ಮಂಜುನಾಥ್, ರಿಯಾಜ್ ಅಹಮದ್ ಸೇರಿದಂತೆ ನಗರಸಭೆ ಬಹುತೇಕ ಸದಸ್ಯರು, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್ ಹಾಗು ಪದಾಧಿಕಾರಿಗಳು ಉಪಸ್ಥಿತರಿದ್ದರು. ಪೌರಕಾರ್ಮಿಕರಿಂದ ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
    ನೂತನ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಅಧ್ಯಕ್ಷತೆ ವಹಿಸಿದ್ದರು. ಪರಿಸರ ಅಭಿಯಂತರ ಪ್ರಭಾಕರ್ ಸ್ವಾಗತಿಸಿದರು. ನರಸಿಂಹಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

ಪೌರಕಾರ್ಮಿಕರ ದಿನಾಚರಣೆ : ಭವ್ಯ ಮೆರವಣಿಗೆ

ಭದ್ರಾವತಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಶನಿವಾರ ರಾಷ್ಟ್ರಪಿತ ಮಹಾತ್ಮಗಾಂಧಿ ಹಾಗು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರ ಹಾಗು ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
    ಭದ್ರಾವತಿ, ಸೆ. ೨೪: ಪ್ರತಿ ವರ್ಷದಂತೆ ಈ ಬಾರಿ ಸಹ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಶನಿವಾರ ರಾಷ್ಟ್ರಪಿತ ಮಹಾತ್ಮಗಾಂಧಿ ಹಾಗು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರ ಹಾಗು ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
    ಬೆಳಿಗ್ಗೆ ನಗರದ ರಂಗಪ್ಪ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ ಹಾಗು ಅಂಬೇಡ್ಕರ್ ವೃತ್ತದ ಮೂಲಕ ಮಧ್ಯಾಹ್ನ ೧ ಗಂಟೆಗೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪ ತಲುಪಿತು.
    ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ನೂತನ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನುಕುಮಾರ್ ಹಾಗು ನಗರಸಭಾ ಸದಸ್ಯರು, ಕಂದಾಯಾಧಿಕಾರಿ ರಾಜ್‌ಕುಮಾರ್, ಪರಿಸರ ಅಭಿಯಂತರ ಪ್ರಭಾಕರ್, ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ ಸೇರಿದಂತೆ ಇನ್ನಿತರ ಅಧಿಕಾರಿಗಳು, ಸಿಬ್ಬಂದಿಗಳು, ಕರ್ನಾಟಕ ರಾಜ್ಯ ಪೌರನೌಕರರ ಪೌರ ಸೇವಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಡಿಎಸ್‌ಎಸ್ ಪ್ರಮುಖರಾದ ಸತ್ಯ, ಚಿನ್ನಯ್ಯ, ನಗರದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಪೌರಕಾರ್ಮಿಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಶನಿವಾರ ರಾಷ್ಟ್ರಪಿತ ಮಹಾತ್ಮಗಾಂಧಿ ಹಾಗು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರ ಹಾಗು ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಪೌರಾಯುಕ್ತ ಮನುಕುಮಾರ್ ಪೌರಕಾರ್ಮಿಕರೊಂದಿಗೆ ಸಂಭ್ರಮಿಸಿದರು.