ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ನೂತನ ಎರಡು ಯೋಜನಾ ಕಛೇರಿಗಳ ಉದ್ಘಾಟನೆ ಹಾಗು ವಿವಿಧ ಅನುದಾನಗಳ ವಿತರಣಾ ಸಮಾರಂಭವನ್ನು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಉದ್ಘಾಟಿಸಿದರು.
ಭದ್ರಾವತಿ, ಅ. ೧೯: ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯದೆ ಸ್ವಸಹಾಯ ಒಕ್ಕೂಟಗಳ ಮೂಲಕ ಸಾಲ ಪಡೆದು ಹಿಂದಿರುಗಿಸುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಯಾವುದೇ ಕಾರಣಕ್ಕೂ ಅನಗತ್ಯವಾಗಿ ಸಾಲ ಮಾಡಿ ಹಿಂದಿರುಗಿಸಲು ಸಾಧ್ಯವಾಗದಂತಹ ಪರಿಸ್ಥಿತಿಗೆ ಒಳಗಾಗಬಾರದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಲ್.ಎಚ್ ಮಂಜುನಾಥ್ ಎಚ್ಚರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ನೂತನ ಎರಡು ಯೋಜನಾ ಕಛೇರಿಗಳ ಉದ್ಘಾಟನೆ ಹಾಗು ವಿವಿಧ ಅನುದಾನಗಳ ವಿತರಣಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪರಿವರ್ತನೆಗಾಗಿ ಸ್ವಸಹಾಯ ಒಕ್ಕೂಟಗಳ ಮೂಲಕ ಸಾಲ ನೀಡಲಾಗುತ್ತಿದೆ. ಇದನ್ನು ಸರಿಯಾಗಿ ಅರ್ಥಮಾಡಿಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು. ದೇಶದಲ್ಲಿ ಬ್ಯಾಂಕ್ ವ್ಯವಸ್ಥೆ ಸುಭದ್ರವಾಗಿದೆ ಬ್ಯಾಂಕ್ ಮೂಲಕವೇ ಎಲ್ಲಾ ವ್ಯವಹಾರ ನಡೆಸಬೇಕು. ಖಾಸಗಿ ಹಣಕಾಸು ಸಂಸ್ಥೆಗಳಿಂದ ಯಾವುದೇ ಕಾರಣಕ್ಕೂ ಸಾಲ ಸೌಲಭ್ಯ ಪಡೆಯಬಾರದು. ಸ್ವಸಹಾಯ ಒಕ್ಕೂಟ ಬ್ಯಾಂಕ್ ವ್ಯವಸ್ಥೆ ಮೇಲೆ ನಂಬಿಕೆ ಹೊಂದುವ ಜೊತೆಗೆ ಆರ್ಥಿಕ ಸೌಲಭ್ಯಗಳನ್ನು ಸುಲಭವಾಗಿ ಕಲ್ಪಿಸಿಕೊಡುತ್ತಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸರ್ಕಾರಿ ಶಾಲೆ, ಆಸ್ಪತ್ರೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸರ್ಕಾರಿ ಶಾಲೆ, ಆಸ್ಪತ್ರೆಗಳ ಮೇಲೆ ಜನರು ಹೊಂದಿರುವ ಧೋರಣೆ ಬದಲಿಸಿಕೊಂಡಾಗ ಮಾತ್ರ ಅವುಗಳು ಸಹ ಅಭಿವೃದ್ಧಿ ಹೊಂದಲು ಸಾಧ್ಯ. ಸರ್ಕಾರ ಗುರುತಿಸದ ಕೆಲವೊಂದು ಸೇವಾ ಕಾರ್ಯಗಳನ್ನು ಟ್ರಸ್ಟ್ ಗುರುತಿಸಿ ಅವುಗಳಲ್ಲಿ ತೊಡಗಿಸಿಕೊಂಡಿರುವುದು ವಿಶೇಷವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಟ್ರಸ್ಟ್ ನಿಸ್ವಾರ್ಥ ಸೇವೆ ಮೂಲಕ ರಾಜ್ಯದಲ್ಲಿಯೇ ಮಾದರಿಯಾಗುವ ಮೂಲಕ ಲಕ್ಷಾಂತರ ಕುಟುಂಬಗಳ ಭವಿಷ್ಯ ಉಜ್ವಲಗೊಳಿಸಿದೆ. ಅಲ್ಲದೆ ಸಂಕಷ್ಟದಲ್ಲಿರುವ ಎಲ್ಲಾ ಜಾತಿ, ಎಲ್ಲಾ ಧರ್ಮದವರ ನೆರವಿಗೆ ಮುಂದಾಗಬೇಕೆಂಬ ಪರಿಕಲ್ಪನೆ ತೋರಿಸಿಕೊಟ್ಟಿದೆ. ಟ್ರಸ್ಟ್ ಸಾಮಾಜಿಕ ಯೋಜನೆಗಳು, ಅವುಗಳನ್ನು ಅನುಷ್ಠಾನಗೊಳಿಸುವಲ್ಲಿನ ಬದ್ಧತೆ, ಕರ್ತವ್ಯ ನಿರ್ವಹಿಸುತ್ತಿರುವವರ ಪ್ರಾಮಾಣಿಕತನ ಎಲ್ಲವೂ ಮತ್ತಷ್ಟು ಬೆಳವಣಿಗೆಗೆ ಪೂರಕವಾಗಿವೆ. ಭವಿಷ್ಯದಲ್ಲಿ ಸರ್ಕಾರಿ ಶಾಲೆಗಳು ಅಭಿವೃದ್ಧಿಗೊಳ್ಳಬೇಕು. ಈ ನಿಟ್ಟಿನಲ್ಲಿ ಟ್ರಸ್ಟ್ ಇನ್ನೂ ಹೆಚ್ಚಿನ ಗಮನ ಹರಿಸಬೇಕೆಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಜಿ. ಆನಂದಕುಮಾರ್, ಸದಸ್ಯರಾದ ಜಯರಾಂ ಗೊಂದಿ, ಆರ್. ಕರುಣಾಮೂರ್ತಿ, ಪಾಲಾಕ್ಷಪ್ಪ, ಯೋಜನೆ ಪ್ರಾದೇಶಿಕ ನಿರ್ದೇಶಕಿ ಬಿ. ಗೀತಾ, ಚಂದ್ರಶೇಖರ್, ಹಿರಿಯ ಸಹಕರಿ ಧುರೀಣ ಕೆ.ಎನ್ ಭೈರಪ್ಪಗೌಡ, ತಾಲೂಕು ಯೋಜನಾಧಿಕಾರಿಗಳಾದ ವೈ. ಪ್ರಕಾಶ್ ನಾಯ್ಕ, ಮಾಧವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ವಿವಿಧ ಅನುದಾನಗಳನ್ನು ವಿತರಿಸಲಾಯಿತು.
No comments:
Post a Comment