Monday, November 21, 2022

ನ.೨೩ರಂದು ಶ್ರೀ ಸತ್ಯ ಸಾಯಿ ಬಾಬಾರವರ ೯೭ನೇ ಜನ್ಮದಿನೋತ್ಸವ

ಭದ್ರಾವತಿ, ನ. ೨೧ : ನಗರದ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು ಮತ್ತು ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ನ.೨೩ರ ವರೆಗೆ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ೯೭ನೇ ಜನ್ಮದಿನೋತ್ಸವ ಹಮ್ಮಿಕೊಳ್ಳಲಾಗಿದೆ.
      ಹಿರಿಯೂರು ಗ್ರಾಮ ಹಾಗು ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ಸೋಮವಾರ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು. ಅಲ್ಲದೆ ಶ್ರೀ ಸತ್ಯಸಾಯಿ ಯುವ ಯುವ ವಿಭಾಗದವರಿಂದ ಸ್ವಾಮಿಗೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು. ಸೀಗೆಬಾಗಿ ಶ್ರೀ ಸತ್ಯಸಾಯಿ ಗ್ರಾಮ ಸೇವಾ ಕೇಂದ್ರದಲ್ಲಿ ನ.೨೨ರಂದು ಬೆಳಿಗ್ಗೆ ೯.೩೦ಕ್ಕೆ ಚಿಂತನ, ಸ್ವಾಮಿಗೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.
      ನ.೨೩ರಂದು ಶ್ರೀ ಸತ್ಯಸಾಯಿ ಬಾಬಾರವರ ಹುಟ್ಟುಹಬ್ಬ ಆಚರಣೆ ನಡೆಯಲಿದ್ದು, ನ್ಯೂಟೌನ್ ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರದಲ್ಲಿ ಬೆಳಿಗ್ಗೆ ೫ ರಿಂದ ೬ ಗಂಟೆವರೆಗೆ ಓಂಕಾರ, ಜ್ಯೋತಿರ್ಧ್ಯಾನ, ಸುಪ್ರಭಾತ, ನಗರಸಂಕೀರ್ತನೆ, ೬.೧೫ಕ್ಕೆ ಪ್ರಶಾಂತಿ ಧ್ವಜಾರೋಹಣ, ೯.೩೦ಕ್ಕೆ ಶ್ರೀ ಸಾಯಿ ಸತ್ಯ ನಾರಾಯಣ ಪೂಜೆ, ಸಹಸ್ರ ನಾಮಾರ್ಚನೆ, ಶಿವಮೊಗ್ಗ ಮಿಡ್‌ಟೌನ್ ರೋಟರಿ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಲಿದೆ.
      ೧೦.೧೫ಕ್ಕೆ ಶ್ರೀ ಸತ್ಯ ಸಾಯಿ ಶಾಲಾ ಮಕ್ಕಳಿಂದ ಪಲ್ಲಕ್ಕಿ ಸೇವೆ, ಮಹಾಮಂಗಳಾರತಿ, ಶಾಲಾ ಮಕ್ಕಳಿಗೆ ಮಹಾಪ್ರಸಾದ ವಿನಿಯೋಗ, ಮಧ್ಯಾಹ್ನ ೧ ಗಂಟೆಗೆ ನಾರಾಯಣರಿಗೆ ವಸ್ತ್ರದಾನ ಮತ್ತು ನಾರಾಯಣ ಸೇವೆ, ಭಕ್ತಾಧಿಗಳಿಗೆ ಮಹಾಪ್ರಸಾದ ವಿನಿಯೋಗ, ಸಂಜೆ ೬ರಿಂದ ೬.೩೦ರವರೆಗೆ ಕಲಾವಾದ್ಯಗಳೊಂದಿಗೆ ಹಾಡುಗಾರಿಕೆ ಹಾಗು ೬.೩೦ ರಿಂದ ೭.೩೦ರ ವರೆಗೆ ಭಜನೆ, ಚಿಂತನೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ನ.೨೨ರಂದು ಕನ್ನಡ ರಾಜ್ಯೋತ್ಸವ, ಸಂಗೀತ ನೃತ್ಯ ಸಂಭ್ರಮ

    ಭದ್ರಾವತಿ, ನ. ೨೧: ಅಪೇಕ್ಷ ನೃತ್ಯ ಕಲಾ ವೃಂದ ಹಾಗು ಶ್ರೀ ಬಸವೇಶ್ವರ ಧರ್ಮಸಂಸ್ಥೆ ವತಿಯಿಂದ ನ.೨೨ರಂದು ಬೆಳಿಗ್ಗೆ ೧೦.೩೦ಕ್ಕೆ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಕನ್ನಡ ರಾಜ್ಯೋತ್ಸವ, ಸಂಗೀತ ನೃತ್ಯ ಸಂಭ್ರಮ, ವಿವಿಧ ಕ್ಷೇತ್ರದ ಸಾಧಕರಿಗೆ ಪುರಸ್ಕಾರ ಮತ್ತು ಸನ್ಮಾನ ಹಾಗು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಕುವರ/ಕುವರಿ ಪ್ರಶಸ್ತಿ ಪ್ರದಾನ ನಡೆಯಲಿದೆ.


ಅಪೇಕ್ಷ ಮಂಜುನಾಥ್
    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಪೇಕ್ಷ ನೃತ್ಯ ಕಲಾ ವೃಂದ ಅಧ್ಯಕ್ಷೆ ಭಾರತಿ ಗೋವಿಂದಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ತಹಸೀಲ್ದಾರ್ ಆರ್. ಪ್ರದೀಪ್ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ನೆರವೇರಿಸಲಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಸಿ.ಆರ್ ಪರಮೇಶ್ವರಪ್ಪ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಎಚ್.ಎಂ ಮನುಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಚ್. ಉಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ನಗರಸಭಾ ಸದಸ್ಯರಾದ ಮಣಿ ಎ.ಎನ್.ಎಸ್, ಆರ್. ಶ್ರೇಯಸ್(ಚಿಟ್ಟೆ), ಸಮಾಜ ಸೇವಕ ಸ್ನೇಹಜೀವಿ ಉಮೇಶ್, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಶಸ್ತ್ರ ಚಿಕಿತ್ಸಕ ಡಾ.ಡಿ.ಎಸ್ ಶಿವಪ್ರಕಾಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಿ.ಬಿ ಶಂಕರಪ್ಪ, ಉದ್ಯಮಿ ಸುಧಾಕರ ಶೆಟ್ಟಿ, ಡಾ. ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಎಂ. ಶ್ರೀನಿವಾಸ್ ಮತ್ತು ಬಸವೇಶ್ವರ ಧರ್ಮಸಂಸ್ಥೆ ಟ್ರಸ್ಟಿ ಎಂ. ಶಶಿಕಲಾ ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಕನ್ನಡಾಭಿಮಾನಿಗಳು, ವಿವಿಧ ಸಂಘ-ಸಂಸ್ಥೆಗಳು ಸೇರಿದಂತೆ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅಪೇಕ್ಷ ಮಂಜುನಾಥ್ ಕೋರಿದ್ದಾರೆ.

Sunday, November 20, 2022

ನೂತನ ಪದಾಧಿಕಾರಿಗಳ ಪದಗ್ರಹಣ : ಆಟೋ, ಬೈಕ್ ಜಾಥ

ಭದ್ರಾವತಿ, ನ. 20 : ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ತಾಲೂಕು ಶಾಖೆ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಕನ್ನಡ ರಾಜ್ಯೋತ್ಸವ ಭಾನುವಾರ ನ್ಯೂಟೌನ್ ಲಯನ್ಸ್ ಕ್ಲಬ್ ನಲ್ಲಿ ಭಾನುವಾರ ನಡೆಯಿತು.
      ನೂತನ ಅಧ್ಯಕ್ಷರಾಗಿ ಐ.ವಿ ಸಂತೋಷ್ ಕುಮಾರ್ ಸೇರಿದಂತೆ ಇನ್ನಿತರರು ಪದಗ್ರಹಣ ಸ್ವೀಕರಿಸಿದರು. ಇದಕ್ಕೂ ಮೊದಲು ಹಳೆನಗರ ಕನಕ ಮಂಟಪ ಮೈದಾನದಿಂದ ಶಿವಮೊಗ್ಗದ ವಿಕಲಚೇತನ, ಕನ್ನಡಾಭಿಮಾನಿ ಶಿವು ರಾಮಪ್ಪ ನೇತೃತ್ವದಲ್ಲಿ  ಆಟೋ ಮತ್ತು  ಬೈಕ್ ಜಾಥ  ನಡೆಸಲಾಯಿತು.   
   ಸಂಸ್ಥಾಪಕ ಅಧ್ಯಕ್ಷ ಡಿ.ಜೆ ಪ್ರಭು ಚಾಲನೆ ನೀಡಿದರು. ರಾಜ್ಯ ಉಪಾಧ್ಯಕ್ಷ ಮೋಸಸ್ ರೋಸಯ್ಯ ಸೇರಿದಂತೆ ಪ್ರಮುಖರು,  ಪದಾಧಿಕಾರಿಗಳು, ಕಾರ್ಯಕರ್ತರು, ಕನ್ನಡ ಅಭಿಮಾನಿಗಳು ಪಾಲ್ಗೊಂಡಿದ್ದರು.

ನ.೨೫ರಂದು ಭದ್ರಾವತಿಗೆ ಶ್ರೀ ಶೃಂಗೇರಿ ಜಗದ್ಗುರುಗಳ ಆಗಮನ : ಕೆ.ಆರ್ ಸುಬ್ಬರಾವ್

    ಭದ್ರಾವತಿ, ನ. ೨೦ ನಗರದ ಹೊಸಸೇತುವೆ ರಸ್ತೆಯಲ್ಲಿರುವ ಸಿದ್ದಾರೂಢನಗರದ ಶ್ರೀ ಶೃಂಗೇರಿ ಶಂಕರ ಮಠಕ್ಕೆ ನ.೨೫ರಂದು ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ಆಗಮಿಸುತ್ತಿದ್ದಾರೆಂದು ಮಠದ ಧರ್ಮಾಧಿಕಾರಿ ಕೆ.ಆರ್ ಸುಬ್ಬರಾವ್ ತಿಳಿಸಿದರು.
    ಅವರು ಭಾನುವಾರ ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಅಂದು ಸಂಜೆ ೬ ಗಂಟೆಗೆ ಶ್ರೀಗಳನ್ನು ಕೆಎಸ್‌ಆರ್‌ಟಿಸಿ ಘಟಕದ ಸಮೀಪದಲ್ಲಿರುವ ಶ್ರೀ ಶಂಕರವೃತ್ತದಿಂದ ವೇದಘೋಷದೊಂದಿಗೆ, ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಗತಿಸಲಾಗುವುದು. ಶ್ರೀಗಳು ಮಠಕ್ಕೆ ಪ್ರವೇಶಿಸಿದ ಸಂದರ್ಭದಲ್ಲಿ ಧೂಳಿ ಪಾದ ಪೂಜೆ ನಡೆಯಲಿದ್ದು, ನಂತರ ಶ್ರೀಗಳಿಂದ ಆಶೀರ್ವಚನ ನಡೆಯಲಿದೆ. ರಾತ್ರಿ ೮.೩೦ಕ್ಕೆ ಶ್ರೀಗಳು ಶ್ರೀ ಶಾರದಾ ಚಂದ್ರಮೌಳೀಶ್ವರರ ಪೂಜೆ ನೆರವೇರಿಸಲಿದ್ದು, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಜರುಗಲಿದೆ ಎಂದರು.
    ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನ.೨೬ರಂದು ಬೆಳಿಗ್ಗೆ ೯ ಗಂಟೆಯಿಂದ ಶ್ರೀ ಲಲಿತಾ ಹೋಮ ಜರುಗಲಿದ್ದು, ಮಧ್ಯಾಹ್ನ ೧೨ ಗಂಟೆಗೆ ಪೂರ್ಣಾಹುತಿ ನಡೆಯಲಿದೆ. ನಂತರ ಶ್ರೀಗಳಿಂದ ಫಲ-ಮಂತ್ರಾಕ್ಷತೆ ಅನುಗ್ರಹ ಜರುಗಲಿದೆ ಎಂದರು.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಾರದಾಂಬೆ ಹಾಗು ಶ್ರೀಗಳ ಕೃಪೆಗೆ ಪಾತ್ರರಾಗುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದರು.
    ಪ್ರಮುಖರಾದ ಎಂ.ಎಸ್ ಜನಾರ್ಧನ ಅಯ್ಯಂಗಾರ್, ಕೆ.ಎಸ್ ನಾಗರಾಜ್, ಲಲಿತಾ ನಾಗರಾಜ್ ಹಾಗು ಮಠದ ವ್ಯವಸ್ಥಾಪಕ ಶಾಂತಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿಗೆ ನ.೨೫ರಂದು ಶ್ರೀ ಶೃಂಗೇರಿ ಜಗದ್ಗುರುಗಳ ಆಗಮನ ಕುರಿತು ಧರ್ಮಾಧಿಕಾರಿ ಕೆ.ಆರ್ ಸುಬ್ಬರಾವ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹತಿ ನೀಡಿದರು. 

ಸರ್ಕಾರಿ ಶಾಲೆಗೆ ಕ್ರೀಡಾಂಗಣ ಕಲ್ಪಿಸಲು ಸ್ಥಳ ಪರಿಶೀಲನೆ

ಭದ್ರಾವತಿ ತಾಲೂಕಿನ ಕಲ್ಪನ ಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಕ್ರೀಡಾಂಗಣ ಕಲ್ಪಿಸಿಕೊಡುವ ಹಿನ್ನಲೆಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.
    ಭದ್ರಾವತಿ, ನ. ೨೦ :  ತಾಲೂಕಿನ ಕಲ್ಪನ ಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಕ್ರೀಡಾಂಗಣ ಕಲ್ಪಿಸಿಕೊಡುವ ಹಿನ್ನಲೆಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.
       ಜಾಗೋ ಬಂಜಾರ ಯುವಕರ ಸಂಘದ ಅಧ್ಯಕ್ಷ ಪ್ರವೀಣ್ ನಾಯ್ಕ ನೇತೃತ್ವದಲ್ಲಿ ತಾಲೂಕು ಆಡಳಿತ ಹಾಗು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿ ಸೂಕ್ತ ಕ್ರೀಡಾಂಗಣವಿಲ್ಲದ ಹಿನ್ನಲೆಯಲ್ಲಿ ಶಾಲಾ ಮಕ್ಕಳಿಗೆ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಡಲಾಗಿತ್ತು. ಈ ಹಿನ್ನಲೆಯಲ್ಲಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರೀಡಾಂಗಣಕ್ಕೆ ಸ್ಥಳ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದೆ.
      ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಜಾಗೋ ಬಂಜಾರ ಯುವಕರ ಸಂಘದ ಉಪಾಧ್ಯಕ್ಷ ಗುಂಡು, ಪ್ರಧಾನ ಕಾರ್ಯದರ್ಶಿ ಪವನ್ ಕುಮಾರ್ ಹಾಗೂ ಕುಮಾರ್, ರಾಕೇಶ್, ರಾಹುಲ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Saturday, November 19, 2022

ನ.೨೦ರಂದು ಭೂಮಿಕಾ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ವಿಶೇಷ ಕಾರ್ಯಕ್ರಮ

    ಭದ್ರಾವತಿ, ನ. ೧೯: ಕನ್ನಡ ನಾಡು-ನಡೆ-ನುಡಿ ಬಿಂಬಿಸುವ ನಗರದ ಭೂಮಿಕಾ ವೇದಿಕೆ ವತಿಯಿಂದ ನ.೨೦ರ ಭಾನುವಾರ ಸಂಜೆ ೬ ಗಂಟೆಗೆ ೬೭ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ನಿವೃತ್ತ ಉಪನ್ಯಾಸಕ, ಅಂಕಣಕಾರ ಹಾಗು ಗಮಕಿ ರಾಮಸುಬ್ರಾಯ ಶೇಟ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಭೂಮಿಕಾ ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್. ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ರಾಜ್ಯ ಸರ್ಕಾರದ ಮಲತಾಯಿ ಧೋರಣೆಯಿಂದಾಗಿ ಕ್ಷೇತ್ರದ ಅಭಿವೃದ್ಧಿ ಕುಂಠಿತ

ಶಾಸಕ ಬಿ.ಕೆ ಸಂಗಮೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಆರೋಪ

ಭದ್ರಾವತಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ನ. ೧೯: ಆಡಳಿತಾರೂಢ ಬಿಜೆಪಿ ರಾಜ್ಯ ಸರ್ಕಾರ ಕಾಂಗ್ರೆಸ್ ಪಕ್ಷ ಪ್ರತಿನಿಧಿಸುವ ಶಾಸಕರ ಕ್ಷೇತ್ರಗಳಿಗೆ ಸರಿಯಾಗಿ ಅನುದಾನ ನೀಡದೇ ಮಲತಾಯಿ ಧೋರಣೆ ಮುಂದುವರೆಸುತ್ತಾ ಬಂದಿದ್ದು, ಪರಿಣಾಮವಾಗಿ ಕಾರ್ಖಾನೆಗಳ ಅವನತಿ ಸೇರಿದಂತೆ ನಿರೀಕ್ಷಿತ ರೀತಿಯಲ್ಲಿ ಭದ್ರಾವತಿ ಕ್ಷೇತ್ರ ಅಭಿವೃದ್ಧಿ ಸಾಧಿಸದೇ ಹಿನ್ನಡೆ ಅನುಭವಿಸುವಂತಾಗಿದೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಆರೋಪಿಸಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ಹಲವು ಬಾರಿ ಸದನದಲ್ಲಿ  ಗಟ್ಟಿಧ್ವನಿಯಲ್ಲಿ ಮಾತನಾಡಿದರೂ ಸಹ ಯಾವುದೇ ರೀತಿಯ ಪ್ರಯೋಜನವಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
    ಡಿಸೆಂಬರ್ ತಿಂಗಳಿನಲ್ಲಿ ಕ್ಷೇತ್ರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳ ಗಮನವನ್ನು ಈ ಕುರಿತಂತೆ ಸೆಳೆಯಲಾಗುವುದು. ನಂತರದ ದಿನಗಳಲ್ಲಿ ಹೋರಾಟದ ರೂಪು-ರೇಷೆ ಸಿದ್ದಪಡಿಸಲಾಗುವುದು ಎಂದರು.
    ಬಡವರಿಗೆ ಮನೆಕಟ್ಟಿಸಿಕೊಡುವ ಗುಂಪುಮನೆ ಯೋಜನೆಯಡಿ ಕ್ಷೇತ್ರದಲ್ಲಿ ಎರಡುಸಾವಿರ ಫಲಾನುಭವಿಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಮುಂದಿನ ಹತ್ತು ದಿನಗಳ ಒಳಗಾಗಿ ಟೆಂಡರ್ ಕರೆಯದಿದ್ದಲ್ಲಿ ವಸತಿ ಸಚಿವರಾದ ವಿ. ಸೋಮಣ್ಣ ರವರ ಮನೆಯ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
    ಶರಾವತಿ ಮುಳುಗಡೆ ಸಂತ್ರಸ್ತರ ನೆರವಿಗಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಪ್ರತಿಭಟನೆಗೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
    ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಸದಸ್ಯರಾದ ಬಿ.ಟಿ ನಾಗರಾಜ್, ಲತಾ ಚಂದ್ರಶೇಖರ್, ಜಾರ್ಜ್, ಕಾಂತ್‌ರಾಜ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ, ಮುಖಂಡರಾದ ತಳ್ಳಿಕಟ್ಟೆ ಲೋಕೇಶ್, ಎಸ್.ಎಸ್ ಭೈರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.