Wednesday, December 21, 2022

ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ದೀಪ ನಮಸ್ಕಾರ

ಭದ್ರಾವತಿ ಹುತ್ತಾಕಾಲೋನಿ ಶ್ರೀ ವೀರಾಂಜನೇಯ ಭಜನಾ ಮಂಡಳಿವತಿಯಿಂದ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ದೀಪ ನಮಸ್ಕಾರ ವಿಜೃಂಭಣೆಯಿಂದ ನಡೆಯಿತು.
    ಭದ್ರಾವತಿ, ಡಿ. ೨೧: ನಗರದ ಹುತ್ತಾಕಾಲೋನಿ ಶ್ರೀ ವೀರಾಂಜನೇಯ ಭಜನಾ ಮಂಡಳಿವತಿಯಿಂದ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ದೀಪ ನಮಸ್ಕಾರ ವಿಜೃಂಭಣೆಯಿಂದ ನಡೆಯಿತು.
ದೇವಸ್ಥಾನದ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯ ನೇತೃತ್ವದಲ್ಲಿ ಸಂಗೀತ ಶಿಕ್ಷಕಿ ಡಿ.ಎಸ್.ಗಾಯಿತ್ರಿ ರವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಯುವ ಮುಖಂಡ ಬಿ.ಎಸ್ ಗಣೇಶ್ ಅಥಿತಿಗಳಾಗಿ ಆಗಮಿಸಿದ್ದರು.

Tuesday, December 20, 2022

ಡಿ.ಕೆ ಶಿವಕುಮಾರ್ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ


ಮಂಗಳೂರು ಕುಕ್ಕರ್ ಬ್ಲಾಸ್ಟ್ ಘಟನೆ ಕುರಿತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ಖಂಡಿಸಿ ಮಂಗಳವಾರ ಭದ್ರಾವತಿ ಮಾಧವಾಚಾರ್ ವೃತ್ತದಲ್ಲಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಡಿ. ೨೦: ಮಂಗಳೂರು ಕುಕ್ಕರ್ ಬ್ಲಾಸ್ಟ್ ಘಟನೆ ಕುರಿತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ಖಂಡಿಸಿ ಮಂಗಳವಾರ ಮಾಧವಾಚಾರ್ ವೃತ್ತದಲ್ಲಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
     ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಞಧರ್ಮಪ್ರಸಾದ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ವಿ. ಕದಿರೇಶ್,  ಕರೀಗೌಡ, ಎಂ.ಎಸ್ ಸುರೇಶಪ್ಪ, ಎಂ.ಮಂಜುನಾಥ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ನಾರಾಯಣ್ಣಪ್ಪ ದೊಡ್ಮನೆ, ವಿಶ್ವನಾಥ್‌ರಾವ್, ಸುರೇಶಪ್ಪ, ಸುಲೋಚನಮ್ಮ, ಶೋಭಾ ಪಾಟೀಲ್, ಕವಿತಾರಾವ್, ಜಯರಾಮ್, ಸತ್ಯಣ್ಣ, ಜೆ.ಮೂರ್ತಿ, ಧನುಷ್ ಬೋಸ್ಲೆ, ರಾಜಶೇಖರ ಉಪ್ಪಾರ, ಕಾರಾನಾಗರಾಜ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ನಟ ದರ್ಶನ್‌ಗೆ ಚಪ್ಪಲಿ ಎಸೆದು ಅವಮಾನ : ಅಭಿಮಾನಿಗಳಿಂದ ಪಂಜಿನ ಪ್ರತಿಭಟನೆ

ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಸೇನಾ ಸಮಿತಿ ವತಿಯಿಂದ ದರ್ಶನ್ ಅಭಿಮಾನಿಗಳು ಮಂಗಳವಾರ ರಾತ್ರಿ ಭದ್ರಾವತಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಪಂಜಿನ ಪ್ರತಿಭಟನೆ ನಡೆಸಿದರು.
ಭದ್ರಾವತಿ, ಡಿ. ೨೦: ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಸೇನಾ ಸಮಿತಿ ವತಿಯಿಂದ ದರ್ಶನ್ ಅಭಿಮಾನಿಗಳು ಮಂಗಳವಾರ ರಾತ್ರಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಪಂಜಿನ ಪ್ರತಿಭಟನೆ ನಡೆಸಿದರು.
ಚಿತ್ರನಟ ದರ್ಶನ್ ಮೇಲೆ ಕೆಲವು ಗೂಂಡಾಗಳು ಚಪ್ಪಲಿ ಎಸೆದು ಅವಮಾನ ಮಾಡಿದ್ದು, ಈ ಗೂಂಡಾಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಪ್ರತಿಭಟನೆ ನಡೆಸಿದ ಅಭಿಮಾನಿಗಳು ತಕ್ಷಣ ಬಂಧಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಪ್ರಮುಖರಾದ ಸಂತೋಷ್‌ಕುಮಾರ್, ಸಂದೀಪ್, ಆಟೋ ಸೋಮ, ಲೋಹಿತ್, ದರ್ಶನ್, ಕಿರಣ್, ರಾಜು, ಪ್ರವೀಣ, ಮಹೇಶ್ ಸೇರಿದಂತೆ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಅಭ್ಯರ್ಥಿಗಳಪಟ್ಟಿ ಬಿಡುಗಡೆಗೊಂಡ ನಂತರ ಗರಿಗೆದರಿದ ರಾಜಕೀಯ ಚಟುವಟಿಕೆ

ಜೆಡಿಎಸ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ನಿವಾಸಿದಲ್ಲಿ ಸಭೆ  

ಭದ್ರಾವತಿ ವಿಧಾನಸಭಾಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಶಾರದ ಅಪ್ಪಾಜಿ ನಿವಾಸದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಪ್ರಮುಖರಿಗೆ ಪದಾಧಿಕಾರಿಗಳ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು. 
    ಭದ್ರಾವತಿ, ಡಿ. ೨೦: ಜಾತ್ಯಾತೀತ ಜನತಾದಳ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಪಟ್ಟಿ ಘೋಷಿಸಿದ ನಂತರ ಕ್ಷೇತ್ರದಲ್ಲಿ ಪಕ್ಷದ ಕಾರ್ಯ ಚಟುವಟಿಕೆಗಳು ಮತ್ತಷ್ಟು ಚುರುಕಾಗಿದ್ದು, ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ಮಂಗಳವಾರ ತಮ್ಮ ನಿವಾಸದಲ್ಲಿ ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು ಹಾಗು ಕಾರ್ಯಕರ್ತರ ಸಭೆ ನಡೆಸಿದರು.
    ಸಭೆಯಲ್ಲಿ ಬಹುತೇಕ ಮುಖಂಡರು ಮಾತನಾಡಿ, ಪ್ರತಿಯೊಬ್ಬರು ಸಹ ಶಾರದ ಅಪ್ಪಾಜಿಯವರ ಗೆಲುವಿಗೆ ಶಕ್ತಿಮೀರಿ ಶ್ರಮಿಸಬೇಕು. ಮನೆ ಮನೆಗೆ ತೆರಳಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ತಿಳಿಸುವ ಮೂಲಕ ಮತಯಾಚಿಸಬೇಕು. ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡಬಾರದು. ಪಕ್ಷವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿಸುವ ಮೂಲಕ ಎಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಬೇಕೆಂದರು.
    ಶಾರದ ಅಪ್ಪಾಜಿ ಮಾತನಾಡಿ, ಪಕ್ಷದ ವರಿಷ್ಠರು ಅಪ್ಪಾಜಿ ಕುಟುಂಬದ ಮೇಲೆ ವಿಶ್ವಾಸವಿಟ್ಟು ಚುನಾವಣೆಗೆ ನನ್ನನ್ನು ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಕ್ಷೇತ್ರದಲ್ಲಿ ಅಪ್ಪಾಜಿಯವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕ್ಷೇತ್ರದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಅಪ್ಪಾಜಿ ಕುಟುಂಬದ ಮೇಲೆ ಜನರು ಹೊಂದಿರುವ ಪ್ರೀತಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನನ್ನು ಸಹ ನಿಮ್ಮ ಕುಟುಂಬ ಒಬ್ಬ ಸದಸ್ಯೆಯಂತೆ ಭಾವಿಸಿ ನನ್ನ ಗೆಲುವಿಗೆ ಶ್ರಮಿಸಬೇಕೆಂದು ಕೋರಿದರು.
    ಸಭೆಯಲ್ಲಿ ಪ್ರಮುಖರಾದ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ಯುವ ಘಟಕದ ಅಧ್ಯಕ್ಷ ಮಧುಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ ಯೋಗೇಶ್, ಕರಿಯಪ್ಪ, ಡಿ.ಟಿ ಶ್ರೀಧರ್, ಮೈಲಾರಪ್ಪ, ಲೋಕೇಶ್ವರ್ ರಾವ್, ವೆಂಕಟೇಶ್, ನಂಜುಂಡೇಗೌಡ, ಗೊಂದಿ ಜಯರಾಂ, ಮುತುರ್ಜಾಖಾನ್, ವಿಶಾಲಾಕ್ಷಿ, ಯಶೋಧಮ್ಮ, ಭಾಗ್ಯಮ್ಮ, ನಗರಸಭೆ ಸದಸ್ಯ ಬಸವರಾಜ ಬಿ ಆನೇಕೊಪ್ಪ, ಉದಯಕುಮಾರ್, ಸವಿತ, ನಾಗರತ್ನ, ರೂಪಾವತಿ, ಪಲ್ಲವಿ, ಮಾಜಿ ಸದಸ್ಯರಾದ ಎಂ.ಎ ಅಜಿತ್, ಎಚ್.ಬಿ ರವಿಕುಮಾರ್, ಆನಂದ್, ಎಂ. ರಾಜು, ಉಮೇಶ್, ದಿಲೀಪ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

