Thursday, November 10, 2022

ಕನಕದಾಸರ ಜಯಂತಿ : ಹಾಲು, ಹಣ್ಣು, ಬ್ರೆಡ್ ವಿತರಣೆ



ಭದ್ರಾವತಿ, ನ. 10: ದಾಸ ಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ನ.11ರಂದು ಬೆಳಿಗ್ಗೆ 9 ಗಂಟೆಗೆ ಹಾಲು, ಹಣ್ಣು, ಬ್ರೆಡ್ ವಿತರಣೆ ನಡೆಯಲಿದೆ. ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕನಕ ಯುವ ಪಡೆಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಕನಕ ಜಯಂತಿ : ಹಲವು ಕಾರ್ಯಕ್ರಮ

ಯಶಸ್ವಿಗೊಳಿಸಲು ವೈ. ನಟರಾಜ್ ಮನವಿ

ವೈ. ನಟರಾಜ್
    ಭದ್ರಾವತಿ, ನ. ೧೧: ಈ ಬಾರಿ ದಾಸ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಅಲ್ಲದೆ ಹಲವಾರು ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕನಕ ಪತ್ತಿನ ಸಹಕಾರ ಸಂಘ ನಿಯಮಿತ ನಿರ್ದೇಶಕ ವೈ. ನಟರಾಜ್ ತಿಳಿಸಿದ್ದಾರೆ.
    ಅನ್ನಸಂತರ್ಪಣೆ, ಸಿಹಿ ಹಾಗು ಹಣ್ಣು ವಿತರಣೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳು ಜರುಗಲಿವೆ. ನಗರದ ವಿವಿಧೆಡೆ ವಿವಿಧ ಸಂಘ-ಸಂಸ್ಥೆಗಳಿಂದ ಹಲವಾರು ಕಾರ್ಯಕ್ರಮಗಳು ಜರುಗಲಿವೆ. ಅಲ್ಲದೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕನಕದಾಸರ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆ ನಡೆಯಲಿದ್ದು, ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.



ನಿಧಿ ರೂಪದ ಚಿನ್ನದ ನಾಣ್ಯ ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ ಲಕ್ಷಾಂತರ ವಂಚನೆ


