Tuesday, December 20, 2022

ವೀರಶೈವ ಲಿಂಗಾಯತ ಸಮಾಜದಲ್ಲಿನ ಸಾಮಾಜಿಕ ಅಸ್ಪೃಶ್ಯತೆ ತೊಡೆದು ಹಾಕಿದ ಮಹಾನ್ ಚೇತನ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಆನಂದಪುರ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಅಂಗವಾಗಿ ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆ ಉದ್ಘಾಟನಾ ಸಮಾರಂಭವನ್ನು ಆನಂದಪುರ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದರು.
ಭದ್ರಾವತಿ, ಡಿ. ೧೭: ವೀರಶೈವ ಲಿಂಗಾಯತ ಸಮಾಜದಲ್ಲಿನ ಸಾಮಾಜಿಕ ಅಸ್ಪೃಶ್ಯತೆಯನ್ನು ತೊಡೆದು ಹಾಕಿ ಎಲ್ಲರೂ ಒಂದೇ ಎಂಬುದನ್ನು ತೋರಿಸಿಕೊಟ್ಟ ಮಹಾನ್ ಚೇತನ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಎಂದು ಶಿವಮೊಗ್ಗ ಜಿಲ್ಲೆ ವೀರಶೈವ ಲಿಂಗಾಯತ ಮಠಾಧೀಶರ ಮಹಾಸಭಾ ಅಧ್ಯಕ್ಷರಾದ ಆನಂದಪುರ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಅಂಗವಾಗಿ ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ವೀರಶೈವ ಲಿಂಗಾಯತ ಸಮಾಜ ಒಗ್ಗೂಡಿಸುವಲ್ಲಿ ಶಿವಯೋಗಿಗಳ ಪಾತ್ರ ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ಇಂದಿಗೂ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಅಲ್ಲದೆ ವೀರಶೈವ ಲಿಂಗಾಯತ ಸಮಾಜ ತನ್ನದೇ ಆದ ಪರಂಪರೆ, ವಿಶಿಷ್ಟತೆ ಹೊಂದಿದೆ ಎಂಬುದನ್ನು ಸಹ ತೋರಿಸಿಕೊಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಸ್ತುತ ಶಿವಯೋಗಿಗಳನ್ನು ನೆನಪು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಇಂದು ಕಾಯಕ ಮರೆಯಾಗುತ್ತಿದ್ದು, ಕಾಯಕ ಮನೋಭಾವ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ದುಡಿಮೆಯಿಂದಲೇ ಬದುಕು ಕಟ್ಟಿಕೊಳ್ಳಬೇಕು. ಸದೃಢ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕೆಂದರು.  
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಗೌರವಧ್ಯಕ್ಷರಾದ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಲಿಂಗಾಯತ ಸಮಾಜ ಹಲವಾರು ಒಳಪಂಗಡ, ಜಾತಿಗಳಿಂದ ಕೂಡಿದೆ. ಎಲ್ಲಾ ಒಳಪಂಗಡ, ಜಾತಿಗಳನ್ನು ಒಗ್ಗೂಡಿಸಿದ ಮಹಾನ್ ಚೇತನ, ನೂರಾರು ವರ್ಷಗಳ ಹಿಂದೆಯೇ ವೀರಶೈವ ಲಿಂಗಾಯತ ಎಲ್ಲರೂ ಒಂದೇ ಎಂಬುದನ್ನು ತೋರಿಸಿಕೊಟ್ಟ ಪ್ರಪಂಚದ ಏಕೈಕ ವ್ಯಕ್ತಿ  ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು.  ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸ್ಥಾಪನೆಯೊಂದಿಗೆ ೧೯ನೇ ಶತಮಾನದ ಆರಂಭದಲ್ಲಿಯೇ ಶಿವಯೋಗಿಗಳು ಹೊಸ ಮನ್ವಂತರಕ್ಕೆ ಭದ್ರಾ ಬುನಾದಿ ಹಾಕಿದರು. ಕೇವಲ ವೀರಶೈವ ಲಿಂಗಾಯತ ಸಮಾಜಕ್ಕೆ ಶಿವಯೋಗಿಗಳು ಸೀಮಿತವಾಗಿಲ್ಲ. ಅವರು ಎಲ್ಲಾ ಸಮಾಜದವರಿಗೂ ಬೇಕಾದ  ಮಹಾನ್ ವ್ಯಕ್ತಿಯಾಗಿದ್ದಾರೆ.  ಸಮ ಸಮಾಜ ನಿರ್ಮಾಣದ ರೂವಾರಿಗಳು,  ಸರ್ವರಿಗೂ ಶಿಕ್ಷಣ, ಅಂಧರ  ಬಾಳಿಗೆ ಸಂಗೀತ ಶಿಕ್ಷಣ, ಮಹಿಳಾ ಶಿಕ್ಷಣ ಮತ್ತು ಸ್ತ್ರೀ ಸಬಲೀಕರಣ, ಶಿವಯೋಗ ಮಂದಿರ ಸ್ಥಾಪನೆ, ವಚನ ತಾಡೋಲೆಗಳ ಸಂಗ್ರಹ ಮತ್ತು ಗೋಶಾಲೆ ಸ್ಥಾಪನೆ, ಹತ್ತಿ ಕಾರ್ಖಾನೆ ಸ್ಥಾಪನೆ, ಆಯುರ್ವೇದ ಚಿಕಿತ್ಸಾಲಯ ಸ್ಥಾಪನೆ, ಚಿತ್ರಮಂದಿರ ಪ್ರಾರಂಭ, ಪ್ರಾಣಿ ಬಲಿ ನಿಷೇಧ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಮಾದರಿ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದಾರೆ. ಇವರ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಇಂದಿನ ಸಮಾಜಕ್ಕೆ ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ನಾಡಿನಾದ್ಯಂತ ಶ್ರೀ ಕುಮಾರೇಶ್ವರ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ವಿಶೇಷ ಎಂದರೆ ರಥಯಾತ್ರೆ ಇಲ್ಲಿಂದ ಆರಂಭಗೊಳ್ಳುತ್ತಿರುವುದು ತುಂಬಾ ಹೆಮ್ಮೆಯ ವಿಚಾರವಾಗಿದೆ ಎಂದರು.  


ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಅಂಗವಾಗಿ ರೂಪುಗೊಂಡಿರುವ ಶ್ರೀ ಕುಮಾರೇಶ್ವರ ರಥ.
    ಶಿವಮೊಗ್ಗ ಬಸವಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಸೇರಿದಂತೆ ಜಿಲ್ಲೆಯ ವೀರಶೈವ ಲಿಂಗಾಯತ ಮಠಗಳ ಸ್ವಾಮೀಜಿಗಳು,  ಪ್ರಮುಖರಾದ ಉದ್ಯಮಿ ಬಿ.ಕೆ ಜಗನ್ನಾಥ, ಬಿಜೆಪಿ ಮುಖಂಡ ಮಂಗೋಟೆ ರುದ್ರೇಶ್, ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಅನುಪಮ ಚನ್ನೇಶ್, ಕಂದಾಯಾಧಿಕಾರಿ ರಾಜ್‌ಕುಮಾರ್, ವಿಜಯಕುಮಾರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಜಿ. ಸುರೇಶಯ್ಯ, ಮಹಿಳಾ ಘಟಕದ ಅಧ್ಯಕ್ಷೆ ರೂಪನಾಗರಾಜ್, ಯುವ ಘಟಕದ ಅಧ್ಯಕ್ಷ ಮಂಜುನಾಥ್, ಪ್ರಮುಖರಾದ  ವಾಗೀಶ್, ರೇವಪ್ಪ, ಬಾರಂದೂರು ಮಂಜುನಾಥ್, ಕವಿತಾಸುರೇಶ್, ಕೂಡ್ಲಿಗೆರೆ ರುದ್ರೇಶ್, ಶೋಭಾ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment