Friday, January 20, 2023

೨ನೇ ದಿನಕ್ಕೆ ಕಾಲಿಟ್ಟ ಗುತ್ತಿಗೆ ಕಾರ್ಮಿಕರ ಹೋರಾಟ : ಕಾಂಗ್ರೆಸ್ ಸಂಸದರ ಬೆಂಬಲ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ  ಗುತ್ತಿಗೆ ಕಾರ್ಮಿಕರ ಸಂಘ ಕಾರ್ಖಾನೆ ಮುಂಭಾಗ ಕೈಗೊಂಡಿರುವ ಅನಿರ್ಧಿಷ್ಟಾವಧಿ ಹೋರಾಟ ಶುಕ್ರವಾರ ೨ನೇ ದಿನಕ್ಕೆ ಕಾಲಿಟ್ಟಿತು.
    ಭದ್ರಾವತಿ, ಜ. ೨೦ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ  ಗುತ್ತಿಗೆ ಕಾರ್ಮಿಕರ ಸಂಘ ಕಾರ್ಖಾನೆ ಮುಂಭಾಗ ಕೈಗೊಂಡಿರುವ ಅನಿರ್ಧಿಷ್ಟಾವಧಿ ಹೋರಾಟ ಶುಕ್ರವಾರ ೨ನೇ ದಿನಕ್ಕೆ ಕಾಲಿಟ್ಟಿತು.
    ಪ್ರಮುಖರು ಮಾತನಾಡಿ, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ನಿರಂತರ ಹೋರಾಟ ನಡೆಯಲಿದೆ. ಕಾರ್ಖಾನೆಯನ್ನು ಯಾವುದೇ ಮುಚ್ಚಲು ಬಿಡುವುದಿಲ್ಲ. ನಮ್ಮ ಹೋರಾಟಕ್ಕೆ ಸಂಸದ ಡಿ.ಕೆ ಸುರೇಶ್, ರಾಜ್ಯಸಭಾ ಸದಸ್ಯರಾದ ಸೈಯದ್ ನಾಸಿರ್ ಹುಸೇನ್, ಎಲ್. ಹನುಮಂತಯ್ಯ, ಜಿ.ಸಿ ಚಂದ್ರಶೇಖರ್ ಸೇರಿದಂತೆ ಇನ್ನಿತರರು ಬೆಂಬಲ ಸೂಚಿಸಿದ್ದು, ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.


    ಗುತ್ತಿಗೆ ಕಾರ್ಮಿಕ ಹೋರಾಟಕ್ಕೆ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಸಂಪೂರ್ಣವಾಗಿ ಬೆಂಬಲ ಸೂಚಿಸಿದ್ದು, ಶುಕ್ರವಾರ ಹೋರಾಟ ಸ್ಥಳಕ್ಕೆ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಭೇಟಿ ನೀಡಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಮುಚ್ಚುವ ಆದೇಶ ಹಿಂಪಡೆಯುವಂತೆ ಆಗ್ರಹಿಸಿದರು.

ವಿಐಎಸ್‌ಎಲ್ ಮುಚ್ಚದಿರುವಂತೆ ಪ್ರಧಾನ ಮಂತ್ರಿಗಳಿಗೆ ಒಕ್ಕಲಿಗರ ಸಂಘ ಮನವಿ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ತಾಲೂಕು ಒಕ್ಕಲಿಗರ ಸಂಘ ತೀವ್ರವಾಗಿ ಖಂಡಿಸಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿತು.
    ಭದ್ರಾವತಿ, ಜ. ೨೦: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ತಾಲೂಕು ಒಕ್ಕಲಿಗರ ಸಂಘ ತೀವ್ರವಾಗಿ ಖಂಡಿಸುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೈಸೂರು ಮಹಾರಾಜರ ಮತ್ತು ಭಾರತರತ್ನ ಸರ್.ಎಂ ವಿಶ್ವೇಶ್ವರಾಯರವರ ಹೆಸರು ಉಳಿಸಲು ಈ ಕಾರ್ಖಾನೆಯನ್ನು ಮುಚ್ಚದಂತೆ ತಡೆಯಬೇಕೆಂದು ಅಧ್ಯಕ್ಷ ಎ.ಟಿ.ರವಿ ಮನವಿ ಮಾಡಿದರು.
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಐಎಸ್‌ಎಲ್ ಕಾರ್ಖಾನೆಯನ್ನು ಅಭಿವೃದ್ದಿಪಡಿಸಿ ಕಾರ್ಮಿಕರನ್ನು ರಕ್ಷಿಸುವಂತೆ ಕೇಂದ್ರ ಸರ್ಕಾರದ ಉಕ್ಕು ಪ್ರಾಧಿಕಾರದ ಸಹಭಾಗಿತ್ವಕ್ಕೆ ಅಂದಿನ ಪ್ರಧಾನಿ ದಿವಂಗತ ರಾಜೀವ್‌ಗಾಂಧಿರವರಿಗೆ ರಾಜ್ಯ ಸರ್ಕಾರ ಹಸ್ತಾಂತರಿಸಿತ್ತು. ಆದರೆ ಕೇಂದ್ರ ಸರ್ಕಾರ ಬಂಡವಾಳ ತೊಡಗಿಸಿ ಅಭಿವೃದ್ದಿಪಡಿಸದೆ ನಿರ್ಲಕ್ಷ್ಯವಹಿಸಿತ್ತು. ನಂತರ ಕಾರ್ಖಾನೆಗೆ ಕಾಯಕಲ್ಪ ನೀಡಲು ಪ್ರಧಾನಿಯಾಗಿದ್ದ ಎಚ್.ಡಿ ದೇವೇಗೌಡರು ಕಾರ್ಖಾನೆಯನ್ನು ಸಂಪೂರ್ಣವಾಗಿ ಉಕ್ಕು ಪ್ರಾಧಿಕಾರಕ್ಕೆ ಸೇರ್ಪಡೆಗೊಳಿಸಿ ಜೀವ ತುಂಬಿದ್ದರು ಎಂದರು.
    ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಅಸ್ತಿತ್ವಕ್ಕೆ ಬಂದ ನೀತಿ ಆಯೋಗ ಕೈಗೊಂಡ ತಪ್ಪು ನಿರ್ಧಾರಗಳ ಪರಿಣಾಮ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ಮುಂದಾಗಿ ಟೆಂಡರ್ ಪ್ರಕಟಿಸಿದ್ದು, ನಂತರದ ಬೆಳೆವಣಿಗೆಯಲ್ಲಿ ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗಲು ಬಂಡವಾಳಶಾಹಿಗಳು ಆಸಕ್ತಿ ತೋರಿಸದ ಕಾರಣ ಇದೀಗ ಕಾರ್ಖಾನೆಯನ್ನು ಮುಚ್ಚಲು ಪಿತೂರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
    ಉಕ್ಕು ಪ್ರಾಧಿಕಾರ ಕಾರ್ಖಾನೆಯನ್ನು ಮುಚ್ಚಲು ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಕಾರ್ಖಾನೆಯನ್ನು ನಂಬಿ ಬದುಕುತ್ತಿರುವ ಕಾರ್ಮಿಕರು, ಅವಲಂಬಿತರು, ಗುತ್ತಿಗೆ ಕಾರ್ಮಿಕರು ಕಂಗಾಲಾಗಿದ್ದಾರೆ. ಈಗಾಗಲೇ ಎಂಪಿಎಂ ಕಾರ್ಖಾನೆ ಮುಚ್ಚಲ್ಪಟ್ಟು ಕಾರ್ಮಿಕರು ಬೀದಿಪಾಲಾಗಿದ್ದಾರೆ. ಮನೆಗಳು ಪಾಳುಬಿದ್ದು ಹಾಳಾಗಿ, ಸ್ಮಶಾನ ಮೌನ ಆವರಿಸಿದೆ. ಇದೀಗ ವಿಐಎಸ್‌ಎಲ್ ಮುಚ್ಚಿದರೆ ಇಡೀ ಊರು ಪಾಳುಬಿದ್ದ ಕೊಂಪೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
    ನಗರದ ಅನೇಕ ಮುಖಂಡರು ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ನೇರವಾಗಿ ಭೇಟಿಯಾಗಿ ಮಾತುಕತೆ ನಡೆಸಿ ಕಾರ್ಖಾನೆ ಮುಚ್ಚುವುದನ್ನು ತಡೆಯುವಂತೆ ಕೋರಲಾಗಿದೆ. ಇದೆ ರೀತಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಪೀಠಾಧಿಪತಿಗಳಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಮೂಲಕ ಸಹ  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದರು.
