Friday, October 7, 2022

ಶೌಚಾಲಯ ಗುಂಡಿಗೆ ಎಮ್ಮೆಕರು ಸಿಕ್ಕಿಹಾಕಿಕೊಂಡ ಪ್ರಕರಣ : ದೂರಿಗೆ ತಕ್ಷಣ ಸ್ಪಂದಿಸಿದ ನಗರಸಭೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಜಯಶ್ರೀ ವೃತ್ತದಲ್ಲಿರುವ ವಾರ್ಡ್ ನಂ.೩೩ರ ನಗರಸಭೆ ಹೈಟೆಕ್ ಶೌಚಾಲಯದ ಗುಂಡಿಯಲ್ಲಿ ಎಮ್ಮೆ ಕರು ಸಿಕ್ಕಿ ಹಾಕಿಕೊಂಡು ಸಂಕಷ್ಟಕ್ಕೆ ಒಳಗಾದ ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ನಗರಸಭೆ ಆಡಳಿತ ತಕ್ಷಣ ಜಾಗೃತಗೊಂಡು ತುರ್ತು ಕ್ರಮ ಕೈಗೊಂಡಿದೆ.
    ಭದ್ರಾವತಿ, ಅ. ೭: ನಗರಸಭೆ ವ್ಯಾಪ್ತಿಯ ಜನ್ನಾಪುರ ಜಯಶ್ರೀ ವೃತ್ತದಲ್ಲಿರುವ ವಾರ್ಡ್ ನಂ.೩೩ರ ನಗರಸಭೆ ಹೈಟೆಕ್ ಶೌಚಾಲಯದ ಗುಂಡಿಯಲ್ಲಿ ಎಮ್ಮೆ ಕರು ಸಿಕ್ಕಿ ಹಾಕಿಕೊಂಡು ಸಂಕಷ್ಟಕ್ಕೆ ಒಳಗಾದ ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ನಗರಸಭೆ ಆಡಳಿತ ತಕ್ಷಣ ಜಾಗೃತಗೊಂಡು ತುರ್ತು ಕ್ರಮ ಕೈಗೊಂಡಿದೆ.
    ಪೌರಾಯುಕ್ತ ಮನುಕುಮಾರ್‌ರವರು ತಕ್ಷಣ ಎಚ್ಚೆತ್ತುಕೊಂಡು ಇಂಜಿನಿಯರ್ ಕೆ.ಜಿ ಸಂತೋಷ್ ಪಾಟೀಲ್, ಸೂಪರ್ ವೈಸರ್ ಗೋವಿಂದ ನೇತೃತ್ವದ ತಂಡವನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದು, ಶೌಚಾಲಯ ಗುಂಡಿಯ ಮೇಲ್ಭಾಗವನ್ನು ಚಪ್ಪಡಿ ಕಲ್ಲಿನಿಂದ ಮುಚ್ಚಲಾಗಿದೆ. ಸದ್ಯಕ್ಕೆ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿದಿದೆ.
    ಈ ಹಿನ್ನಲೆಯಲ್ಲಿ ಬೀದಿಬದಿ ವ್ಯಾಪಾರಸ್ಥರು, ಆಟೋ ಚಾಲಕರು, ವಾರ್ಡಿನ ಸದಸ್ಯ ಆರ್. ಮೋಹನ್‌ಕುಮಾರ್ ಮತ್ತು ಮುಖಂಡ ಎಸ್.ಎಸ್ ಭೈರಪ್ಪ ಸೇರಿದಂತೆ ಇನ್ನಿತರರು ಕೃತಜ್ಞತೆ ಸಲ್ಲಿಸಿದ್ದಾರೆ.

ಹೈಟೆಕ್ ಶೌಚಾಲಯದ ಗುಂಡಿಯಲ್ಲಿ ಸಿಕ್ಕಿಹಾಕಿಕೊಂಡ ಎಮ್ಮೆಕರು

ಬೀದಿಬದಿ ವ್ಯಾಪಾರಿಗಳು, ಆಟೋ ಚಾಲಕರಿಂದ ರಕ್ಷಣೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಜಯಶ್ರೀ ವೃತ್ತದಲ್ಲಿರುವ ವಾರ್ಡ್ ನಂ.೩೩ರ ನಗರಸಭೆ ಹೈಟೆಕ್ ಶೌಚಾಲಯದ ಗುಂಡಿಯಲ್ಲಿ ಎಮ್ಮೆ ಕರು ಸಿಕ್ಕಿ ಹಾಕಿಕೊಂಡು ಸಂಕಷ್ಟಕ್ಕೆ ಒಳಗಾದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
    ಭದ್ರಾವತಿ, ಅ. ೭: ನಗರಸಭೆ ವ್ಯಾಪ್ತಿಯ ಜನ್ನಾಪುರ ಜಯಶ್ರೀ ವೃತ್ತದಲ್ಲಿರುವ ವಾರ್ಡ್ ನಂ.೩೩ರ ನಗರಸಭೆ ಹೈಟೆಕ್ ಶೌಚಾಲಯದ ಗುಂಡಿಯಲ್ಲಿ ಎಮ್ಮೆ ಕರು ಸಿಕ್ಕಿ ಹಾಕಿಕೊಂಡು ಸಂಕಷ್ಟಕ್ಕೆ ಒಳಗಾದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.


    ಕೆಲವು ದಿನಗಳಿಂದ ಶೌಚಾಲಯದ ಗುಂಡಿಯಿಂದ ಕಲ್ಮಶಗೊಂಡ ನೀರು ಹೊರಬರುತ್ತಿದ್ದು, ಈ ಭಾಗದಲ್ಲಿ ದುರ್ವಾಸನೆ ಬರುತ್ತಿದ್ದರೂ ಸಹ ಈ ಬಗ್ಗೆ ಯಾರು ಸಹ ಗಮನ ಹರಿಸಿರಲಿಲ್ಲ. ಎಮ್ಮೆ ಕರು ಈ ಗುಂಡಿಯಲ್ಲಿ ಆಕಸ್ಮಿಕವಾಗಿ ಸಿಕ್ಕಿ ಹಾಕಿಕೊಂಡಿದ್ದು, ಹೊರಬರಲು ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾಗಿದೆ. ಇದನ್ನು ಬೀದಿಬದಿ ವ್ಯಾಪಾರಿ, ಆಟೋ ಚಾಲಕರು ತಕ್ಷಣ ಎಮ್ಮೆಕರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಮ್ಮೆಕರು ಪ್ರಾಣಾಪಾಯದಿಂದ ಪಾರಾಗಿದೆ.
    ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ ಮುಖಂಡ ಎಸ್.ಎಸ್ ಭೈರಪ್ಪ ನಗರಸಭೆ ಮಾಹಿತಿ ನೀಡಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Thursday, October 6, 2022

ದೇವಸ್ಥಾನ ಜಾಗದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಭದ್ರಾವತಿ ನಗರಸಭೆ ವಾರ್ಡ್ ನಂ.೧೪ರ ಹೊಸಮನೆ ಕುರುಬರ ಬೀದಿಯಲ್ಲಿರುವ ಶ್ರೀ ಕೆರೆಕೋಡಮ್ಮ ದೇವಸ್ಥಾನ ಸಮಿತಿ ವತಿಯಿಂದ ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
    ಭದ್ರಾವತಿ, ಅ. ೬: ನಗರಸಭೆ ವಾರ್ಡ್ ನಂ.೧೪ರ ಹೊಸಮನೆ ಕುರುಬರ ಬೀದಿಯಲ್ಲಿರುವ ಶ್ರೀ ಕೆರೆಕೋಡಮ್ಮ ದೇವಸ್ಥಾನ ಸಮಿತಿ ವತಿಯಿಂದ ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
    ಗ್ರಾಮ ದೇವತೆ ಶ್ರೀ ಕೆರೆಕೋಡಮ್ಮ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ದೇವಸ್ಥಾನ ಸಮಿತಿ ತಿರ್ಮಾನಿಸಿದ್ದು, ಈ ಹಿನ್ನಲೆಯಲ್ಲಿ ಸಮಿತಿ ಅಧ್ಯಕ್ಷ ಕೇಶವ ಅಧ್ಯಕ್ಷತೆಯಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಯಿತು.
    ಗೌರವಾಧ್ಯಕ್ಷ ನಾಗರಾಜ್ ದೊಡ್ಮನೆ, ಕಾರ್ಯದರ್ಶಿ ಸಂತೋಷ್, ಖಜಾಂಚಿ ಶಿವಕುಮಾರ್, ಸ್ಥಳೀಯ ಪ್ರಮುಖರಾದ ಮಂಜಪ್ಪ, ಮಲ್ಲಿಕಾರ್ಜುನ, ಸತ್ಯನಾರಾಯಣ, ಹಾಲಪ್ಪ, ನರಸಿಂಹಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಈದ್ ಮಿಲಾದ್ ಸಡಗರ, ಸಂಭ್ರಮದ ಆಚರಣೆಗೆ ಸಹಕರಿಸಿ ; ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ

ಮುಸ್ಲಿಂ ಸಮುದಾಯದವರು ಈ ಬಾರಿ ನಗರದಲ್ಲಿ ಈದ್ ಮಿಲಾದ್ ಹಬ್ಬ ವಿಜೃಂಭಣೆಯಿಂದ ಆಚರಿಸಲು ಮುಂದಾಗಿರುವ ಹಿನ್ನಲೆಯಲ್ಲಿ ಗುರುವಾರ ಪೊಲೀಸ್ ಇಲಾಖೆ ವತಿಯಿಂದ ಭದ್ರಾವತಿ ಹಳೇನಗರದ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಶಾಂತಿ ಸಭೆ ನಡೆಸಲಾಯಿತು.
    ಭದ್ರಾವತಿ, ಅ. ೬: ಮುಸ್ಲಿಂ ಸಮುದಾಯದವರು ಈ ಬಾರಿ ನಗರದಲ್ಲಿ ಈದ್ ಮಿಲಾದ್ ಹಬ್ಬ ವಿಜೃಂಭಣೆಯಿಂದ ಆಚರಿಸಲು ಮುಂದಾಗಿರುವ ಹಿನ್ನಲೆಯಲ್ಲಿ ಗುರುವಾರ ಪೊಲೀಸ್ ಇಲಾಖೆ ವತಿಯಿಂದ ಹಳೇನಗರದ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಶಾಂತಿ ಸಭೆ ನಡೆಸಲಾಯಿತು.
    ಮಹಾಮಾರಿ ಕೊರೋನಾ ಹಿನ್ನಲೆಯಲ್ಲಿ ಕಳೆದ ೨ ವರ್ಷಗಳಿಂದ  ಈದ್ ಮಿಲಾದ್ ವಿಜೃಂಭಣೆಯಿಂದ ಆಚರಿಸಲು ಅವಕಾಶವಿರಲಿಲ್ಲ. ಈ ಬಾರಿ ಗೌರಿ-ಗಣೇಶ ಹಬ್ಬ ಆಚರಣೆಯಂತೆ ಈದ್ ಮಿಲಾದ್ ಆಚರಣೆಗೂ ಅವಕಾಶ ನೀಡಲಾಗಿದೆ. ಹಬ್ಬದ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಮೆರವಣಿಗೆ ಶಾಂತಿಯುತವಾಗಿ, ಸೌಹಾರ್ದಯುತವಾಗಿ ನಡೆಯಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ಕೋರಲಾಯಿತು.
    ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನುಕುಮಾರ್, ವೃತ್ತ ನಿರೀಕ್ಷಕರಾದ ರಾಘವೇಂದ್ರ ಕಾಂಡಿಕೆ, ಗುರುರಾಜ್, ಪೊಲೀಸ್ ಇನ್ಸ್‌ಪೆಕ್ಟರ್ ಇ.ಓ  ಮಂಜುನಾಥ್, ಲಕ್ಷ್ಮೀಪತಿ, ಉಪತಹಸೀಲ್ದಾರ್ ಉಪಸ್ಥಿತರಿದ್ದರು.
    ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ವಿ. ಕದಿರೇಶ್, ಖಜಾಂಚಿ ಮಣಿ ಎಎನ್‌ಎಸ್, ನಗರಸಭೆ ಸದಸ್ಯ ಕರೀಗೌಡ, ಪರಿಸರ ಅಭಿಯಂತರ ಪ್ರಭಾಕರ್, ಜೆಡಿಎಸ್ ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ, ಮುಸ್ಲಿಂ ಸಮುದಾಯದ ಪ್ರಮುಖರಾದ ಮುರ್ತುಜಾ ಖಾನ್, ಮಹಮದ್ ಸನಾವುಲ್ಲಾ, ಅಮೀರ್‌ಜಾನ್, ಜೆಬಿಟಿ ಬಾಬು, ಪೊಲೀಸ್ ಉಪವಿಭಾಗದ ಠಾಣಾಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಸಾಂಸ್ಕೃತಿಕ ಭವನ, ರಾಜಕಾಲುವೆ, ಕೆರೆ ಕೋಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸಿ

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರರಿಗೆ ಮನವಿ

ಭದ್ರಾವತಿ ನ್ಯೂಟೌನ್ ಭಾಗದಲ್ಲಿ ಮಹಿಳೆಯರ ಸಾಮಾಜಿಕ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸಾಂಸ್ಕೃತಿಕ ಭವನ ನಿರ್ಮಾಣ ಮಾಡುವ ಸಂಬಂಧ ನಗರಸಭೆ ವತಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಹಿನ್ನಲೆಯಲ್ಲಿ ತಕ್ಷಣ ೧ ಕೋ.ರು. ಬಿಡುಗಡೆಗೊಳಿಸುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗು ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಗಿದೆ.
    ಭದ್ರಾವತಿ, ಅ. ೬: ನಗರದ ನ್ಯೂಟೌನ್ ಭಾಗದಲ್ಲಿ ಮಹಿಳೆಯರ ಸಾಮಾಜಿಕ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸಾಂಸ್ಕೃತಿಕ ಭವನ ನಿರ್ಮಾಣ ಮಾಡುವ ಸಂಬಂಧ ನಗರಸಭೆ ವತಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಹಿನ್ನಲೆಯಲ್ಲಿ ತಕ್ಷಣ ೧ ಕೋ.ರು. ಬಿಡುಗಡೆಗೊಳಿಸುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗು ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಗಿದೆ.
    ಸಾಂಸ್ಕೃತಿಕ ಭವನ ನಿರ್ಮಾಣ ಮಾಡುವ ಸಂಬಂಧ ನಗರಸಭೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಹಿನ್ನಲೆಯಲ್ಲಿ ಇಲಾಖೆಗೆ ತಕ್ಷಣ ೧ ಕೋ. ರು. ಬಿಡುಗಡೆಗೊಳಿಸುವುದು. ಜನ್ನಾಪುರ ಸರ್ವೆ ನಂ.೭೦ರ ಜನ್ನಾಪುರ ಕೆರೆಗೆ ಕಲ್ಮಶಗೊಂಡ ನೀರು ಸೇರ್ಪಡೆಗೊಳ್ಳುತ್ತಿದ್ದು, ಇದನ್ನು ತಪ್ಪಿಸಲು ಕೆರೆಯ ಬದಿಯಲ್ಲಿ ರಾಜಕಾಲುವೆ ನಿರ್ಮಾಣ ಮಾಡಲು ನಗರಾಭಿವೃದ್ಧಿ ಇಲಾಖೆಯಿಂದ ನಗರಸಭೆಗೆ ತಕ್ಷಣ ೩ ಕೋ.ರು. ಬಿಡುಗಡೆಗೊಳಿಸುವುದು.
    ನಗರಸಭೆ ವ್ಯಾಪ್ತಿ ಹೊಸಮನೆ ತಮ್ಮಣ್ಣ ಕಾಲೋನಿ ಸಮೀಪದಲ್ಲಿರುವ ಸುಮಾರು ೮೦೦ ವರ್ಷಗಳ ಇತಿಹಾಸವಿರುವ ೫೦ ಎಕರೆ ೨೦ ಗುಂಟೆ ವಿಸ್ತ್ರೀರ್ಣವುಳ್ಳ ಸರ್ಕಾರಿ ಹಿರೇಕೆರೆ ಕೋಡಿ ಬಿದ್ದು, ರಸ್ತೆ ಹಾಳಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಕೆರೆ ಕೋಡಿ ಹಾಗು ರಸ್ತೆ ನಿರ್ಮಾಣ ಮಾಡಲು ಸುಮಾರು ೧.೫ ಕೋ.ರು. ವಿಶೇಷ ಅನುದಾನ ಬಿಡುಗಡೆಗೊಳಿಸುವ ಸಂಬಂಧ ಸರ್ಕಾರಕ್ಕೆ ಒತ್ತಾಯಿಸುವಂತೆ ಕೋರಲಾಗಿದೆ.
    ಪ್ರಮುಖರಾದ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್, ಗು ಸುವರ್ಣ ಮಹಿಳಾ ವೇದಿಕೆ ಅಧ್ಯಕ್ಷೆ ರಮಾವೆಂಕಟೇಶ್, ಶೈಲಜಾ ರಾಮಕೃಷ್ಣ, ದೇವಿಕಾ ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಎಂಪಿಎಂ ನಿವೃತ್ತ ಉದ್ಯೋಗಿ ಭೀಮರಾವ್ ನಿಧನ

ಭೀಮರಾವ್
    ಭದ್ರಾವತಿ, ಅ. ೬: ನಗರದ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಸಕ್ಕರೆ ಕಾರ್ಖಾನೆ ನಿವೃತ್ತ ಉದ್ಯೋಗಿ, ಹುಡ್ಕೋ ಕಾಲೋನಿ ನಿವಾಸಿ ಭೀಮರಾವ್(೬೨) ನಿಧನ ಹೊಂದಿದರು.
    ಪತ್ನಿ ಹಾಗು ಹೆಣ್ಣು ಮಕ್ಕಳು ಇದ್ದರು. ಇವರು ಬುಧವಾರ ರಾತ್ರಿ ಏಕಾಏಕಿ ಅಸ್ವಸ್ಥರಾಗಿದ್ದು, ತಕ್ಷಣ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ನಿಧನಕ್ಕೆ ಕಾರ್ಮಿಕ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಭಾರಿ ಮಳೆಗೆ ಧರೆಗುರುಳಿದ ತೆಂಗಿನ ಮರ

ಭದ್ರಾವತಿ, ಅ. ೬: ನಗರದಲ್ಲಿ ಬುಧವಾರ ಮಧ್ಯಾಹ್ನ ಸುಮಾರು ಎರಡು ಗಂಟೆಗಳ ಕಾಲ ಸುರಿದ ಭಾರಿ ಮಳೆಗೆ ಚನ್ನಗಿರಿ ರಸ್ತೆಯಲ್ಲಿ ತೆಂಗಿನ ಮರ ಏಕಾಏಕಿ ಧರೆಗುರುಳಿ ಬಿದ್ದಿದ್ದು, ಆದರೂ ಯಾವುದೇ ಹಾನಿ ಸಂಭವಿಸಿಲ್ಲ.
ತಾಲೂಕು ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಮಂಗೋಟೆ ರುದ್ರೇಶ್‌ರವರ ಮನೆಯ ಕಾಂಪೌಂಡ್‌ನಲ್ಲಿ ಬಾನೆತ್ತರಕ್ಕೆ ಬೆಳೆದಿದ್ದ ತೆಂಗಿನ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ತೆಂಗಿನ ಮರ ಧರೆಗುರುಳುವ ವೇಳೆ ರಸ್ತೆಯಲ್ಲಿ ಯಾರು ಸಂಚರಿಸದ ಕಾರಣ ಪ್ರಾಣಹಾನಿ ಸಂಭವಿಸಿಲ್ಲ.


ತೆಂಗಿನ ಮರ ಧರೆಗುರುಳಿದ ಸ್ಥಳದಲ್ಲಿಯೇ ಒಂದು ಕಾರು ನಿಲ್ಲಿಸಲಾಗಿದ್ದು, ಕಾರಿಗೂ ಸಹ ಯಾವುದೇ ಹಾನಿಯಾಗಿಲ್ಲ. ಆದರೆ ವಿದ್ಯುತ್ ತಂತಿಗಳು ಕತ್ತರಿಸಿ ಬಿದ್ದಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸಿಬ್ಬಂದಿಗಳು ದುರಸ್ತಿಪಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಪೌಂಡ್ ಹಾಗು ಕಬ್ಬಿಣದ ಗೇಟ್ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿವೆ.