Monday, December 12, 2022

ಹುಟ್ಟುಹಬ್ಬ ಅಂಗವಾಗಿ ಉಚಿತ ಕನ್ನಡಕ ವಿತರಣೆ

    ಭದ್ರಾವತಿ, ಡಿ. ೧೨ :  ಪೊಲೀಸ್ ಉಮೇಶ್‌ರವರ ಹುಟ್ಟುಹಬ್ಬದ ಅಂಗವಾಗಿ ದೃಷ್ಟಿದೋಷ ಹೊಂದಿರುವ ಹಿರಿಯ ನಾಗರೀಕರಿಗೆ ಸ್ನೇಹಜೀವಿ ಬಳಗ ಉಚಿತ ಕನ್ನಡಕ ವಿತರಿಸಲಿದೆ.
    ದೃಷ್ಟಿದೋಷ ಹೊಂದಿರುವ ಹಿರಿಯ ನಾಗರೀಕರು ತಜ್ಞ ವೈದ್ಯರು ತಪಾಸಣೆ ನಡೆಸಿ ಕನ್ನಡಕ ಧರಿಸಲು ಶಿಫಾರಸ್ಸು ಮಾಡಿರುವ ಚೀಟಿಯನ್ನು ಡಿ.೧೭ರೊಳಗೆ ನೀಡತಕ್ಕದ್ದು, ಹೆಚ್ಚಿನ ಮಾಹಿತಿಗೆ ಮೊ: ೯೬೨೦೫೨೪೫೦೩ ಅಥವಾ ೮೩೧೦೮೭೭೨೯೬ ಸಂಖ್ಯೆಗೆ ಕರೆ ಮಾಡಬಹುದಾಗಿದೆ.