    ಗುತ್ತಿಗೆ ಕಾರ್ಮಿಕರ ಧರಣಿಗೆ ಬೆಂಬಲ:
    ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಚ್ಚುವ ವಿಚಾರ ತಿಳಿದು ಆತಂಕಗೊಂಡು ಕಾರ್ಖಾನೆ ಮುಂಭಾಗದಲ್ಲಿ ಧರಣಿ ಕೈಗೊಂಡಿದ್ದಾರೆ. ಅವರ ಹೋರಾಟಕ್ಕೆ ತಾಲೂಕು ಒಕ್ಕಲಿಗರ ಸಂಘ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸುತ್ತದೆ. ಅಗತ್ಯ ಬಿದ್ದರೆ ಭದ್ರಾವತಿ ಬಂದ್ ಸಹ ನಡೆಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಹೇಳಿದರು.
ಪತ್ರಿಕಾ ಗೋಷ್ಟಿಯಲ್ಲಿ ಸಂಘದ ಪದಾಧಿಕಾರಿಗಳು, ಮುಖಂಡರು, ಪೋಷಕರಾದ ರಾಜು, ರಾಧಾ, ಉಮೇಶ್, ಕಾರ್ತಿಕ್, ಗೊಂದಿ ಜಯರಾಂ, ಚೆನ್ನಗಪ್ಪ, ಎಪಿಎಂಸಿ ಜಯರಾಂ, ಕುಮಾರ್, ಎಸ್.ರಾಜು, ಶಾಂತರಾಜ್, ಅಣ್ಣೇಗೌಡ, ರಾಮೇಗೌಡ, ಮಂಜುನಾಥ್, ನಾಗರಾಜ್, ಶ್ರೀಧರ್, ಕುಂಬ್ರಿ ಚಂದ್ರಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಜ.೨೨ರಂದು ಕಟ್ಟಡ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳ ವಿತರಣೆ, ಸನ್ಮಾನ

ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ‍್ಸ್ ಸೆಂಟ್ರಲ್ ಯೂನಿಯನ್ ಭದ್ರಾವತಿ ತಾಲೂಕು ಶಾಖೆ ವತಿಯಿಂದ ಶುಕ್ರವಾರ ಪತ್ರಿಕಾಗೋಷ್ಠಿ ನಡೆಯಿತು.
    ಭದ್ರಾವತಿ, ಜ. ೨೦:  ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ‍್ಸ್ ಸೆಂಟ್ರಲ್ ಯೂನಿಯನ್ ತಾಲೂಕು ಶಾಖೆ ವತಿಯಿಂದ ಜ. ೨೨ರಂದು ಗಾಂಧಿನಗರ ಅಗ ಮುಡಿ ಮೊದಲಿಯಾರ್ ಸಮುದಾಯ ಭವನದಲ್ಲಿ ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ. ಸುಂದರ್ ಬಾಬು ಮತ್ತು ತಾಲೂಕು ಶಾಖೆ ಅಧ್ಯಕ್ಷ ಕೆ. ಚಂದ್ರಶೇಖರ್ ತಿಳಿಸಿದರು.
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಮರಣ ಹೊಂದಿದ ಕಾರ್ಮಿಕರ ವಾರಸುದಾರರಿಗೆ ೫ ಲಕ್ಷ ರೂ. ಹಣ ಮಂಜೂರಾತಿ ಆದೇಶ ಪತ್ರ, ಇ-ಶಮ್ ಕಾರ್ಡ್, ಕಿಟ್ (ಎಲೆಕ್ಟ್ರಿಷಿಯನ್, ಮೇಷನ್ ಮತ್ತು ಮಹಿಳೆಯರಿಗೆ ನ್ಯೂಟ್ರಿಷಿನ್ ಕಿಟ್) ಮತ್ತು ಕೆಎಸ್‌ಆರ್‌ಟಿಸಿ ಉಚಿತ ಬಸ್ ಪಾಸ್ ವಿತರಣೆ ನಡೆಯಲಿದೆ. ಅಲ್ಲದೆ ಸಂಸದರು, ಶಾಸಕರು,  ಹಿರಿಯ ಮಹಿಳಾ ಮತ್ತು ಪುರುಷ ಕಾರ್ಮಿಕರಿಗೆ, ಯೂನಿಯನ್ ರಾಜ್ಯಾಧ್ಯಕ್ಷರು, ತಾಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಹಾಗು  ದಾನಿಗಳಿಗೆ ಮತ್ತು ಪ್ರತಿನಿಧಿಗಳಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದರು.
    ಶ್ರೀ ಕ್ಷೇತ್ರ, ಭದ್ರಗಿರಿ.(ಎಂ.ಸಿ.ಹಳ್ಳಿ) ಶ್ರೀ ಮುರುಗೇಶ್ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಶ್ರಮಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ಗೌರವಾಧ್ಯಕ್ಷರಾದ ಸಂಸದ ಬಿ.ವೈ ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಯೂನಿಯನ್ ರಾಜ್ಯಾಧ್ಯಕ್ಷ ಎನ್.ಪಿ ಸಾಮಿ, ಜಿಲ್ಲಾ ಗೌರವಾಧ್ಯಕ್ಷ ಭಾನುಪ್ರಕಾಶ್,  ಶ್ರಮಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾ ಗೌರವ ಸಲಹೆಗಾರ ಬಿ.ಕೆ ಶ್ರೀನಾಥ್, ಜಿಲ್ಲಾ ಕಾರ್ಮಿಕ ಅಧಿಕಾರಿ ಸೀಬಿರಂಗಯ್ಯ,  ಯೂನಿಯನ್ ತಾಲೂಕು ಅಧ್ಯಕ್ಷ ಕೆ. ಚಂದ್ರಶೇಖರ್, ನಿರ್ದೇಶಕ ಅಂತೋಣಿ ಕ್ರೂಸ್,  ಯೂನಿಯನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಧನಶೇಖರ್, ರಾಜ್ಯ ಮಹಿಳಾ ಕಾರ್ಯದರ್ಶಿ, ಲೀಲಾವತಿ,  ಜಿಲ್ಲಾ ಗೌರವ ಸಲಹೆಗಾರ ಭೂಪಾಲ್, ಜಿಲ್ಲಾಧ್ಯಕ್ಷ  ಸುಬ್ರಮಣಿ, ಗ್ರಾಮಾಂತರ ಜಿಲ್ಲಾಧ್ಯಕ್ಷ ಕೆ. ಸಂಜಯ್ ಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್. ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಉದ್ಯಮಿಗಳಾದ ಡಿ.ವಿ ಶಿವಕುಮಾರ್, ಎ. ಮಾದಣ್ಣ, ಜಿ. ಸುರೇಶ್ ಕುಮಾರ್, ರಾಜಶೇಖರ್, ಮಣಿಕಂಠ, ಆರ‍್ಮುಗಮ್, ಮುಮ್ತಾಜ್ ಬೇಗಂ, ಅಂಬಿಕಾ, ಸುಬ್ರಮಣಿ ಮೇಸ್ತ್ರೀ, ಅನುಸುಧಾ ಮೋಹನ್ ಪಳನಿ, ಚೆನ್ನಪ್ಪ, ವಿ. ಕದೀರೇಶ್, ಸುದೀಪ್ ಕುಮಾರ್, ಜಾರ್ಜ್, ಮಣಿ, ಟಿಪ್ಪುಸುಲ್ತಾನ್, ಲಕ್ಷಣ, ಹಾಲೇಶ್ ಮೇಸ್ತ್ರೀ, ವೆಂಕಟೇಶ್ ಕಂಟ್ರಾಕ್ಟರ್, ಬಿ. ಉಬೆದುಲ್ಲಾ, ಶರವಣ ಮೇಸ್ತ್ರೀ, ವೆಂಕಟೇಶ್, ದೇವೇಂದ್ರ, ಸುಬ್ರಮಣಿ, ಶರವಣ ಮತ್ತು ಕುಬೇಂದ್ರಪ್ಪ ಹಾಗು ಯೂನಿಯನ್ ತಾಲೂಕು ಶಾಖಾ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಯೂನಿಯನ್ ಪ್ರಮುಖರಾದ ಉಪಾಧ್ಯಕ್ಷ ಬಿ.ಎಚ್ ನಾಗೇಂದ್ರರೆಡ್ಡಿ, ಕಾರ್ಯದರ್ಶಿ ಎಂ.ಪಿ ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷ ಬಿ.ಎಸ್ ಅಭಿಲಾಷ್, ಸಹ ಕಾರ್ಯದರ್ಶಿ ಎಂ. ಗಣೇಶ್, ಅಜೀವ ನಿರ್ದೇಶಕ ಅಂತೋಣಿ ಕ್ರೂಸ್, ಗೌರವಾಧ್ಯಕ್ಷ ಜಿ. ಸುರೇಶ್ ಕುಮಾರ್, ತಾಂತ್ರಿಕ ಸಲಹೆಗಾರ ಕೆ. ಮನೋಹರ್, ಗೌರವ ಸಲಹೆಗಾರ  ಶಿವಣ್ಣ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Thursday, January 19, 2023

ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಚಾಲನೆ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ನಗರದಲ್ಲಿ ಹೋರಾಟ ತೀವ್ರಗೊಂಡಿದ್ದು, ಗುತ್ತಿಗೆ ಕಾರ್ಮಿಕರ ಸಂಘ ಗುರುವಾರದಿಂದ ಅನಿರ್ಧಿಷ್ಟಾವಧಿ ಹೋರಾಟ ಕೈಗೊಂಡಿದೆ.
    ಭದ್ರಾವತಿ, ಜ. ೧೯: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ನಗರದಲ್ಲಿ ಹೋರಾಟ ತೀವ್ರಗೊಂಡಿದ್ದು, ಗುತ್ತಿಗೆ ಕಾರ್ಮಿಕರ ಸಂಘ ಗುರುವಾರದಿಂದ ಅನಿರ್ಧಿಷ್ಟಾವಧಿ ಹೋರಾಟ ಕೈಗೊಂಡಿದೆ.
    ಈ ಹಿಂದೆ ಸಹ ಕಾರ್ಖಾನೆ ಖಾಸಗೀಕರಣ ವಿರೋಧಿಸಿ ಕಾರ್ಮಿಕ ಸಂಘಟನೆಗಳು ಸೇರಿದಂತೆ ಕ್ಷೇತ್ರದ ವಿವಿಧ ಸಂಘ-ಸಂಸ್ಥೆಗಳು, ಮಠಮಂದಿರಗಳು, ರಾಜಕೀಯ ಪಕ್ಷಗಳು, ವಾಹನ ಚಾಲಕರು, ವ್ಯಾಪಾರಸ್ಥರು, ರೈತ ಹಾಗು ಮಹಿಳಾ ಸಂಘಟನೆಗಳು, ಗಣ್ಯರು ಸೇರಿದಂತೆ ಸಮಸ್ತ ನಾಗರೀಕರು ಸುದೀರ್ಘ ಹೋರಾಟಕ್ಕೆ ವ್ಯಾಪಕ ಬೆಂಬಲ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಖಾಸಗೀಕರಣ ಪ್ರಕ್ರಿಯೆಯಿಂದ ಹಿಂದೆ ಸರಿದಿತ್ತು. ಅಲ್ಲದೆ ರಾಜ್ಯ ಸರ್ಕಾರ ಕಾರ್ಖಾನೆಗೆ ಅಗತ್ಯವಿರುವ ಗಣ ಸಹ ಮಂಜೂರಾತಿ ಮಾಡಿತ್ತು. ಇದೀಗ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ಹುನ್ನಾರ ನಡೆಸಲಾಗುತ್ತಿದೆ ಎಂಬ ಸುದ್ದಿ ಕಳೆದ ಒಂದು ವಾರದಿಂದ ಕ್ಷೇತ್ರದಲ್ಲಿ ಆತಂಕದ ವಾತಾವರಣ ಉಂಟು ಮಾಡಿದ್ದು, ಕಾರ್ಮಿಕ ಸಂಘಟನೆಗಳು ಹೋರಾಟಕ್ಕೆ ಮುಂದಾಗಿವೆ.  
    ಗುತ್ತಿಗೆ ಕಾರ್ಮಿಕರ ಸಂಘ ಕಾರ್ಖಾನೆ ಮುಂಭಾಗ ಹೋರಾಟಕ್ಕೆ ಚಾಲನೆ ನೀಡಿದ್ದು, ಅನಿರ್ಧಿಷ್ಟಾವಧಿ ಹೋರಾಟಕ್ಕೆ ಕರೆ ನೀಡಿದೆ. ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಎಲ್ಲರೂ ಸಂಪೂರ್ಣ ಸಹಕಾರ ನೀಡುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಅಪರಾಧ ನಿಯಂತ್ರಣದಲ್ಲಿ ಯುವಕರ ಪಾತ್ರ ಅವಶ್ಯಕ : ಜಿ.ಕೆ ಮಿಥುನ್‌ಕುಮಾರ್

ಭದ್ರಾವತಿ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಗುರುವಾರ ಯುವಜನ ಜಾಗೃತಿ ಸಭೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜ. ೧೯: ಅಪರಾಧ ಪ್ರಕರಣಗಳ ನಿಯಂತ್ರಣದಲ್ಲಿ ಯುವಕರ ಪಾತ್ರ ಪ್ರಮುಖವಾಗಿದ್ದು, ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಮನವಿ ಮಾಡಿದರು.
    ಅವರು ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಯುವಜನ ಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಅಪರಾಧ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಇಲಾಖೆಗೆ ಮಾಹಿತಿ ನೀಡುವುದರಿಂದ ಹೆಚ್ಚಿನ ಅನುಕೂಲವಾಗಲಿದ್ದು, ತಪ್ಪಿತಸ್ಥರರಿಂದ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬಹುದಾಗಿದೆ. ಅಲ್ಲದೆ ಮುಂದೆ ನಡೆಯಬಹುದಾದ ಅಪರಾಧ ಪ್ರಕರಣಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದರು.
    ಯುವ ಸಮುದಾಯ ದುಶ್ಚಟಗಳಿಗೆ ಬಲಿಯಾಗದೆ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು. ಯಾವುದೇ ರೀತಿಯ ಪ್ರಚೋದನೆಗಳಿಗೆ ಒಳಗಾಗದೆ ಅಡ್ಡದಾರಿ ಹಿಡಿಯದಂತೆ ಎಚ್ಚರವಹಿಸಬೇಕೆಂದರು.


    ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ವಿದ್ಯಾರ್ಥಿ ಸಂಘಟನೆಗಳ, ಯುವ ಘಟಕಗಳ ಪ್ರಮುಖರಾದ ಮುಸ್ವೀರ್ ಬಾಷಾ, ಕೇಶವ ಮೂರ್ತಿ, ಅಫ್ತಾಬ್ ಅಹಮದ್, ಅರ್ಷದ್ ಖುರೇಶಿ, ಅಮೋಸ್, ನಕುಲ್  ಸೇರಿದಂತೆ ಇನ್ನಿತರರು ಮಾತನಾಡಿ, ಪೊಲೀಸ್ ಇಲಾಖೆ ಸಮಾಜದಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಯುವ ಸಮುದಾಯ ಹೆಚ್ಚಿನ ಸಹಕಾರ ನೀಡಿದ್ದಲ್ಲಿ ಉತ್ತಮ ಸಮಾಜ ರೂಪಿಸಲು ಸಾಧ್ಯ ಎಂದರು.
    ಸಭೆಯಲ್ಲಿ ಉಪ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ,  ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ,  ಪೊಲೀಸ್ ಇನ್ಸ್ಪೆಕ್ಟರ್ ಇ.ಓ ಮಂಜುನಾಥ್, ಶಿಲ್ಪಾ ನಾಯನೇಗಲಿ,  ಕವಿತಾ, ಸುರೇಶ್, ಶಾಂತಲಾ, ರಂಗನಾಥ ಅಂತರಗಟ್ಟಿ ಉಪಸ್ಥಿತರಿದ್ದರು.

ಹಿರಿಯೂರು ಗ್ರಾಮದಲ್ಲಿ ಕಲಿಕಾ ಹಬ್ಬ

ಭದ್ರಾವತಿ, ಜ. 19: ರಾಜ್ಯ ಸರ್ಕಾರ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಜಾರಿಗೆ ತಂದಿರುವ ಕಲಿಕಾ ಹಬ್ಬ ತಾಲೂಕಿನಾದ್ಯಂತ ಕ್ಲಸ್ಟರ್ ಮಟ್ಟದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದು, ಗುರುವಾರ ತಾಲೂಕಿನ ಹಿರಿಯೂರು ವ್ಯಾಪ್ತಿಯಲ್ಲಿ  ಕಲಿಕಾ ಹಬ್ಬ ನಡೆಯಿತು. 
     ಹಿರಿಯೂರು ಗ್ರಾಮದ  ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾತ್ರವಲ್ಲ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಕಂಡುಬಂದಿತು. ಶಿಕ್ಷಕರು ಶಾಲಾ ಮಕ್ಕಳು ಅತಿಥಿಗಳು ಮಕ್ಕಳು ತಯಾರಿಸಿದ ಕಿರೀಟಗಳನ್ನು  ಧರಿಸಿ ಸಂಭ್ರಮಿಸಿದರು. ಮತ್ತೊಂದೆಡೆ ಎತ್ತಿನ ಬಂಡಿ, ಕೋಲಾಟ, ಕಂಸಾಳೆ, ಜಾನಪದ ನೃತ್ಯ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಶಿಕ್ಷಣದ ಮಹತ್ವ ಸಾರುವ ಫಲಕಗಳನ್ನು ಹಿಡಿದು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿ ಜಾಗೃತಿ ಮೂಡಿಸಿದರು.



     ಹಿರಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ, ಶಿಕ್ಷಣ ಸಂಯೋಜಕ ರವಿಕುಮಾರ್,  ನೋಡಲ್ ಅಧಿಕಾರಿ ಕೆ.ಎಚ್ ಮೋಹನೇಶ್ ಚಾರ್, ಶಾಲೆಯ ಮುಖ್ಯ ಶಿಕ್ಷಕ ಗಿರೀಶ್, ಸುಲ್ತಾನ್ ಮಟ್ಟಿ ಶಾಲೆಯ ಶಿಕ್ಷಕ, ಜಾನಪದ ಕಲಾವಿದ ರೇವಣಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶ್ರೀಧರ ಗೌಡ, ಶಿಕ್ಷಕ, ಹವ್ಯಾಸಿ ಖಗೋಳಶಾಸ್ತ್ರಜ್ಞ ಹರೋಹಳ್ಳಿ ಸ್ವಾಮಿ, ಶಿಕ್ಷಕಿ ಪದ್ಮಾವತಿ, ಸಿ.ಚನ್ನಪ್ಪ ಸೇರಿದಂತೆ  ಒಟ್ಟು ಕ್ಲಸ್ಟರ್ ವ್ಯಾಪ್ತಿಯ 13 ಶಾಲೆಗಳ ಶಿಕ್ಷಕರು ಸುಮಾರು 150 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ಸಡಗರ ಸಂಭ್ರಮ ಕಂಡು ಬಂದಿತು.
 

Wednesday, January 18, 2023

ನೂತನ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ, ಸ್ಥಳೀಯರಿಗೆ ಉದ್ಯೋಗ ಮೀಸಲಿಡಲು ಆಗ್ರಹಿಸಿ ಮನವಿ

ಜಿಲ್ಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡು ಲೋಕಾರ್ಪಣೆಗೆ ಎದುರು ನೋಡುತ್ತಿರುವ ವಿಮಾನ ನಿಲ್ದಾಣದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಿಡಲು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನೇತೃತ್ವದಲ್ಲಿ ಬುಧವಾರ ಭದ್ರಾವತಿಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜ. ೧೮: ಜಿಲ್ಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡು ಲೋಕಾರ್ಪಣೆಗೆ ಎದುರು ನೋಡುತ್ತಿರುವ ವಿಮಾನ ನಿಲ್ದಾಣದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಿಡಲು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನೇತೃತ್ವದಲ್ಲಿ ಬುಧವಾರ ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಈ ಸಂದರ್ಭದಲ್ಲಿ ಪ್ರಮುಖರು ಮಾತನಾಡಿ, ಫೆ.೧೨ರಂದು ಜಿಲ್ಲೆಗೆ ಆಗಮಿಸುತ್ತಿರುವ ಪ್ರಧಾನಿಗಳು ವಿಮಾನ ನಿಲ್ದಾಣ ಲೋಕಾರ್ಪಣೆಗೆ ಮುಂದಾಗಿರುವುದು ಶ್ಲಾಘನೀಯ. ಆದರೆ ಕನ್ನಡಿಗರಿಗೆ, ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆ ಇರುವುದಿಲ್ಲ. ರಾಜ್ಯದಲ್ಲಿರುವ ಎಲ್ಲಾ ವಿಮಾನ ನಿಲ್ದಾಣ ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಹೊರ ರಾಜ್ಯದವರೇ ಆವರಿಸಿ ಕೊಂಡಿದ್ದಾರೆ. ಇದರಿಂದಾಗಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
    ತಕ್ಷಣ ಎಚ್ಚೆತ್ತುಕೊಂಡು ಕನ್ನಡಿಗರಿಗೆ, ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಲಾಯಿತು.
    ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತಾಲೂಕು ಅಧ್ಯಕ್ಷ ನಾಗರಾಜ್ ರಾವ್ ಶಿಂಧೆ, ಯುವ ಘಟಕದ ಅಧ್ಯಕ್ಷ ಆರ್. ತ್ಯಾಗರಾಜ್ ಅರಳಿಹಳ್ಳಿ, ಕಾರ್ಯದರ್ಶಿ ಚಿಂಪಯ್ಯ,  ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಉಪಾಧ್ಯಕ್ಷ ಮುರಳಿ, ಜಿಲ್ಲಾ ಉಪಾಧ್ಯಕ್ಷ ಸಂತೋಷ್(ಶಾಮಿಯಾನ),  ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು,  ಶರತ್ ಕುಮಾರ್, ಸುರೇಶ್, ವಿನೋದ್‌ಕುಮಾರ್, ತೀರ್ಥಕುಮಾರ್, ರಾಜೇಂದ್ರ, ಆನಂದ್, ಮಲ್ಲಿಕಾರ್ಜುನ, ವೆಂಕಟೇಶ್, ಸಿಕಂದರ್, ಸುಮಿತ್ರಮ್ಮ, ವಾಣಿ, ಬಾನುಪ್ರಿಯ, ಲಲಿತಮ್ಮ ಮತ್ತು ಐಶ್ವರ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.