Thursday, December 15, 2022

ಅಕ್ರಮವಾಗಿ ಪಡಿತರ ಅಕ್ಕಿ ಮಾರಾಟಕ್ಕೆ ಯತ್ನ : ಗ್ರಾಮಾಂತರ ಪೊಲೀಸರ ದಾಳಿ

೧.೭೬ ಲಕ್ಷ ರು. ಮೌಲ್ಯದ ೮೦ ಕ್ವಿಂಟಲ್ ಅಕ್ಕಿ ವಶ

ಪಡಿತರ ಅಕ್ಕಿಯನ್ನು ಅನಧಿಕೃತವಾಗಿ ಸಂಗ್ರಹಿಸಿ ಕ್ಯಾಂಟರ್ ವಾಹನಕ್ಕೆ ತುಂಬಿಕೊಂಡು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಸುಮಾರು ೧.೭೬ ಲಕ್ಷ ರು. ಮೌಲ್ಯದ ೮೦ ಕ್ವಿಂಟಲ್ ಪಡಿತರ ಅಕ್ಕಿ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
    ಭದ್ರಾವತಿ, ಡಿ. ೧೫ :  ಪಡಿತರ ಅಕ್ಕಿಯನ್ನು ಅನಧಿಕೃತವಾಗಿ ಸಂಗ್ರಹಿಸಿ ಕ್ಯಾಂಟರ್ ವಾಹನಕ್ಕೆ ತುಂಬಿಕೊಂಡು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ  ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಸುಮಾರು ೧.೭೬ ಲಕ್ಷ ರು. ಮೌಲ್ಯದ ೮೦ ಕ್ವಿಂಟಲ್ ಪಡಿತರ ಅಕ್ಕಿ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
    ತಾಲೂಕಿನ ಮಜ್ಜಿಗೇನಹಳ್ಳಿ ಗ್ರಾಮದ ಅಡಕೆ ತೋಟವೊಂದರಲ್ಲಿ ಅನಧಿಕೃತವಾಗಿ ಪಡಿತರ ಅಕ್ಕಿ ಸಂಗ್ರಹಿಸಲಾಗಿದ್ದು, ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ದಾಳಿ ನಡೆಸಿದೆ.
    ವೀರಾಪುರಗ್ರಾಮದ ಮಹಮದ್ ಸಮೀರ್(೩೮) ಮತ್ತು ವಾಹನದ ಚಾಲಕ ಪರ್ವೇಜ್ ಪಾಷಾ(೪೨)ರನ್ನು ಬಂಧಿಸಲಾಗಿದೆ. ಕ್ಯಾಂಟರ್‌ನಲ್ಲಿದ್ದ ಒಟ್ಟು ೧೬೦ ಪಡಿತರ ಅಕ್ಕಿ ತುಂಬಿದ ಚೀಲ ಹಾಗು ಕೃತ್ಯಕ್ಕೆ ಬಳಸಿದ ಕ್ಯಾಂಟರ್ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ವಿಐಎಸ್‌ಎಲ್‌ನಿಂದ ಎಲ್ಲಾ ರೀತಿಯ ಸಹಕಾರ : ಬಿ.ಎಲ್ ಚಂದ್ವಾನಿ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಮಾನವ ಸಂಪನ್ಮೂಲ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಶಾಲೆಗಳಿಗೆ ಅಗತ್ಯವಿರುವ ಒಟ್ಟು ಸುಮಾರು ೨ ಲಕ್ಷ ರು ಮೌಲ್ಯದ ಬೆಂಚು, ಡೆಸ್ಕ್, ಟೇಬಲ್‌ಗಳು, ಕುರ್ಚಿಗಳು ಮತ್ತು ಅಕ್ಷರದಾಸೋಹ ಯೋಜನೆಗೆ ಅಗತ್ಯವಿರುವ ಪಾತ್ರೆಗಳು ಸೇರಿದಂತೆ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾದ ಪರಿಕರಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪರವರಿಗೆ ಹಸ್ತಾಂತರಿಸಲಾಯಿತು.  
