Thursday, January 12, 2023

ಇ-ಆಸ್ತಿ ತಂತ್ರಾಂಶ ಸರಳೀಕರಣಗೊಳಿಸಲು ಮಾಹಿತಿ ನೀಡಿ ಸಹಕರಿಸಿ

    ಭದ್ರಾವತಿ, ಜ. ೧೨: ನಗರಸಭೆ ವತಿಯಿಂದ ಇ-ಆಸ್ತಿ ತಂತ್ರಾಂಶ ಮತ್ತಷ್ಟು ಸರಳೀಕರಣಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದು, ಈ ಕಾರ್ಯವನ್ನು ಫೆಬ್ರವರಿ ಅಂತ್ಯದೊಳಗೆ ಮುಕ್ತಾಯಗೊಳಿಸಲಾಗುವುದು. ಈ ಹಿನ್ನಲೆಯಲ್ಲಿ ಅಗತ್ಯವಿರುವ ಮಾಹಿತಿ ನೀಡಿ ಸಹಕರಿಸುವಂತೆ ಪೌರಾಯುಕ್ತ ಎಚ್.ಎಂ ಮನುಕುಮಾರ್ ಮನವಿ ಮಾಡಿದ್ದಾರೆ.
    ಕೆ.ಎಂ.ಎಫ್-೨೪ ಗಣಕೀಕರಣ ಕಾರ್ಯ ಪೂರ್ಣಗೊಳಿಸಲು ನಗರಸಭೆ ಸಿಬ್ಬಂದಿಗಳು ಮನೆಗಳಿಗೆ ಭೇಟಿ ನೀಡಿ ಸರ್ವೇ ನಡೆಸಲಿದ್ದು, ಈ ಸಂದರ್ಭದಲ್ಲಿ ಮನೆ ಮಾಲೀಕರ ಮತ್ತು ಸ್ವತ್ತಿನ ಭಾವಚಿತ್ರ, ಗುರುತಿನ ದಾಖಲೆ, ಆಸ್ತಿ, ನೀರಿನ ತೆರಿಗೆ ಪಾವತಿಸಿರುವ ರಶೀದಿ, ಮಾಲೀಕತ್ವದ ದಾಖಲಾತಿ, ಕಟ್ಟಡ ಪರವಾನಿಗೆ ಪ್ರತಿ ಹಾಗು ಆಸ್ತಿ ಮಾಲೀಕರು ದಾಖಲೆಗಳ ನಕಲು ಪ್ರತಿಗಳನ್ನು ನೀಡಿ ಸಹಕರಿಸಲು ಕೋರಲಾಗಿದೆ.

ಕುವೆಂಪು ವಿ.ವಿ ವಿದ್ಯಾರ್ಥಿಗಳಿಂದ ಸ್ವಾಮಿ ವಿವೇಕಾನಂದರ ಜಯಂತಿ

ಭದ್ರಾವತಿ ತಾಲೂಕಿನ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗುರುವಾರ ತತ್ತ್ವಜ್ಞಾನಿ, ಯುವ ಸಮುದಾಯ ಚೈತನ್ಯದ ಶಕ್ತಿ ಸ್ವಾಮಿ ವಿವೇಕಾನಂದರ ಜನ್ಮದಿನ ಆಚರಿಸಿದರು.
    ಭದ್ರಾವತಿ, ಜ. ೧೨: ತಾಲೂಕಿನ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗುರುವಾರ ತತ್ತ್ವಜ್ಞಾನಿ, ಯುವ ಸಮುದಾಯ ಚೈತನ್ಯದ ಶಕ್ತಿ ಸ್ವಾಮಿ ವಿವೇಕಾನಂದರ ಜನ್ಮದಿನ ಆಚರಿಸಿದರು.
    ವಿಶ್ವವಿದ್ಯಾಲಯದ ಮುಂಭಾಗ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಘೋಷಣೆಗಳ ಮೂಲಕ ಸಂಭ್ರಮಿಸಿದರು. ಎನ್‌ಎಸ್‌ಯುಐ ತಾಲೂಕು ಅಧ್ಯಕ್ಷರಾದ ಮುಸ್ವೀರ್ ಬಾಷ ಮತ್ತು ಧವನ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
    ವಿದ್ಯಾರ್ಥಿ ಪ್ರಮುಖರಾದ ಮುರುಗೇಶ್, ಇಮ್ರಾನ್, ಕೀರ್ತಿ, ವೇಲು, ಹರೀಶ್, ನೂತನ್, ರಾಜೇಶ್, ನಾಗರಾಜ್, ಮದನ್, ಮೋಹನ್, ಶೈಲೂ, ಶ್ರೇಯಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, January 11, 2023

‘ನಮ್ಮೂರು-ನಮ್ಮ ಕೆರೆ’ ೪೦೧ನೇ ದೇವರಹಳ್ಳಿ ಕೆರೆ ಪುನಶ್ಚೇತನಕ್ಕೆ ಚಾಲನೆ

ಭದ್ರಾವತಿ ತಾಲೂಕಿನ ಕೊಮಾರನಹಳ್ಳಿ ಗ್ರಾಮ ಪಂಚಾಯಿತಿ ಹಾಗು ದೇವರಹಳ್ಳಿ ಕೆರೆ ಅಭಿವೃದ್ಧಿ ಸಮಿತಿ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬುಧವಾರ 'ನಮ್ಮೂರು-ನಮ್ಮ ಕೆರೆ' ೪೦೧ನೇ ದೇವರಹಳ್ಳಿ ಕೆರೆ ಪುನಶ್ಚೇತನಕ್ಕೆ ಚಾಲನೆ ನೀಡಲಾಯಿತು.
    ಭದ್ರಾವತಿ, ಜ. ೧೧: ತಾಲೂಕಿನ ಕೊಮಾರನಹಳ್ಳಿ ಗ್ರಾಮ ಪಂಚಾಯಿತಿ ಹಾಗು ದೇವರಹಳ್ಳಿ ಕೆರೆ ಅಭಿವೃದ್ಧಿ ಸಮಿತಿ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬುಧವಾರ 'ನಮ್ಮೂರು-ನಮ್ಮ ಕೆರೆ' ೪೦೧ನೇ ದೇವರಹಳ್ಳಿ ಕೆರೆ ಪುನಶ್ಚೇತನಕ್ಕೆ ಚಾಲನೆ ನೀಡಲಾಯಿತು.
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ಕೆರೆ ಪುನಶ್ಚೇತನಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕೆರೆಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
    ತಾಲೂಕು ಯೋಜನಾಧಿಕಾರಿ ಪ್ರಕಾಶ್‌ನಾಯ್ಕ, ಕೆರೆ ಸಮಿತಿ ಅಧ್ಯಕ್ಷ ಚಂದ್ರಶೇಖರ್‌ರಾವ್, ಅಭಿಯಂತರ ಗಣಪತಿ ಭಟ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ, ಅಭಿವೃದ್ಧಿ ಅಧಿಕಾರಿ ಕೇಶವಮೂರ್ತಿ, ಕೃಷಿ ಕ್ಷೇತ್ರ ಅಧಿಕಾರಿ ಗೋವಿಂದಪ್ಪ, ದೇವೇಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಕ್ಕಳಿಗೆ ಕನ್ನಡ ಭಾಷೆ ಕಲಿಸುವಲ್ಲಿ ಪೋಷಕರು ಹೆಚ್ಚಿನ ಗಮನ ಹರಿಸಿ : ಶ್ರದ್ದಾ

ಭದ್ರಾವತಿಯಲ್ಲಿ ಬುಧವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೂತನ ವರ್ಷದ ದಿನದರ್ಶಿಕೆ ಬಿಡುಗಡೆಗೊಳಿಸಲಾಯಿತು.
    ಭದ್ರಾವತಿ, ಜ. ೧೧ : ಮಕ್ಕಳ ಕಲಿಕಾ ಮಾಧ್ಯಮ ಯಾವುದೇ ಇರಲಿ ಅವರಿಗೆ ಕನ್ನಡ ಭಾಷೆ ಕಲಿಸುವಲ್ಲಿ ಪೋಷಕರು ಹೆಚ್ಚಿನ ಗಮನ ಹರಿಸಬೇಕೆಂದು ತಾಂತ್ರಿಕ ಅಭಿಯಂತರರಾದ ಶ್ರದ್ದಾ ಹೇಳಿದರು.
    ಅವರು ಬುಧವಾರ ತಾಲೂಕು ಕನ್ನಡ ಸಾಹಿತ್ಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೂತನ ದಿನದರ್ಶಿಕೆ ಕಾರ್ಯಕ್ರಮ ಎಳ್ಳುಬೆಲ್ಲ ಹಂಚುವ ಮೂಲಕ ಉದ್ಘಾಟಿಸಿ ಮಾತನಾಡಿದರು.
    ನಾವೆಲ್ಲರೂ ನೆಲ, ಜಲ, ಭಾಷೆ ಎಲ್ಲವನ್ನು ಉಳಿಸಿ ಬೆಳೆಸಬೇಕು. ಇಂದಿನ ಮಕ್ಕಳು ಮುಂದಿನ ಪ್ರಜೆಗಳಾಗಿದ್ದು, ಈ ಹಿನ್ನಲೆಯಲ್ಲಿ ಮಕ್ಕಳು ಆಂಗ್ಲ ಮಾಧ್ಯಮ ಸೇರಿದಂತೆ ಯಾವುದೇ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದರೂ ಸಹ ಅವರಿಗೆ ಕನ್ನಡ ಭಾಷೆ ಕಲಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕೆಂದರು.
    ದಿನದರ್ಶಿಕೆ ಬಿಡುಗಡೆಗೊಳಿಸಿದ ಉದ್ಯಮಿ ಬಿ.ಕೆ ಜಗನ್ನಾಥ ಮಾತನಾಡಿ, ಪರಿಷತ್ ವತಿಯಿಂದ ಕನ್ನಡ ನಾಡು, ತಾಯಿ ಭುವನೇಶ್ವರಿ ಹಾಗು ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳನ್ನೊಳಗೊಂಡಿರುವ ಸಂಪೂರ್ಣವಾಗಿ ಕನ್ನಡದಲ್ಲಿ ಮುದ್ರಿತಗೊಂಡಿರುವ ದಿನದರ್ಶಿಕೆ ಆಕರ್ಷಕವಾಗಿದೆ. ಪ್ರತಿಯೊಬ್ಬರು ಕನ್ನಡ ಭಾಷೆ ಮೇಲೆ ಪ್ರೀತಿ ಹೊಂದಬೇಕು. ಈ ನಿಟ್ಟಿನಲ್ಲಿ ದಿನದರ್ಶಿಕೆ ಜನರ ಮನಸ್ಸಿನಲ್ಲಿ ಭಾವನೆಯುನ್ನುಂಟು ಮಾಡಲಿ. ಪರಿಷತ್ ಕಾರ್ಯ ಚಟುವಟಿಕೆಗಳು ನಿರಂತರವಾಗಿ ಮುಂದುವರೆಯಲಿ ಎಂದು ಹಾರೈಸಿದರು.
    ವೇದಿಕೆಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೆ.ಎನ್ ಶ್ರೀಹರ್ಷ, ವೀರಭದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪರಿಷತ್ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
    ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಜಾನಪದ ಪರಿಷತ್ ಅಧ್ಯಕ್ಷ ಕೋಗಲೂರು ಯಜ್ಞಯ್ಯ, ಪರಿಷತ್ ಖಜಾಂಚಿ ಕೆ.ಟಿ ಪ್ರಸನ್ನ, ಸಂಘಟನಾ ಕಾರ್ಯದರ್ಶಿಗಳಾದ ನಾಗೋಜಿರಾವ್, ಕಮಲಕರ್, ಪರಿಷತ್ ಹೊಳೆಹೊನ್ನೂರು ಅಧ್ಯಕ್ಷ ಸಿದ್ದಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸುಮತಿ ಕಾರಂತ್ ಪ್ರಾರ್ಥಿಸಿ, ಪರಿಷತ್ ಕಾರ್ಯದರ್ಶಿ ಎಂ.ಈ ಜಗದೀಶ್ ಸ್ವಾಗತಿಸಿದರು. ಎಚ್. ತಿಮ್ಮಪ್ಪ ನಿರೂಪಿಸಿದರು.

ಹೆಣ್ಣು ಮಕ್ಕಳು ರಾಜಕಾರಣ ಪ್ರವೇಶಿಸಲು ಕೆಆರ್‌ಎಸ್ ಪಕ್ಷದಿಂದ ಮುಕ್ತ ಅವಕಾಶ : ಜನನಿ ವತ್ಸಲಾ

ಭದ್ರಾವತಿಯಲ್ಲಿ ಕೆಆರ್‌ಎಸ್ ಪಕ್ಷದ ಬೆಂಗಳೂರು ನಗರ ಕಾರ್ಯದರ್ಶಿ ಜನನಿ ವತ್ಸಲ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಜಂಟಿ ಕಾರ್ಯದರ್ಶಿ ಪುಷ್ಪ, ರಾಮೇಶ್ವರಿ, ಅಂಬಿಕಾ ಸೆರಿದಂತೆ ಇನ್ನಿತರರಿದ್ದರು.
    ಭದ್ರಾವತಿ, ಜ. ೧೧: ಪ್ರಾಮಾಣಿಕ, ಜನಪರ ಕಾಳಜಿ ಹೊಂದಿರುವ ವಿದ್ಯಾವಂತ ಮಹಿಳೆಯರಿಗೆ ರಾಜಕೀಯ ರಂಗ ಪ್ರವೇಶಿಸಲು 'ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ' ಮುಕ್ತ ಅವಕಾಶ ನೀಡಲಿದ್ದು, ಆಸಕ್ತ ಸ್ವಾಭಿಮಾನಿ ಕನ್ನಡದ ಮಹಿಳೆಯರು ಪಕ್ಷ ಸೇರ್ಪಡೆಗೆ ಮುಂದಾಗುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಬೆಂಗಳೂರು ನಗರ ಕಾರ್ಯದರ್ಶಿ, ಮಹಿಳಾ ಉಸ್ತುವಾರಿ ಜನನಿ ವತ್ಸಲಾ ಹೇಳಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ  ಮೂಲಕ ವಿಧಾನಸಭೆಯಲ್ಲಿ ಮಹಿಳಾ ಶಕ್ತಿ ವೃದ್ದಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಪಕ್ಷವು ಮಹಿಳೆಯರನ್ನು ರಾಜಕೀಯಕ್ಕೆ ಆಹ್ವಾನಿಸುತ್ತಿದೆ. ಪ್ರ್ರಾಮಾಣಿಕ ರಾಜಕಾರಣ ಮಾಡಬಯಸುವ ಅರ್ಹ ಮಹಿಳೆಯರು ಪಕ್ಷಕ್ಕೆ ಸೇರ್ಪಡೆಕೊಳ್ಳಬೇಕೆಂದು ಮನವಿ ಮಾಡಿದರು.
    ಇತ್ತೀಚೆಗೆ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಅಷ್ಟಾಗಿ ಕಂಡು ಬರುತ್ತಿಲ್ಲ. ಪ್ರಸ್ತುತ ಜೆಡಿಎಸ್, ಕಾಂಗ್ರೆಸ್, ಬಿಜೆಪಿಯಂತಹ ರಾಜಕೀಯ ಪಕ್ಷಗಳು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿಲ್ಲ. ಮಹಿಳೆಯರಿಗೆ ಲಭಿಸಬೇಕಾದ ರಾಜಕೀಯ ಸ್ಥಾನಮಾನಗಳನ್ನು ನೀಡುತ್ತಿಲ್ಲ. ಮಹಿಳಾ ಮೀಸಲಿರುವ ಕಡೆಯಲ್ಲಿಯೂ ಕೂಡ ಪುರುಷ ಪ್ರಾಬಲ್ಯವೇ ನಡೆಯುತ್ತಿದೆ. ಶಾಸನಸಭೆಯಲ್ಲಿ ಮಹಿಳೆಯರ ಬಗ್ಗೆ ಧ್ವನಿ ಎತ್ತುವಂತಹ ಮಹಿಳಾ ನಾಯಕಿಯರು ಬೇಕಾಗಿದ್ದಾರೆ. ಈ ನಿಟ್ಟಿನಲ್ಲಿ ರೈತಪರ, ಹೋರಾಟಪರ ಮಹಿಳೆಯರು ಕೆಆರ್‌ಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದು ಅವಶ್ಯಕವಾಗಿದೆ ಎಂದರು.  
    ಆರಂಭದಲ್ಲಿ ಕೇವಲ ೨೦ ಕಾರ್ಯಕರ್ತರಿಂದ ಆರಂಭವಾದ ಪಕ್ಷದಲ್ಲಿ ಈಗ ೩೦ ಸಾವಿರ ಕಾರ್ಯಕರ್ತರಿದ್ದಾರೆ. ಪಕ್ಷದ ನಿಲುವುಗಳಿಗೆ ಬದ್ಧರಾಗಿ ಸ್ವಚ್ಚ, ಜನಪರ ರಾಜಕಾರಣ ನಡೆಸಲು ನಿತ್ಯ ಸಾಕಷ್ಟು ಜನರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇದಕ್ಕೆ ಪೂರಕವಾಗಿ 'ಸ್ವಾಭಿಮಾನಿ ಕನ್ನಡದ ಹೆಣ್ಣೇ ಪವಿತ್ರ ರಾಜಕಾರಣಕ್ಕೆ ಮುಂದಾಗು' ಎನ್ನುವ ಅಭಿಯಾನ ಆರಂಭಿಸಿದ್ದು, ಈಗಾಗಲೇ ಎರಡು ಹಂತದಲ್ಲಿ ಅಭಿಯಾನ ಮುಕ್ತಾಯಗೊಳಿಸಲಾಗಿದೆ. ಇದೀಗ ೩ನೇ ಹಂತದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚನ್ನಗಿರಿ, ಚಿತ್ರದುರ್ಗ ನಗರಗಳಲ್ಲಿ ಅಭಿಯಾನ ನಡೆಸಲಾಗುತ್ತಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಹಿಳಾ ಘಟಕದ ಜಂಟಿ ಕಾರ್ಯದರ್ಶಿ ಪುಷ್ಪ, ರಾಮೇಶ್ವರಿ, ಅಂಬಿಕಾ, ಆನೇಕಲ್ ಜಯರಾಂ, ನಾಗರಾಜ್‌ರಾವ್ ಸಿಂಧೆ, ತ್ಯಾಗರಾಜ್, ಶಬರೀಶ್, ಸುಮಿತ್ರಾಬಾಯಿ, ಕಲಾವತಿ, ನಾಗರಾಜ್, ನಾಗರತ್ನಮ್ಮ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, January 10, 2023

ಕಬಡ್ಡಿ ಅರಳಿಕೊಪ್ಪ, ಕೊಮಾರನಹಳ್ಳಿ-ಖೋ ಖೋ ಹಿರಿಯೂರು, ಅರಕೆರೆ ಗ್ರಾಮ ಪಂಚಾಯಿತಿ ಪ್ರಥಮ ಸ್ಥಾನ

ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ನಡೆದ ಗ್ರಾಮೀಣ ಕ್ರೀಡಾಕೂಟ

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಗ್ರಾಮೀಣ ಕ್ರೀಡಾಕೂಟದಲ್ಲಿ ವಿಜೇತ ತಂಡಗಳಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಬಹುಮಾನಗಳನ್ನು ವಿತರಿಸಿದರು.
ಭದ್ರಾವತಿ, ಜ. ೧೦: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗು ತಾಲೂಕು ಪಂಚಾಯತ್ ಸಹಯೋಗದೊಂದಿಗೆ ಮಂಗಳವಾರ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ(ಕಬಡ್ಡಿ ಮತ್ತು ಖೋ ಖೋ ಆಯ್ಕೆ ಸ್ಪರ್ಧೆಗಳು) ನಗರದ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ನಡೆಯಿತು.  
           ಕಬಡ್ಡಿ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಅರಳಿಕೊಪ್ಪ ಗ್ರಾಮ ಪಂಚಾಯಿತಿ ಮತ್ತು ಮಹಿಳೆಯರ ವಿಭಾಗದಲ್ಲಿ ಕೊಮಾರನಹಳ್ಳಿ ಗ್ರಾಮ ಪಂಚಾಯಿತಿ ಪ್ರಥಮ ಸ್ಥಾನ ಹಾಗೂ ಖೋ ಖೋ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಹಿರಿಯೂರು ಗ್ರಾಮ ಪಂಚಾಯಿತಿ ಮತ್ತು ಮಹಿಳೆಯರ ವಿಭಾಗದಲ್ಲಿ ಅರಕೆರೆ ಗ್ರಾಮ ಪಂಚಾಯಿತಿ ಪ್ರಥಮ ಸ್ಥಾನ ಪಡೆದುಕೊಂಡವು.


    ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಿದರು. ದೈಹಿಕ ಶಿಕ್ಷಕ ಅಪೇಕ್ಷ ಮಂಜುನಾಥ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಟರಾಜ್, ಉಪೇಂದ್ರ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮನವಿಗೆ ಸ್ಪಂದನೆ : ಕುಲಸಚಿವೆ, ಹಣಕಾಸು ಅಧಿಕಾರಿ ಕರ್ತವ್ಯದಿಂದ ಬಿಡುಗಡೆ

ಕುವೆಂಪು ವಿ.ವಿ ಅಧ್ಯಾಪಕೇತರ ನೌಕರರ ಸಂಘ ಉನ್ನತ ಶಿಕ್ಷಣ ಖಾತೆ ಸಚಿವ, ಸಂಸದರಿಗೆ ಕೃತಜ್ಞತೆ


    ಭದ್ರಾವತಿ, ಜ. ೧೦: ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಜಿ. ಅನುರಾಧ ಹಾಗೂ ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಅಧ್ಯಾಪಕೇತರ ನೌಕರರ ಸಂಘ ಉನ್ನತ ಶಿಕ್ಷಣ ಖಾತೆ ಸಚಿವ ಸಿ.ಎನ್ ಅಶ್ವಥ್ ನಾರಾಯಣ, ಸಂಸದ ಬಿ.ವೈ ರಾಘವೇಂದ್ರ ಮತ್ತು ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ್ಯ ಕಾರ್ಯ ನಿರ್ವಾಹ ಪಟ್ಟಾಭಿರಾಮ್‌ರವರಿಗೆ ಕೃತಜ್ಞತೆ ಸಲ್ಲಿಸಿದೆ.
    ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಿದರೂ ಸಹ ವಿಶ್ವವಿದ್ಯಾಲಯದ ನೌಕರರ ಸಮಸ್ಯೆಗಳಿಗೆ ಕುಲಸಚಿವೆ ಜಿ. ಅನುರಾಧ ಅವರು ಪೂರಕವಾಗಿ ಸ್ಪಂದಿಸದೆ ಆಡಳಿತದಲ್ಲಿ ವಿಮುಖ ನೀತಿ ಅನುಸರಿಸುತ್ತಿದ್ದಾರೆ. ನೌಕರ ವರ್ಗಕ್ಕೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಖುದ್ದಾಗಿ ಭೇಟಿಯಾಗಿ ಸಮಸ್ಯೆ ವಿವರಿಸಿದರೂ ಸಹ ಸಂಘದ ಪದಾಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಇದರಿಂದಾಗಿ ನೌಕರರ ಯಾವುದೇ ಸಮಸ್ಯೆಗಳು ಬಗೆಹರಿಯದೆ ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಈ ಹಿನ್ನಲೆಯಲ್ಲಿ ಅವರನ್ನು ವಿಶ್ವವಿದ್ಯಾಲಯದಿಂದ ವರ್ಗಾವಣೆಗೊಳಿಸುವಂತೆ  ಇತ್ತೀಚೆಗೆ ಸಂಘದ ವತಿಯಿಂದ ಸಂಸದರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಹಾಗು ಉನ್ನತ ಶಿಕ್ಷಣ ಖಾತೆ ಸಚಿವ ಸಿ.ಎನ್ ಅಶ್ವಥ್ ನಾರಾಯಣ ಅವರಿಗೆ ಮನವಿ ಸಲ್ಲಿಸಲಾಗಿತ್ತು.
    ಇದೀಗ ಮನವಿಗೆ ಪೂರಕವಾಗಿ ಸ್ಪಂದಿಸಿ ಜಿ. ಅನುರಾಧ ಹಾಗು ಎಸ್. ರಾಮಕೃಷ್ಣ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ಸಂಘದ ಅಧ್ಯಕ್ಷ ಶ್ರೀನಿವಾಸ, ಉಪಾಧ್ಯಕ್ಷ ಎಂ.ಎಂ ಸ್ವಾಮಿ ಸೇರಿದಂತೆ ಪದಾಧಿಕಾರಿಗಳು ನೌಕರರ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.