    ಭದ್ರಾವತಿ, ನ. ೧೧: ನಿಧಿ ರೂಪದಲ್ಲಿ ಸಿಕ್ಕಿರುವ ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ ಲಕ್ಷಾಂತರ ರು. ಪಡೆದು ವಂಚಿಸಿರುವ ಘಟನೆ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
    ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಚಿಮುಡ ಗ್ರಾಮದ ನಿವಾಸಿ ಸದಾಶಿವಪ್ಪ ಮೇಸ್ತ್ರೀ ವಂಚನೆಗೆ ಒಳಗಾಗಿದ್ದು, ಈ ಸಂಬಂಧ ಕಳೆದ ೪ ದಿನಗಳ ಹಿಂದೆ ಪ್ರಕರಣ ದಾಖಲಾಗಿದೆ.  
    ಘಟನೆ ವಿವರ :  ಸದಾಶಿವಪ್ಪ ಮೇಸ್ತ್ರೀಯವರು ಕಳೆದ ೩ ತಿಂಗಳ ಹಿಂದೆ ಆಗಸ್ಟ್‌ನಲ್ಲಿ ಶ್ರೀಶೈಲಕ್ಕೆ ತೆರಳಿದ್ದಾಗ ಇವರ ಕಾರಿನ ಚಾಲಕ ಸೋಮಯ್ಯ ಹಿರೇಮಠರಿಗೆ ಶಿವಮೊಗ್ಗ ಜಿಲ್ಲೆಯವನು ಎಂದು ನಾಗರಾಜ್ ಎಂಬಾತ ಪರಿಚಯವಾಗಿದ್ದು, ಚಾಲಕನ ಮೂಲಕ ಪರಿಚಯವಾದ ನಾಗರಾಜ್ ಸದಾಶಿವಪ್ಪನವರ ಮೊಬೈಲ್ ನಂಬರ್ ಪಡೆದು ಸ್ನೇಹ ಸಂಪಾದಿಸಿದ್ದಾನೆ.
    ಹೀಗೆ ಒಂದು ವಾರದ ನಂತರ ಸದಾಶಿವಪ್ಪನವರ ಮೊಬೈಲ್‌ಗೆ ಕರೆ ಮಾಡಿದ ನಾಗರಾಜ್, ನಮ್ಮ ಅಜ್ಜಿಗೆ ೮ ಕೆ.ಜಿ. ನಿಧಿಯ ರೂಪದಲ್ಲಿ ಚಿನ್ನ ನಾಣ್ಯಗಳು ಸಿಕ್ಕಿವೆ. ಇದನ್ನು ನಿಮಗೆ ಕೊಡಬೇಕೆಂದು ಕನಸು ಬಿದ್ದಿದೆ. ಇಷ್ಟುದೊಡ್ಡ ಪ್ರಮಾಣದ ಚಿನ್ನದ ನಾಣ್ಯಗಳನ್ನು ಕೇವಲ ೨೦ ಲಕ್ಷಕ್ಕೆ ಕೊಡುತ್ತೇವೆ ನೀವು ಖರೀದಿಸಲೇಬೇಕೆಂದು ನಂಬಿಸಿದ್ದಾನೆ.
    ಚಿನ್ನವನ್ನು ಎಲ್ಲಿ ಬೇಕಾದರು ತಪಾಸಣೆ ನಡೆಸಿ ಪರಿಶೀಲಿಸಿ ನಂತರ ನಮಗೆ ಹಣ ಕೊಡಿ ಎಂದಿದ್ದು, ಇದಕ್ಕೆ ಒಪ್ಪಿದ ಸದಾಶಿವಪ್ಪ ತಾಲೂಕಿನ ದಾನವಾಡಿ ಗ್ರಾಮಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ನಾಗರಾಜ್ ಸದಾಶಿವಪ್ಪನ ಪತ್ನಿ ಮತ್ತು ಚಾಲಕನಿಗೆ ಎರಡು ಚಿನ್ನದ ನಾಣ್ಯಗಳನ್ನು ನೀಡಿ ಪರಿಶೀಲಿಸಲು ತಿಳಿಸಿದ್ದಾನೆ. ಚಿನ್ನದ ನಾಣ್ಯ ಅಸಲಿ ಎಂದು ತಿಳಿದುಬಂದಿದೆ.
    ಈ ಹಿನ್ನಲೆಯಲ್ಲಿ ಸದಾಶಿವಪ್ಪ ತನ್ನ ಜಮೀನನ್ನು ಮಾರಾಟ ಮಾಡಿ ೨೦ ಲಕ್ಷ ರು. ಹಣ ಹೊಂದಿಸಿಕೊಂಡು ಬಂದಿದ್ದು,  ನಾಗರಾಜ್ ಹಣ ಪಡೆದು ಕೇವಲ ೪-೫ ಚಿನ್ನದ ನಾಣ್ಯಗಳನ್ನು ನೀಡಿ ಉಳಿದ ಚಿನ್ನ ನಾಣ್ಯ ತಂದುಕೊಡುವುದಾಗಿ ಹೇಳಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

