Monday, December 26, 2022

ಜಿ. ರಾಜಶೇಖರಪ್ಪ ನಿಧನ

ಜಿ. ರಾಜಶೇಖರಪ್ಪ
    ಭದ್ರಾವತಿ, ಡಿ. ೨೬: ಹಳೇನಗರದ ವೀರಶೈವ ಸೇವಾ ಸಮಾಜದ ಅಧ್ಯಕ್ಷ ಆರ್. ಮಹೇಶ್‌ಕುಮಾರ್‌ರವರ ತಂದೆ ಜಮೀನ್ದಾರ್ ಜಿ. ರಾಜಶೇಖರಪ್ಪ(೯೨) ಸೋಮವಾರ ನಿಧನ ಹೊಂದಿದರು.
    ೩ ಪುತ್ರರು, ೩ ಪುತ್ರಿಯರು, ಅಳಿಯಂದಿರು, ಸೊಸೆಯಂದಿರು ಹಾಗು ಮೊಕ್ಕಳು ಇದ್ದರು. ಇವರ ಅಂತ್ಯಕ್ರಿಯೆ ಸಂಜೆ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ವೀರಶೈವ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ಐಎಂಎ ಅಧ್ಯಕ್ಷೆ ಡಾ. ಕವಿತಾ ಭಟ್ ನಿಧನ

ಡಾ. ಕವಿತಾ ಭಟ್
    ಭದ್ರಾವತಿ, ಡಿ. ೨೬: ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ತಾಲೂಕು ಶಾಖೆ ಅಧ್ಯಕ್ಷೆ ಡಾ. ಕವಿತಾ ಭಟ್(೬೩) ಸೋಮವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನ ಹೊಂದಿದರು.
    ಪತಿ, ಓರ್ವ ಪುತ್ರ ಇದ್ದರು. ಮಧ್ಯಾಹ್ನ ಊಟದ ಸಮಯದಲ್ಲಿ ಏಕಾಏಕಿ ಹೃದಯಾಘಾತವಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
    ಇತ್ತೀಚೆಗೆ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಡಾ. ಕವಿತಾ ಭಟ್ ಹಾಗು ಇವರ ಪತಿ ಡಾ. ಕೆ.ಜಿ ಭಟ್ ಇಬ್ಬರು ಸಹ ನಗರದ  ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಕವಿತಾ ಭಟ್‌ರವರು ಭೂಮಿಕಾ ವೇದಿಕೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ನಿಧನಕ್ಕೆ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು, ವೈದ್ಯರು ಸಂತಾಪ ಸೂಚಿಸಿದ್ದಾರೆ.

ಜನ್ನಾಪುರ ಎನ್‌ಟಿಬಿ ಕಛೇರಿ ಮೆಸ್ಕಾಂ ಪಾವತಿ ಕೇಂದ್ರ ಸ್ಥಗಿತ ಆದೇಶ ಹಿಂಪಡೆಯಿರಿ


ಮೆಸ್ಕಾಂ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗೆ ಮನವಿ

 


ಭದ್ರಾವತಿ ಜನ್ನಾಪುರ ನಗರಸಭೆ ಶಾಖಾ ಕಛೇರಿ(ಎನ್‌ಟಿಬಿ ಕಛೇರಿ) ಹಾಗು ಉಂಬ್ಳೆಬೈಲು ರಸ್ತೆ, ಮೆಸ್ಕಾಂ ಘಟಕ-೨ ಕಛೇರಿ ಆವರಣದಲ್ಲಿರುವ ವಿದ್ಯುತ್ ಬಿಲ್ ಪಾವತಿ ಕೇಂದ್ರಗಳನ್ನು ಜ.೧, ೨೦೨೩ರಿಂದ ಸ್ಥಗಿತಗೊಳಿಸಲು ಮೆಸ್ಕಾಂ ಹೊರಡಿಸಿರುವ ಆದೇಶ ರದ್ದುಪಡಿಸಲು ಆಗ್ರಹಿಸಿ ಸೋಮವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಬ್ದುಲ್ ಮುನಾಫ್‌ರವರಿಗೆ ಮನವಿ ಸಲ್ಲಿಸಲಾಯಿತು. 
   ಭದ್ರಾವತಿ, ಡಿ. ೨೬ : ಜನ್ನಾಪುರ ನಗರಸಭೆ ಶಾಖಾ ಕಛೇರಿ(ಎನ್‌ಟಿಬಿ ಕಛೇರಿ) ಹಾಗು ಉಂಬ್ಳೆಬೈಲು ರಸ್ತೆ, ಮೆಸ್ಕಾಂ ಘಟಕ-೨ ಕಛೇರಿ ಆವರಣದಲ್ಲಿರುವ ವಿದ್ಯುತ್ ಬಿಲ್ ಪಾವತಿ ಕೇಂದ್ರಗಳನ್ನು ಜ.೧, ೨೦೨೩ರಿಂದ ಸ್ಥಗಿತಗೊಳಿಸಲು ಮೆಸ್ಕಾಂ ಹೊರಡಿಸಿರುವ ಆದೇಶ ರದ್ದುಪಡಿಸಲು ಆಗ್ರಹಿಸಿ ಸೋಮವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಬ್ದುಲ್ ಮುನಾಫ್‌ರವರಿಗೆ ಮನವಿ ಸಲ್ಲಿಸಲಾಯಿತು.
     ಈ ಹಿಂದೆ ಅಂದಿನ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದ ಪರಿಣಾಮ ನ್ಯೂಟೌನ್ ಭಾಗದ ಜನ್ನಾಪುರ, ಹುತ್ತಾಕಾಲೋನಿ, ಸಿದ್ದಾಪುರ, ಹೊಸೂರು ತಾಂಡ ಹಾಗು ನ್ಯೂಟೌನ್ ಭಾಗದ ಸ್ಲಂ ನಿವಾಸಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸುಮಾರು ೪೦ ವರ್ಷಗಳ ಹಿಂದೆ ನಗರಸಭೆ ಜನ್ನಾಪುರ ಎನ್‌ಟಿಬಿ ಕಛೇರಿ ಆವರಣದಲ್ಲಿ ಪಾವತಿ ಕೇಂದ್ರ ಆರಂಭಿಸಲಾಯಿತು. ನಂತರ ದಿನಗಳಲ್ಲಿ ಎನ್‌ಟಿಬಿ ಕಛೇರಿಯಲ್ಲಿ ಉಚಿತವಾಗಿ ಕೊಠಡಿಯನ್ನು ಸಹ ನೀಡಲಾಯಿತು. ಅಲ್ಲದೆ ಸಾರ್ವಜನಿಕರಿಗೆ ಮಳೆ, ಬಿಸಿಲಿನಿಂದ ರಕ್ಷಣೆ ನೀಡುವ ಸಂಬಂಧ ಈ ಹಿಂದೆ ಪೌರಾಯುಕ್ತರಾಗಿದ್ದ ಮನೋಹರ್‌ರವರು ಶೆಲ್ಟರ್ ಸಹ ನಿರ್ಮಿಸಿಕೊಟ್ಟಿದ್ದಾರೆ. ಇದೀಗ ಈ ಕೇಂದ್ರವನ್ನು ಸ್ಥಗಿತಗೊಳಿಸಲು ಆದೇಶ ಹೊರಡಿಸಿರುವುದು ಸರಿಯಲ್ಲ. ಈ ಹಿನ್ನಲೆಯಲ್ಲಿ ತಕ್ಷಣ ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿದರು.
     ಪ್ರಮುಖರಾದ ಆರ್. ವೇಣುಗೋಪಾಲ್, ರಮಾವೆಂಕಟೇಶ್, ಶೈಲಜಾರಾಮಕೃಷ್ಣ, ದೇವಿಕಾನಾಗರಾಜ್, ಪಂಕಜಾ ನಟರಾಜ್, ವೇದಾ ಬಸವರಾಜ್, ಗೀತಾ, ಸುಜಾತ, ಲತಾ, ರಾಧಾ, ಇಂದ್ರಾಣಿ, ಶೈಲಜಾಮಹೇಶ್, ಶ್ರೀಲಕ್ಷ್ಮೀ, ಜಯಶ್ರೀ, ಬಿ.ವಿ ಶಶಿಕಲಾ, ಗೋಪಿ ಎಲೆಕ್ಟ್ರಿಕಲ್, ಆರ್. ಮುರುಗೇಶ್, ಎಂ.ವಿ ಚಂದ್ರಶೇಖರ್, ಎ. ವಿಶ್ವೇಶ್ವರರಾವ್, ಬಿ.ಎಸ್ ನವಾದ್, ಎಚ್.ಎನ್ ದಿನೇಶ್, ಜಾನ್ಸನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಡಾನೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಿ : ಮನವಿ

