Wednesday, October 19, 2022

ದಾನವಾಡಿ ಗ್ರಾಮದ ರೈತರಿಗೆ ಸಾಗುವಳಿ ಚೀಟಿ ನೀಡಲು ಆಗ್ರಹಿಸಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ

ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ ಅರಕೆರೆ ವ್ಯಾಪ್ತಿಯ ದಾನವಾಡಿ ಗ್ರಾಮದ ಸರ್ವೆ ನಂ. ೩೩ರಲ್ಲಿ ಸುಮಾರು ೮೦ ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡುವಂತೆ ಆಗ್ರಹಿಸಿ ಕರ್ನಾಟಕ ಭೂ-ಸ್ವಾಧೀನ ರೈತರ ಹೋರಾಟ ಸಮಿತಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಬುಧವಾರದಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
    ಭದ್ರಾವತಿ, ಅ. ೧೯ : ತಾಲೂಕಿನ ಹೊಳೆಹೊನ್ನೂರು ಹೋಬಳಿ ಅರಕೆರೆ ವ್ಯಾಪ್ತಿಯ ದಾನವಾಡಿ ಗ್ರಾಮದ ಸರ್ವೆ ನಂ. ೩೩ರಲ್ಲಿ ಸುಮಾರು ೮೦ ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡುವಂತೆ ಆಗ್ರಹಿಸಿ ಕರ್ನಾಟಕ ಭೂ-ಸ್ವಾಧೀನ ರೈತರ ಹೋರಾಟ ಸಮಿತಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಬುಧವಾರದಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
    ಸರ್ವೆ ನಂ.೩೩ ದನಗಳ ಮುಫತ್ತು ಭೂಮಿಯಾಗಿದ್ದು, ಈ ಭೂಮಿಯಲ್ಲಿ ಕಳೆದ ಸುಮಾರು ೮೦ ವರ್ಷಗಳಿಂದ ೫೦ಕ್ಕೂ ಹೆಚ್ಚು ಕುಟುಂಬಗಳು ಸಾಗುವಳಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಈ ಭೂಮಿಯನ್ನು ೧೯೭೨-೭೩ರಲ್ಲಿ ಉಪವಿಭಾಗಾಧಿಕಾರಿಗಳು ಅನಧಿಕೃತವಾಗಿ ಸಾಗುವಳಿಪಟ್ಟಿ ಮಾಡಿದ್ದು, ಇದರಿಂದಾಗಿ ಕಂದಾಯ ಇಲಾಖೆಗೆ ಸೇರಿರುವ ಈ ಭೂಮಿ ಮೈನರ್ ಫಾರೆಸ್ಟ್ ಎಂದು ಪಹಣಿ ದಾಖಲೆಯಲ್ಲಿ ನಮೂದಾಗಿರುತ್ತದೆ. ಈ ಹಿನ್ನಲೆಯಲ್ಲಿ ತಕ್ಷಣ ಮೈನರ್ ಫಾರೆಸ್ಟ್ ಎಂಬುದನ್ನು ಕೈಬಿಟ್ಟು ಸಾಗುವಳಿ ಮಾಡುತ್ತಿರುವವರಿಗೆ ಸಾಗುವಳಿ ಚೀಟಿ ನೀಡಬೇಕೆಂದು ಆಗ್ರಹಿಸಲಾಯಿತು.
    ಇದೆ ರೀತಿ ಕೋಡಿ ಹೊಸೂರು ಗ್ರಾಮ ಸರ್ವೆ ನಂ.೧೨ರಲ್ಲಿ ಮತ್ತು ದಾನವಾಡಿ ಗ್ರಾಮದ ಸರ್ವೆ ನಂ.೨೯ ಹಾಗು ಕಲ್ಲಾಪುರ ಗ್ರಾಮದ ಸರ್ವೆ ನಂ.೧ ಮತ್ತು ಸರ್ವೆ ನಂ.೨೬ ಹಾಗು ಕೂಡ್ಲಿಗೆರೆ ಹೋಬಳಿ ಕೊಟ್ಟದಾಳ್ ಸರ್ವೆ ನಂ.೧ ಮತ್ತು ೨ರಲ್ಲಿ ಸಾಗುವಳಿ ಮಾಡುತ್ತಿದ್ದು, ಕೆಲವು ಕುಟುಂಬಗಳಿಗೆ ಸಾಗುವಳಿ ಚೀಟಿ ನೀಡಿದ್ದರೂ ಖಾತೆ ಪಹಣಿ ಆಗಿರುವುದಿಲ್ಲ. ಹಲವಾರು ವರ್ಷಗಳಿಂದ ದನಗಳ ಮುಫತ್ತು, ಹುಲ್ಲುಬನ್ನಿ ಹರಾಜು ಹಾಗು ಕಂದಾಯ ಇಲಾಖೆಗೆ ಸೇರಿರುವ ಭೂಮಿಯನ್ನು ೨೦೧೨-೧೩ರಲ್ಲಿ ಏಕಾಏಕಿ ಮೈನರ್ ಫಾರೆಸ್ಟ್ ಎಂದು ಪಹಣಿ ದಾಖಲೆಯಲ್ಲಿ ಅಧಿಕಾರಿಗಳು ದಾಖಲಿಸಿರುತ್ತಾರೆ. ಈ ಹಿನ್ನಲೆಯಲ್ಲಿ ಇದನ್ನು ಪುನರ್ ಪರಿಶೀಲಿಸಿ ಸಿಪಿಟಿ ಟ್ರಂಚ್‌ನಿಂದ ಹೊರಗಡೆ ಸಾಗುವಳಿ ಮಾಡಿಕೊಂಡು ಅಡಕೆ, ಜೋಳ, ಭತ್ತ, ರಾಗಿ ಮತ್ತು ಇತರೆ ಬೆಳೆಗಳನ್ನು ಬೆಳೆಯುತ್ತಿರುವ ಹಾಗು ಮನೆಗಳನ್ನು ನಿರ್ಮಿಸಿಕೊಂಡು ೯೪ಸಿ ಅಡಿಯಲ್ಲಿ  ಹಕ್ಕುಪತ್ರ ಪಡೆದು ದನಕರುಗಳು ಹಾಗು ಇತರೆ ಜಾನುವಾರುಗಳನ್ನು ಸಾಕಾಣಿಕೆ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಕುಟುಂಬಗಳಿಗೆ ಸಾಗುವಳಿ ಚೀಟಿ ನೀಡಿ ಖಾತೆ ಪಹಣಿ ಮಾಡಿಕೊಡಬೇಕೆಂದು ಒತ್ತಾಯಿಸಲಾಯಿತು.
    ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವವರೆಗೂ ಹಾಗು ಬೇಡಿಕೆ ಈಡೇರುವವರೆಗೂ ಸತ್ಯಾಗ್ರಹ ಮುಂದುವರೆಸುವುದಾಗಿ ಎಚ್ಚರಿಸಲಾಯಿತು. ಸತ್ಯಾಗ್ರಹ ಗುರುವಾರ ಸಹ ಮುಂದುವರೆಯಲಿದೆ. ಸಮಿತಿ ಗೌರವಾಧ್ಯಕ್ಷ ಗೋಪಾಲಪ್ಪ, ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ಪುಟ್ಟಪ್ಪ, ಸಮಾಜ ಸೇವಕ ಹಾಗು ಕೆಆರ್‌ಎಂಎಸ್ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್, ದಾನವಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಗುರುಮೂರ್ತಿ, ಜಯಣ್ಣ, ಅರಕೆರೆ ಗ್ರಾಮ ಪಂಚಾಯಿತಿ ಸದಸ್ಯ ರವಿ, ಕೆ. ಮುನಿಯಪ್ಪ, ರವಿ, ಈರೇಶ, ಪರಮೇಶಿ, ನರಸಿಂಹಪ್ಪ, ಕುಮಾರ್ ಕಾಚನಗೊಂಡನಹಳ್ಳಿ, ಕಾರ್ತಿಕ್, ಬಸವರಾಜ, ಕುಮಾರ್, ಹಾಲೇಶ್, ಕೃಷ್ಣಪ್ಪ, ಸಂತೋಷ್, ಪ್ರಕಾಶಪ್ಪ, ಲೋಹಿತ್, ಕುಮಾರ್ ದಾನವಾಡಿ ಸೇರಿದಂತೆ ಇನ್ನಿತರರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

No comments:

Post a Comment