Friday, January 13, 2023

ಸರ್ ಎಂ.ವಿ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ೧೬೦ನೇ ಜಯಂತಿ ಆಚರಣೆ

ಭದ್ರಾವತಿ ಬೊಮ್ಮನಕಟ್ಟೆ ಸರ್ ಎಂ.ವಿ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ೧೬೦ನೇ ಜಯಂತಿ ಆಚರಿಸಲಾಯಿತು.  
    ಭದ್ರಾವತಿ, ಜ. ೧೩ : ನಗರದ ಬೊಮ್ಮನಕಟ್ಟೆ ಸರ್ ಎಂ.ವಿ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ೧೬೦ನೇ ಜಯಂತಿ ಆಚರಿಸಲಾಯಿತು.  
     ಪ್ರೊ. ಬಿ.ಪಿ ಮಹದೇವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರದ ವಿವೇಕ ಜಾಗ್ರತಿ ಬಳಗದ ಲೀಲಾವತಿ ಸದಾಶಿವ ಮಾತನಾಡಿ, ವಿವೇಕಾನಂದರ ಆದರ್ಶಗಳು ಪ್ರಸ್ತುತ ಜೀವನಕ್ಕೆ ಬಹಳ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು.
    ಪೊ. ಡಿ. ರಮೇಶ್, ಪ್ರೊ. ಬಿ. ವಸಂತ ಕುಮಾರ್, ಪ್ರೊ. ಅರಸಯ್ಯ, ಡಾ. ಎಂ.ಸಿ ಪ್ರಭಾಕರ್ ಸೇರಿದಂತೆ ಅಧ್ಯಾಪಕ ಹಾಗು ಅಧ್ಯಾಪಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಸಿ. ಸೋಮಶೇಖರ್ ಸ್ವಾಗತಿಸಿ, ಪ್ರೊ. ಡಿ. ಉಮೇಶ್ ವಂದಿಸಿದರು.

ಲಾಡ್ಜ್‌ನಲ್ಲಿ ವ್ಯಕ್ತಿಯ ಕತ್ತುಸೀಳಿ ಬರ್ಬರ ಹತ್ಯೆ

ಭದ್ರಾವತಿ ಬಿ.ಎಚ್ ರಸ್ತೆ, ನಗರಸಭೆ ಮಾರುಕಟ್ಟೆ ಮುಂಭಾಗ ಹೆರಿಟೇಜ್ ಲಾಡ್ಜ್‌ನಲ್ಲಿ ವ್ಯಕ್ತಿಯೊಬ್ಬರ ಕತ್ತು ಸೀಳಿ ಬರ್ಬರವಾಗಿ ಹತ್ಯೆಯಾಗಿರುವ ಜಾವಗಲ್‌ನ ಪರ್ವೇಜ್ ಖಾನ್ ಮತ್ತು ಮಾಧ್ಯಮಗಳ ಮುಂದೆ ಅಳಲು ತೋರ್ಪಡಿಸಿಕೊಳ್ಳುತ್ತಿರುವ ಆತನ ತಾಯಿ ಶಕೀಲಾ
    ಭದ್ರಾವತಿ, ಜ. ೧೩: ನಗರದ ಬಿ.ಎಚ್ ರಸ್ತೆ, ನಗರಸಭೆ ಮಾರುಕಟ್ಟೆ ಮುಂಭಾಗ ಹೋಟೆಲ್ ಹೆರಿಟೇಜ್ ಲಾಡ್ಜ್‌ನಲ್ಲಿ ವ್ಯಕ್ತಿಯೊಬ್ಬರ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ.
     ಹಾಸನ ಮೂಲದ ಪರ್ವೇಜ್ ಖಾನ್ ಎಂಬಾತನ ಕೊಲೆಯಾಗಿದೆ. ಪ್ರೇಯಸಿಯೇ ಈ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಮೂಲಃ ಹಾಸನ ಚನ್ನರಾಯಪಟ್ಟಣದ  ಆಯೇಷಾ ಮತ್ತು ಮೂಲಃ ಜಾವಗಲ್‌ನ ಪರ್ವೇಜ್ ಖಾನ್  ಇಬ್ಬರು ಕಳೆದ ೩-೪ ವರ್ಷಗಳಿಂದ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
     ಇದೇ ವಿಚಾರಕ್ಕೆ ಪತಿ ಆಯೇಷಾರನ್ನು ಬಿಟ್ಟಿದ್ದ ಎನ್ನಲಾಗಿದೆ. ಈ ನಡುವೆ ಗುರುವಾರ ಪರ್ವೇಜ್ ಹಾಗೂ ಆಯೇಷಾ ನಗರಕ್ಕೆ ಬಂದಿದ್ದಾರೆ.  ಲಾಡ್ಜ್‌ನಲ್ಲಿ ರೂಂ ಮಾಡಿಕೊಂಡಿದ್ದು, ರೂಂನಲ್ಲಿದ್ದ ಆಯೇಷಾ ಹಾಗೂ ಪರ್ವೇಜ್ ನಡುವೆ ಜಗಳವಾಗಿದೆ ಎನ್ನಲಾಗಿದ್ದು,  ಈ ವೇಳೆ ಪರ್ವೇಜ್ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
    ಕೊಲೆ ಬಳಿಕ ಆಯೇಷಾ ಹಿಂದಿರುಗಿ ಹಾಸನ ಪೊಲೀಸರ ಬಳಿ ಶರಣಾಗಿದ್ದಾಳೆ.  ಅಲ್ಲಿಂದ ಮಾಹಿತಿ ಪಡೆದಿರುವ ಹಳೇನಗರ ಠಾಣೆ ಪೊಲೀಸರು, ಆಯೇಷಾಳನ್ನು ಕರೆತಂದು, ಸ್ಥಳ ಮಹಜರ್ ನಡೆಸಿ ಶುಕ್ರವಾರ ಸಂಜೆ ವೇಳೆ ಸ್ಥಳದಿಂದ ಮೃತದೇಹವನ್ನು ತೆಗೆದಿದ್ದಾರೆ. ಕೊಲೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಗರ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಹಳೇನಗರ ಪೊಲೀಸ್ ಠಾಣಾಧಿಕಾರಿ ಕವಿತಾ ಹಾಗು ಶ್ವಾನದಳ ಮತ್ತು ದಾವಣಗೆರೆ ಎಫ್‌ಎಸ್‌ಎಲ್ ತಂಡ ಪರಿಶೀಲನೆ ನಡೆಸಿತು. ಸುದ್ದಿ ತಿಳಿಯುತ್ತಿದ್ದಂತೆ ಜನರು ಲಾಡ್ಜ್ ಬಳಿ ಜಮಾಯಿಸಿದ್ದರು.
    ನಂಬಿಸಿ ಕರೆತಂದು ಕೊಲೆ : ತಾಯಿ ಆರೋಪ
    ಹತ್ಯೆಯಾಗಿರುವ ಪರ್ವೇಜ್ ಖಾನ್ ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದು, ಈತನ ತಾಯಿ ಶಕೀಲಾ ಹತ್ಯೆ ಕುರಿತು ಪ್ರತಿಕ್ರಿಯಿಸಿ ಬೇರೆ ಮನೆ ಮಾಡುವುದಾಗಿ ನಂಬಿಸಿ ಕರೆದುಕೊಂಡು ಬಂದು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದರು.
ಆಯೇಷಾ 'ನನ್ನ ಬಳಿ ಸುಮಾರು ೧.೫ ಲಕ್ಷ ರು.ಗಳಿದ್ದು, ಬೇರೆ ಮನೆ ಮಾಡ್ತೀನಿ. ನನ್ನ ಜೊತೆ ಬಂದು ಬಿಡು.' ಎಂದು ಹೇಳಿ ನಂಬಿಸಿ ಕರೆದುಕೊಂಡು ಬಂದು ಕೊಲೆ ಮಾಡಿಸಲಾಗಿದೆ. ಅಲ್ಲದೆ ಬರುವ ಮುಂಚೆ ಪರ್ವೇಜ್ ಮೊಬೈಲ್ ಸಿಮ್ ಕಾರ್ಡ್ ತುಂಡು ಮಾಡಲಾಗಿದೆ ಎಂದು ಆರೋಪಿಸಿ ಕುಟುಂಬ ಆರ್ಥಿಕವಾಗಿ ಸಾಕಷ್ಟು ಸಂಕಷ್ಟದಲ್ಲಿದೆ. ಮನೆ ತುಂಬ ಸಾಲ ಮಾಡಲಾಗಿದೆ ಎಂದು ಅಳಲು ತೋರ್ಪಡಿಸಿಕೊಂಡರು.