ಎಂ.ಎಸ್ ಶ್ರೀನಿವಾಸ ಶ್ರೇಷ್ಠಿ ನಿಧನ



ಎಂ.ಎಸ್ ಶ್ರೀನಿವಾಸ ಶ್ರೇಷ್ಠಿ
    ಭದ್ರಾವತಿ, ಡಿ. ೨೦: ಹಳೇನಗರದ ಮಾಧವಚಾರ್ ರಸ್ತೆ ನಿವಾಸಿ ಎಂ.ಎಸ್ ಶ್ರೀನಿವಾಸ ಶ್ರೇಷ್ಠಿ (೯೮) ಮಂಗಳವಾರ ನಿಧನ ಹೊಂದಿದರು.
    ೩ ಪುತ್ರರು, ೪ ಪುತ್ರಿಯರು ಇದ್ದರು. ಇವರ ಅಂತ್ಯಕ್ರಿಯೆ ಡಿ. ೨೧ರ ಬುಧವಾರ ಬೆಳಿಗ್ಗೆ ೧೦ ಘಂಟೆಗೆ ಹೊಳೆಹೊನ್ನೂರು ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ  ನೆರವೇರಲಿದೆ. ಶ್ರೀನಿವಾಸ ಶ್ರೇಷ್ಠಿಯವರ ನಿಧನಕ್ಕೆ ಆರ್ಯವೈಶ್ಯ ಸಮಾಜ ಸಂತಾಪ ಸೂಚಿಸಿದೆ.

ವೀರಶೈವ ಲಿಂಗಾಯತ ಸಮಾಜದಲ್ಲಿನ ಸಾಮಾಜಿಕ ಅಸ್ಪೃಶ್ಯತೆ ತೊಡೆದು ಹಾಕಿದ ಮಹಾನ್ ಚೇತನ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಆನಂದಪುರ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಅಂಗವಾಗಿ ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆ ಉದ್ಘಾಟನಾ ಸಮಾರಂಭವನ್ನು ಆನಂದಪುರ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದರು.
ಭದ್ರಾವತಿ, ಡಿ. ೧೭: ವೀರಶೈವ ಲಿಂಗಾಯತ ಸಮಾಜದಲ್ಲಿನ ಸಾಮಾಜಿಕ ಅಸ್ಪೃಶ್ಯತೆಯನ್ನು ತೊಡೆದು ಹಾಕಿ ಎಲ್ಲರೂ ಒಂದೇ ಎಂಬುದನ್ನು ತೋರಿಸಿಕೊಟ್ಟ ಮಹಾನ್ ಚೇತನ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಎಂದು ಶಿವಮೊಗ್ಗ ಜಿಲ್ಲೆ ವೀರಶೈವ ಲಿಂಗಾಯತ ಮಠಾಧೀಶರ ಮಹಾಸಭಾ ಅಧ್ಯಕ್ಷರಾದ ಆನಂದಪುರ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಅಂಗವಾಗಿ ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ವೀರಶೈವ ಲಿಂಗಾಯತ ಸಮಾಜ ಒಗ್ಗೂಡಿಸುವಲ್ಲಿ ಶಿವಯೋಗಿಗಳ ಪಾತ್ರ ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ಇಂದಿಗೂ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಅಲ್ಲದೆ ವೀರಶೈವ ಲಿಂಗಾಯತ ಸಮಾಜ ತನ್ನದೇ ಆದ ಪರಂಪರೆ, ವಿಶಿಷ್ಟತೆ ಹೊಂದಿದೆ ಎಂಬುದನ್ನು ಸಹ ತೋರಿಸಿಕೊಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಸ್ತುತ ಶಿವಯೋಗಿಗಳನ್ನು ನೆನಪು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಇಂದು ಕಾಯಕ ಮರೆಯಾಗುತ್ತಿದ್ದು, ಕಾಯಕ ಮನೋಭಾವ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ದುಡಿಮೆಯಿಂದಲೇ ಬದುಕು ಕಟ್ಟಿಕೊಳ್ಳಬೇಕು. ಸದೃಢ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕೆಂದರು.  
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಗೌರವಧ್ಯಕ್ಷರಾದ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಲಿಂಗಾಯತ ಸಮಾಜ ಹಲವಾರು ಒಳಪಂಗಡ, ಜಾತಿಗಳಿಂದ ಕೂಡಿದೆ. ಎಲ್ಲಾ ಒಳಪಂಗಡ, ಜಾತಿಗಳನ್ನು ಒಗ್ಗೂಡಿಸಿದ ಮಹಾನ್ ಚೇತನ, ನೂರಾರು ವರ್ಷಗಳ ಹಿಂದೆಯೇ ವೀರಶೈವ ಲಿಂಗಾಯತ ಎಲ್ಲರೂ ಒಂದೇ ಎಂಬುದನ್ನು ತೋರಿಸಿಕೊಟ್ಟ ಪ್ರಪಂಚದ ಏಕೈಕ ವ್ಯಕ್ತಿ  ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು.  ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸ್ಥಾಪನೆಯೊಂದಿಗೆ ೧೯ನೇ ಶತಮಾನದ ಆರಂಭದಲ್ಲಿಯೇ ಶಿವಯೋಗಿಗಳು ಹೊಸ ಮನ್ವಂತರಕ್ಕೆ ಭದ್ರಾ ಬುನಾದಿ ಹಾಕಿದರು. ಕೇವಲ ವೀರಶೈವ ಲಿಂಗಾಯತ ಸಮಾಜಕ್ಕೆ ಶಿವಯೋಗಿಗಳು ಸೀಮಿತವಾಗಿಲ್ಲ. ಅವರು ಎಲ್ಲಾ ಸಮಾಜದವರಿಗೂ ಬೇಕಾದ  ಮಹಾನ್ ವ್ಯಕ್ತಿಯಾಗಿದ್ದಾರೆ.  ಸಮ ಸಮಾಜ ನಿರ್ಮಾಣದ ರೂವಾರಿಗಳು,  ಸರ್ವರಿಗೂ ಶಿಕ್ಷಣ, ಅಂಧರ  ಬಾಳಿಗೆ ಸಂಗೀತ ಶಿಕ್ಷಣ, ಮಹಿಳಾ ಶಿಕ್ಷಣ ಮತ್ತು ಸ್ತ್ರೀ ಸಬಲೀಕರಣ, ಶಿವಯೋಗ ಮಂದಿರ ಸ್ಥಾಪನೆ, ವಚನ ತಾಡೋಲೆಗಳ ಸಂಗ್ರಹ ಮತ್ತು ಗೋಶಾಲೆ ಸ್ಥಾಪನೆ, ಹತ್ತಿ ಕಾರ್ಖಾನೆ ಸ್ಥಾಪನೆ, ಆಯುರ್ವೇದ ಚಿಕಿತ್ಸಾಲಯ ಸ್ಥಾಪನೆ, ಚಿತ್ರಮಂದಿರ ಪ್ರಾರಂಭ, ಪ್ರಾಣಿ ಬಲಿ ನಿಷೇಧ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಮಾದರಿ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದಾರೆ. ಇವರ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಇಂದಿನ ಸಮಾಜಕ್ಕೆ ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ನಾಡಿನಾದ್ಯಂತ ಶ್ರೀ ಕುಮಾರೇಶ್ವರ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ವಿಶೇಷ ಎಂದರೆ ರಥಯಾತ್ರೆ ಇಲ್ಲಿಂದ ಆರಂಭಗೊಳ್ಳುತ್ತಿರುವುದು ತುಂಬಾ ಹೆಮ್ಮೆಯ ವಿಚಾರವಾಗಿದೆ ಎಂದರು.  


ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಅಂಗವಾಗಿ ರೂಪುಗೊಂಡಿರುವ ಶ್ರೀ ಕುಮಾರೇಶ್ವರ ರಥ.
    ಶಿವಮೊಗ್ಗ ಬಸವಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಸೇರಿದಂತೆ ಜಿಲ್ಲೆಯ ವೀರಶೈವ ಲಿಂಗಾಯತ ಮಠಗಳ ಸ್ವಾಮೀಜಿಗಳು,  ಪ್ರಮುಖರಾದ ಉದ್ಯಮಿ ಬಿ.ಕೆ ಜಗನ್ನಾಥ, ಬಿಜೆಪಿ ಮುಖಂಡ ಮಂಗೋಟೆ ರುದ್ರೇಶ್, ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಅನುಪಮ ಚನ್ನೇಶ್, ಕಂದಾಯಾಧಿಕಾರಿ ರಾಜ್‌ಕುಮಾರ್, ವಿಜಯಕುಮಾರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಜಿ. ಸುರೇಶಯ್ಯ, ಮಹಿಳಾ ಘಟಕದ ಅಧ್ಯಕ್ಷೆ ರೂಪನಾಗರಾಜ್, ಯುವ ಘಟಕದ ಅಧ್ಯಕ್ಷ ಮಂಜುನಾಥ್, ಪ್ರಮುಖರಾದ  ವಾಗೀಶ್, ರೇವಪ್ಪ, ಬಾರಂದೂರು ಮಂಜುನಾಥ್, ಕವಿತಾಸುರೇಶ್, ಕೂಡ್ಲಿಗೆರೆ ರುದ್ರೇಶ್, ಶೋಭಾ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನ್ಯಾಯಾಲಯದ ಆದೇಶದ ನೆಪದಲ್ಲಿ ಮನೆಗಳ ನೆಲಸಮ : ದೂರು ದಾಖಲು

ಭದ್ರಾವತಿ ಹೊಸಮನೆ ಅಶ್ವಥ್‌ನಗರದ ಭೂತಪ್ಪ ದೇವಸ್ಥಾನ ಸಮೀಪ ಸುಮಾರು ೪೦-೫೦ ವರ್ಷಗಳಿಂದ  ವಾಸಿಸುತ್ತಿದ್ದ ನಿವಾಸಿಗಳ ಮನೆಗಳನ್ನು ವ್ಯಕ್ತಿಯೊಬ್ಬರು ಏಕಾಏಕಿ ನೆಲಸಮಗೊಳಿಸಿರುವ ಘಟನೆ ನಡೆದಿದ್ದು, ಸ್ಥಳಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಗಣೇಶ್ ಭೇಟಿ ನೀಡಿ ನಿವಾಸಿಗಳಿಗೆ ಧೈರ್ಯ ತುಂಬುವ ಮೂಲಕ ಮನೆಗಳನ್ನು ನೆಲಸಮಗೊಳಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
    ಭದ್ರಾವತಿ, ಡಿ. ೨೦: ಹೊಸಮನೆ ಅಶ್ವಥ್‌ನಗರದ ಭೂತಪ್ಪ ದೇವಸ್ಥಾನ ಸಮೀಪ ಸುಮಾರು ೪೦-೫೦ ವರ್ಷಗಳಿಂದ  ವಾಸಿಸುತ್ತಿದ್ದ ನಿವಾಸಿಗಳ ಮನೆಗಳನ್ನು ವ್ಯಕ್ತಿಯೊಬ್ಬರು ಏಕಾಏಕಿ ನೆಲಸಮಗೊಳಿಸಿರುವ ಘಟನೆ ನಡೆದಿದ್ದು, ಈ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಸುಮಾರು ೬ ಕುಟುಂಬಗಳು ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಯುವರಾಜ್ ಎಂಬಾತ ಜಾಗ ಖಾಸಗಿ ವ್ಯಕ್ತಿಗಳು ಸೇರಿದ್ದಾಗಿದೆ. ಈ ಸಂಬಂಧ ನ್ಯಾಯಾಲಯದಿಂದ ಆದೇಶವಾಗಿದೆ ಎಂದು ೬ ಮನೆಗಳ ಪೈಕಿ ೩ ಮನೆಗಳನ್ನು ನೆಲಸಮಗೊಳಿಸಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಕಛೇರಿ, ನಗರಸಭೆ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಈ ಸಂದರ್ಭದಲ್ಲಿ ನ್ಯಾಯಾಲಯ ಯಥಸ್ಥಿತಿ ಕಾಪಾಡಿಕೊಳ್ಳುವಂತೆ ಆದೇಶಿಸಿರುವುದು ಕಂಡು ಬಂದಿದೆ ಎನ್ನಲಾಗಿದೆ. ಆದರೆ ಏಕಾಏಕಿ ಮನೆಗಳನ್ನು ನೆಲಸಮಗೊಳಿಸುವ ಮೂಲಕ ವಿವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ.
    ಈ ಸಂಬಂಧ ಯುವರಾಜ್ ವಿರುದ್ಧ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ ಎನ್ನಲಾಗಿದೆ.  ನಿವಾಸಿಗಳಿಗೆ ಈಗಾಗಲೆ ೯೪ಸಿಸಿ ಅಡಿಯಲ್ಲಿ ತಾಲೂಕು ಆಡಳಿತದಿಂದ ಹಕ್ಕುಪತ್ರಗಳನ್ನು ನೀಡಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಗಣೇಶ್ ಸ್ಥಳಕ್ಕೆ ಭೇಟಿ ನೀಡಿ ನಿವಾಸಿಗಳಿಗೆ ಧೈರ್ಯ ತುಂಬುವ ಮೂಲಕ ಮನೆಗಳನ್ನು ನೆಲಸಮಗೊಳಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.


ಭದ್ರಾವತಿ ಹೊಸಮನೆ ಅಶ್ವಥ್‌ನಗರದ ಭೂತಪ್ಪ ದೇವಸ್ಥಾನ ಸಮೀಪ ಸುಮಾರು ೪೦-೫೦ ವರ್ಷಗಳಿಂದ  ವಾಸಿಸುತ್ತಿದ್ದ ನಿವಾಸಿಗಳ ಮನೆಗಳನ್ನು ವ್ಯಕ್ತಿಯೊಬ್ಬರು ಏಕಾಏಕಿ ನೆಲಸಮಗೊಳಿಸಿರುವ ಘಟನೆ ನಡೆದಿದೆ.
ಚಿತ್ರ: ಡಿ-ಬಿಡಿವಿಟಿ(ಎ)