    ಭದ್ರಾವತಿ, ಡಿ. ೧೫ : ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಸುಧಾರಿಸಲು ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿರಂತರವಾಗಿ ಶ್ರಮಿಸುತ್ತದೆ ಎಂದು ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಹೇಳಿದರು.
    ಕಾರ್ಖಾನೆಯ ಮಾನವ ಸಂಪನ್ಮೂಲ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಶಾಲೆಗಳಿಗೆ ಅಗತ್ಯವಿರುವ ಒಟ್ಟು ಸುಮಾರು ೨ ಲಕ್ಷ ರು ಮೌಲ್ಯದ ಬೆಂಚು, ಡೆಸ್ಕ್, ಟೇಬಲ್‌ಗಳು, ಕುರ್ಚಿಗಳು ಮತ್ತು ಅಕ್ಷರದಾಸೋಹ ಯೋಜನೆಗೆ ಅಗತ್ಯವಿರುವ ಪಾತ್ರೆಗಳು ಸೇರಿದಂತೆ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾದ ಪರಿಕರಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪರವರಿಗೆ ಹಸ್ತಾಂತರಿಸಲಾಯಿತು.  
    ಶಾಲೆಗಳ ಬೆಳವಣಿಗೆಗೆ ಕೈಜೋಡಿಸಿರುವ ಸೈಲ್-ವಿಐಎಸ್‌ಎಲ್ ಆಡಳಿತಕ್ಕೆ ಎ.ಕೆ ನಾಗೇಂದ್ರಪ್ಪ ಕೃತಜ್ಞತೆ ಸಲ್ಲಿಸಿದರು.  ಧನ್ಯವಾದಗಳನ್ನು  ವಿದ್ಯಾರ್ಥಿಗಳ ಮೂಲಸೌಕರ್ಯ ಸೌಲಭ್ಯಗಳ ಸುಧಾರಣೆಗೆ ಸಾಮಗ್ರಿಗಳನ್ನು ಸೂಕ್ತವಾಗಿ ಬಳಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
    ಕಾರ್ಖಾನೆಯ ಕಾರ್ಮಿಕರ ಸಂಘದ ಅಧ್ಯಕ್ಷ  ಜೆ. ಜಗದೀಶ, ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಅಜಯ್.ಡಿ ಸೋಂಕುವಾರ್, ಹಿರಿಯ ಅಧಿಕಾರಿಗಳಾದ ಮಹಾ ಪ್ರಬಂಧಕರು (ಹಣಕಾಸು ಮತ್ತು ಲೆಕ್ಕ) ಶೋಭ ಶಿವಶಂಕರನ್,  ಮಹಾಪ್ರಬಂಧಕರು (ಎಮ್.ಎಮ್ ಮತ್ತು ಸಿ.ಸಿ) ಎನ್.ಕೆ. ಶಶಿಧರ್  ಉಪಸ್ಥಿತರಿದ್ದರು. ಸಹಾಯಕ ವ್ಯವಸ್ಥಾಪಕರು (ಸಿಬ್ಬಂದಿ) ಕೆ.ಎಸ್ ಶೋಭ ನಿರೂಪಿಸಿದರು. ಮಹಾ ಪ್ರಬಂಧಕರು (ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್ ವಂದಿಸಿದರು.  