Wednesday, November 9, 2022

ಪರಿಸರದ ಬಗ್ಗೆ ಅಭಿಮಾನ ಬೆಳೆಸಿಕೊಂಡಾಗ ಸ್ವಚ್ಛತೆ ತಾನಾಗಿಯೇ ಮೂಡಲಿದೆ : ಆಶಾ ಭಟ್



ಭದ್ರಾವತಿ, ನ. 10: ನಗರದ ಸ್ವಚ್ಛತೆಯಲ್ಲಿ ಪ್ರತಿಯೊಬ್ಬರ ಪಾತ್ರ ಬಹಳ ಮುಖ್ಯವಾಗಿದ್ದು, ನಮ್ಮ ಸುತ್ತಮುತ್ತಲ ಪರಿಸರದ ಮೇಲೆ ಅಭಿಮಾನ ಬೆಳೆಸಿ ಕೊಂಡಾಗ ಮಾತ್ರ ಸ್ವಚ್ಛತೆಯ ಅರಿವು ಸಹ ತಾನಾಗಿಯೇ ಬರಲಿದೆ ಎಂದು ನಗರಸಭೆ ಸ್ವಚ್ಛತಾ ರಾಯಭಾರಿ, ಚಲನಚಿತ್ರ ನಟಿ ಆಶಾ ಭಟ್ ಹೇಳಿದರು.
ಅವರು ಗುರುವಾರ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಕಂಡ ಕಂಡಲ್ಲಿ ಕಸ ಎಸೆಯುವುದು, ಮಲಿನಗೊಳಿಸುವುದು ಸೇರಿದಂತೆ ಪರಿಸರಕ್ಕೆ ಧಕ್ಕೆ ತರುವಂತಹ ಕೆಲಸಗಳನ್ನು ಮಾಡಬಾರದು. ನಮ್ಮ ಮನೆಯನ್ನು ಯಾವ ರೀತಿ ಸ್ವಚ್ಛವಾಗಿಟ್ಟುಕೊಳ್ಳುತ್ತೇವೆಯೋ, ಅದೇ ರೀತಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಹ ಸ್ವಚ್ಛವಾಗಿಟ್ಟುಕೊಳ್ಳಬೇಕೆಂದರು. ನಮ್ಮ ಪರಿಸರದ ಸ್ವಚ್ಛತೆಯಲ್ಲಿ  ಪ್ರಮುಖ ಪಾತ್ರ ವಹಿಸಿರುವ ಪೌರ ಕಾರ್ಮಿಕರಿಗೆ ನಾವೆಲ್ಲರೂ ಮೊದಲು ಗೌರವ ನೀಡಬೇಕು. ಸ್ವಚ್ಛತೆ ಎಂಬುದು ಒಂದು ದಿನಕ್ಕೆ ಸೀಮಿತ ಅಲ್ಲ ಅದು ನಮ್ಮ ಬದುಕಿನುದ್ದಕ್ಕೂ ಸಾಗಬೇಕು ಎಂದರು. 
 ಪ್ರಾಸ್ತಾವಿಕವಾಗಿ ಮಾತನಾಡಿದ ಪೌರಾಯುಕ್ತ ಮನು ಕುಮಾರ್, ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಶ್ರಮ ಹೆಚ್ಚಿನದಾಗಿದೆ. ಸಾರ್ವಜನಿಕರು ಕಸ ವಿಲೇವಾರಿಯಲ್ಲಿ ಹೆಚ್ಚಿನ ಸಹಕಾರ ನೀಡಬೇಕು. ಮನೆಯಲ್ಲಿಯೇ ಕಸವನ್ನು ಬೇರ್ಪಡಿಸಬೇಕು.  ಸಾಧ್ಯವಾದಷ್ಟು ಮರುಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಸ್ವಚ್ಛತೆಯಲ್ಲಿ ನಗರಸಭೆ ಉನ್ನತ ಮಟ್ಟ ತಲುಪಬೇಕು. ಈ ನಿಟ್ಟಿನಲ್ಲಿ  ಸಾರ್ವಜನಿಕರು  ಸಹಕಾರ ನೀಡಬೇಕೆಂದು ಮನವಿ ಮಾಡಿದರು. 
ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಉಪಾಧ್ಯಕ್ಷ ಚನ್ನಪ್ಪ ಸೇರಿದಂತೆ ಇನ್ನಿತರರು ಮಾತನಾಡಿದರು. 
ನಗರಸಭೆ ಅಧ್ಯಕ್ಷ ಅನುಸುಧಾ ಮೋಹನ್ ಪಳನಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ ಸುದೀಪ್ ಕುಮಾರ್ ಸದಸ್ಯರಾದ ಅನುಪಮ ಚೆನ್ನೇಶ್ ಲತಾ ಚಂದ್ರಶೇಖರ್ ಜಾರ್ಜ್ ಆರ್ ಮೋಹನ್ ಕುಮಾರ್ ಮಣಿ ಎಎನ್ಎಸ್, ಬಸವರಾಜ್, ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹಾಗೂ ಆಶಾ ಭಟ್ ಪೋಷಕರು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಶಾ ಭಟ್ ಅವರನ್ನು ನಗರಸಭೆ ವತಿಯಿಂದ ಅಭಿನಂದಿಸಲಾಯಿತು. ಕಂದಾಯ ಅಧಿಕಾರಿ ರಾಜಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪರಿಸರ ಅಭಿಯಂತರ ಪ್ರಭಾಕರ್ ಸ್ವಾಗತಿಸಿದರು. ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು, ವಿವಿಧ ಶಾಲೆಗಳ ಮಕ್ಕಳು ಅಭಿಯಾನದಲ್ಲಿ ಭಾಗವಹಿಸಿದ್ದರು.

ನ.10ರಂದು ನಗರಸಭೆ ವತಿಯಿಂದ ಸ್ವಚ್ಛತಾ ಅಭಿಯಾನ

ಭದ್ರಾವತಿ: ನಗರಸಭೆ ವತಿಯಿಂದ ನ.10ರಂದು ಬೆಳಗ್ಗೆ 11 ಗಂಟೆಗೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಅಭಿಯಾನಕ್ಕೆ ಚಲನಚಿತ್ರ ನಟಿ, ನಗರ ಸಭೆ ಸ್ವಚ್ಛತಾ ರಾಯಭಾರಿ ಆಶಾ ಭಟ್ ಉದ್ಘಾಟಿಸುವರು.
ಅಭಿಯಾನ ನಗರದ ಬಿ.ಹೆಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಆರಂಭಗೊಳ್ಳಲಿದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಭಿಯಾನ ಯಶಸ್ವಿಗೊಳಿಸುವಂತೆ ಪೌರಾಯುಕ್ತ  ಮನು ಕುಮಾರ್ ಕೋರಿದ್ದಾರೆ.

ಶೌಚಾಲಯ ಬಳಸಿ ನೈರ್ಮಲ್ಯ ಕಾಪಾಡಿ : ಬಿ.ಕೆ ಸಂಗಮೇಶ್ವರ್

ಬೆಂಗಳೂರಿನ ನ್ಯಾಬ್‌ಫಿನ್ಸ್ ಕಂಪನಿ ವತಿಯಿಂದ ಸಾಮಾಜಿಕ ಕಾರ್ಯಯೋಜನೆಯಡಿ(ಸಿಎಸ್‌ಆರ್) ಸುಲಬ್ ಇಂಟರ್ನ್ಯಾಷನಲ್ ಸೇವಾ ಸಂಸ್ಥೆ ವತಿಯಿಂದ ಸುಮಾರು ೨೦ ಲಕ್ಷ ರೂ ವೆಚ್ಚದಲ್ಲಿ ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾಗಿರುವ ಶೌಚಾಲಯ ಮತ್ತು ಸ್ನಾನದ ಗೃಹಗಳನ್ನು ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ, ನ. ೯: ನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೌಚಾಲಯ ಮತ್ತು ಸ್ನಾನದ ಗೃಹಗಳನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಬಿ.ಕೆ ಸಂಗಮೇಶ್ವರ ಕರೆ ನೀಡಿದರು.
ಅವರು ಬುಧವಾರ ಬೆಂಗಳೂರಿನ ನ್ಯಾಬ್‌ಫಿನ್ಸ್ ಕಂಪನಿ ವತಿಯಿಂದ ಸಾಮಾಜಿಕ ಕಾರ್ಯಯೋಜನೆಯಡಿ(ಸಿಎಸ್‌ಆರ್) ಸುಲಬ್ ಇಂಟರ್ನ್ಯಾಷನಲ್ ಸೇವಾ ಸಂಸ್ಥೆ ವತಿಯಿಂದ ಸುಮಾರು ೨೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶೌಚಾಲಯ ಮತ್ತು ಸ್ನಾನದ ಗೃಹಗಳನ್ನು ಉದ್ಘಾಟಿಸಿ ಮಾತನಾಡಿದರು. 
ಪ್ರತಿ ದಿನ ಆಸ್ಪತ್ರೆಗೆ ಸಾವಿರಾರು ಮಂದಿ ಬಂದು ಹೋಗುತ್ತಾರೆ. ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಸುಸಜ್ಜಿತವಾದ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ನೈರ್ಮಲ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅವಶ್ಯವಿರುವ ಕಡೆ ಸರ್ಕಾರ ಶೌಚಾಲಯಗಳನ್ನು ನಿರ್ಮಾಣ ಮಾಡುತ್ತಿದ್ದು, ಬಳಕೆಗೆ ಮುಂದಾಗುವ ಸಾರ್ವಜನಿಕರು ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಸುಲಬ್ ಇಂಟರ್ನ್ಯಾಷನಲ್ ಸೇವಾ ಸಂಸ್ಥೆ ನಿರ್ವಾಹಕ ಎಂ. ವಿಶ್ವನಾಥ್ ಮಾತನಾಡಿ, ಸಂಸ್ಥೆವತಿಯಿಂದ ದೇಶದಲ್ಲಿ ಇದುವರೆಗೂ ೧೦ ಸಾವಿರ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ ಈಗಾಗಲೇ ೩೦೦ ಶೌಚಾಲಯಗಳನ್ನು ನಿರ್ಮಿಸಿ ನಿರ್ವಹಣೆ ಮಾಡಲಾಗುತ್ತಿದೆ. ಇದು ಹಣ ನೀಡಿ ಬಳಸುವ (ಪೇ ಅಂಡ್ ಯೂಸ್) ಶೌಚಾಲಯವಾಗಿದ್ದು, ನೈರ್ಮಲ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯಾರು ಸಹ ಸಾರ್ವಜನಿಕ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡದೆ ಈ ಶೌಚಾಲಯ ಬಳಸುವಂತೆ ಮನವಿ ಮಾಡಿದರು. 
ನ್ಯಾಬ್‌ಫಿನ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಡಾ. ದಿವಾಕರ್ ಹೆಗಡೆ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕಾಗಿ ನಮ್ಮ ಕಂಪನಿ ವತಿಯಿಂದ ಸಾಲಸೌಲಭ್ಯ ನೀಡುತ್ತಿದೆ. ಇದರಿಂದ ಬರುವ ಲಾಭದಲ್ಲಿ ಸ್ವಲ್ಪ ಹಣ ಸಾಮಾಜಿಕ ಕಾರ್ಯಯೋಜನೆ ನಿಧಿ(ಸಿಎಸ್‌ಆರ್)ಯಲ್ಲಿ ಮೀಸಲಿಡಲಾಗುತ್ತಿದೆ. ದೇಶದ ೧೭ ರಾಜ್ಯಗಳಲ್ಲಿ ಕಂಪನಿ ಕಾರ್ಯ ನಿರ್ವಹಿಸುತ್ತಿದ್ದು, ಸುಲಬ್ ಇಂಟರ್ನ್ಯಾಷನಲ್ ಸೇವಾ ಸಂಸ್ಥೆ ಜೊತೆ ಕೈಜೋಡಿಸಿರುವ ಕಂಪನಿ ಶೌಚಾಲಯಗಳನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದರು.
ನಗರಸಭಾ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ನ್ಯಾಬ್ ಫಿನ್ಸ್ ಕಂಪನಿ ಕಾರ್ಯದರ್ಶಿ ಸುಮತಿ ಶರ್ಮ,  ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಶಂಕರಪ್ಪ ಹಾಗು ವೈದ್ಯಾಧಿಕಾರಿಗಳು, ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸರ್ಕಾರಿ ಆಸ್ಪತ್ರೆಯಲ್ಲಿ ಶೌಚಾಲಯ, ಸ್ನಾನದ ಗೃಹಗಳು ಉದ್ಘಾಟನೆ

ಭದ್ರಾವತಿ: ನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೌಚಾಲಯ ಮತ್ತು ಸ್ನಾನದ ಗೃಹಗಳನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಬಿ.ಕೆ ಸಂಗಮೇಶ್ವರ ಕರೆ ನೀಡಿದರು.
ಅವರು ಬುಧವಾರ ಬೆಂಗಳೂರಿನ ನ್ಯಾಬ್ ಫಿನ್ಸ್ ಕಂಪನಿ ವತಿಯಿಂದ ಸಾಮಾಜಿಕ ಕಾರ್ಯಯೋಜನೆಯಡಿ(ಸಿಎಸ್ಆರ್) ಸುಲಬ್ ಇಂಟರ್ನ್ಯಾಷನಲ್ ಸೇವಾ ಸಂಸ್ಥೆ ವತಿಯಿಂದ ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶೌಚಾಲಯ ಮತ್ತು ಸ್ನಾನದ ಗೃಹಗಳನ್ನು ಉದ್ಘಾಟಿಸಿ ಮಾತನಾಡಿದರು. 
ನಗರಸಭಾ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ನ್ಯಾಬ್ ಫಿನ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಡಾ. ದಿವಾಕರ ಹೆಗಡೆ, ಕಾರ್ಯದರ್ಶಿ ಸುಮತಿ ಶರ್ಮ,  ) ಸುಲಬ್ ಇಂಟರ್ನ್ಯಾಷನಲ್ ಸೇವಾ ಸಂಸ್ಥೆ ನಿರ್ವಾಹಕ ಎಂ. ವಿಶ್ವನಾಥ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂವಿ ಅಶೋಕ್ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಶಂಕರಪ್ಪ, ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.