೨೪ ಗಂಟೆಯಲ್ಲಿ ಪ್ರಕರಣ ಬೇಧಿಸಿದ ನ್ಯೂಟೌನ್ ಠಾಣೆ ಪೊಲೀಸರು
ಹಣ ಸುಲಿಗೆಗಾಗಿ ಅಪ್ರಾಪ್ತ ಬಾಲಕನೋರ್ವನನ್ನು ಅಪಹರಿಸಿದ ಪ್ರಕರಣವನ್ನು ೨೪ ಗಂಟೆಯಲ್ಲಿ ಬೇಧಿಸುವಲ್ಲಿ ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಭದ್ರಾವತಿ, ಡಿ. ೨೪ : ಹಣ ಸುಲಿಗೆಗಾಗಿ ಅಪ್ರಾಪ್ತ ಬಾಲಕನೋರ್ವನನ್ನು ಅಪಹರಿಸಿದ ಪ್ರಕರಣವನ್ನು ೨೪ ಗಂಟೆಯಲ್ಲಿ ಬೇಧಿಸುವಲ್ಲಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರದ ಜಾಬೀರ್ ಬಾಷಾ ಅಲಿಯಾಸ್ ರಾಬರ್ಟ್(೨೨), ಅಬ್ದುಲ್ ಸಲಾಂ(೨೬) ಮತ್ತು ಇರ್ಫಾನ್(೩೧) ಹಾಗು ಶಿವಮೊಗ್ಗದ ಮುಸ್ತಫಾ(೨೬) ಒಟ್ಟು ನಾಲ್ವರನ್ನು ಬಂಧಿಸಲಾಗಿದೆ. ಓರ್ವ ತಲೆ ಮರೆಸಿಕೊಂಡಿದ್ದು ಪತ್ತೆಗಾಗಿ ತೀವ್ರಶೋಧ ನಡೆದಿದೆ.
ಘಟನೆ ವಿವರ: ಗುರುವಾರ ರಾತ್ರಿ ನಗರದ ಅಂಡರ್‌ಬ್ರಿಡ್ಜ್ ಬಳಿ ಎಲ್‌ಐಸಿ ಕಚೇರಿ ಬಳಿ ಎಳನೀರು ಮಾರಾಟ ಮಾಡುತ್ತಿದ್ದ ಬೊಮ್ಮನಕಟ್ಟೆಯ ಅಪ್ರಾಪ್ತ ಬಾಲಕನ ಬಳಿ ಬಂದ ಅಪರಿಚತನೋರ್ವ ನಾಲ್ಕು ಎಳನೀರು ಖರೀದಿಸಿದ್ದು, ನಂತರ ಹಣ ನೀಡಲು ಸ್ವಲ್ಪ ದೂರದಲ್ಲಿ ನಿಲ್ಲಿಸಲಾಗಿದ್ದ ವಾಹನದ ಬಳಿ ಬರಲು ಹೇಳಿದ್ದು, ಈ ಸಂದರ್ಭದಲ್ಲಿ ಬಾಲಕನನ್ನು ಏಕಾಏಕಿ ಅಪಹರಿಸಲಾಗಿತ್ತು.
ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್‌ರವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಹಾಗೂ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆಯವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ ರಂಗನಾಥ್ ಅಂತರಗಟ್ಟಿ ಹಾಗೂ ವೃತ್ತ ಕಛೇರಿಯ ಉಪ ಠಾಣಾಧಿಕಾರಿ ವೆಂಕಟೇಶ್, ಸಿಬ್ಬಂದಿಗಳಾದ ರೂಪೇಶ್, ಸುನಿಲ್ ಕುಮಾರ್, ರಾಘವೇಂದ್ರ, ತೀರ್ಥಲಿಂಗ, ಶ್ರೀಧರ್, ಹಾಲಪ್ಪ ಮತ್ತು ಮೌನೇಶ್ ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.