ಭದ್ರಾವತಿ ತಾಲೂಕಿನ ಕಾಡಂಚಿನ ಗ್ರಾಮಗಳಾದ ದೊಡ್ಡೇರಿ, ಬಾಳೇಕಟ್ಟೆ, ಬಿಸಿಲುಮನೆ, ಉಕ್ಕುಂದ ಮತ್ತು ವರವಿನಕೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಿವಾಸಿಗಳು ಸೋಮವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯರವರಿಗೆ ಮನವಿ ಸಲ್ಲಿಸಿದರು.
    ಭದ್ರಾವತಿ, ಡಿ. ೨೬ : ತಾಲೂಕಿನ ಕಾಡಂಚಿನ ಗ್ರಾಮಗಳಾದ ದೊಡ್ಡೇರಿ, ಬಾಳೇಕಟ್ಟೆ, ಬಿಸಿಲುಮನೆ, ಉಕ್ಕುಂದ ಮತ್ತು ವರವಿನಕೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಿವಾಸಿಗಳು ಸೋಮವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯರವರಿಗೆ ಮನವಿ ಸಲ್ಲಿಸಿದರು.
    ನಮ್ಮ ಬಳಿ ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಜೀವನ ಸಾಗಿಸುತ್ತಿದ್ದು, ತೆಂಗು, ಅಡಕೆ, ಭತ್ತ, ರಾಗಿ, ಜೋಳ, ಕಬ್ಬು ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದು, ಇತ್ತೀಚೆಗೆ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಒಂಟಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ರಾತ್ರಿ ವೇಳೆ ಈ ಭಾಗದಲ್ಲಿ ಸಂಚರಿಸುವುದು ಅಸಾಧ್ಯವಾಗಿದೆ. ಅಲ್ಲದೆ ಕಾಡಾನೆಗಳಿಂದ ಬೆಳೆ ಹಾನಿಯಾಗುತ್ತಿದ್ದು, ಸಂಕಷ್ಟಕ್ಕೆ ಒಳಗಾಗುವಂತಾಗಿದೆ ಎಂದು ಅಳಲು ತೋರ್ಪಡಿಸಿಕೊಂಡರು.
ಕೇವಲ ಜಮೀನುಗಳಿಗೆ ಮಾತ್ರವಲ್ಲದೆ ಮನೆಗಳ ಬಳಿ ಸಹ ಕಾಡಾನೆಗಳು ಬರುತ್ತಿದ್ದು, ಇದರಿಂದಾಗಿ ಮನೆಯಿಂದ ಹೊರಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ವಯೋವೃದ್ಧರು, ಮಕ್ಕಳು ಭಯಭೀತರಾಗಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಬೆಳೆ ಹಾನಿಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.
    ಮನವಿ ಸ್ವೀಕರಿಸಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ, ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಮುಂದಾಗಲಿದೆ ಎಂದು ಭರವಸೆ ನೀಡಿ, ಕಾಡು ಪ್ರಾಣಿಗಳಿಂದ ಉಂಟಾದ ಬೆಳೆ ಹಾನಿಗೆ ಇಲಾಖೆವತಿಯಿಂದ ಪರಿಹಾರ ಸಹ ನೀಡಲಾಗುತ್ತಿದೆ ಎಂದರು.
    ಸಾಮಾಜಿಕ ಹೋರಾಟಗಾರ, ಉಕ್ಕುಂದ ಗ್ರಾಮದ ಶಿವಕುಮಾರ್, ಬಿ.ಎ ಕುಮಾರ್, ಕಾಶಿ, ಚಂದ್ರಶೇಖರ್, ರಘು, ಶಿವಯ್ಯ, ಕೃಷ್ಣಪ್ಪ, ಚಿನ್ನರಾಜು ಮತ್ತು ನಟರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಶ್ರೀ ಜಗದ್ಗುರು ರೇಣುಕಾಚಾರ್ಯ ಮೂರ್ತಿಯ ಶ್ರೀ ಪಾಣಿ ಪೀಠದ ಶಿಲೆ ದರ್ಶನ, ಬೀಳ್ಕೊಡುಗೆ

ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದಲ್ಲಿ ಸುಮಾರು ೭೫ ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯ ಮೂರ್ತಿ ಪ್ರತಿಷ್ಠಾಪನೆಗೊಳ್ಳುತ್ತಿದ್ದು,  ಲಿಂಗೋದ್ಭವ ಮೂರ್ತಿಯ ಶಿಲೆಯ ಒಂದು ಭಾಗವಾದ ಕೆಳಗಿನ ಶ್ರೀ ಪಾಣಿ ಪೀಠದ ಶಿಲೆ ಬೆಂಗಳೂರಿನಿಂದ ಆಗಮಿಸಿದ್ದು, ಭದ್ರಾವತಿ ನಗರದ ಬೈಪಾಸ್ ರಸ್ತೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಶಿಲೆಗೆ ವಿಶೇಷ ಪೂಜೆ ಸಲ್ಲಿಸಿ ಬೀಳ್ಕೊಡುಗೆ ನೀಡಲಾಯಿತು.
    ಭದ್ರಾವತಿ, ಡಿ. ೨೬: ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದಲ್ಲಿ ಸುಮಾರು ೭೫ ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯ ಮೂರ್ತಿ ಪ್ರತಿಷ್ಠಾಪನೆಗೊಳ್ಳುತ್ತಿದ್ದು,  ಲಿಂಗೋದ್ಭವ ಮೂರ್ತಿಯ ಶಿಲೆಯ ಒಂದು ಭಾಗವಾದ ಕೆಳಗಿನ ಶ್ರೀ ಪಾಣಿ ಪೀಠದ ಶಿಲೆ ಬೆಂಗಳೂರಿನಿಂದ ಆಗಮಿಸಿದ್ದು, ನಗರದ ಬೈಪಾಸ್ ರಸ್ತೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಶಿಲೆಗೆ ವಿಶೇಷ ಪೂಜೆ ಸಲ್ಲಿಸಿ ಬೀಳ್ಕೊಡುಗೆ ನೀಡಲಾಯಿತು.
    ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ತಾಲೂಕು ಅಧ್ಯಕ್ಷ ಜಿ. ಸುರೇಶಯ್ಯ ಹಾಗೂ ಶ್ರೀ ಮರುಳಸಿದ್ದೇಶರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ಮುಖಂಡರಾದ ರುದ್ರೇಶ್ ಶಾಸ್ತ್ರಿ, ರಾಜಣ್ಣ, ಶಿವಕುಮಾರ್, ಮೂರ್ತಣ್ಣ ಮಂಜುನಾಥ್ ಹಾಗೂ ಸರೋಜಮ್ಮ, ಕವಿತಾ, ಶ್ರೀ ಪೀಠದ ವೀರಶೈವ ಕಲ್ಯಾಣ ಮಂದಿರದ ವ್ಯವಸ್ಥಾಪಕ  ಅಶೋಕ್ ಕುಮಾರ್ ಸೇರಿದಂತೆ ಇನ್ನಿತರರು ಶಿಲೆಯ ದರ್ಶನ ಪಡೆದರು.

Sunday, December 25, 2022

ವಿಜೃಂಭಣೆಯಿಂದ ನಡೆದ ಶ್ರೀ ಪೇಜಾವರ ವಿಶ್ವೇಶತೀರ್ಥರ ಆರಾಧಾನ ಮಹೋತ್ಸವ

ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರಸ್ವಾಮಿ, ಶ್ರೀ ವಾದಿರಾಜಸ್ವಾಮಿಗಳ ಮಠದಲ್ಲಿ ಗುರುರಾಜ ಸೇವಾ ಸಮಿತಿ ಹಾಗೂ ಪೇಜಾವರ ವಿಶ್ವೇಶತೀರ್ಥ ಶ್ರೀಪಾದಂಗಳವರ ಶಿಷ್ಯವರ್ಗದವರಿಂದ  ಪೇಜಾವರ ವಿಶ್ವೇಶತೀರ್ಥರ ೩ನೇ ವರ್ಷದ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಡಿ. ೨೫ :  ಜಾತಿ, ಧರ್ಮ, ಮತ ಬೇಧಭಾವವಿಲ್ಲದೆ ಎಲ್ಲರ ಪ್ರೀತಿ, ಅಭಿಮಾನ, ಗೌರವಗಳಿಗೆ ಪಾತ್ರರಾಗಿದ್ದ ಶ್ರೀ ಪೇಜಾವರ ವಿಶ್ವೇಶ್ವತೀರ್ಥರ ಜೀವನಾದರ್ಶ ಎಲ್ಲರಿಗೂ ಅನುಕರಣೀಯ ಎಂದು ಪಂಡಿತರಾದ ಮೃತ್ತಿಕಾ ಗುರುರಾಜಾಚಾರ್ ಹೇಳಿದರು.
    ಅವರು ಭಾನುವಾರ ಹಳೇನಗರದ ಶ್ರೀ ರಾಘವೇಂದ್ರಸ್ವಾಮಿ, ಶ್ರೀ ವಾದಿರಾಜಸ್ವಾಮಿಗಳ ಮಠದಲ್ಲಿ ಗುರುರಾಜ ಸೇವಾ ಸಮಿತಿ ಹಾಗೂ ಪೇಜಾವರ ವಿಶ್ವೇಶತೀರ್ಥ ಶ್ರೀಪಾದಂಗಳವರ ಶಿಷ್ಯವರ್ಗದವರಿಂದ ಹಮ್ಮಿಕೊಳ್ಳಲಾಗಿದ್ದ ಪೇಜಾವರ ವಿಶ್ವೇಶತೀರ್ಥರ ೩ನೇ ವರ್ಷದ ಆರಾಧನಾ ಮಹೋತ್ಸವದಲ್ಲಿ ಉಪನ್ಯಾಸ ನೀಡಿದರು. ಪೇಜಾವರ ಶ್ರೀಗಳು  ಬಾಲ್ಯದಲ್ಲಿಯೇ ಸನ್ಯಾಸತ್ವ ಸ್ವೀಕರಿಸಿ ವಿದ್ಯಾಮಾನ್ಯ ತೀರ್ಥರಿಂದ ವಿದ್ಯಾಭ್ಯಾಸ ಮಾಡಿ ವಿಶ್ವೇಶತೀರ್ಥರೆಂದು ನಾಮಾಂಕಿತರಾಗಿ, ೪ ಬಾರಿ ಪರ‍್ಯಾಯದಲ್ಲಿ ಸರ್ವಜ್ಞಪೀಠವನ್ನಲಂಕರಿಸಿ ಶ್ರೀಕೃಷ್ಣನನ್ನು ಪೂಜಿಸಿದ ಮಹಾಮಹಿಮರು. ತಪಸ್ಸು, ವಿದ್ಯಾದಾನ, ಸಮಾಜದ ಎಲ್ಲಾ ವರ್ಗಗಳ ಜನರ ಹಿತಕ್ಕಾಗಿ ದೇಶಾದ್ಯಂತ ಸಂಚರಿಸಿ ಜಾತಿ, ಮತ ಬೇಧಭಾವವಿಲ್ಲದೆ ಎಲ್ಲರ ಕಷ್ಟ ಸುಖಗಳಿಗೆ ಸ್ಪಂದಿಸಿ ಯತಿಕುಲಕ್ಕೆ ಚಕ್ರವರ್ತಿ ಎಂಬ ರೀತಿ ಬಾಳಿದ ಮಹಾಮಹಿಮರು. ಅವರು ತೋರಿದ ದಾರಿಯಲ್ಲಿ ನಾವುಗಳು ಸಾಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
    ಶ್ರೀ ಮಠದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ನಂತರ ಹಳೇನಗರದ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪೇಜಾವರ ಶ್ರೀಗಳ ಭಾವಚಿತ್ರ ಹಾಗು ಅವರ ಪಾದುಕೆಯನ್ನು ಹಿಡಿದು ಚಂಡೆ ವಾದ್ಯದೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಪೇಜಾವರವಿಶ್ವೇಶ್ವರ ತೀರ್ಥರಿಗೆ ಜೈಕಾರ ಹಾಕುವ ಮೂಲಕ ಉತ್ಸವ ನಡೆಸಲಾಯಿತು.
    ಮಠಕ್ಕೆ ಆಗಮಿಸಿದ ಶ್ರೀಗಳ ಪಾದುಕೆ ಹಾಗೂ ಭಾವಚಿತ್ರಕ್ಕೆ ಪುಷ್ಪವೃಷ್ಠಿಯೊಂದಿಗೆ ಮಠದ ಪ್ರಾಕಾರದಲ್ಲಿ ಉತ್ಸವ ನಡೆಸಿ ಶ್ರೀಗಳ ಪಾದಕಾ ಪೂಜೆನಂತರ ಮಹಿಳಾ ಭಜನಾ ಮಂಡಳಿಯವರು ಶ್ರೀಗಳ ಕುರಿತ ಹಾಡು ಸೇರಿದಂತೆ ದಾಸರು ರಚಿಸಿದ ಕೀರ್ತನೆಗಳನ್ನು ಹಾಡಿದರು. ಮಹಾಮಂಗಳಾರತಿ, ನಂತರ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.
    ಪಂಡಿತರಾದ ಗೊಪಾಲಾಚಾರ್, ಸತ್ಯನಾರಾಯಣಾಚಾರ್, ಮಾಧುರಾವ್, ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳೀಧರ ತಂತ್ರಿ, ರಮಾಕಾಂತ್, ಪವನಕುಮಾರ್, ಶ್ರೀನಿಧಿ, ಜಯತೀರ್ಥ, ಶೇಷಗಿರಿ, ಜಯಶ್ರೀ, ಶೋಭಾ, ಪರಿಮಳ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.  