ಎರಡನೇ ಹಂತದ ಕಾಮಗಾರಿ ಮುಕ್ತಾಯ : ಧಾರ್ಮಿಕ ಆಚರಣೆ

ಭದ್ರಾವತಿ ನಗರಸಭೆ ೩ನೇ ವಾರ್ಡ್ ವ್ಯಾಪ್ತಿಯ ಹಳೇನಗರದ ಪಾರ್ಕ್ ಬಡಾವಣೆಯಲ್ಲಿರುವ ಪತ್ರಿಕಾ ಭವನದ ಎರಡನೇ ಹಂತದ ಕಾಮಗಾರಿ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಾಯಿತು. 
    ಭದ್ರಾವತಿ, ಡಿ. ೧೫ : ನಗರಸಭೆ ೩ನೇ ವಾರ್ಡ್ ವ್ಯಾಪ್ತಿಯ ಹಳೇನಗರದ ಪಾರ್ಕ್ ಬಡಾವಣೆಯಲ್ಲಿರುವ ಪತ್ರಿಕಾ ಭವನದ ಎರಡನೇ ಹಂತದ ಕಾಮಗಾರಿ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಾಯಿತು.
    ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ದಂಪತಿ ಧಾರ್ಮಿಕ ಆಚರಣೆಗಳ ನೇತೃತ್ವ ವಹಿಸಿದ್ದರು. ಶ್ರೀನಿವಾಸ ಆರಾಧ್ಯ ಮತ್ತು ಮನು ಆರಾಧ್ಯ ನೇತೃತ್ವದ ತಂಡ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿತು.
    ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಪದಾಧಿಕಾರಿಗಳಾದ ಕೂಡ್ಲಿಗೆರೆ ಮಂಜುನಾಥ್, ಬಸವರಾಜ್, ಪಿಲೋಮಿನಾ, ಅನಂತಕುಮಾರ್, ಹಿರಿಯ ಸದಸ್ಯರಾದ ಎನ್. ಬಾಬು, ಶಿವಶಂಕರ್, ಗಂಗಾನಾಯ್ಕ್ ಗೊಂದಿ, ಬದರಿನಾರಾಯಣ ಶ್ರೇಷ್ಠಿ, ಟಿ.ಎಸ್ ಆನಂದಕುಮಾರ್, ಸುದರ್ಶನ್, ಶೈಲೇಶ್‌ಕೋಠಿ, ರವೀಂದ್ರನಾಥ್(ಬ್ರದರ್), ಸೈಯದ್‌ಖಾನ್, ಕೆ.ಆರ್ ಶಂಕರ್, ರಾಬರ್ಟ್ ಹಾಗು ಪತ್ರಿಕಾಭವನ ವ್ಯವಸ್ಥಾಪಕಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಡಿ.೧೬ರಂದು ಸಮಾರೋಪ ಸಮಾರಂಭ

    ಭದ್ರಾವತಿ, ಡಿ. ೧೫: ಹಳೇನಗರದ ಸರ್ಕಾರಿ ಸಂಚಿಯ ಹೊನ್ನಮ್ಮ ಬಾಲಕಿಯರ ಪದವಿಪೂರ್ವ ಕಾಲೇಜಿನ ಕ್ರೀಡಾ, ಸಾಂಸ್ಕೃತಿಕ, ಎನ್‌ಎಸ್‌ಎಸ್, ಸೇವಾದಳ ಹಾಗು ರೇಂಜರ್ ಮತ್ತು ರೋವರ‍್ಸ್ ಘಟಕಗಳ ಸಮಾರೋಪ ಸಮಾರಂಭ ಡಿ.೧೬ರ ಶುಕ್ರವಾರ ಬೆಳಿಗ್ಗೆ ೧೧ ಗಂಟೆಗೆ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ನಡೆಯಲಿದೆ.
    ಸಮಾರಂಭ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ. ಕೃಷ್ಣಪ್ಪ, ವ್ಯದ್ಯ ಡಾ. ನರೇಂದ್ರಬಾಬು, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ. ಸಿದ್ದಬಸಪ್ಪ, ಕಾಲೇಜಿನ ಉಪಪ್ರಾಂಶುಪಾಲರಾದ ಶಾಂತಮ್ಮ, ನಗರಸಭಾ ಸದಸ್ಯೆ ಅನುಪಮ ಚನ್ನೇಶ್, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ವಿ. ವೆಂಕಟರಮಣ ಶೇಟ್ ಹಾಗು ಸದಸ್ಯರು, ಯುವ ಮುಖಂಡರಾದ ರವೀಶ್ ಮತ್ತು ಅಮೋಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಸ್ ಸಿದ್ದಲಿಂಗಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಸಮಾರಂಭ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

Wednesday, December 14, 2022

ಗುಡ್ಡದ ನೇರಲಕೆರೆ ಗ್ರಾಮದ ಜಮೀನುಗಳಿಗೆ ಕಾಡಾ ಅಧ್ಯಕ್ಷೆ ಭೇಟಿ : ಪರಿಶೀಲನೆ

ಭದ್ರಾವತಿ ತಾಲೂಕಿನ ಕೊಮಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡ್ಡದ ನೇರಲಕೆರೆ ಗ್ರಾಮದ ಜಮೀನುಗಳಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ ಪವಿತ್ರರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಭದ್ರಾವತಿ, ಡಿ. ೧೪ : ತಾಲೂಕಿನ ಕೊಮಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡ್ಡದ ನೇರಲಕೆರೆ ಗ್ರಾಮದ ಜಮೀನುಗಳಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ ಪವಿತ್ರರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ರೈತರ ಮನವಿ ಮೇರೆಗೆ ಗ್ರಾಮಕ್ಕೆ ಭೇಟಿ ನೀಡಿದ ಅಧ್ಯಕ್ಷರು, ಜಮೀನುಗಳ ರಸ್ತೆ, ಕಾಲುವೆ ವೀಕ್ಷಿಸಿದರು. ಗ್ರಾಮದ ಚಾನಲ್ ಟ್ಯೂಬ್ ಸಂಪೂರ್ಣವಾಗಿ ಹಾಳಾಗಿರುವುದು ಕಂಡು ಬಂದಿದ್ದು, ತಕ್ಷಣ ಸ್ಥಳದಲ್ಲಿಯೇ ನೀರಾವರಿ ಇಲಾಖೆ ಅಧಿಕಾರಿಗಳಿಗೆ ದುರಸ್ತಿಗೊಳಿಸುವಂತೆ ಸೂಚಿಸಿದರು. ಗ್ರಾಮದ ಮುಖಂಡರು, ರೈತರು ಉಪಸ್ಥಿತರಿದ್ದರು.

Tuesday, December 13, 2022

ಹಿರಿಯ ಲೆಕ್ಕ ಪರಿಶೋಧಕ ಶ್ರೀಪಾದ್ ವಿಧಿವಶ


ಹಿರಿಯ ಲೆಕ್ಕಪರಿಶೋಧಕ ಶ್ರೀಪಾದ್
    ಭದ್ರಾವತಿ, ಡಿ. ೧೪: ನಗರದ ಹಿರಿಯ ಲೆಕ್ಕ ಪರಿಶೋಧಕ, ಹೊಸಮನೆ ಹಳೇಸಂತೆ ಮೈದಾನದ ರಸ್ತೆ ನಿವಾಸಿ ಶ್ರೀಪಾದ್(೫೯) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದರು.  
ಪತ್ನಿ, ಇಬ್ಬರು ಸಹೋದರರನ್ನು ಹೊಂದಿದ್ದರು. ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿದ್ದ ಇವರನ್ನು    ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಕೊನೆಯುಸಿರೆಳೆದಿದ್ದಾರೆ.
    ಇವರ ಅಂತ್ಯ ಸಂಸ್ಕಾರ ಸಂಜೆ ನಡೆಯಲಿದೆ. ೩-೪ ದಶಕಗಳಿಂದ ಆಡಿಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಇವರು, ಭದ್ರಾವತಿ, ಶಿವಮೊಗ್ಗ ಮಾತ್ರವಲ್ಲದೇ ಬೆಂಗಳೂರಿನಲ್ಲಿಯೂ ಈ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದರು. ತಮ್ಮ ಜೀವಮಾನದುದ್ದಕ್ಕೂ ಕಷ್ಟದಲ್ಲಿರುವರಿಗೆ ಸಹಾಯಹಸ್ತ ನೀಡುತ್ತಾ, ಮಠ ಮಂದಿರಗಳಿಗೆ ದಾನ, ಧರ್ಮ ಮಾಡುತ್ತಿದ್ದ ಶ್ರೀಪಾದ್ ಅವರು ಎಂದಿಗೂ ತಮ್ಮ ಈ ಸೇವೆಯ ಕುರಿತಾಗಿ ಸಾರ್ವಜನಿಕವಾಗಿ ಹೇಳಿಕೊಂಡವರಲ್ಲ.
    ಪ್ರಮುಖವಾಗಿ, ಕೊರೋನಾದಿಂದಾಗಿ ಮೃತಪಟ್ಟ ಬಹಳಷ್ಟು ಮಂದಿಯ ಶವಸಂಸ್ಕಾರಕ್ಕೆ ಇವರು ನೀಡಿದ ನೆರವು ಬಹುತೇಕ ಮಂದಿಗೆ ತಿಳಿದಿಲ್ಲ. ತಮ್ಮ ವೃತ್ತಿ ಕ್ಷೇತ್ರದ ಹೊರತಾಗಿ ಧರ್ಮ, ಅಧ್ಯಾತ್ಮ, ವೇದಾಧ್ಯಯ, ಮಾಧ್ವ ಸಂಪ್ರದಾಯದ ಹಲವು ಪಾಠಗಳನ್ನು ಇಂದಿಗೂ ಇವರು ಅಭ್ಯಾಸ ಮಾಡುತ್ತಾ, ಎಲೆ ಮರೆಯ ಕಾಯಿಯಂತೆ ಸಾಧನೆ ಮಾಡಿದ್ದರು. ಇವರ ನಿಧನಕ್ಕೆ ನಗರದ ಗಣ್ಯರು, ತಾಲೂಕು ಬ್ರಾಹ್ಮಣ ಮಹಾಸಭಾ ಸಂತಾಪ ಸೂಚಿಸಿದೆ.

ಹಾಡುಹಗಲಿನಲ್ಲಿಯೇ ದರೋಡೆಗೆ ಯತ್ನ : ಮೂವರ ಸೆರೆ


    ಭದ್ರಾವತಿ, ಡಿ. ೧೩ : ಹಾಡುಹಗಲಿನಲ್ಲಿಯೇ ದರೋಡೆಗೆ ಯತ್ನಿಸುತ್ತಿದ್ದ ಮೂವರನ್ನು ಬಂಧಿಸುವಲ್ಲಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ.
    ಮೊಮಿನ್ ಮೊಹಲ್ಲಾ ನಿವಾಸಿಗಳಾದ ಸಮೀರ್ ಖಾನ್, ಸಯ್ಯದ್ ಆಲ್ವಿ, ಮಹಮದ್ ಗೌಸ್ ಯಾನೆ ಜಂಗ್ಲಿ ಸುಹೇಲ್ ಯಾನೆ ಕುಟ್ಟಿ ಮತ್ತು ಮಹಮದ್ ಸಾಬೀದ್ ಎಂಬುವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
    ಸಿ.ಎನ್ ರಸ್ತೆ ಸೀಗೆಬಾಗಿ ಆಲೆಮನೆಯೊಂದರ ಬಳಿ ಐವರು ಸುಮಾರು ಬೆಳಿಗ್ಗೆ ೧೧.೩೦ರ ಸಮಯದಲ್ಲಿ ಪೊದೆಯಲ್ಲಿ ಅಡಗಿಕೊಂಡು ದರೋಡೆಗೆ ಯತ್ನಿಸುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಹಳೇನಗರದ ಪೊಲೀಸ್ ಠಾಣಾಧಿಕಾರಿ ಕವಿತರವರ ನೇತೃತ್ವದ ತಂಡ ದಾಳಿ ನಡೆಸಿ ಮೂವರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
    ಒಬ್ಬಂಟಿಯಾಗಿ ಸಂಚರಿಸುವವರನ್ನು ಅಡ್ಡಗಟ್ಟಿ ಮಾರಾಕಾಸ್ತ್ರಗಳಿಂದ ಬೆದರಿಸಿ ದರೋಡೆಗೆ ಯತ್ನಿಸುತ್ತಿದ್ದರು ಎನ್ನಲಾಗಿದೆ. ಬಂಧಿತರಿಂದ ಚಾಕು, ಕಬ್ಬಿಣದ ರಾಡು ಮತ್ತು ಖಾರದಪುಡಿ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಸುಮೋಟೋ ಪ್ರಕರಣ ದಾಖಲಾಗಿದೆ. ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆಯಲಾಗಿದೆ.