ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಳ್ಳದೆ ಏಕಾಂಗಿಯಾಗಿರಲು ಚಿಂತನೆ
ಪೊಲೀಸ್ ಉಮೇಶ್
* ಅನಂತಕುಮಾರ್
ಭದ್ರಾವತಿ : ನಗರದಲ್ಲಿ ಹಲವಾರು ವರ್ಷಗಳಿಂದ ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಪೊಲೀಸ್ ಉಮೇಶ್‌ರವರು ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಎದುರು ನೋಡುತ್ತಿದ್ದು, ಕ್ಷೇತ್ರದ ರಾಜಕಾರಣದಲ್ಲಿ ಹೊಸ ದಿಕ್ಸೂಚಿಯಾಗುವ ಆಶಾಭಾವನೆ ಹೊಂದಿದ್ದಾರೆ. ಈ ನಡುವೆ ಇವರ ಅಭಿಮಾನಿಗಳು ಸಹ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಚುನಾವಣೆ ಘೋಷಣೆಯಾಗುವ ಮೊದಲು ಉಮೇಶ್ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆಂಬ ವಿಶ್ವಾಸ ಹೊಂದಿದ್ದಾರೆ.
ಕ್ಷೇತ್ರದ ರಾಜಕಾರಣದಲ್ಲಿ ಚುನಾವಣೆ ಸಂದರ್ಭದಲ್ಲಿ ಹೊಸ ಮುಖಗಳು ಬಂದು ಹೋಗುವುದು ಸಹಜ. ಕಳೆದ ೪ ದಶಕಗಳಿಂದ ಹಾಲಿ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ನಡುವೆ ಪೈಪೋಟಿ ನಡೆಯುತ್ತಿತ್ತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಹೊಸ ಮುಖಗಳು ಚುನಾವಣೆಗೆ ಸ್ಪರ್ಧಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಉಮೇಶ್‌ರವರ ರಾಜಕೀಯ ಪ್ರವೇಶ ಕ್ಷೇತ್ರದ ಮತದಾರರು ಎದುರು ನೋಡುವಂತೆ ಮಾಡಿದೆ.
ಪೊಲೀಸ್ ಉಮೇಶ್ ಪರಿಚಯ :
ಪೊಲೀಸ್ ಇಲಾಖೆ ನೌಕರರಾಗಿರುವ ಉಮೇಶ್ ನಗರದ ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ಕಾರ್ಮಿಕ ಶಾಂತಪ್ಪ ಗೌಡ-ದಿವಂಗತ ಸರಸ್ವತಮ್ಮ ದಂಪತಿ ಪುತ್ರರಾಗಿದ್ದು, ಇಲ್ಲಿಯೇ ಹುಟ್ಟಿ ಬೆಳೆದವರು. ಈ ಹಿನ್ನಲೆಯಲ್ಲಿ ಕ್ಷೇತ್ರದ ಸಂಪೂರ್ಣ ಮಾಹಿತಿ ಇವರಿಗಿದೆ. ಇವರ ತಾಯಿ ನಿಧನ ಹೊಂದಿದ ನಂತರ ಸ್ನೇಹ ಜೀವಿ ಬಳಗ ಸಂಘಟನೆಯನ್ನು ಆರಂಭಿಸಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಸೇವಾ ಕಾರ್ಯಗಳ ಜೊತೆಗೆ ಸಮರ್ಥ ನಾಯಕರಾಗಿ ಸಹ ಗುರುತಿಸಿಕೊಂಡಿದ್ದಾರೆ. ಎಲ್ಲಾ ವರ್ಗದ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ರಾಜಕೀಯ ಪ್ರವೇಶಿಸುವ ಆಸಕ್ತಿ ತೋರ್ಪಡಿಸುತ್ತಿದ್ದು, ಈಗಾಗಲೇ ಹಲವು ಸಭೆ-ಸಮಾರಂಭಗಳಲ್ಲಿ ಈ ಕುರಿತು ಪ್ರಸ್ತಾಪಿಸಿದ್ದಾರೆ. ಕ್ಷೇತ್ರದಲ್ಲಿ ಹೊಸ ಮುಖಗಳು ಚುನಾವಣೆ ಎದುರಿಸುವುದು ಸುಲಭದ ಮಾತಲ್ಲ. ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವಿರಬೇಕು. ಈ ನಿಟ್ಟಿನಲ್ಲಿ ಉಮೇಶ್ ಸೂಕ್ತ ವ್ಯಕ್ತಿ ಎಂಬ ಭಾವನೆ ಇವರ ಅಭಿಮಾನಿಗಳು ಹೊಂದಿದ್ದಾರೆ.
ಉಮೇಶ್‌ರವರು ಇದುವರೆಗೂ ಯಾವುದೇ ರಾಜಕೀಯ ಪಕ್ಷದ ಮೇಲೆ ಅವಲಂಬಿತವಾಗಿರದೆ ಸ್ವತಂತ್ರವಾಗಿ ಉಳಿದುಕೊಂಡಿದ್ದು, ಕ್ಷೇತ್ರವನ್ನು ಎಲ್ಲಾ ರೀತಿಯಿಂದಲೂ ಅಭಿವೃದ್ಧಿಪಡಿಸುವುದು ಇವರ ಬಹುದೊಡ್ಡ ಆಶಯವಾಗಿದೆ. ಈ ಹಿನ್ನಲೆಯಲ್ಲಿ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದೆ. ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ ಎಂಬ ದೃಢವಿಶ್ವಾಸ ಹೊಂದಿದ್ದಾರೆ.
ಈ ನಡುವೆ ಕೆಲವು ರಾಜಕೀಯಗಳ ಪಕ್ಷಗಳು ಸಹ ಇವರ ಸಂಪರ್ಕದಲ್ಲಿದ್ದು, ಕಾದು ನೋಡಬೇಕಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಘೋಷಣೆಯಾಗಿದ್ದು, ಈ ಹಿನ್ನಲೆಯಲ್ಲಿ ಈ ಪಕ್ಷದ ಚಟುವಟಿಕೆಗಳು ಚುರುಕುಗೊಂಡಿವೆ. ಉಳಿದಂತೆ ಆಮ್ ಆದ್ಮಿ ಪಾರ್ಟಿ ವತಿಯಿಂದ ಸುಮಾರು ೫-೬ ತಿಂಗಳಿನಿಂದ ಗ್ರಾಮ ಅಭಿಮಾನ ನಡೆಸಲಾಗುತ್ತಿದ್ದು, ಉದ್ಯಮಿ ಮಾರುತಿ ಮೆಡಿಕಲ್ ಆನಂದ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆನಂದ್ ಸಹ ಈ ಬಾರಿ ಚುನಾವಣೆಗೆ ಹೊಸ ಮುಖವಾಗಿದ್ದಾರೆ.
``ನನಗೆ ಅಧಿಕಾರದ ಆಸೆಯಾಗಲಿ ಅಥವಾ ರಾಜಕಾರಣಕ್ಕೆ ಬಂದು ಹಣ ಮಾಡಬೇಕೆಂಬ ಉದ್ದೇಶವಾಗಲಿ ಇಲ್ಲ. ನನಗೆ ಈಗಾಗಲೇ ಉದ್ಯೋಗವಿದ್ದು, ನಾನು ನೆಮ್ಮದಿಯಾಗಿ ಬದುಕುಬಹುದು. ಆದರೆ ಕ್ಷೇತ್ರದಲ್ಲಿ ಎರಡು ಬೃಹತ್ ಕಾರ್ಖಾನೆಗಳು ಅವನತಿ ದಾರಿ ಹಿಡಿದಿದ್ದು, ಈಗಾಗಲೇ ಎಂಪಿಎಂ ಕಾರ್ಖಾನೆ ಮುಚ್ಚಿ ಹೋಗಿದೆ. ಇದೀಗ ವಿಐಎಸ್‌ಎಲ್ ಕಾರ್ಖಾನೆ ಸಹ ಮುಚ್ಚಿ ಹೋಗುತ್ತಿದ್ದು, ಇದರಿಂದಾಗಿ ಕ್ಷೇತ್ರದಲ್ಲಿ ಸಾವಿರಾರು ಕಾರ್ಮಿಕರು ಬೀದಿಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ಕ್ಷೇತ್ರದಲ್ಲಿ ನಿರುದ್ಯೋಗ ಬಹುದೊಡ್ಡ ಸಮಸ್ಯೆಯಾಗಲಿದ್ದು, ಇದೀಗ ಕ್ಷೇತ್ರದ ಜನರನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ರಾಜಕೀಯದಿಂದ ಇದಕ್ಕೆ ಪರಿಹಾರ ಸಿಗಬಹುದು ಎಂಬ ವಿಶ್ವಾಸದೊಂದಿಗೆ ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸಿದ್ದೇನೆ.''
- ಪೊಲೀಸ್ ಉಮೇಶ್