ವಿಜೃಂಭಣೆಯಿಂದ ಜರುಗಿದ ಅಮಲೋದ್ಭವಿ ಮಾತೆ ದೇವಾಲಯದ ೮೪ನೇ ವರ್ಷದ ವಾರ್ಷಿಕೋತ್ಸವ

ಭದ್ರಾವತಿ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ೮೪ನೇ ವರ್ಷದ ವಾರ್ಷಿಕೋತ್ಸವದಲ್ಲಿ ದೇವಾಲಯದ ಆವರಣದಲ್ಲಿ ಪ್ರಾರ್ಥನೆಗೆ ಅನುಕೂಲವಾಗುವಂತೆ ಸುಮಾರು ೧೫ ಲಕ್ಷ ರು. ವೆಚ್ಚದಲ್ಲಿ ಅಮಲೋದ್ಭವಿ ಮಾತೆಯ 'ಗ್ರೋಟ್ಟೋ' ನಿರ್ಮಾಣ ಮಾಡಿಸಿಕೊಟ್ಟಿರುವ ದಾನಿಗಳಾದ ಗಾಂಧಿನಗರದ ಸೇಂಟ್ ಜೋಸೆಫ್ ಮತ್ತು ಲಿಟರ್ ಫ್ಲವರ್ ಶಾಲೆಗಳ ಸಂಸ್ಥಾಪಕರಾದ ರಾಬರ್ಟ್ ಡಿಸೋಜಾ-ಲತಾ ರಾಬರ್ಟ್ ದಂಪತಿ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು
    ಭದ್ರಾವತಿ, ಡಿ. ೧೨ : ನಗರದ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ೮೪ನೇ ವರ್ಷದ ವಾರ್ಷಿಕೋತ್ಸವ ೧೧ ದಿನಗಳ ಕಾಲ 'ಅಮಲೋದ್ಭವಿ ಮಾತೆಯೊಂದಿಗೆ ಸಾಗು, ಕುಟುಂಬದಲ್ಲಿ ವಿಶ್ವಾಸವ ಸಾರು' ಧ್ಯೇಯವಾಕ್ಯದೊಂದಿಗೆ ವಿಜೃಂಭಣೆಯಿಂದ ಜರುಗಿತು.
    ಪ್ರತಿದಿನ ಸಂಜೆ ಜಪಸರ ಪ್ರಾರ್ಥನೆ, ಬಲಿಪೂಜೆ ಮತ್ತು ಪ್ರಬೋಧನೆಗಳು ಜರುಗಿದವು. ೧೦ನೇ ದಿನ ಅಮಲೋದ್ಭವಿ ಮಾತೆಯ ಅಲೃಂಕೃತಗೊಂಡ ಭವ್ಯ ತೇರಿನ ಮೆರವಣಿಗೆ ನಡೆಯಿತು. ಧರ್ಮಗುರುಗಳಿಂದ ಆಶೀರ್ವಾದ ಹಾಗು ಅನ್ನಸಂತರ್ಪಣೆ ನೆರವೇರಿತು.
    ೧೧ನೇ ದಿನ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಡಾ. ಫ್ರಾನ್ಸಿಸ್ ಸೆರಾವೋರವರು ಸುಮಾರು ೫೦ಕ್ಕೂ ಹೆಚ್ಚು ಧರ್ಮಗುರುಗಳೊಂದಿಗೆ ದಿವ್ಯ ಬಲಿಪೂಜೆ ನೆರವೇರಿಸಿದರು.
    ದೇವಾಲಯದ ಆವರಣದಲ್ಲಿ ಪ್ರಾರ್ಥನೆಗೆ ಅನುಕೂಲವಾಗುವಂತೆ ಸುಮಾರು ೧೫ ಲಕ್ಷ ರು. ವೆಚ್ಚದಲ್ಲಿ ಅಮಲೋದ್ಭವಿ ಮಾತೆಯ 'ಗ್ರೋಟ್ಟೋ' ನಿರ್ಮಾಣ ಮಾಡಿಸಿಕೊಟ್ಟಿರುವ ದಾನಿಗಳಾದ ಗಾಂಧಿನಗರದ ಸೇಂಟ್ ಜೋಸೆಫ್ ಮತ್ತು ಲಿಟರ್ ಫ್ಲವರ್ ಶಾಲೆಗಳ ಸಂಸ್ಥಾಪಕರಾದ ರಾಬರ್ಟ್ ಡಿಸೋಜಾ-ಲತಾ ರಾಬರ್ಟ್ ದಂಪತಿಯನ್ನು, ಚಿಕ್ಕಮಗಳೂರು ಧರ್ಮಕ್ಷೇತ್ರದ ಗುರು ಶ್ರೇಷ್ಠ ವಂದನೀಯ ಸ್ವಾಮಿ ಎಲಿಯಾಸ್ ಸಿಕ್ವೇರಾರವರನ್ನು, ಆಲ್ ಇಂಡಿಯಾ ಕ್ಯಾಥೋಲಿಕ್ ಯೂನಿಯನ್(ಎಐಸಿಯು) ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ದೇವಾಲಯದ ಪಾಲನಾ ಪರಿಷತ್ ಕಾರ್ಯದರ್ಶಿ ಅಂತೋಣಿ ವಿಲ್ಸನ್ ಮತ್ತು ನಗರಸಭಾ ಸದಸ್ಯ ಜಾಜ್‌ರವರನ್ನು ಸನ್ಮಾನಿಸಿ ಗೌರಿವಿಸಲಾಯಿತು.  
  ದೇವಾಲಯದ ಧರ್ಮಗುರು ವಂದನೀಯ ಸ್ವಾಮಿ ಲಾನ್ಸಿ ಡಿಸೋಜ ವಾರ್ಷಿಕೋತ್ಸವದ ನೇತೃತ್ವ ವಹಿಸಿದ್ದರು. ಸುತ್ತಮುತ್ತಲ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದ ಭಕ್ತರು ಪಾಲ್ಗೊಂಡಿದ್ದರು.

ಡಿ.೧೩ರಂದು ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ

ಡಿ.೧೩ರಂದು ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ

    ಭದ್ರಾವತಿ, ಡಿ. ೧೩ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ, ಶಿವಮೊಗ್ಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗು ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಡಿ.೧೩ರ ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ.
    ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ ನಾರಾಯಣಗೌಡ, ಗೃಹ ಸಚಿವ ಆರಗ ಜ್ಞಾನೇಂದ್ರ, ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಖಾತೆ ಸಚಿವ ಬಿ.ಸಿ ನಾಗೇಶ್, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಕೆ.ಎಸ್ ಈಶ್ವರಪ್ಪ, ಹರತಾಳು ಹಾಲಪ್ಪ, ಎಸ್. ಕುಮಾರ್ ಬಂಗಾರಪ್ಪ, ಕೆ.ಬಿ ಅಶೋಕ್ ನಾಯ್ಕ್, ಆಯನೂರು ಮಂಜುನಾಥ್, ಎಸ್.ಎಲ್ ಭೋಜೇಗೌಡ, ಎಸ್. ರುದ್ರೇಗೌಡ, ಭಾರತಿ ಶೆಟ್ಟಿ, ಡಿ.ಎಸ್ ಅರುಣ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಜಿ ನಾಗರಾಜ್, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ. ಸಿದ್ದಬಸಪ್ಪ, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರಾದ ಸಿ.ಆರ್ ಪರಮೇಶ್ವರಪ್ಪ, ಬಿ.ಆರ್ ಬಸವರಾಜಪ್ಪ, ತಹಸೀಲ್ದಾರ್ ಆರ್. ಪ್ರದೀಪ್ ಸೇರಿದಂತೆ ಇನ್ನಿತರರು ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಯಶಸ್ವಿಗೊಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮತ್ತು ಪ್ರಶಾಂತಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಡಿ. ಪ್ರಭಾಕರ ಬೀರಯ್ಯ ಕೋರಿದ್ದಾರೆ.

Sunday, December 11, 2022

ಕಾರ್ಖಾನೆಗಳ ಅಭಿವೃದ್ಧಿಗಾಗಿ ಚಿಟಿಕೆ ಉಪ್ಪು ಸಂಗ್ರಹಿಸಲು ಪಾದಯಾತ್ರೆ

ಭದ್ರಾವತಿ ಎಂಪಿಎಂ ಹಾಗು ವಿಐಎಸ್‌ಎಲ್ ಕಾರ್ಖಾನೆಗಳ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ತಾಲೂಕಿನಾದ್ಯಂತ ಚಿಟಿಕೆ ಉಪ್ಪು ಸಂಗ್ರಹಿಸಿ ಮನವಿ ಸಲ್ಲಿಸಲು ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ಪಾದಯಾತ್ರೆಗೆ ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಶನಿವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಪಾದಯಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
    ಭದ್ರಾವತಿ, ಡಿ. ೧೧: ನಗರದ ಎಂಪಿಎಂ ಹಾಗು ವಿಐಎಸ್‌ಎಲ್ ಕಾರ್ಖಾನೆಗಳ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ತಾಲೂಕಿನಾದ್ಯಂತ ಚಿಟಿಕೆ ಉಪ್ಪು ಸಂಗ್ರಹಿಸಿ ಮನವಿ ಸಲ್ಲಿಸಲು ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ಪಾದಯಾತ್ರೆ ಭಾನುವಾರ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಇರುವ  ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಆರಂಭಗೊಂಡಿತು.
    ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಶನಿವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಪಾದಯಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಡಿ.೨೮ರವರೆಗೆ ನಗರಸಭೆ ವ್ಯಾಪ್ತಿಯಲ್ಲಿ ಡಿ.೩೦ರಿಂದ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಪಾದಯಾತ್ರೆ ನಡೆಯಲಿದೆ.
    ಕಡೂರಿನ ಮಾಜಿ ಶಾಸಕ ವೈ.ಎಸ್.ವಿ ದತ್ತಾ, ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ ಮತ್ತು ರೈತ ಸಂಘ ಹಸಿರು ಸೇನೆ ವರಿಷ್ಠ ಕೆ.ಟಿ ಗಂಗಾಧರ್, ಶಾಸಕ ಬಿ.ಕೆ ಸಂಗಮೇಶ್ವರ್, ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ಚಂದ್ರಶೇಖರಯ್ಯ, ಜೆಡಿಎಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಶಿಕ್ಷಕ, ಗಾಯಕ ಹರೋನಹಳ್ಳಿ ಸ್ವಾಮಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಜಿಲ್ಲಾ ಸಮಿತಿ ಅಧ್ಯಕ್ಷೆ ಹನುಮಮ್ಮ, ನಗರಸಭೆ ಮಾಜಿ ಅಧ್ಯಕ್ಷೆ ಎಂ.ಎಸ್ ಸುಧಾಮಣೆ, ವಿಜಯಮ್ಮ ಎನ್. ಗಿರಿಯಪ್ಪ ಸಿದ್ದಲಿಂಗಯ್ಯ, ಆಂಜನೇಯ, ಶಶಿಕುಮಾರ್ ಎಸ್. ಗೌಡ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಕಾರ್ಯಾಧ್ಯಕ್ಷ ಐ.ಎಲ್ ಅರುಣ್‌ಕುಮಾರ್, ಉಪಾಧ್ಯಕ್ಷರಾದ ಶೇಖರ್, ರಂಗಪ್ಪ, ಪ್ರಧಾನ ಸಂಚಾಲಕರಾದ ಶ್ರೀನಿವಾಸ್ ಮತ್ತು ಬಸವರಾಜ್ ಸೇರಿದಂತೆ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು  ಉಪಸ್ಥಿತರಿದ್ದರು.  

ಪ್ರಾಧ್ಯಾಪಕ ಎಚ್.ಎಸ್ ಶಿವರುದ್ರಪ್ಪರಿಗೆ ಡಾಕ್ಟರೇಟ್ ಪದವಿ

ಎಚ್.ಎಸ್ ಶಿವರುದ್ರಪ್ಪ

    ಭದ್ರಾವತಿ, ಡಿ. ೧೧: ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕ ಎಚ್.ಎಸ್ ಶಿವರುದ್ರಪ್ಪ  ಹಂಪಿ ಕನ್ನಡ ವಿಶ್ವವಿದ್ಯಾಲಯದ ಪಿಎಚ್‌ಡಿ ಪದವಿ ಪಡೆದುಕೊಂಡಿದ್ದಾರೆ.
    ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಕರ್ನಾಟಕದಲ್ಲಿ ಜಿಲ್ಲಾಡಳಿತ-ಶಿವಮೊಗ್ಗ ಜಿಲ್ಲೆಯ ಒಂದು ವಿಮರ್ಶಾತ್ಮಕ ಅಧ್ಯಯನ ವಿಷಯ ಕುರಿತು ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಸಮಾಜವಿಜ್ಞಾನಗಳ ನಿಕಾಯ ಡಾ. ಎ. ಶ್ರೀಧರರವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.
    ಇವರನ್ನು ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕ ಹಾಗು ಅಧ್ಯಾಪಕೇತರ ಸಿಬ್ಬಂದಿ ವರ್ಗದವರು, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ.  

೩ ಗಣ್ಯರಿಗೆ ವಿಶ್ವ ಮಾನವ ಪ್ರಶಸ್ತಿ

ಭದ್ರಾವತಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನವ ಸಮಾವೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೋರಾಟದ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿರುವ ೩ ಗಣ್ಯರಿಗೆ ವಿಶ್ವ ಮಾನವ ಪ್ರಶಸ್ತಿ ನೀಡಿ ಗೌರವಿಸಲಾಯಿತು.  
    ಭದ್ರಾವತಿ, ಡಿ. ೧೧: ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನವ ಸಮಾವೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೋರಾಟದ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿರುವ ೩ ಗಣ್ಯರಿಗೆ ವಿಶ್ವ ಮಾನವ ಪ್ರಶಸ್ತಿ ನೀಡಿ ಗೌರವಿಸಲಾಯಿತು.  
    ಕಡೂರಿನ ಮಾಜಿ ಶಾಸಕ ವೈ.ಎಸ್.ವಿ ದತ್ತಾ, ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ ಮತ್ತು ರೈತ ಸಂಘ ಹಸಿರು ಸೇನೆ ವರಿಷ್ಠ ಕೆ.ಟಿ ಗಂಗಾಧರ್ ಅವರಿಗೆ ವಿಶ್ವ ಮಾನವ ಪ್ರಶಸ್ತಿ ನೀಡಲಾಯಿತು.
    ಶಾಸಕ ಬಿ.ಕೆ ಸಂಗಮೇಶ್ವರ್, ಪ್ರೊ. ಎಂ. ಚಂದ್ರಶೇಖರಯ್ಯ, ಜೆಡಿಎಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಶಿಕ್ಷಕ, ಗಾಯಕ ಹರೋನಹಳ್ಳಿ ಸ್ವಾಮಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಜಿಲ್ಲಾ ಸಮಿತಿ ಅಧ್ಯಕ್ಷೆ ಹನುಮಮ್ಮ, ನಗರಸಭೆ ಮಾಜಿ ಅಧ್ಯಕ್ಷೆ ಎಂ.ಎಸ್ ಸುಧಾಮಣೆ, ವಿಜಯಮ್ಮ ಎನ್. ಗಿರಿಯಪ್ಪ ಸಿದ್ದಲಿಂಗಯ್ಯ, ಆಂಜನೇಯ, ಶಶಿಕುಮಾರ್ ಎಸ್. ಗೌಡ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಹಾಗು ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು  ಉಪಸ್ಥಿತರಿದ್ದರು.  

ಶಾಲಾ ಮಕ್ಕಳಿಗೆ ಉಚಿತ ಶೂ ವಿತರಣೆ

ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮದಲ್ಲಿರುವ ಶ್ರೀ ಬಸಪ್ಪಗೌಡ ಮಲ್ಲಪ್ಪಗೌಡ ಸ್ಮಾರಕ ಪ್ರೌಢಶಾಲೆ(ಎಸ್‌ಬಿಎಂಎಂಆರ್)ಯಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ದಾನಿಗಳಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ಶೂ ವಿತರಿಸಲಾಯಿತು.  
    ಭದ್ರಾವತಿ, ಡಿ. ೧೧: ತಾಲೂಕಿನ ಹಿರಿಯೂರು ಗ್ರಾಮದಲ್ಲಿರುವ ಶ್ರೀ ಬಸಪ್ಪಗೌಡ ಮಲ್ಲಪ್ಪಗೌಡ ಸ್ಮಾರಕ ಪ್ರೌಢಶಾಲೆ(ಎಸ್‌ಬಿಎಂಎಂಆರ್)ಯಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ದಾನಿಗಳಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ಶೂ ವಿತರಿಸಲಾಯಿತು.
    ಬೆಂಗಳೂರಿನ ಶ್ರೀ ಗುರು ಮಹಾರುದ್ರಸ್ವಾಮಿ ಗುರುಕುಲ ವಿದ್ಯಾಸಂಸ್ಥೆ ವತಿಯಿಂದ ಈ ಪ್ರೌಢ ಶಾಲೆಯನ್ನು ಮುನ್ನಡೆಸಿಕೊಂಡು ಹೋಗಲಾಗುತ್ತಿದೆ. ತಾಲೂಕಿನಲ್ಲಿ ತನ್ನದೇ ಆದ ವಿಶಿಷ್ಟತೆಯಿಂದ ಈ ಶಾಲೆ ಗುರುತಿಸಿಕೊಂಡಿದ್ದು, ಇದರ ಬೆಳವಣಿಗೆಗೆ ದಾನಿಗಳು ಸಹ ಕೈಜೋಡಿಸುತ್ತಿರುವುದು ವಿಶೇಷತೆಯಾಗಿದೆ.
 ದಾನಿಗಳಾದ ಸತೀಶ್‌ಪವಾರ್‌ರವರು ಉಚಿತವಾಗಿ ಶೂ ವಿತರಿಸುವ ಮೂಲಕ ಮಕ್ಕಳ ಕಲಿಕೆಗೆ ಪೂರಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿರು. ಶಾಲೆಯ ಮುಖ್ಯೋಪಾಧ್ಯಾಯ ಹರೋನಹಳ್ಳಿ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
    ಗ್ರಾಮದ ಮುಖಂಡರಾದ ಅಣ್ಣಪ್ಪ, ಪವಿತ್ರ, ಶಿಕ್ಷಕರುಗಳಾದ ಜಿ.ಬಿ ಮಲ್ಲಿಕಾರ್ಜುನ್, ಎಂ ಚೇತನ್ ಕುಮಾರಿ ಮತ್ತು ಪವಿತ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.