Wednesday, October 19, 2022

ಸ್ವಸಹಾಯ ಒಕ್ಕೂಟಗಳಿಂದ ಮಾತ್ರ ಸಾಲ ಪಡೆಯಿರಿ : ಡಾ.ಎಲ್.ಎಚ್ ಮಂಜುನಾಥ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ  ನೂತನ ಎರಡು ಯೋಜನಾ ಕಛೇರಿಗಳ ಉದ್ಘಾಟನೆ ಹಾಗು ವಿವಿಧ ಅನುದಾನಗಳ ವಿತರಣಾ ಸಮಾರಂಭವನ್ನು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಉದ್ಘಾಟಿಸಿದರು.
    ಭದ್ರಾವತಿ, ಅ. ೧೯: ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯದೆ ಸ್ವಸಹಾಯ ಒಕ್ಕೂಟಗಳ ಮೂಲಕ ಸಾಲ ಪಡೆದು ಹಿಂದಿರುಗಿಸುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಯಾವುದೇ ಕಾರಣಕ್ಕೂ ಅನಗತ್ಯವಾಗಿ ಸಾಲ ಮಾಡಿ ಹಿಂದಿರುಗಿಸಲು ಸಾಧ್ಯವಾಗದಂತಹ ಪರಿಸ್ಥಿತಿಗೆ ಒಳಗಾಗಬಾರದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಲ್.ಎಚ್ ಮಂಜುನಾಥ್ ಎಚ್ಚರಿಸಿದರು.
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ  ನೂತನ ಎರಡು ಯೋಜನಾ ಕಛೇರಿಗಳ ಉದ್ಘಾಟನೆ ಹಾಗು ವಿವಿಧ ಅನುದಾನಗಳ ವಿತರಣಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಪರಿವರ್ತನೆಗಾಗಿ ಸ್ವಸಹಾಯ ಒಕ್ಕೂಟಗಳ ಮೂಲಕ ಸಾಲ ನೀಡಲಾಗುತ್ತಿದೆ. ಇದನ್ನು ಸರಿಯಾಗಿ ಅರ್ಥಮಾಡಿಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು. ದೇಶದಲ್ಲಿ ಬ್ಯಾಂಕ್ ವ್ಯವಸ್ಥೆ ಸುಭದ್ರವಾಗಿದೆ ಬ್ಯಾಂಕ್ ಮೂಲಕವೇ ಎಲ್ಲಾ ವ್ಯವಹಾರ ನಡೆಸಬೇಕು. ಖಾಸಗಿ ಹಣಕಾಸು ಸಂಸ್ಥೆಗಳಿಂದ ಯಾವುದೇ ಕಾರಣಕ್ಕೂ ಸಾಲ ಸೌಲಭ್ಯ ಪಡೆಯಬಾರದು. ಸ್ವಸಹಾಯ ಒಕ್ಕೂಟ ಬ್ಯಾಂಕ್ ವ್ಯವಸ್ಥೆ ಮೇಲೆ ನಂಬಿಕೆ ಹೊಂದುವ ಜೊತೆಗೆ ಆರ್ಥಿಕ ಸೌಲಭ್ಯಗಳನ್ನು ಸುಲಭವಾಗಿ ಕಲ್ಪಿಸಿಕೊಡುತ್ತಿದೆ ಎಂದರು.
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸರ್ಕಾರಿ ಶಾಲೆ, ಆಸ್ಪತ್ರೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸರ್ಕಾರಿ ಶಾಲೆ, ಆಸ್ಪತ್ರೆಗಳ ಮೇಲೆ ಜನರು ಹೊಂದಿರುವ ಧೋರಣೆ ಬದಲಿಸಿಕೊಂಡಾಗ ಮಾತ್ರ ಅವುಗಳು ಸಹ ಅಭಿವೃದ್ಧಿ ಹೊಂದಲು ಸಾಧ್ಯ. ಸರ್ಕಾರ ಗುರುತಿಸದ ಕೆಲವೊಂದು ಸೇವಾ ಕಾರ್ಯಗಳನ್ನು ಟ್ರಸ್ಟ್ ಗುರುತಿಸಿ ಅವುಗಳಲ್ಲಿ ತೊಡಗಿಸಿಕೊಂಡಿರುವುದು ವಿಶೇಷವಾಗಿದೆ ಎಂದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಟ್ರಸ್ಟ್ ನಿಸ್ವಾರ್ಥ ಸೇವೆ ಮೂಲಕ ರಾಜ್ಯದಲ್ಲಿಯೇ ಮಾದರಿಯಾಗುವ ಮೂಲಕ ಲಕ್ಷಾಂತರ ಕುಟುಂಬಗಳ ಭವಿಷ್ಯ ಉಜ್ವಲಗೊಳಿಸಿದೆ. ಅಲ್ಲದೆ ಸಂಕಷ್ಟದಲ್ಲಿರುವ ಎಲ್ಲಾ ಜಾತಿ, ಎಲ್ಲಾ ಧರ್ಮದವರ ನೆರವಿಗೆ ಮುಂದಾಗಬೇಕೆಂಬ ಪರಿಕಲ್ಪನೆ ತೋರಿಸಿಕೊಟ್ಟಿದೆ. ಟ್ರಸ್ಟ್ ಸಾಮಾಜಿಕ ಯೋಜನೆಗಳು, ಅವುಗಳನ್ನು ಅನುಷ್ಠಾನಗೊಳಿಸುವಲ್ಲಿನ ಬದ್ಧತೆ, ಕರ್ತವ್ಯ ನಿರ್ವಹಿಸುತ್ತಿರುವವರ ಪ್ರಾಮಾಣಿಕತನ ಎಲ್ಲವೂ ಮತ್ತಷ್ಟು ಬೆಳವಣಿಗೆಗೆ ಪೂರಕವಾಗಿವೆ. ಭವಿಷ್ಯದಲ್ಲಿ ಸರ್ಕಾರಿ ಶಾಲೆಗಳು ಅಭಿವೃದ್ಧಿಗೊಳ್ಳಬೇಕು. ಈ ನಿಟ್ಟಿನಲ್ಲಿ ಟ್ರಸ್ಟ್ ಇನ್ನೂ ಹೆಚ್ಚಿನ ಗಮನ ಹರಿಸಬೇಕೆಂದು ಮನವಿ ಮಾಡಿದರು.
    ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಜಿ. ಆನಂದಕುಮಾರ್, ಸದಸ್ಯರಾದ ಜಯರಾಂ ಗೊಂದಿ, ಆರ್. ಕರುಣಾಮೂರ್ತಿ, ಪಾಲಾಕ್ಷಪ್ಪ, ಯೋಜನೆ ಪ್ರಾದೇಶಿಕ ನಿರ್ದೇಶಕಿ ಬಿ. ಗೀತಾ, ಚಂದ್ರಶೇಖರ್, ಹಿರಿಯ ಸಹಕರಿ ಧುರೀಣ ಕೆ.ಎನ್ ಭೈರಪ್ಪಗೌಡ, ತಾಲೂಕು ಯೋಜನಾಧಿಕಾರಿಗಳಾದ ವೈ. ಪ್ರಕಾಶ್ ನಾಯ್ಕ, ಮಾಧವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ವಿವಿಧ ಅನುದಾನಗಳನ್ನು ವಿತರಿಸಲಾಯಿತು.

ಭದ್ರಾವತಿ ತಮಿಳ್ ಸಂಗಮ್ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ

    ಭದ್ರಾವತಿ, ಅ. ೧೯ : ನಗರದ ತರೀಕೆರೆ ರಸ್ತೆಯಲ್ಲಿರುವ ಭದ್ರಾವತಿ ತಮಿಳ್ ಸಂಗಮ್ ಸಂಘಕ್ಕೆ ನೂತನ ಪದಾಧಿಕಾರಿಗಳು ನೇಮಕಗೊಂಡಿದ್ದಾರೆ.
    ಅಧ್ಯಕ್ಷರಾಗಿ ಜಿ.ಎನ್ ರವಿಕುಮಾರ್, ಉಪಾಧ್ಯಕ್ಷರಾಗಿ ಕೆ. ಚಂದ್ರಶೇಖರ್, ಕಾರ್ಯದರ್ಶಿಯಾಗಿ ವಿ. ಮಣಿ, ಸಹ ಕಾರ್ಯದರ್ಶಿಗಳಾಗಿ ವಿ. ರಾಜ, ಶಾಮ್‌ರಾಜ್(ಸೋಮು), ಖಜಾಂಚಿಯಾಗಿ ವೀರಭದ್ರನ್ ಹಾಗು ನಿರ್ದೇಶಕರಾಗಿ ಸಿ. ವಡಿವೇಲು, ಜಿ. ಸುರೇಶ್‌ಕುಮಾರ್, ದಯಾನಂದ, ಎಂ.ಎಲ್ ನಾರಾಯಣಸ್ವಾಮಿ, ಎಂ. ಸುಬ್ರಮಣಿ, ಜಿ.ಎನ್ ಸತ್ಯಮೂರ್ತಿ, ಸಿ. ವಾಸುದೇವನ್, ಆರ್. ಮುತ್ತುಸ್ವಾಮಿ ಮತ್ತು ಮಂಜುಳ ನೇಮಕಗೊಂಡಿದ್ದಾರೆಂದು ಕಾರ್ಯದರ್ಶಿ ವಿ. ಮಣಿ ತಿಳಿಸಿದ್ದಾರೆ.

--

Tuesday, October 18, 2022

ಅ.೧೯ರಂದು ನೂತನ ಎರಡು ಯೋಜನಾ ಕಛೇರಿಗಳ ಉದ್ಘಾಟನೆ

    ಭದ್ರಾವತಿ, ಅ. ೧೮ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ನೂತನ ಎರಡು ಯೋಜನಾ ಕಛೇರಿಗಳ ಉದ್ಘಾಟನೆ ಹಾಗು ವಿವಿಧ ಅನುದಾನಗಳ ವಿತರಣಾ ಸಮಾರಂಭ ಅ. ೧೯ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಅಧ್ಯಕ್ಷತೆ ವಹಿಸಲಿದ್ದಾರೆ. ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಲ್.ಎಚ್ ಮಂಜುನಾಥ್ ನಾಮಫಲಕ ಅನಾವರಣಗೊಳಿಸಲಿದ್ದು, ತಹಸೀಲ್ದಾರ್ ಆರ್. ಪ್ರದೀಪ್ ವಿವಿಧ ಅನುದಾನ ವಿತರಣೆ ಮಾಡಲಿದ್ದಾರೆ.
    ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಜಿ. ಆನಂದಕುಮಾರ್, ಸದಸ್ಯರಾದ ಜಯರಾಂ ಗೊಂದಿ, ಆರ್. ಕರುಣಾಮೂರ್ತಿ, ಪಾಲಾಕ್ಷಪ್ಪ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಯೋಜನೆ ಪ್ರಾದೇಶಿಕ ನಿರ್ದೇಶಕಿ ಬಿ. ಗೀತಾ, ತಾಲೂಕು ಯೋಜನಾಧಿಕಾರಿಗಳಾದ ವೈ. ಪ್ರಕಾಶ್ ನಾಯ್ಕ, ಮಾಧವ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

ಜಿಲ್ಲಾಮಟ್ಟದ ೧೪, ೧೭ ವರ್ಷ ವಯೋಮಿತಿಯೊಳಗಿನ ಬಾಲಕರ ಕ್ರಿಕೆಟ್ ಆಯ್ಕೆ ಟ್ರಯಲ್ಸ್

೭ ತಾಲೂಕುಗಳಿಂದ ಒಟ್ಟು ೧೭೨ ವಿದ್ಯಾರ್ಥಿಗಳು, ೨ ತಂಡ ಆಯ್ಕೆ

ಶಿವಮೊಗ್ಗ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗು ನ್ಯೂಟೌನ್ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಮಂಗಳವಾರ ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ೧೪ ಮತ್ತು ೧೭ ವರ್ಷ ವಯೋಮಿತಿಯೊಳಗಿನ ಬಾಲಕರ ಕ್ರಿಕೆಟ್ ಆಯ್ಕೆ ಟ್ರಯಲ್ಸ್ ೨೦೨೨-೨೩ಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಚಾಲನೆ ನೀಡಿದರು.
    ಭದ್ರಾವತಿ, ಅ. ೧೮ : ಶಿವಮೊಗ್ಗ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗು ನ್ಯೂಟೌನ್ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಮಂಗಳವಾರ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ೧೪ ಮತ್ತು ೧೭ ವರ್ಷ ವಯೋಮಿತಿಯೊಳಗಿನ ಬಾಲಕರ ಕ್ರಿಕೆಟ್ ಆಯ್ಕೆ ಟ್ರಯಲ್ಸ್ ೨೦೨೨-೨೩ಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಚಾಲನೆ ನೀಡಿದರು.
    ಜಿಲ್ಲೆಯ ಒಟ್ಟು ೭ ತಾಲೂಕುಗಳಿಂದ ಒಂದು ಶಾಲೆಯಿಂದ ತಲಾ ೪ ಮಕ್ಕಳಂತೆ ಒಟ್ಟು ಸುಮಾರು ೧೭೨ ಮಕ್ಕಳು ಭಾಗವಹಿಸಿದ್ದರು. ನಾಗರಾಜ್ ಮುಖ್ಯ ಆಯ್ಕೆಗಾರರಾಗಿದ್ದು, ಒಟ್ಟು ೨ ತಂಡಗಳನ್ನು ಆಯ್ಕೆ ಮಾಡಲಾಯಿತು. ಈ ತಂಡಗಳು ಬೆಂಗಳೂರು ವಿಭಾಗಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
    ತಾಲೂಕು ದೈಹಿಕ ಶಿಕ್ಷಣ ಸಂಯೋಜಕ ಪ್ರಭು, ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪಾಲಾಕ್ಷಪ್ಪ, ಗೌರವಾಧ್ಯಕ್ಷ ಅಪೇಕ್ಷ ಮಂಜುನಾಥ್, ಕಾರ್ಯದರ್ಶಿ ಶ್ರೀಧರ್ ಸಾವಂತ್, ಕ್ಷೇತ್ರ ಶಿಕ್ಷಣ ಸಂಪನ್ಮೂಲ ವ್ಯಕ್ತಿ ನವೀದ್ ಪರ್ವೀಜ್ ಅಹಮದ್, ದೈಹಿಕ ಶಿಕ್ಷಕರಾದ ಸಂತೋಷ್, ನಾಗೇಶ್ ಸೇರಿದಂತೆ ವಿವಿಧ ಶಾಲೆಗಳ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಧ್ಯಾಪಕರ ಸಂಘದ ಚುನಾವಣೆ : ಇಬ್ಬರು ನಾಮಪತ್ರ ಸಲ್ಲಿಕೆ

ಭದ್ರಾವತಿ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಧ್ಯಾಪಕರ ಸಂಘ ಹಾಗು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಧ್ಯಾಪಕರ ಸಂಘದ ಚುನಾವಣೆ ನ.೩ರಂದು ನಡೆಯುತ್ತಿದ್ದು, ಕುವೆಂಪು ವಿಶ್ವವಿದ್ಯಾಲಯ ವಲಯ ಅಧ್ಯಕ್ಷ ಸ್ಥಾನಕ್ಕೆ ಹಾಗು ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಮಂಗಳವಾರ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ.
    ಭದ್ರಾವತಿ, ಅ. ೧೮ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಧ್ಯಾಪಕರ ಸಂಘ ಹಾಗು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಧ್ಯಾಪಕರ ಸಂಘದ ಚುನಾವಣೆ ನ.೩ರಂದು ನಡೆಯುತ್ತಿದ್ದು, ಕುವೆಂಪು ವಿಶ್ವವಿದ್ಯಾಲಯ ವಲಯ ಅಧ್ಯಕ್ಷ ಸ್ಥಾನಕ್ಕೆ ಹಾಗು ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಮಂಗಳವಾರ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ.
    ವಲಯ ಅಧ್ಯಕ್ಷ ಸ್ಥಾನಕ್ಕೆ ಶಿಕಾರಿಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎ.ಬಿ ಅನಿಲ್ ಕುಮಾರ್ ಹಾಗು ಕಾರ್ಯದರ್ಶಿ ಸ್ಥಾನಕ್ಕೆ ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಕೆ  ಮೋಹನ್ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನೂ ಹಲವು ಮಂದಿ ಚುನಾವಣೆ ಸ್ಪರ್ಧಿಸಲು ಮುಂದಾಗಿದ್ದಾರೆ.
ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಡಿ ವಿಶ್ವನಾಥ್, ಬೊಮ್ಮನಕಟ್ಟೆ ಸರ್.ಎಂ ವಿಶ್ವೇಶ್ವರಾಯ ಸರ್ಕಾರಿ ವಿಜ್ಞಾನ ಕಾಲೇಜಿನ ವಸಂತಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅ.೧೯ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ

    ಭದ್ರಾವತಿ, ಅ. ೧೮ : ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ಸಂಗೊಳ್ಳಿ ರಾಯಣ್ಣ ಯುವ ಪಡೆ, ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ‍್ಸ್ ಸೆಂಟ್ರಲ್ ಯೂನಿಯನ್, ಬಾಪೂಜಿ ವಿದ್ಯಾಸಂಸ್ಥೆ ಹಾಗು ಗ್ಲೋಬಲ್ ಪಬ್ಲಿಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ವತಿಯಿಂದ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಸ್ಮರಣಾರ್ಥ ಅ.೧೯ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧ ಗಂಟೆವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
    ಹೊಸಮನೆ ಅಶ್ವಥ್ ನಗರ, ಗ್ಲೋಬಲ್ ಪಬ್ಲಿಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ಆಯೋಜಿಸಲಾಗಿರುವ ಶಿಬಿರದಲ್ಲಿ ಎದೆನೋವು, ರಕ್ತದ ಒತ್ತಡ, ಆಯಾಸ, ಅತಿಯಾದ ಬೆವರುವಿಕೆ, ಎದೆಯಲ್ಲಿ ಉರಿ, ಉಸಿರಾಟದಲ್ಲಿ ತೊಂದರೆ, ನರಗಳ ಸವೆತ, ನರಗಳ ದೌರ್ಬಲ್ಯ, ಬೆನ್ನು ಮತ್ತು ಕತ್ತಿನ ನರಗಳ ಸಮಸ್ಯೆ, ನರರೋಗ ತಜ್ಞರೊಂದಿಗೆ ಸಮಾಲೋಚನೆ, ಭುಜದ ಮೂಳೆ, ಕೀಲು ಮತ್ತು ಮೂಳೆ, ಬೆನ್ನು ನೋವು, ಸೊಂಟ ನೋವು ಮತ್ತು ಮಂಡಿ ಸವೆತದ ತಪಾಸಣೆ ಜರುಗಲಿವೆ. ಹೆಚ್ಚಿನ ಮಾಹಿತಿಗೆ ಮೊ: ೯೯೮೬೭೫೯೪೮೬/೮೬೬೦೮೮೨೦೧೧/೯೮೪೪೭೭೧೨೧೨ ಕರೆ ಮಾಡಬಹುದಾಗಿದೆ. 

ಭದ್ರಾ ಜಲಾಶಯದ ೨೨೬ ಹೊರಗುತ್ತಿಗೆ ನೌಕರರಿಗೆ ೫ ತಿಂಗಳಿನಿಂದ ವೇತನವಿಲ್ಲ

ನಂ.೪ ಬಿಆರ್‌ಎಲ್‌ಬಿಸಿ ಕಛೇರಿ ಮುಂಭಾಗ ಪ್ರತಿಭಟನೆ

ಕಳೆದ ಸುಮಾರು ೪ ತಿಂಗಳಿನಿಂದ ಪಿ.ಎಫ್, ಇಎಸ್‌ಐ ಹಾಗು ವೇತನದಿಂದ ವಂಚಿತರಾಗಿರುವ ಭದ್ರಾ ಜಲಾಶಯ ಅಧೀನಕ್ಕೆ ಒಳಪಡುವ ನಂ.೪ ವಿಭಾಗದ ವ್ಯಾಪ್ತಿಗೆ ಸೇರ್ಪಡೆಗೊಳ್ಳುವ ನಂ.೧ ಉಪವಿಭಾಗ, ಬಿಆರ್‌ಪಿ ಮತ್ತು ನಂ.೨ ಉಪವಿಭಾಗ, ಡಿ.ಬಿ ಹಳ್ಳಿ ಹಾಗು ನಂ.೩ ಉಪವಿಭಾಗ, ಭದ್ರಾವತಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ೨೨೬ ಹೊರಗುತ್ತಿಗೆ ನೌಕರರು ಕಳೆದ ೨ ದಿನಗಳಿಂದ ಪ್ರತಿಭಟನೆಗೆ ಮುಂದಾಗಿದ್ದಾರೆ.
    ಭದ್ರಾವತಿ, ಅ. ೧೮: ಕಳೆದ ಸುಮಾರು ೪ ತಿಂಗಳಿನಿಂದ ಪಿ.ಎಫ್, ಇಎಸ್‌ಐ ಹಾಗು ವೇತನದಿಂದ ವಂಚಿತರಾಗಿರುವ ಭದ್ರಾ ಜಲಾಶಯ ಅಧೀನಕ್ಕೆ ಒಳಪಡುವ ನಂ.೪ ವಿಭಾಗದ ವ್ಯಾಪ್ತಿಗೆ ಸೇರ್ಪಡೆಗೊಳ್ಳುವ ನಂ.೧ ಉಪವಿಭಾಗ, ಬಿಆರ್‌ಪಿ ಮತ್ತು ನಂ.೨ ಉಪವಿಭಾಗ, ಡಿ.ಬಿ ಹಳ್ಳಿ ಹಾಗು ನಂ.೩ ಉಪವಿಭಾಗ, ಭದ್ರಾವತಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ೨೨೬ ಹೊರಗುತ್ತಿಗೆ ನೌಕರರು ಕಳೆದ ೨ ದಿನಗಳಿಂದ ಪ್ರತಿಭಟನೆಗೆ ಮುಂದಾಗಿದ್ದಾರೆ.
    ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಕರ್ನಾಟಕ ನೀರಾವತಿ ನಿಗಮ ನಿಯಮಿತದ ನಂ.೪ ಬಿಆರ್‌ಎಲ್‌ಬಿಸಿ ವಿಭಾಗದ ಕಾರ್ಯಪಾಲಕ ಅಭಿಯಂತರವರ ಕಛೇರಿ ಮುಂಭಾಗ ನೌಕರರು ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ(ಕ್ರಾಂತಿಕಾರಿ ಕಾರ್ಮಿಕ ಸಂಘಗಳ ಒಕ್ಕೂಟ) ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ತಕ್ಷಣ ಪಿ.ಎಫ್, ಇಎಸ್‌ಐ ಹಾಗು ವೇತನ ಪಾವತಿಸುವಂತೆ ಆಗ್ರಹಿಸಿದ್ದಾರೆ.
ಕಳೆದ ಸುಮಾರು ೩೦-೪೦ ವರ್ಷಗಳಿಂದ ನಿರಂತರವಾಗಿ ಕರ್ತವ್ಯ ನಿರ್ವಹಿಸಿಕೊಂಡು ಬರಲಾಗುತ್ತಿದ್ದು, ಆದರೆ ಇದುವರೆಗೂ ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಲಭಿಸಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ನೌಕರರ ಕುರಿತು ಅಗತ್ಯ ಮಾಹಿತಿ ಒದಗಿಸದೆ ನಿರ್ಲಕ್ಷ್ಯತನ ವಹಿಸುತ್ತಿದ್ದಾರೆ. ಇದರಿಂದಾಗಿ ಹಲವಾರು ಬಾರಿ ಹೋರಾಟ ನಡೆಸಿ ಮನವಿ ಸಲ್ಲಿಸಿದ್ದರೂ ಸಹ ಇದುವರೆಗೂ ಯಾವುದೇ ಬೇಡಿಕೆ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಅನ್ವಯ ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಪೌರ ಕಾರ್ಮಿಕರಿಗೆ ವೇತನ ಪಾವತಿಸುವಂತೆ ನಮಗೂ ವೇತನ ಪಾವತಿಸುವುದು ಸೇರಿದಂತೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
    ಸಂಘದ ಅಧ್ಯಕ್ಷ ಜಿ.ಡಿ ಸುಬ್ಬರಾಯಡು, ಪ್ರಧಾನ ಕಾರ್ಯದರ್ಶಿ ಜಿ.ಕೆ ಶಿವಮೂರ್ತಿ, ಸಹಕಾರ್ಯದರ್ಶಿ ಎ.ವಿ ಮಂಜುನಾಥ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.