ವಿಜೃಂಭಣೆಯಿಂದ ಜರುಗಿದ ಏಸು ಕ್ರಿಸ್ತರ ಜನ್ಮದಿನಾಚರಣೆ

ಭದ್ರಾವತಿಯಲ್ಲಿ ಏಸು ಕ್ರಿಸ್ತರ ಜನ್ಮದಿನಾಚರಣೆ ಕ್ರಿಸ್‌ಮಸ್ ಅಂಗವಾಗಿ ಶನಿವಾರ ರಾತ್ರಿ ಚರ್ಚ್‌ಗಳು ವಿದ್ಯುತ್ ದೀಪಗಳ ಆಲಂಕಾರದಿಂದ ಕಂಗೊಳಿಸಿದವು.
    ಭದ್ರಾವತಿ, ಡಿ. ೨೫ : ನಗರದಲ್ಲಿ ಕ್ರೈಸ್ತ ಬಾಂಧವರು ಏಸು ಕ್ರಿಸ್ತರ ಜನ್ಮದಿನಾಚರಣೆ ಕ್ರಿಸ್‌ಮಸ್ ಭಾನುವಾರ ವಿಜೃಂಭಣೆಯಿಂದ ಆಚರಿಸುವ ಮೂಲಕ ಹಬ್ಬದ ಶುಭಾಶಯ ಹಂಚಿಕೊಂಡರು.
    ಕ್ರಿಸ್‌ಮಸ್ ಆಚರಣೆ ಹಿನ್ನಲೆಯಲ್ಲಿ ಶನಿವಾರ ರಾತ್ರಿಯಿಂದಲೇ ನಗರದ ಎಲ್ಲಾ ಚರ್ಚ್‌ಗಳಲ್ಲಿ ವಿದ್ಯುತ್ ಅಲಂಕಾರ ಕೈಗೊಳ್ಳಲಾಗಿತ್ತು. ಭಾನುವಾರ ಬೆಳಿಗ್ಗೆ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಧರ್ಮಗುರುಗಳು ಕ್ರಿಸ್‌ಮಸ್ ಸಂದೇಶ ನೀಡಿದರು. ಕೊನೆಯಲ್ಲಿ ಕೇಕ್ ವಿತರಿಸಲಾಯಿತು.
    ಅಲ್ಲದೆ ಚರ್ಚ್ ಹೊರಭಾಗದಲ್ಲಿ ಏಸ್‌ಕ್ರಿಸ್ತರ ಜನ್ಮವೃತ್ತಾಂತ ಸಾರುವ ಆಕರ್ಷಕವಾದ ಗೊದೋಳಿಗಳನ್ನು ನಿರ್ಮಿಸಲಾಗಿತ್ತು. ಕ್ರೈಸ್ತ ಬಾಂಧವರಿಗೆ ಇತರೆ ಧರ್ಮಿಯರು ಹಬ್ಬದ ಶುಭಾಶಯ ಕೋರಿದರು.  


ಭದ್ರಾವತಿಯಲ್ಲಿ ಏಸು ಕ್ರಿಸ್ತರ ಜನ್ಮದಿನಾಚರಣೆ ಕ್ರಿಸ್‌ಮಸ್ ಅಂಗವಾಗಿ  ಏಸ್‌ಕ್ರಿಸ್ತರ ಜನ್ಮವೃತ್ತಾಂತ ಸಾರುವ ಆಕರ್ಷಕವಾದ ಗೊದೋಳಿಗಳನ್ನು ನಿರ್ಮಿಸಲಾಗಿತ್ತು