ಭದ್ರಾವತಿ ಸಿ.ಎನ್ ರಸ್ತೆಯಲ್ಲಿ ಅರುಂಧತಿಯಾರ್ ಕ್ಷೇಮಾಭಿವೃದ್ಧಿ ಸಂಘದ ನೂತನ ಕಛೇರಿ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. ಸಂಘದ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ಅ. ೧೬ : ಕ್ಷೇತದಲ್ಲಿ ಅತಿಹೆಚ್ಚು ಬಡ ಕುಟುಂಬಗಳನ್ನು ಹೊಂದಿರುವ ಅರುಂಧತಿಯಾರ್ ಸಮುದಾಯದವರಿಗೆ ಎಲ್ಲಾ ರೀತಿಯ ಸಹಕಾರ ನೀಡುವ ಮೂಲಕ ಏಳಿಗೆಗೆ ಶ್ರಮಿಸುವುದಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಭರವಸೆ ನೀಡಿದರು.
ಅವರು ಭಾನುವಾರ ನಗರದ ಸಿ.ಎನ್ ರಸ್ತೆಯಲ್ಲಿ ಅರುಂಧತಿಯಾರ್ ಕ್ಷೇಮಾಭಿವೃದ್ಧಿ ಸಂಘದ ನೂತನ ಕಛೇರಿ ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಅನುದಾನದ ಜೊತೆಗೆ ವೈಯಕ್ತಿಕವಾಗಿ ಸಹ ಆರ್ಥಿಕ ನೆರವು ಕಲ್ಪಿಸಿಕೊಡಲು ಬದ್ಧವಾಗಿದ್ದು, ಸಮುದಾಯದವರು ಸಾಮಾಜಿಕ, ಶೈಕ್ಷಣಿಕ ಹಾಗು ಆರ್ಥಿಕವಾಗಿ ಬಲಗೊಳ್ಳಬೇಕೆಂದರು.
ನಗರಸಭೆ ಉಪಾಧ್ಯಕ್ಷ ಚನ್ನಪ್ಪ ಮಾತನಾಡಿ, ಅರುಂಧತಿಯಾರ್ ಸಮುದಾಯದವರು ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅವರಿಗೆ ಉತ್ತಮ ಶಿಕ್ಷಣ ಕೊಡಿಸುವ ಜೊತೆಗೆ ಆರ್ಥಿಕವಾಗಿ ಬಲಗೊಳ್ಳುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕು. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ತಮ್ಮ ಬದುಕು ಸಹ ಉತ್ತಮಗೊಳ್ಳಬೇಕು. ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರೂ ಗುರುತಿಸಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಶಾಸಕರು ಸಂಪೂರ್ಣ ಸಹಕಾರ ನೀಡಲಿದ್ದು, ನಗರಸಭೆ ಆಡಳಿತ ಸಹ ಇದಕ್ಕೆ ಪೂರಕವಾಗಿ ಸ್ಪಂದಿಸಲಿದೆ ಎಂದರು.
ಸಂಘದ ಸಂಸ್ಥಾಪಕ ಧರ್ಮಪ್ಪ, ಗೌರವಾಧ್ಯಕ್ಷ ಕುಪ್ಪಸ್ವಾಮಿ, ಅಧ್ಯಕ್ಷ ಅಣ್ಣಾದೊರೈ, ಉಪಾಧ್ಯಕ್ಷರಾದ ಬಿ. ಪಳನಿಸ್ವಾಮಿ, ಸಿ. ಐಯ್ಯನಾರ್, ಎಲ್ ಧನಪಾಲ್, ಪ್ರಧಾನ ಕಾರ್ಯದರ್ಶಿ ಕೆ. ಶರವಣ, ಕಾರ್ಯದರ್ಶಿ ಡಿ. ರವಿಕುಮಾರ್, ಸಹಕಾರ್ಯದರ್ಶಿ ಕೆ. ರಾಜಾಂಗ, ಖಜಾಂಚಿ ಎ. ಸುಬ್ರಮಣಿ, ಸಹ ಖಜಾಂಚಿ ಡಿ. ಶಬರಿವಾಸನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.