Thursday, November 10, 2022

ನಿಧಿ ರೂಪದ ಚಿನ್ನದ ನಾಣ್ಯ ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ ಲಕ್ಷಾಂತರ ವಂಚನೆ


    ಭದ್ರಾವತಿ, ನ. ೧೧: ನಿಧಿ ರೂಪದಲ್ಲಿ ಸಿಕ್ಕಿರುವ ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ ಲಕ್ಷಾಂತರ ರು. ಪಡೆದು ವಂಚಿಸಿರುವ ಘಟನೆ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
    ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಚಿಮುಡ ಗ್ರಾಮದ ನಿವಾಸಿ ಸದಾಶಿವಪ್ಪ ಮೇಸ್ತ್ರೀ ವಂಚನೆಗೆ ಒಳಗಾಗಿದ್ದು, ಈ ಸಂಬಂಧ ಕಳೆದ ೪ ದಿನಗಳ ಹಿಂದೆ ಪ್ರಕರಣ ದಾಖಲಾಗಿದೆ.  
    ಘಟನೆ ವಿವರ :  ಸದಾಶಿವಪ್ಪ ಮೇಸ್ತ್ರೀಯವರು ಕಳೆದ ೩ ತಿಂಗಳ ಹಿಂದೆ ಆಗಸ್ಟ್‌ನಲ್ಲಿ ಶ್ರೀಶೈಲಕ್ಕೆ ತೆರಳಿದ್ದಾಗ ಇವರ ಕಾರಿನ ಚಾಲಕ ಸೋಮಯ್ಯ ಹಿರೇಮಠರಿಗೆ ಶಿವಮೊಗ್ಗ ಜಿಲ್ಲೆಯವನು ಎಂದು ನಾಗರಾಜ್ ಎಂಬಾತ ಪರಿಚಯವಾಗಿದ್ದು, ಚಾಲಕನ ಮೂಲಕ ಪರಿಚಯವಾದ ನಾಗರಾಜ್ ಸದಾಶಿವಪ್ಪನವರ ಮೊಬೈಲ್ ನಂಬರ್ ಪಡೆದು ಸ್ನೇಹ ಸಂಪಾದಿಸಿದ್ದಾನೆ.
    ಹೀಗೆ ಒಂದು ವಾರದ ನಂತರ ಸದಾಶಿವಪ್ಪನವರ ಮೊಬೈಲ್‌ಗೆ ಕರೆ ಮಾಡಿದ ನಾಗರಾಜ್, ನಮ್ಮ ಅಜ್ಜಿಗೆ ೮ ಕೆ.ಜಿ. ನಿಧಿಯ ರೂಪದಲ್ಲಿ ಚಿನ್ನ ನಾಣ್ಯಗಳು ಸಿಕ್ಕಿವೆ. ಇದನ್ನು ನಿಮಗೆ ಕೊಡಬೇಕೆಂದು ಕನಸು ಬಿದ್ದಿದೆ. ಇಷ್ಟುದೊಡ್ಡ ಪ್ರಮಾಣದ ಚಿನ್ನದ ನಾಣ್ಯಗಳನ್ನು ಕೇವಲ ೨೦ ಲಕ್ಷಕ್ಕೆ ಕೊಡುತ್ತೇವೆ ನೀವು ಖರೀದಿಸಲೇಬೇಕೆಂದು ನಂಬಿಸಿದ್ದಾನೆ.
    ಚಿನ್ನವನ್ನು ಎಲ್ಲಿ ಬೇಕಾದರು ತಪಾಸಣೆ ನಡೆಸಿ ಪರಿಶೀಲಿಸಿ ನಂತರ ನಮಗೆ ಹಣ ಕೊಡಿ ಎಂದಿದ್ದು, ಇದಕ್ಕೆ ಒಪ್ಪಿದ ಸದಾಶಿವಪ್ಪ ತಾಲೂಕಿನ ದಾನವಾಡಿ ಗ್ರಾಮಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ನಾಗರಾಜ್ ಸದಾಶಿವಪ್ಪನ ಪತ್ನಿ ಮತ್ತು ಚಾಲಕನಿಗೆ ಎರಡು ಚಿನ್ನದ ನಾಣ್ಯಗಳನ್ನು ನೀಡಿ ಪರಿಶೀಲಿಸಲು ತಿಳಿಸಿದ್ದಾನೆ. ಚಿನ್ನದ ನಾಣ್ಯ ಅಸಲಿ ಎಂದು ತಿಳಿದುಬಂದಿದೆ.
    ಈ ಹಿನ್ನಲೆಯಲ್ಲಿ ಸದಾಶಿವಪ್ಪ ತನ್ನ ಜಮೀನನ್ನು ಮಾರಾಟ ಮಾಡಿ ೨೦ ಲಕ್ಷ ರು. ಹಣ ಹೊಂದಿಸಿಕೊಂಡು ಬಂದಿದ್ದು,  ನಾಗರಾಜ್ ಹಣ ಪಡೆದು ಕೇವಲ ೪-೫ ಚಿನ್ನದ ನಾಣ್ಯಗಳನ್ನು ನೀಡಿ ಉಳಿದ ಚಿನ್ನ ನಾಣ್ಯ ತಂದುಕೊಡುವುದಾಗಿ ಹೇಳಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

No comments:

Post a Comment