ಭದ್ರಾವತಿ ಬಿ.ಎಚ್ ರಸ್ತೆ, ನಗರಸಭೆ ಮಾರುಕಟ್ಟೆ ಮುಂಭಾಗ ಹೆರಿಟೇಜ್ ಲಾಡ್ಜ್‌ನಲ್ಲಿ ವ್ಯಕ್ತಿಯೊಬ್ಬರ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶುಕ್ರವಾರ ಸಂಜೆ ವೇಳೆಗೆ ಸ್ಥಳದಿಂದ ಮೃತದೇಹ ತೆಗೆಯಲಾಯಿತು.

೩೦ ವರ್ಷಗಳಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ, ಜಿಲ್ಲೆಯಲ್ಲಿಯೇ ಹಿಂದುಳಿದ ಕ್ಷೇತ್ರ

ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಜಾನ್ ಬೆನ್ನಿ ಆರೋಪ

ಜಾನ್ ಬೆನ್ನಿ
    ಭದ್ರಾವತಿ, ಜ. ೧೩: ಕ್ಷೇತ್ರದಲ್ಲಿ ಕಳೆದ ೩೦ ವರ್ಷಗಳಿಂದಲೂ ಆಡಳಿತ ನಡೆಸುತ್ತಿರುವ ಜನಪ್ರತಿನಿಧಿಗಳಿಂದ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯದೆ ಕೇವಲ ಭಾಷಣಗಳಿಗೆ ಮಾತ್ರ ಸೀಮಿತವಾಗಿದೆ.  ಸರ್ಕಾರದ ಯೋಜನೆಗಳನ್ನು ಪ್ರತಿ ಮನೆಮನೆಗೂ ತಲುಪಿಸುವ ಇಚ್ಚೆಯೊಂದಿಗೆ ನಾನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದು ನಗರದ ವಿಜಯ ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲೀಕ ಜಾನ್ ಬೆನ್ನಿ ಹೇಳಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಚ್ಚಿ ಹೋಗಿರುವ ಕಾರ್ಖಾನೆಗಳ ಹೆಸರುಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ವ್ಯರ್ಥ ರಾಜಕಾರಣ ಮಾಡುತ್ತಿದ್ದಾರೆ. ಮತದಾರರ ಮನ ಒಲಿಸಿ ಮತ ಹಾಕಿಸಿಕೊಂಡ ಬುದ್ದಿಜೀವಿಗಳು ಮತದಾರರ ಸಮಸ್ಯೆಗಳನ್ನು ಆಲಿಸದೆ. ಹೊಸದಾಗಿ ಕಾರ್ಖಾನೆಗಳನ್ನು ತೆರೆಯದೆ ಇಲ್ಲಿನ ಜನರು ಬೇರೆಡೆಗೆ ವಲಸೆ ಹೋಗುವಂತೆ ಮಾಡಿದ್ದಾರೆಂದು ಆರೋಪಿಸಿದರು.
    ಕ್ಷೇತ್ರದ ಜನರು ಇಲ್ಲಿಯೇ ಉಳಿಯಬೇಕು. ಉದ್ಯೋಗಕ್ಕಾಗಿ ಬೇರೆಡೆಗೆ ವಲಸೆ ಹೋಗುವುದನ್ನು ತಪ್ಪಿಸುವಂತಹ ವಾತಾವರಣ ಸೃಷ್ಟಿಸಬೇಕು. ಆಗ ಕ್ಷೇತ್ರದ ಪ್ರಗತಿ ಸಾಧ್ಯವಾಗುತ್ತದೆ. ಅಂತಹ ಕೆಲಸ ಇದುವರೆಗೂ ನಡೆದಿಲ್ಲ. ಇಲ್ಲಿನ ಯುವ ಸಮುದಾಯ ಉತ್ತಮ ಶಿಕ್ಷಣ ಹೊಂದಿದ್ದರೂ ಸಹ ಆರೋಗ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳು ಅಭಿವೃದ್ದಿಯಾಗಿವೆ.  ಆದರೆ ಭದ್ರಾವತಿ ಮಾತ್ರ ಅಭಿವೃದ್ದಿ ಕಾಣದೆ ಇತಿಹಾಸದ ಪುಟ ಸೇರುವಂತಾಗಿದೆ ಎಂದು ಕ್ಷೇತ್ರದ ಇಂದಿನ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದರು.  
 ನೊಂದ ನಾಗರೀಕರು ಅಭಿಮಾನಿಗಳು ನನ್ನ ಬಳಿ ತಮ್ಮ ಅಳಲನ್ನು ಹೇಳಿಕೊಂಡಿದ್ದು ಆ ಹಿನ್ನಲೆಯಲ್ಲಿ ನಾನು ಮುಂಬರುವ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ನಗರವನ್ನು ಪ್ರವಾಸಿ ತಾಣವಾಗಿ ಅಭಿವೃದ್ದಿ ಪಡಿಸುತ್ತೇನೆ. ಅವನತಿಯತ್ತ ಸಾಗುತ್ತಿರುವ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಿ ಹಲವು ಕಾರ್ಖಾನೆಗಳನ್ನು ತೆರೆದು ಉದ್ಯೋಗ ಸೃಷ್ಟಿ ಮಾಡಲಿದ್ದೇನೆ. ಕ್ಷೇತ್ರದ ಸಮಸ್ಯೆ ಕುರಿತು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಅವರ ಗಮನ  ಸೆಳೆಯುತ್ತೇನೆ. ೫ ವರ್ಷಗಳ ಕಾಲ ಕ್ಷೇತ್ರದಲ್ಲಿಯೇ ಇದ್ದು  ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.
    ಕ್ಷೇತ್ರದ ಮತದಾರರು ನಿಮ್ಮ ಅಮೂಲ್ಯ ಮತಗಳನ್ನು ಹಣಕ್ಕೆ ಮಾರಿಕೊಳ್ಳದೆ, ಸುಳ್ಳು ಭರವಸೆಗಳಿಗೆ ವಂಚಿತರಾಗದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಮುಂದಾಗಿರುವ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ನನ್ನನ್ನು ಈ ಬಾರಿ ಚುನಾವಣೆಯಲ್ಲಿ ಮತಕೊಟ್ಟು ಜಯಗಳಿಸಿಕೊಡಬೇಕೆಂದು ಮನವಿ ಮಾಡಿದರು.
    ಪತ್ರಿಕಾಗೋಷ್ಠಿಯಲ್ಲಿ  ಪ್ರಮುಖರಾದ ಕೃಪಾದಾನಂ, ಗೋಪಾಲ್, ವಾಸುದೇವಮೂರ್ತಿ, ಕುಮಾರ್, ಚಂದ್ರು ಸೇರಿದಂತೆ ಇನ್ನಿತರರು ಉಪಸ್ಥಿರಿದ್ದರು.

ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಪೊಲೀಸ್ ಉಮೇಶ್ ಒಲವು

ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಳ್ಳದೆ ಏಕಾಂಗಿಯಾಗಿರಲು ಚಿಂತನೆ

ಪೊಲೀಸ್ ಉಮೇಶ್


    * ಅನಂತಕುಮಾರ್
    ಭದ್ರಾವತಿ : ನಗರದಲ್ಲಿ ಹಲವಾರು ವರ್ಷಗಳಿಂದ ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಪೊಲೀಸ್ ಉಮೇಶ್‌ರವರು ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಎದುರು ನೋಡುತ್ತಿದ್ದು, ಕ್ಷೇತ್ರದ ರಾಜಕಾರಣದಲ್ಲಿ ಹೊಸ ದಿಕ್ಸೂಚಿಯಾಗುವ ಆಶಾಭಾವನೆ ಹೊಂದಿದ್ದಾರೆ. ಈ ನಡುವೆ ಇವರ ಅಭಿಮಾನಿಗಳು ಸಹ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಚುನಾವಣೆ ಘೋಷಣೆಯಾಗುವ ಮೊದಲು ಉಮೇಶ್ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆಂಬ ವಿಶ್ವಾಸ ಹೊಂದಿದ್ದಾರೆ.
    ಕ್ಷೇತ್ರದ ರಾಜಕಾರಣದಲ್ಲಿ ಚುನಾವಣೆ ಸಂದರ್ಭದಲ್ಲಿ ಹೊಸ ಮುಖಗಳು ಬಂದು ಹೋಗುವುದು ಸಹಜ. ಕಳೆದ ೪ ದಶಕಗಳಿಂದ ಹಾಲಿ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ನಡುವೆ ಪೈಪೋಟಿ ನಡೆಯುತ್ತಿತ್ತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಹೊಸ ಮುಖಗಳು ಚುನಾವಣೆಗೆ ಸ್ಪರ್ಧಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಉಮೇಶ್‌ರವರ ರಾಜಕೀಯ ಪ್ರವೇಶ ಕ್ಷೇತ್ರದ ಮತದಾರರು ಎದುರು ನೋಡುವಂತೆ ಮಾಡಿದೆ.
    ಪೊಲೀಸ್ ಉಮೇಶ್ ಪರಿಚಯ :
    ಪೊಲೀಸ್ ಇಲಾಖೆ ನೌಕರರಾಗಿರುವ ಉಮೇಶ್ ನಗರದ ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ಕಾರ್ಮಿಕ ಶಾಂತಪ್ಪ ಗೌಡ-ದಿವಂಗತ ಸರಸ್ವತಮ್ಮ ದಂಪತಿ ಪುತ್ರರಾಗಿದ್ದು, ಇಲ್ಲಿಯೇ ಹುಟ್ಟಿ ಬೆಳೆದವರು. ಈ ಹಿನ್ನಲೆಯಲ್ಲಿ ಕ್ಷೇತ್ರದ ಸಂಪೂರ್ಣ ಮಾಹಿತಿ ಇವರಿಗಿದೆ. ಇವರ ತಾಯಿ ನಿಧನ ಹೊಂದಿದ ನಂತರ ಸ್ನೇಹ ಜೀವಿ ಬಳಗ ಸಂಘಟನೆಯನ್ನು ಆರಂಭಿಸಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಸೇವಾ ಕಾರ್ಯಗಳ ಜೊತೆಗೆ ಸಮರ್ಥ ನಾಯಕರಾಗಿ ಸಹ ಗುರುತಿಸಿಕೊಂಡಿದ್ದಾರೆ. ಎಲ್ಲಾ ವರ್ಗದ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ರಾಜಕೀಯ ಪ್ರವೇಶಿಸುವ ಆಸಕ್ತಿ ತೋರ್ಪಡಿಸುತ್ತಿದ್ದು, ಈಗಾಗಲೇ ಹಲವು ಸಭೆ-ಸಮಾರಂಭಗಳಲ್ಲಿ ಈ ಕುರಿತು ಪ್ರಸ್ತಾಪಿಸಿದ್ದಾರೆ. ಕ್ಷೇತ್ರದಲ್ಲಿ ಹೊಸ ಮುಖಗಳು ಚುನಾವಣೆ ಎದುರಿಸುವುದು ಸುಲಭದ ಮಾತಲ್ಲ. ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವಿರಬೇಕು. ಈ ನಿಟ್ಟಿನಲ್ಲಿ ಉಮೇಶ್ ಸೂಕ್ತ ವ್ಯಕ್ತಿ ಎಂಬ ಭಾವನೆ ಇವರ ಅಭಿಮಾನಿಗಳು ಹೊಂದಿದ್ದಾರೆ. 
ಉಮೇಶ್‌ರವರು ಇದುವರೆಗೂ ಯಾವುದೇ ರಾಜಕೀಯ ಪಕ್ಷದ ಮೇಲೆ ಅವಲಂಬಿತವಾಗಿರದೆ ಸ್ವತಂತ್ರವಾಗಿ ಉಳಿದುಕೊಂಡಿದ್ದು, ಕ್ಷೇತ್ರವನ್ನು ಎಲ್ಲಾ ರೀತಿಯಿಂದಲೂ ಅಭಿವೃದ್ಧಿಪಡಿಸುವುದು ಇವರ ಬಹುದೊಡ್ಡ ಆಶಯವಾಗಿದೆ. ಈ ಹಿನ್ನಲೆಯಲ್ಲಿ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದೆ. ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ ಎಂಬ ದೃಢವಿಶ್ವಾಸ ಹೊಂದಿದ್ದಾರೆ.
    ಈ ನಡುವೆ ಕೆಲವು ರಾಜಕೀಯಗಳ ಪಕ್ಷಗಳು ಸಹ ಇವರ ಸಂಪರ್ಕದಲ್ಲಿದ್ದು, ಕಾದು ನೋಡಬೇಕಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಘೋಷಣೆಯಾಗಿದ್ದು, ಈ ಹಿನ್ನಲೆಯಲ್ಲಿ ಈ ಪಕ್ಷದ ಚಟುವಟಿಕೆಗಳು ಚುರುಕುಗೊಂಡಿವೆ. ಉಳಿದಂತೆ ಆಮ್ ಆದ್ಮಿ ಪಾರ್ಟಿ ವತಿಯಿಂದ ಸುಮಾರು ೫-೬ ತಿಂಗಳಿನಿಂದ ಗ್ರಾಮ ಅಭಿಮಾನ ನಡೆಸಲಾಗುತ್ತಿದ್ದು, ಉದ್ಯಮಿ ಮಾರುತಿ ಮೆಡಿಕಲ್ ಆನಂದ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆನಂದ್ ಸಹ ಈ ಬಾರಿ ಚುನಾವಣೆಗೆ ಹೊಸ ಮುಖವಾಗಿದ್ದಾರೆ.

``ನನಗೆ ಅಧಿಕಾರದ ಆಸೆಯಾಗಲಿ ಅಥವಾ ರಾಜಕಾರಣಕ್ಕೆ ಬಂದು ಹಣ ಮಾಡಬೇಕೆಂಬ ಉದ್ದೇಶವಾಗಲಿ ಇಲ್ಲ. ನನಗೆ ಈಗಾಗಲೇ ಉದ್ಯೋಗವಿದ್ದು, ನಾನು ನೆಮ್ಮದಿಯಾಗಿ ಬದುಕುಬಹುದು. ಆದರೆ ಕ್ಷೇತ್ರದಲ್ಲಿ ಎರಡು ಬೃಹತ್ ಕಾರ್ಖಾನೆಗಳು ಅವನತಿ ದಾರಿ ಹಿಡಿದಿದ್ದು, ಈಗಾಗಲೇ ಎಂಪಿಎಂ ಕಾರ್ಖಾನೆ ಮುಚ್ಚಿ ಹೋಗಿದೆ. ಇದೀಗ ವಿಐಎಸ್‌ಎಲ್ ಕಾರ್ಖಾನೆ ಸಹ ಮುಚ್ಚಿ ಹೋಗುತ್ತಿದ್ದು, ಇದರಿಂದಾಗಿ ಕ್ಷೇತ್ರದಲ್ಲಿ ಸಾವಿರಾರು ಕಾರ್ಮಿಕರು ಬೀದಿಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ಕ್ಷೇತ್ರದಲ್ಲಿ ನಿರುದ್ಯೋಗ ಬಹುದೊಡ್ಡ ಸಮಸ್ಯೆಯಾಗಲಿದ್ದು, ಇದೀಗ ಕ್ಷೇತ್ರದ ಜನರನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ರಾಜಕೀಯದಿಂದ ಇದಕ್ಕೆ ಪರಿಹಾರ ಸಿಗಬಹುದು ಎಂಬ ವಿಶ್ವಾಸದೊಂದಿಗೆ ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸಿದ್ದೇನೆ.''
                                                                                                                               - ಪೊಲೀಸ್ ಉಮೇಶ್

Thursday, January 12, 2023

ಜ.೧೫ರಂದು ಗೆಳೆಯರ ಬಳಗ ಟ್ರಸ್ಟ್ ವತಿಯಿಂದ ಸಂಕ್ರಾಂತಿ ಸಂಭ್ರಮ

    ಭದ್ರಾವತಿ, ಜ. ೧೨ : ನಗರದ ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ವತಿಯಿಂದ ಈ ಬಾರಿ ವಿಶೇಷವಾಗಿ ಜ.೧೫ರಂದು ಸಂಕ್ರಾಂತಿ ಸಂಭ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀ ನಂದಿ ದೇವಸ್ಥಾನದ ಮುಂಭಾಗ ಬೆಳಿಗ್ಗೆ ೬ಗಂಟೆಗೆ ವಿಶೇಷ ಆಕರ್ಷಣೆಯಾಗಿ ಹೋರಿಗಳ ಕಿಚ್ಚಾಯಿಸುವ ಕಾರ್ಯಕ್ರಮ ನಡೆಯಲಿದ್ದು, ೬.೩೦ಕ್ಕೆ ಪೊಂಗಲ್ ಪೂಜೆ, ೯ ಗಂಟೆಗೆ ಗೋವಿನ ಪೂಜೆ, ೧೦ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.
    ನಂತರ ಹೊಳೆಹೊನ್ನೂರು ಸರ್ಕಾರಿ ಪ್ರೌಢಶಾಲೆಯ ರವಿಕಿರಣ್ ಅವರಿಂದ ದೈವ ನೃತ್ಯರೂಪಕ, ಚೌಡೇಶ್ವರಿ ಮಹಿಳಾ ಮಂಡಳಿಯಿಂದ ಕೋಲಾಟ, ದಿವಾಕರ ಮತ್ತು ತಂಡದಿಂದ ಹಾಗು ವೀರಾಂಜನೇಯ ಭಜನಾ ಮಂಡಳಿ ವತಿಯಿಂದ ಜಾನಪದ ಗೀತೆ, ಹೊಳೆಗಂಗೂರು ಸರ್ಕಾರಿ ಪ್ರೌಢ ಶಾಲೆ ವತಿಯಿಂದ ಕೋಲಾಟ ಹಾಗು ಸೋಂಪಾನಾಯ್ಕ ಮತ್ತು ತಂಡದವರಿಂದ ಬಣಜಾರ್ ಶೈಲಿಯ ಕೋಲಾಟ ಸೇರಿದಂತೆ ಜಾನಪದ ಕಾರ್ಯಕ್ರಮಗಳು ನಡೆಯಲಿವೆ.
    ಗ್ರಾಮೀಣ ಕ್ರೀಡಾಕೂಟ :
    ಸಂಕ್ರಾಂತಿ ಸಂಭಮದ ಅಂಗವಾಗಿ ಜ.೧೪ರಂದು ಬೆಳಿಗ್ಗೆ ೧೧ ಗಂಟೆಗೆ ಗೋಲ್ಡನ್ ಜ್ಯೂಬಿಲಿ ಫೀಲ್ಡ್‌ನಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪುರುಷರ ವಿಭಾಗದಲ್ಲಿ ಹಗ್ಗ ಜಗ್ಗಾಟ, ಲಗೋರಿ ಹಾಗು ಮಹಿಳೆಯರ ವಿಭಾಗದಲ್ಲಿ ನೀರು ತುಂಬಿಸುವ ಆಟ ಮತ್ತು ಎಷ್ಟಪ್ಪ ಎಷ್ಟು ಸ್ಪರ್ಧೆಗಳು ಹಾಗು ಮಕ್ಕಳ ವಿಭಾಗದಲ್ಲಿ ಗೋಣಿ ಚೀಲದ ಆಟ, ಕುಂಟೆ ಬಿಲ್ಲೆ ಸ್ಪರ್ಧೆಗಳು ನಡೆಯಲಿವೆ. ವಿಶೇಷವಾಗಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಜ.೧೩ರ ಸಂಜೆ ೬ ಗಂಟೆಯೊಳಗಾಗಿ ಮೊ: ೯೭೩೧೩೧೬೪೦೦ ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳತಕ್ಕದ್ದು.

ಇ-ಆಸ್ತಿ ತಂತ್ರಾಂಶ ಸರಳೀಕರಣಗೊಳಿಸಲು ಮಾಹಿತಿ ನೀಡಿ ಸಹಕರಿಸಿ

    ಭದ್ರಾವತಿ, ಜ. ೧೨: ನಗರಸಭೆ ವತಿಯಿಂದ ಇ-ಆಸ್ತಿ ತಂತ್ರಾಂಶ ಮತ್ತಷ್ಟು ಸರಳೀಕರಣಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದು, ಈ ಕಾರ್ಯವನ್ನು ಫೆಬ್ರವರಿ ಅಂತ್ಯದೊಳಗೆ ಮುಕ್ತಾಯಗೊಳಿಸಲಾಗುವುದು. ಈ ಹಿನ್ನಲೆಯಲ್ಲಿ ಅಗತ್ಯವಿರುವ ಮಾಹಿತಿ ನೀಡಿ ಸಹಕರಿಸುವಂತೆ ಪೌರಾಯುಕ್ತ ಎಚ್.ಎಂ ಮನುಕುಮಾರ್ ಮನವಿ ಮಾಡಿದ್ದಾರೆ.
    ಕೆ.ಎಂ.ಎಫ್-೨೪ ಗಣಕೀಕರಣ ಕಾರ್ಯ ಪೂರ್ಣಗೊಳಿಸಲು ನಗರಸಭೆ ಸಿಬ್ಬಂದಿಗಳು ಮನೆಗಳಿಗೆ ಭೇಟಿ ನೀಡಿ ಸರ್ವೇ ನಡೆಸಲಿದ್ದು, ಈ ಸಂದರ್ಭದಲ್ಲಿ ಮನೆ ಮಾಲೀಕರ ಮತ್ತು ಸ್ವತ್ತಿನ ಭಾವಚಿತ್ರ, ಗುರುತಿನ ದಾಖಲೆ, ಆಸ್ತಿ, ನೀರಿನ ತೆರಿಗೆ ಪಾವತಿಸಿರುವ ರಶೀದಿ, ಮಾಲೀಕತ್ವದ ದಾಖಲಾತಿ, ಕಟ್ಟಡ ಪರವಾನಿಗೆ ಪ್ರತಿ ಹಾಗು ಆಸ್ತಿ ಮಾಲೀಕರು ದಾಖಲೆಗಳ ನಕಲು ಪ್ರತಿಗಳನ್ನು ನೀಡಿ ಸಹಕರಿಸಲು ಕೋರಲಾಗಿದೆ.

ಕುವೆಂಪು ವಿ.ವಿ ವಿದ್ಯಾರ್ಥಿಗಳಿಂದ ಸ್ವಾಮಿ ವಿವೇಕಾನಂದರ ಜಯಂತಿ

ಭದ್ರಾವತಿ ತಾಲೂಕಿನ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗುರುವಾರ ತತ್ತ್ವಜ್ಞಾನಿ, ಯುವ ಸಮುದಾಯ ಚೈತನ್ಯದ ಶಕ್ತಿ ಸ್ವಾಮಿ ವಿವೇಕಾನಂದರ ಜನ್ಮದಿನ ಆಚರಿಸಿದರು.
    ಭದ್ರಾವತಿ, ಜ. ೧೨: ತಾಲೂಕಿನ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗುರುವಾರ ತತ್ತ್ವಜ್ಞಾನಿ, ಯುವ ಸಮುದಾಯ ಚೈತನ್ಯದ ಶಕ್ತಿ ಸ್ವಾಮಿ ವಿವೇಕಾನಂದರ ಜನ್ಮದಿನ ಆಚರಿಸಿದರು.
    ವಿಶ್ವವಿದ್ಯಾಲಯದ ಮುಂಭಾಗ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಘೋಷಣೆಗಳ ಮೂಲಕ ಸಂಭ್ರಮಿಸಿದರು. ಎನ್‌ಎಸ್‌ಯುಐ ತಾಲೂಕು ಅಧ್ಯಕ್ಷರಾದ ಮುಸ್ವೀರ್ ಬಾಷ ಮತ್ತು ಧವನ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
    ವಿದ್ಯಾರ್ಥಿ ಪ್ರಮುಖರಾದ ಮುರುಗೇಶ್, ಇಮ್ರಾನ್, ಕೀರ್ತಿ, ವೇಲು, ಹರೀಶ್, ನೂತನ್, ರಾಜೇಶ್, ನಾಗರಾಜ್, ಮದನ್, ಮೋಹನ್, ಶೈಲೂ, ಶ್ರೇಯಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.