ಭದ್ರಾವತಿ, ನ. 10: ನಗರದ ಸ್ವಚ್ಛತೆಯಲ್ಲಿ ಪ್ರತಿಯೊಬ್ಬರ ಪಾತ್ರ ಬಹಳ ಮುಖ್ಯವಾಗಿದ್ದು, ನಮ್ಮ ಸುತ್ತಮುತ್ತಲ ಪರಿಸರದ ಮೇಲೆ ಅಭಿಮಾನ ಬೆಳೆಸಿ ಕೊಂಡಾಗ ಮಾತ್ರ ಸ್ವಚ್ಛತೆಯ ಅರಿವು ಸಹ ತಾನಾಗಿಯೇ ಬರಲಿದೆ ಎಂದು ನಗರಸಭೆ ಸ್ವಚ್ಛತಾ ರಾಯಭಾರಿ, ಚಲನಚಿತ್ರ ನಟಿ ಆಶಾ ಭಟ್ ಹೇಳಿದರು.
ಅವರು ಗುರುವಾರ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಕಂಡ ಕಂಡಲ್ಲಿ ಕಸ ಎಸೆಯುವುದು, ಮಲಿನಗೊಳಿಸುವುದು ಸೇರಿದಂತೆ ಪರಿಸರಕ್ಕೆ ಧಕ್ಕೆ ತರುವಂತಹ ಕೆಲಸಗಳನ್ನು ಮಾಡಬಾರದು. ನಮ್ಮ ಮನೆಯನ್ನು ಯಾವ ರೀತಿ ಸ್ವಚ್ಛವಾಗಿಟ್ಟುಕೊಳ್ಳುತ್ತೇವೆಯೋ, ಅದೇ ರೀತಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಹ ಸ್ವಚ್ಛವಾಗಿಟ್ಟುಕೊಳ್ಳಬೇಕೆಂದರು. ನಮ್ಮ ಪರಿಸರದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪೌರ ಕಾರ್ಮಿಕರಿಗೆ ನಾವೆಲ್ಲರೂ ಮೊದಲು ಗೌರವ ನೀಡಬೇಕು. ಸ್ವಚ್ಛತೆ ಎಂಬುದು ಒಂದು ದಿನಕ್ಕೆ ಸೀಮಿತ ಅಲ್ಲ ಅದು ನಮ್ಮ ಬದುಕಿನುದ್ದಕ್ಕೂ ಸಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪೌರಾಯುಕ್ತ ಮನು ಕುಮಾರ್, ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಶ್ರಮ ಹೆಚ್ಚಿನದಾಗಿದೆ. ಸಾರ್ವಜನಿಕರು ಕಸ ವಿಲೇವಾರಿಯಲ್ಲಿ ಹೆಚ್ಚಿನ ಸಹಕಾರ ನೀಡಬೇಕು. ಮನೆಯಲ್ಲಿಯೇ ಕಸವನ್ನು ಬೇರ್ಪಡಿಸಬೇಕು. ಸಾಧ್ಯವಾದಷ್ಟು ಮರುಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಸ್ವಚ್ಛತೆಯಲ್ಲಿ ನಗರಸಭೆ ಉನ್ನತ ಮಟ್ಟ ತಲುಪಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಉಪಾಧ್ಯಕ್ಷ ಚನ್ನಪ್ಪ ಸೇರಿದಂತೆ ಇನ್ನಿತರರು ಮಾತನಾಡಿದರು.
ನಗರಸಭೆ ಅಧ್ಯಕ್ಷ ಅನುಸುಧಾ ಮೋಹನ್ ಪಳನಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ ಸುದೀಪ್ ಕುಮಾರ್ ಸದಸ್ಯರಾದ ಅನುಪಮ ಚೆನ್ನೇಶ್ ಲತಾ ಚಂದ್ರಶೇಖರ್ ಜಾರ್ಜ್ ಆರ್ ಮೋಹನ್ ಕುಮಾರ್ ಮಣಿ ಎಎನ್ಎಸ್, ಬಸವರಾಜ್, ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹಾಗೂ ಆಶಾ ಭಟ್ ಪೋಷಕರು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಶಾ ಭಟ್ ಅವರನ್ನು ನಗರಸಭೆ ವತಿಯಿಂದ ಅಭಿನಂದಿಸಲಾಯಿತು. ಕಂದಾಯ ಅಧಿಕಾರಿ ರಾಜಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪರಿಸರ ಅಭಿಯಂತರ ಪ್ರಭಾಕರ್ ಸ್ವಾಗತಿಸಿದರು. ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು, ವಿವಿಧ ಶಾಲೆಗಳ ಮಕ್ಕಳು ಅಭಿಯಾನದಲ್ಲಿ ಭಾಗವಹಿಸಿದ್ದರು.
No comments:
Post a Comment