ಮಂಗಳವಾರ, ಅಕ್ಟೋಬರ್ 11, 2022

ದೇಶಕ್ಕೆ ರೋಟರಿ ಕೊಡುಗೆ ಅನನ್ಯ : ಸಂಸದ ಬಿ.ವೈ ರಾಘವೇಂದ್ರ


ಭದ್ರಾವತಿ ನಗರದ ಉಂಬ್ಳೆಬೈಲು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ರೋಟರಿ ಸಮುದಾಯ ಭವನ ಮಂಗಳವಾರ ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿದರು. 
    ಭದ್ರಾವತಿ, ಅ. ೧೧ :  ರೋಟರಿ ಸಂಸ್ಥೆ ಸೇವಾ ಕಾರ್ಯದ ಮೂಲಕ ದೇಶಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದ್ದು, ಇಂತಹ ಸಂಸ್ಥೆ ಮತ್ತಷ್ಟು ಸದೃಢವಾಗಿ ಬೆಳೆಯಲು ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
    ಅವರು ಮಂಗಳವಾರ ನಗರದ ಉಂಬ್ಳೆಬೈಲು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ರೋಟರಿ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ,  ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿರುವ ರೋಟರಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಬಹಳಷ್ಟು ಮಂದಿ ಇದ್ದು, ಇವರೆಲ್ಲರೂ ತಮ್ಮ ಬಿಡುವಿನ ಸಮಯದಲ್ಲಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಈ ಸಂಸ್ಥೆಯ ಸೇವಾ ಕಾರ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಹ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದರು.
    ಸರ್ಕಾರದ ಅನುದಾನ ಹಾಗು ದಾನಿಗಳ ಸಹಕಾರದೊಂದಿಗೆ ಇಲ್ಲಿನ ರೋಟರಿ ಸಂಸ್ಥೆಯವರು ತಮ್ಮ ಸ್ವಂತ ಮನೆಯನ್ನು ನಿರ್ಮಿಸುವಂತೆ ಹಣ ವ್ಯರ್ಥವಾಗದಂತೆ ಸುಸಜ್ಜಿತವಾದ ಸಮುದಾಯ ಭವನ ನಿರ್ಮಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಸಂಸ್ಥೆಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳವಣಿಗೆ ಸಾಧಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರ ದೃಢ ನಿರ್ಧಾರ, ಸಂಕಲ್ಪ, ನುಡಿದಂತೆ ನಡೆಯುವ ಮನೋಭಾವ ಪ್ರಪಂಚದ ಎಲ್ಲಾ ರಾಷ್ಟ್ರಗಳು ಎದುರು ನೋಡುವಂತೆ ಮಾಡಿದೆ. ಇಂತಹ ಸಂದರ್ಭದಲ್ಲಿ ರೋಟರಿ ಸಂಸ್ಥೆ ಸಹ ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಶ್ಲಾಘನೀಯ ಎಂದರು.
    ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಡಿ.ಎಸ್ ಅರುಣ್, ಕ್ಲಬ್ ಕಾರ್ಯದರ್ಶಿ ಕೆ.ಎಚ್ ಶಿವಕುಮಾರ್, ರೋಟರಿ ಕಟ್ಟಡ ಸಮಿತಿ ಅಧ್ಯಕ್ಷ ಕೂಡ್ಲಿಗೆರೆ ಹಾಲೇಶ್, ಉಪಾಧ್ಯಕ್ಷ ಪಿ. ಸುಧಾಕರ ಶೆಟ್ಟಿ, ಕೋಶಾಧಿಕಾರಿ ಟಿ.ಎಸ್ ದುಷ್ಯಂತ್ ರಾಜ್, ಝೋನಲ್ ಲೆಫ್ಟಿನೆಂಟ್ ವಾದಿರಾಜ ಅಡಿಗ, ಜಿಲ್ಲಾ ಗವರ್ನರ್ ಡಾ. ಜಯಗೌರಿ ಹಾದಿಗಲ್, ಅಸಿಸ್ಟೆಂಟ್ ಗವರ್ನರ್ ಸುನೀತಾ ಶ್ರೀಧರ್, ಆನ್ಸ್ ಕ್ಲಬ್ ಅಧ್ಯಕ್ಷೆ ಲತಾ, ಕಾರ್ಯದರ್ಶಿ ಡಾ. ಮಯೂರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕ್ಲಬ್ ಅಧ್ಯಕ್ಷ ಅಡವೀಶಯ್ಯ ಅಧ್ಯಕ್ಷತೆವಹಿಸಿದ್ದರು. ರೋಟರಿ ಕಟ್ಟಡ ಸಮಿತಿ ಪ್ರಧಾನ ಕಾರ್ಯದರ್ಶಿ ತೀರ್ಥಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶೈಲೇಂದ್ರ ಸ್ವಾಗತಿಸಿದರು.

ಭದ್ರಾವತಿ ರೋಟರಿ ಸಮುದಾಯ ಭವನ ಉದ್ಘಾಟಿಸಿದ ಬಿ.ವೈ ರಾಘವೇಂದ್ರ 

    ಭದ್ರಾವತಿ, ಅ. 11: ಸಂಸದ ಬಿ.ವೈ ರಾಘವೇಂದ್ರ ಮಂಗಳವಾರ ರೋಟರಿ ಸಮುದಾಯ ಭವನ ಉದ್ಘಾಟಿಸಿದರು.
    ನಗರದ ಉಂಬ್ಳೆಬೈಲು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ರೋಟರಿ ಸಮುದಾಯ ಭವನ ಉದ್ಘಾಟಿಸಿ ಕ್ಲಬ್ ಸೇವಾ ಕಾರ್ಯ ಸ್ಮರಿಸಿದರು.
    ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಡಿ.ಎಸ್ ಅರುಣ್, ಕ್ಲಬ್ ಪ್ರಮುಖರಾದ ತೀರ್ಥಯ್ಯ, ಕೂಡ್ಲಿಗೆರೆ ಹಾಲೇಶ್, ದುಷ್ಯಂತ್ ರಾಜ್, ವಾದಿರಾಜ ಅಡಿಗ, ಜಯಭೇರ ಹಾದಿಗಲ್, ಸುನೀತಾ ಶ್ರೀಧರ್, ಲತಾ, ಡಾ. ಮಯೂರಿ ಸೇರಿಸದಂತೆ ಇನ್ನಿತರರು ಉಪಸ್ಥಿತರದ್ದರು.
ಕ್ಲಬ್ ಅಧ್ಯಕ್ಷ ಅಡವೀಶಯ್ಯ ಅಧ್ಯಕ್ಷತೆವಹಿಸಿದ್ದರು.

ಸೋಮವಾರ, ಅಕ್ಟೋಬರ್ 10, 2022

ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಪಾರ್ವತಿ ಬಾಯಿ ನಂಜಾನಾಯ್ಕ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಪಾರ್ವತಿ ಬಾಯಿ ನಂಜಾನಾಯ್ಕ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
    ಭದ್ರಾವತಿ, ಅ. ೧೦:  ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಪಾರ್ವತಿ ಬಾಯಿ ನಂಜಾನಾಯ್ಕ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
    ಪಂಚಾಯಿತಿಯಲ್ಲಿ ಮೀಸಲಾತಿಗೆ ಅನುಗುಣವಾಗಿ ಸದಸ್ಯರು ಅಧಿಕಾರ ಹಂಚಿಕೆ ಮಾಡಿಕೊಂಡಿದ್ದು, ಒಪ್ಪಂದದಂತೆ ಉಮಾದೇವಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನಲೆಯಲ್ಲಿ ನಡೆದ ಚುನಾವಣೆಯಲ್ಲಿ ಪಾರ್ವತಿ ಬಾಯಿ ಅವಿರೋಧವಾಗಿ ಆಯ್ಕೆಯಾದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
    ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗರಾಜ್ ಗೌಡ, ಮಾಜಿ ಅಧ್ಯಕ್ಷರಾದ ಉಮಾದೇವಿ, ಮಲಕ್ ವೀರಪ್ಪನ್, ಜಯಣ್ಣ ಮಾಜಿ ಉಪಾಧ್ಯಕ್ಷ ಕುಬೇರ್ ನಾಯ್ಕ, ಸದಸ್ಯರಾದ ಸ್ವಾಮಿನಾಥನ್, ರುದ್ರೇಶ್, ವಿಶ್ವನಾಥ್, ನೀಲಾಬಾಯಿ, ಗೌರಮ್ಮ, ಸಿದ್ದಮ್ಮ, ಭಾಗ್ಯಮ್ಮ ವಿ.ಎಸ್.ಎಸ್.ಎನ್ ಅಧ್ಯಕ್ಷ ಎನ್.ಎಚ್ ಮಹೇಶ್, ಗ್ರಾಮದ ಪ್ರಮುಖರಾದ ಕಿರ್ಯಾನಾಯ್ಕ, ಟಾಕ್ರ ನಾಯ್ಕ, ದೇವೇಂದ್ರಪ್ಪ, ವೀರಪ್ಪನ್, ತಿಪ್ಪೇಶ್, ನಾಗೇಶ್, ರಾಮಚಂದ್ರಪ್ಪ, ಅರಕೆರೆ ಲಕ್ಷ್ಮೀಪತಿ, ಪ್ರವೀಣ್ ನಾಯ್ಕ ಹಾಗು ಕೋಡಿಹಳ್ಳಿ, ಕಲ್ಪನಹಳ್ಳಿ ಹಾಗೂ ಕೂಡ್ಲಿಗೆರೆಯ ಗ್ರಾಮಸ್ಥರು ಉಪಸ್ಥಿತರಿದ್ದರು.

ನೂತನ ಪೊಲೀಸ್ ಠಾಣೆ ಉದ್ಘಾಟನೆ, ವಸತಿ ಸಮುಚ್ಛಯಕ್ಕೆ ಭೂಮಿ ಪೂಜೆ

ಗೃಹ ಸಚಿವ ಅರಗಜ್ಞಾನೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್ ಇನ್ನಿತರರು ಭಾಗಿ

ಭದ್ರಾವತಿ ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿ ನೂತನ ಪೊಲೀಸ್ ವಸತಿ ಗೃಹ ಸಮುಚ್ಛಯ ಹಾಗು ಹೊಸಮನೆ ಶಿವಾಜಿ ವೃತ್ತ ಪೊಲೀಸ್ ಠಾಣೆ ನಿರ್ಮಾಣಕ್ಕೆ  ಭೂಮಿ ಪೂಜೆ ಮತ್ತು ನೂತನವಾಗಿ ನಿರ್ಮಾಣಗೊಂಡಿರುವ ಗ್ರಾಮಾಂತರ ಪೊಲೀಸ್ ಠಾಣೆ ಕಟ್ಟಡದ ಉದ್ಘಾಟನೆ  ಸೋಮವಾರ ಗೃಹ ಸಚಿವ ಅರಗಜ್ಞಾನೇಂದ್ರ ನೆರವೇರಿಸಿದರು.
        ಭದ್ರಾವತಿ, ಅ. ೧೦: ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿ ನೂತನ ಪೊಲೀಸ್ ವಸತಿ ಗೃಹ ಸಮುಚ್ಛಯ ಹಾಗು ಹೊಸಮನೆ ಶಿವಾಜಿ ವೃತ್ತ ಪೊಲೀಸ್ ಠಾಣೆ ನಿರ್ಮಾಣಕ್ಕೆ  ಭೂಮಿ ಪೂಜೆ ಮತ್ತು ನೂತನವಾಗಿ ನಿರ್ಮಾಣಗೊಂಡಿರುವ ಗ್ರಾಮಾಂತರ ಪೊಲೀಸ್ ಠಾಣೆ ಕಟ್ಟಡದ ಉದ್ಘಾಟನೆ  ಸೋಮವಾರ ಗೃಹ ಸಚಿವ ಅರಗಜ್ಞಾನೇಂದ್ರ ನೆರವೇರಿಸಿದರು.
       ನಗರದ ಮಿಲ್ಟ್ರಿಕ್ಯಾಂಪ್ ಬೈಪಾಸ್ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗ್ರಾಮಾಂತರ ಪೊಲೀಸ್ ಠಾಣೆ ಉದ್ಘಾಟನೆ, ೧೨ ಪೊಲೀಸ್ ವಸತಿಗೃಹಗಳನ್ನೊಳಗೊಂಡ ಸಮುಚ್ಛಯ ನಿರ್ಮಾಣಕ್ಕೆ ಹಾಗು ಹೊಸಮನೆ ಮುಖ್ಯ ರಸ್ತೆಯಲ್ಲಿ ಹೊಸಮನೆ ಶಿವಾಜಿ ವೃತ್ತ ಪೊಲೀಸ್ ಠಾಣೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
    ಶಾಸಕ ಬಿ.ಕೆ ಸಂಗಮೇಶ್ವರ್, ನೂತನ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್, ಪೊಲೀಸ್ ವಿಭಾಗ ವ್ಯಾಪ್ತಿಯ ಸಹಾಯಕ ಪೊಲೀಸ್ ಅಧೀಕ್ಷಕರು, ವೃತ್ತ ನಿರೀಕ್ಷಕರು, ವಿವಿಧ ಠಾಣೆಗಳ ಠಾಣಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭಾನುವಾರ, ಅಕ್ಟೋಬರ್ 9, 2022

ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ಸಂಭ್ರಮದ ಆಚರಣೆ

ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ಅಂಗವಾಗಿ ಭದ್ರಾವತಿ ಸಿ.ಎನ್ ರಸ್ತೆ ಅನ್ವರ್ ಕಾಲೋನಿ ವೃತ್ತದಿಂದ ಮೆರವಣಿಗೆ ಬೃಹತ್ ಮೆರವಣಿಗೆ ಆರಂಭಗೊಂಡಿತು.
    ಭದ್ರಾವತಿ, ಅ. ೯:  ತಾಲೂಕಿನಾದ್ಯಂತ ಮುಸ್ಲಿಂ ಸಮುದಾಯದವರು ಭಾನುವಾರ ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ವಿಜೃಂಭಣೆಯಿಂದ ಆಚರಿಸಿದರು.  
    ಹಬ್ಬದ ಅಂಗವಾಗಿ ನಗರದ ಸಿ.ಎನ್ ರಸ್ತೆ ಅನ್ವರ್ ಕಾಲೋನಿ ವೃತ್ತದಿಂದ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ಆರಂಭಗೊಳ್ಳಬೇಕಿದ್ದ ಮೆರವಣಿಗೆ ಮಧ್ಯಾಹ್ನ ಆರಂಭಗೊಂಡಿತು. ನಗರದ ವಿವಿಧೆಡೆಗಳಿಂದ ಮಕ್ಕಳು, ಯುವಕರು, ವಯೋವೃದ್ಧರು ವಯಸ್ಸಿನ ಬೇಧ-ಭಾವವಿಲ್ಲದೆ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.


ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ಅಂಗವಾಗಿ ಭದ್ರಾವತಿ ಸಿ.ಎನ್ ರಸ್ತೆ ಅನ್ವರ್ ಕಾಲೋನಿ ವೃತ್ತದಲ್ಲಿ ಮುಸ್ಲಿಂ ಸಮುದಾಯದ ಮಕ್ಕಳು, ಯುವಕರು, ವಯೋವೃದ್ಧರು ವಯಸ್ಸಿನ ಬೇಧ-ಭಾವವಿಲ್ಲದೆ ಸಂಭ್ರಮಿಸಿದರು.

    ಮೆರವಣಿಗೆ ಆರಂಭಕ್ಕೂ ಮೊದಲು ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗು ಆಶಾಜ್ಯೋತಿ ಸ್ವಯಂ ಪ್ರೇರಿತ ರಕ್ತ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ, ಬಡ ಮಹಿಳೆಯರಿಗೆ ಸೀರೆ ವಿತರಣೆ, ಮುಸ್ಲಿಂ ಸಮುದಾಯದ ವಿವಿಧ ಸಂಘಟನೆಗಳಿಂದ ರೋಗಿಗಳಿಗೆ, ವಿಕಲಚೇತನರಿಗೆ ಹಾಲು, ಬ್ರೆಡ್, ಹಣ್ಣು ವಿತರಣೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳು ಜರುಗಿದವು. ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ತಂಪು ಪಾನೀಯ, ಮಜ್ಜಿಗೆ ವಿತರಣೆ ಸಹ ನಡೆಯಿತು.


ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ಅಂಗವಾಗಿ ಭದ್ರಾವತಿ ಸಿ.ಎನ್ ರಸ್ತೆ ಅನ್ವರ್ ಕಾಲೋನಿ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಬಡ ಮಹಿಳೆಯರಿಗೆ ಸೀರೆ ವಿತರಿಸಿದರು.
    ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನುಕುಮಾರ್, ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ದಯಾಮ ಸೇರಿದಂತೆ, ವಿವಿಧ ರಾಜಕೀಯಗಳ ಪಕ್ಷಗಳ, ಸಂಘಟನೆಗಳ ಪ್ರಮುಖರು, ಗಣ್ಯರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಮುಸ್ಲಿಂ ಸಮುದಾಯದವರಿಗೆ ಹಬ್ಬದ ಶುಭ ಕೋರಿದರು.  
    ಮೆರವಣಿಗೆ ರಂಗಪ್ಪ ವೃತ್ತ, ಮಾಧವಚಾರ್ ವೃತ್ತ ಮೂಲಕ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದವರೆಗೂ ಸಾಗಿ ನಂತರ ಸೈಯದ್ ಸಾದತ್ ದರ್ಗಾ ಮೈದಾನದಲ್ಲಿ ವಿವಿಧ ಸಾಮೂಹಿಕ ಪ್ರಾರ್ಥನೆಯೊಂದಿಗೆ ಅಂತ್ಯಗೊಂಡಿತು. ಮೆರವಣಿಗೆಯಲ್ಲಿ ಮೆಕ್ಕಾ, ಮದೀನಾ ಮಾದರಿ ಸ್ತಬ್ಧ ಚಿತ್ರಗಳು ಗಮನ ಸೆಳೆದವು.


ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ಅಂಗವಾಗಿ ಭದ್ರಾವತಿ ಸಿ.ಎನ್ ರಸ್ತೆ ಅನ್ವರ್ ಕಾಲೋನಿ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಗುಲಾಬಿ ಹೂ ನೀಡಿ ಅಭಿನಂದಿಸಿದರು.
    ಪೊಲೀಸ್ ಇಲಾಖೆ ವತಿಯಿಂದ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ವಿಕ್ರಮ್ ಅಮಟೆ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಉಪವಿಭಾಗದ ಎಲ್ಲಾ ವೃತ್ತ ನಿರೀಕ್ಷಕರು, ವಿವಿಧ ಠಾಣೆಗಳ ಠಾಣಾಧಿಕಾರಿಗಳ ಜೊತೆಗೆ ಹೆಚ್ಚುವರಿಯಾಗಿ ಅಧಿಕಾರಿಗಳು, ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿತ್ತು.

ವಾಲ್ಮೀಕಿ ಸಮುದಾಯದವರ ಏಳಿಗೆಗೆ ಬದ್ಧ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗು ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ  ತಹಸೀಲ್ದಾರ್ ಕಛೇರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪಾಲ್ಗೊಂಡು ಮಾತನಾಡಿದರು. 
    ಭದ್ರಾವತಿ, ಅ. ೯: ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯದವರ ಏಳಿಗೆಗೆ ಬದ್ಧವಾಗಿದ್ದು, ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಭರವಸೆ ನೀಡಿದರು.
    ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗು ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ  ತಹಸೀಲ್ದಾರ್ ಕಛೇರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ವಾಲ್ಮೀಕಿ ಸಮುದಾಯ ಸೇರಿದಂತೆ ಪರಿಶಿಷ್ಟ ಜಾತಿ ಹಾಗು ಪಂಗಡದ ಮೀಸಲಾತಿ ಹೆಚ್ಚಳ ಮಾಡಿರುವುದಕ್ಕೆ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯದವರ ಸಮಸ್ಯೆಗಳು ಸಾಕಷ್ಟಿವೆ. ಅಧಿಕಾರಿಗಳ ಜೊತೆ ಸೇರಿ ಈ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ವಾಲ್ಮೀಕಿ ಸಮುದಾಯ ಭವನ ಪೂರ್ಣಗೊಳ್ಳಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
    ವಾಲ್ಮೀಕಿ ಮಹರ್ಷಿ ಅವರ ಆದರ್ಶತನಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಮುನ್ನಡೆದಾಗ ಮಾತ್ರ ಅವರ ಜನ್ಮದಿನ ಆಚರಣೆ ಸಾರ್ಥಕಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕೆಂದರು.
    ಕ್ಷೇತ್ರ ಶಿಕ್ಷಣಾಧಿಕಾರಿಗಳು ಎ.ಕೆ ನಾಗೇಂದ್ರಪ್ಪ ಮಾತನಾಡಿ, ಜಗಜ್ಯೋತಿ ಬಸವಣ್ಣ, ಮಹರ್ಷಿ ವಾಲ್ಮೀಕಿ ಹಾಗು ಡಾ. ಬಿ.ಆರ್ ಅಂಬೇಡ್ಕರ್‌ರವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಇವರೆಲ್ಲರ ಬದುಕು, ಆದರ್ಶತನಗಳು, ಚಿಂತನೆಗಳು ಪೂರಕವಾಗಿವೆ ಎಂದರು.  
    ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನುಕುಮಾರ್ ಹಾಗು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ತಹಸೀಲ್ದಾರ್ ಆರ್. ಪ್ರದೀಪ್,  ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಸ್. ರಮೇಶ್, ವಾಲ್ಮೀಕಿ ಸಮಾಜದ ಪ್ರಮುಖರಾದ ಬಸವರಾಜ ಬಿ ಆನೇಕೊಪ್ಪ, ಎಂ.ಎಸ್ ಬಸರಾಜಪ್ಪ, ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಜಯಶೀಲ, ರೇಖಾಪ್ರಕಾಶ್, ರಿಯಾಜ್ ಅಹಮದ್, ಎಎಪಿ ಎಚ್ ರವಿಕುಮಾರ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ವಾಲ್ಮೀಕಿ ಸಮುದಾಯ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ತಾಲೂಕು ಕಛೇರಿ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್. ಗೋಪಾಲಪ್ಪ ನಿರೂಪಿಸಿದರು.

ಸಾಂಸ್ಕೃತಿಕ ವಿಭಿನ್ನತೆ ಕೇರಳ ಸಮಾಜದವರ ವಿಶಿಷ್ಟತೆ : ಬಿ.ವೈ ರಾಘವೇಂದ್ರ

ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಕೇರಳ ಸಮಾಜಂ ಮತ್ತು ಮಹಿಳಾ ವಿಭಾಗಂ ಹಾಗು ಯೂತ್ ವಿಂಗ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೧೦ನೇ ವರ್ಷದ ಓಣಂ ದಿನಾಚರಣೆ ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಅಕಿಉದ್ಘಾಟಿಸಿದರು.
    ಭದ್ರಾವತಿ, ಅ. ೯: ಕೇರಳ ಸಮಾಜದವರು ಸಾಂಸ್ಕೃತಿಕವಾಗಿ ವಿಭಿನ್ನತೆಯನ್ನು ಹೊಂದಿದ್ದು, ಆ ಮೂಲಕ ದೇಶದೆಲ್ಲೆಡೆ ಗುರುತಿಸಿಕೊಂಡಿದ್ದಾರೆಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
    ಅವರು ಭಾನುವಾರ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಕೇರಳ ಸಮಾಜಂ ಮತ್ತು ಮಹಿಳಾ ವಿಭಾಗಂ ಹಾಗು ಯೂತ್ ವಿಂಗ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೧೦ನೇ ವರ್ಷದ ಓಣಂ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
    ಓಣಂ ದಿನಾಚರಣೆ ಮೂಲಕ ಅವರ ಸಂಸ್ಕೃತಿ, ಕಲೆ, ವಿಭಿನ್ನತೆಗಳು ಅನಾವರಣಗೊಳಿಸುವ ಮೂಲಕ ವಿಶಿಷ್ಟತೆಯನ್ನು ಕಾಯ್ದುಕೊಂಡು ಬರುತ್ತಿದ್ದಾರೆ. ಸಮಾಜದಲ್ಲಿ ಎಲ್ಲರೊಂದಿಗೆ ವಿಶ್ವಾಸಾರ್ಹತೆ ಕಾಯ್ದುಕೊಂಡಿದ್ದಾರೆ. ಈ ಸಮಾಜಕ್ಕೆ ಅಗತ್ಯವಿರುವ ನಿವೇಶನ ಕೊಡಿಸಲು ಬದ್ಧವಾಗಿರುವುದಾಗಿ ಭರವಸೆ ನೀಡಿದರು.
    ಕಾರ್ಯಕ್ರಮದ ನೇತೃತ್ವವಹಿಸಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಕೇರಳ ಸಮಾಜದವರು ಎಲ್ಲಾ ರಂಗದಲ್ಲೂ ಮುಂಚೂಣಿಯಲ್ಲಿದ್ದಾರೆ. ಛಲ ಹಾಗು ಶ್ರಮದ ಬದುಕಿನಿಂದ ದೇಶದ ಮೂಲೆ ಮೂಲೆಗಳಲ್ಲಿ ಹಾಗು ಪ್ರಪಂಚದಾದ್ಯಂತ ತಮ್ಮ ಅಸ್ತಿತ್ವ ಕೊಂಡಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಆಹಾರ ಆರೋಗ್ಯ ಕುರಿತು ಡಾ. ಪ್ರವೀಣ್ ಉಪನ್ಯಾಸ ನೀಡಿದರು. ಅತಿಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕೇರಳ ಸಮಾಜಂ ಅಧ್ಯಕ್ಷ ಗಂಗಾಧರ ಅಧ್ಯಕ್ಷತೆ ವಹಿಸಿದ್ದರು.
    ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ಎನ್.ಡಿ ಸತೀಶ್, ಬಿಜೆಪಿ ಮುಖಂಡರಾದ ಎಸ್. ಕುಮಾರ್, ಜಿ. ಧರ್ಮಪ್ರಸಾದ್, ಕೇರಳ ಸಮಾಜಂ ಪ್ರಮುಖರಾದ ಉಡುಪಿ ಸುಗುಣ ಕುಮಾರ್, ಇಬ್ರಾಹಿಂ, ಕೇರಳ ಸಮಾಜಂ ಮಹಿಳಾ ವಿಭಾಗಂ ಅಧ್ಯಕ್ಷೆ ವಿಜಯಲಕ್ಷ್ಮೀ, ಯೂತ್ ವಿಂಗ್ಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಕೇರಳ ಸಮಾಜಂ ಪ್ರಧಾನ ಕಾರ್ಯದರ್ಶಿ ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ತಾಲೂಕಿನ ವಿವಿಧೆಡೆಗಳಿಂದ ಜಾತಿ, ಬೇಧ-ಭಾವವಿಲ್ಲದೆ ಹಿಂದೂ, ಕ್ರೈಸ್ತ, ಮುಸ್ಲಿಂ ಸಮುದಾಯದ ಮಲಯಾಳಿ ಭಾಷಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದರು.


ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಕೇರಳ ಸಮಾಜಂ ಮತ್ತು ಮಹಿಳಾ ವಿಭಾಗಂ ಹಾಗು ಯೂತ್ ವಿಂಗ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೧೦ನೇ ವರ್ಷದ ಓಣಂ ದಿನಾಚರಣೆಯಲ್ಲಿ ಅತಿಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು