ನಂ.೪ ಬಿಆರ್‌ಎಲ್‌ಬಿಸಿ ಕಛೇರಿ ಮುಂಭಾಗ ಪ್ರತಿಭಟನೆ
ಕಳೆದ ಸುಮಾರು ೪ ತಿಂಗಳಿನಿಂದ ಪಿ.ಎಫ್, ಇಎಸ್‌ಐ ಹಾಗು ವೇತನದಿಂದ ವಂಚಿತರಾಗಿರುವ ಭದ್ರಾ ಜಲಾಶಯ ಅಧೀನಕ್ಕೆ ಒಳಪಡುವ ನಂ.೪ ವಿಭಾಗದ ವ್ಯಾಪ್ತಿಗೆ ಸೇರ್ಪಡೆಗೊಳ್ಳುವ ನಂ.೧ ಉಪವಿಭಾಗ, ಬಿಆರ್‌ಪಿ ಮತ್ತು ನಂ.೨ ಉಪವಿಭಾಗ, ಡಿ.ಬಿ ಹಳ್ಳಿ ಹಾಗು ನಂ.೩ ಉಪವಿಭಾಗ, ಭದ್ರಾವತಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ೨೨೬ ಹೊರಗುತ್ತಿಗೆ ನೌಕರರು ಕಳೆದ ೨ ದಿನಗಳಿಂದ ಪ್ರತಿಭಟನೆಗೆ ಮುಂದಾಗಿದ್ದಾರೆ.
ಭದ್ರಾವತಿ, ಅ. ೧೮: ಕಳೆದ ಸುಮಾರು ೪ ತಿಂಗಳಿನಿಂದ ಪಿ.ಎಫ್, ಇಎಸ್‌ಐ ಹಾಗು ವೇತನದಿಂದ ವಂಚಿತರಾಗಿರುವ ಭದ್ರಾ ಜಲಾಶಯ ಅಧೀನಕ್ಕೆ ಒಳಪಡುವ ನಂ.೪ ವಿಭಾಗದ ವ್ಯಾಪ್ತಿಗೆ ಸೇರ್ಪಡೆಗೊಳ್ಳುವ ನಂ.೧ ಉಪವಿಭಾಗ, ಬಿಆರ್‌ಪಿ ಮತ್ತು ನಂ.೨ ಉಪವಿಭಾಗ, ಡಿ.ಬಿ ಹಳ್ಳಿ ಹಾಗು ನಂ.೩ ಉಪವಿಭಾಗ, ಭದ್ರಾವತಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ೨೨೬ ಹೊರಗುತ್ತಿಗೆ ನೌಕರರು ಕಳೆದ ೨ ದಿನಗಳಿಂದ ಪ್ರತಿಭಟನೆಗೆ ಮುಂದಾಗಿದ್ದಾರೆ.
ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಕರ್ನಾಟಕ ನೀರಾವತಿ ನಿಗಮ ನಿಯಮಿತದ ನಂ.೪ ಬಿಆರ್‌ಎಲ್‌ಬಿಸಿ ವಿಭಾಗದ ಕಾರ್ಯಪಾಲಕ ಅಭಿಯಂತರವರ ಕಛೇರಿ ಮುಂಭಾಗ ನೌಕರರು ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ(ಕ್ರಾಂತಿಕಾರಿ ಕಾರ್ಮಿಕ ಸಂಘಗಳ ಒಕ್ಕೂಟ) ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ತಕ್ಷಣ ಪಿ.ಎಫ್, ಇಎಸ್‌ಐ ಹಾಗು ವೇತನ ಪಾವತಿಸುವಂತೆ ಆಗ್ರಹಿಸಿದ್ದಾರೆ.
ಕಳೆದ ಸುಮಾರು ೩೦-೪೦ ವರ್ಷಗಳಿಂದ ನಿರಂತರವಾಗಿ ಕರ್ತವ್ಯ ನಿರ್ವಹಿಸಿಕೊಂಡು ಬರಲಾಗುತ್ತಿದ್ದು, ಆದರೆ ಇದುವರೆಗೂ ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಲಭಿಸಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ನೌಕರರ ಕುರಿತು ಅಗತ್ಯ ಮಾಹಿತಿ ಒದಗಿಸದೆ ನಿರ್ಲಕ್ಷ್ಯತನ ವಹಿಸುತ್ತಿದ್ದಾರೆ. ಇದರಿಂದಾಗಿ ಹಲವಾರು ಬಾರಿ ಹೋರಾಟ ನಡೆಸಿ ಮನವಿ ಸಲ್ಲಿಸಿದ್ದರೂ ಸಹ ಇದುವರೆಗೂ ಯಾವುದೇ ಬೇಡಿಕೆ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಅನ್ವಯ ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಪೌರ ಕಾರ್ಮಿಕರಿಗೆ ವೇತನ ಪಾವತಿಸುವಂತೆ ನಮಗೂ ವೇತನ ಪಾವತಿಸುವುದು ಸೇರಿದಂತೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಸಂಘದ ಅಧ್ಯಕ್ಷ ಜಿ.ಡಿ ಸುಬ್ಬರಾಯಡು, ಪ್ರಧಾನ ಕಾರ್ಯದರ್ಶಿ ಜಿ.ಕೆ ಶಿವಮೂರ್ತಿ, ಸಹಕಾರ್ಯದರ್ಶಿ ಎ.ವಿ ಮಂಜುನಾಥ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.