Sunday, January 22, 2023

ಹಿರಿಯ ಕ್ರೀಡಾಪಟು ನಂಜೇಗೌಡರಿಗೆ ಚಿನ್ನ, ಬೆಳ್ಳಿ ಪದಕ

ಭದ್ರಾವತಿ ಹೊಸಮನೆ ನಿವಾಸಿ, ಹಿರಿಯ ಕ್ರೀಡಾಪಟು ಬಿ. ನಂಜೇಗೌಡರು ೪ನೇ ಕರ್ನಾಟಕ ರಾಜ್ಯ ಮಾಸ್ಟರ್ ಗೇಮ್ಸ್ ಪಂದ್ಯಾವಳಿ ಭಾಗವಹಿಸಿ ೨ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ, ಜ. ೨೨: ನಗರದ ಹೊಸಮನೆ ನಿವಾಸಿ, ಹಿರಿಯ ಕ್ರೀಡಾಪಟು ಬಿ. ನಂಜೇಗೌಡರು ೪ನೇ ಕರ್ನಾಟಕ ರಾಜ್ಯ ಮಾಸ್ಟರ್ ಗೇಮ್ಸ್ ಪಂದ್ಯಾವಳಿ ಭಾಗವಹಿಸಿ ೨ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಕರ್ನಾಟಕ ಮಾಸ್ಟರ‍್ಸ್ ಗೇಮ್ಸ್ ಅಸೋಸಿಯೇಷನ್ ವತಿಯಿಂದ ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ೭೫ ವರ್ಷ ಮೇಲ್ಪಟ್ಟವರ ವಯೋಮಾನದ ವಿಭಾಗದ ೧೦೦ಮೀ. ಹರ್ಡಲ್ಸ್‌ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಹಾಗು ಉದ್ದ ಜಿಗಿತದಲ್ಲಿ ೨.೫೯ ಮೀಟರ್ ಗುರಿ ಸಾಧಿಸುವ ಮೂಲಕ ದ್ವಿತೀಯ ಬಹುಮಾನ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
    ನಂಜೇಗೌಡರು ರಾಷ್ಟ್ರ, ರಾಜ್ಯ ಹಾಗು ಜಿಲ್ಲಾಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಇದುವರೆಗೂ ಸುಮಾರು ೪೦ಕ್ಕೂ ಹೆಚ್ಚು ಪದಕಗಳನ್ನು ಪಡೆದುಕೊಂಡಿದ್ದಾರೆ. ಯುವ ಸಮುದಾಯಕ್ಕೆ ಸ್ಪೂರ್ತಿದಾಯಕರಾಗಿದ್ದಾರೆ. ಇವರ ಕ್ರೀಡಾ ಸಾಧನೆಗೆ ಕ್ರೀಡಾಭಿಮಾನಿಗಳು ಸೇರಿದಂತೆ ನಗರದ ಗಣ್ಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತ ಅನಂತಕುಮಾರ್‌ಗೆ ‘ಕನ್ನಡ ತಿಲಕ’ ರಾಜ್ಯ ಪ್ರಶಸ್ತಿ

ಸಮೃದ್ಧಿ ಫೌಂಡೇಷನ್, ಕೆಂಗೇರಿ, ಕೊಮ್ಮಘಟ್ಟ, ಬೆಂಗಳೂರು ಇದರ ೯ನೇ ವಾರ್ಷಿಕೋತ್ಸವದ ಸಂಭ್ರಮ, ಕಥಾಬಿಂದು ಪ್ರಕಾಶನ ಮಂಗಳೂರು ಮತ್ತು ಕನ್ನಲ್ಲಿ ವೀರಶೈವ ನಿತ್ಯಾನ್ನ ದಾಸೋಹ ಸೇವಾ ಸಮಿತಿ ವತಿಯಿಂದ ಪಿ.ವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ  ಬೆಂಗಳೂರಿನ  ಶ್ರೀ ವೀರಭದ್ರೇಶ್ವರ ಸುಕ್ಷೇತ್ರ ಕನ್ನಲ್ಲಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಥಾಬಿಂದು ಕನ್ನಡ ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭದ್ರಾವತಿ ನಗರದ ಪತ್ರಕರ್ತ ಅನಂತಕುಮಾರ್‌ರವರಿಗೆ 'ಕನ್ನಡ ತಿಲಕ' ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
    ಭದ್ರಾವತಿ, ಜ. ೨೨: ಸಮೃದ್ಧಿ ಫೌಂಡೇಷನ್, ಕೆಂಗೇರಿ, ಕೊಮ್ಮಘಟ್ಟ, ಬೆಂಗಳೂರು ಇದರ ೯ನೇ ವಾರ್ಷಿಕೋತ್ಸವದ ಸಂಭ್ರಮ,  ಕಥಾಬಿಂದು ಪ್ರಕಾಶನ ಮಂಗಳೂರು ಮತ್ತು ಕನ್ನಲ್ಲಿ ವೀರಶೈವ ನಿತ್ಯಾನ್ನ ದಾಸೋಹ ಸೇವಾ ಸಮಿತಿ ವತಿಯಿಂದ ಪಿ.ವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ  ಬೆಂಗಳೂರಿನ  ಶ್ರೀ ವೀರಭದ್ರೇಶ್ವರ ಸುಕ್ಷೇತ್ರ ಕನ್ನಲ್ಲಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಥಾಬಿಂದು ಕನ್ನಡ ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಗರದ ಪತ್ರಕರ್ತ ಅನಂತಕುಮಾರ್‌ರವರಿಗೆ  'ಕನ್ನಡ ತಿಲಕ' ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
   ತಾವರೆಕೆರೆ ಶಿಲಾಮಠದ ಶ್ರೀ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಪತ್ರಿಕಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
       ಕನ್ನಲ್ಲಿ ವೀರಶೈವ ನಿತ್ಯನ್ನ ದಾಸೋಹ ಸೇವಾ ಸಮಿತಿ ಅಧ್ಯಕ್ಷ ಡಾ. ಶಾಂತರಾಜು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮರಳು ಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ  ಸಿದ್ದಲಿಂಗಯ್ಯ, ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಪಿ. ವಿ. ಪ್ರದೀಪ್ ಕುಮಾರ್, ಸಮೃದ್ಧಿ ಫೌಂಡೇಷನ್ ಅಧ್ಯಕ್ಷ ರುದ್ರಾರಾಧ್ಯ, ಲಕ್ಷ್ಮಿಕಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುಮಾರು ೩೦ಕ್ಕೂ ಮಂದಿಗೆ 'ಕನ್ನಡ ತಿಲಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುಮಾರು ೩೫ಕ್ಕೂ ಮಂದಿ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಕವಿತೆಗಳನ್ನು ವಾಚಿಸಿದರು. ಬಿ.ಎಂ ಮಾಣಿಯಾಟ್‌ರವರ ಅಧಿಕಾರ ಕಾದಂಬರಿ, ದಿವ್ಯಮಯ್ಯರವರ ಪರಶುರಾಮ ಕ್ಷೇತ್ರ ಮತ್ತು ಮೈಸೂರು ಟಿ. ತ್ಯಾಗರಾಜುರವರ ಜೀವ ಭಾವ ಕವನ ಸಂಕಲನ ಪುಸ್ತಕಗಳು ಬಿಡುಗಡೆಗೊಂಡವು.
    ಸಮ್ಮೇಳನ ಸಂಚಾಲಕರಾಗಿ ರೇಖಾ ಸುದೇಶ್ ರಾವ್, ಕವಿಗೋಷ್ಠಿ ಸಂಚಾಲಕರಾಗಿ ಆಶಾ ಶಿವು, ಸುನೀತಾ ಪ್ರದೀಪ್‌ಕುಮಾರ್ ಮತ್ತು ದರ್ಶಿನಿ ಆರ್ ಪ್ರಸಾದ್, ಕೆ.ಎ ಬಿಂದು, ರೇಷ್ಮಶೆಟ್ಟಿ ಗೊರೂರು ಹಾಗು ಪೂರ್ಣಿಮಾ ನಿರೂಪಿಸಿದರು.  

Saturday, January 21, 2023

ವಿಐಎಸ್‌ಎಲ್ ಕಾರ್ಖಾನೆಗೆ ಬಂಡವಾಳ ತೊಡಗಿಸದಿರುವುದು ಮುಚ್ಚುವ ಸ್ಥಿತಿಗೆ ಕಾರಣ

ಬಂಡವಾಳ ತೊಡಗಿಸಿ ಉದ್ಯೋಗ ನೀಡಿ, ಇಲ್ಲವಾದಲ್ಲಿ ದಯಾಮರಣಕ್ಕೆ ಅರ್ಜಿ

ಭದ್ರಾವತಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಶನಿವಾರ ೩ನೇ ದಿನಕ್ಕೆ ಕಾಲಿಟ್ಟಿದೆ.
    ಭದ್ರಾವತಿ, ಜ.೨೧: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸದಿರುವುದೇ ಪ್ರಸ್ತುತ ಕಾರ್ಖಾನೆ ಮುಚ್ಚುವ ಸ್ಥಿತಿಗೆ ಕಾರಣ ಎಂದು ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್.ಜಿ ಸುರೇಶ್ ಆರೋಪಿಸಿದರು.
     ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಆಧುನೀಕರಣಗೊಳಿಸಿದಲ್ಲಿ ಕಾರ್ಖಾನೆಯನ್ನು ಲಾಭದಾಯಕವಾಗಿ ಮುನ್ನಡೆಸಿಕೊಂಡು ಹೋಗಲು ಸಾಧ್ಯ. ಕೇಂದ್ರ ಸರ್ಕಾರ ಬಂಡವಾಳ ಹೂಡುವುದಾಗಿ ಕೇವಲ ಭರವಸೆಗಳನ್ನು ನೀಡಿತು ಹೊರತು ಅದನ್ನು ಕಾರ್ಯಗತಗೊಳಿಸಲಿಲ್ಲ. ಇದರಿಂದಾಗಿ ಪ್ರಸ್ತುತ ಕಾರ್ಖಾನೆ ಮುಚ್ಚುವ ಸ್ಥಿತಿಗೆ ತಲುಪಿದೆ ಎಂದರು.
     ಬಿಎಸ್‌ವೈ  ಇಚ್ಛಾಶಕ್ತಿ  ಪ್ರದರ್ಶಿಸುತ್ತಿಲ್ಲ:
    ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಕಾರ್ಖಾನೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಚ್ಛಾಶಕ್ತಿ ತೋರಿಸುತ್ತಿಲ್ಲ. ಕಾರ್ಖಾನೆ ಸ್ಥಿತಿಗತಿ ಕುರಿತ ಮಾಹಿತಿ ಕೊರತೆಯು ಕಾರಣವಿರಬಹುದು. ಈಗಲೂ ಸಹ ಮನಸ್ಸು ಮಾಡಿದರೆ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.
     ಕಾರ್ಖಾನೆ ಮುಚ್ಚುವ ಸುದ್ದಿಯಿಂದ ಆತಂಕ: ಓರ್ವ ಕಾರ್ಮಿಕ ಹೃದಯಾಘಾತದಿಂದ ಸಾವು
  ಪ್ರಸ್ತುತ ಕಾರ್ಖಾನೆ ಮುಚ್ಚುವ ಸುದ್ದಿಯಿಂದ ಕಾರ್ಮಿಕ ವಲಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.  ಗುತ್ತಿಗೆ ಕಾರ್ಮಿಕರಿಗೆ ದಿಕ್ಕು ಕಾಣದಂತಾಗಿದೆ. ಕಾರ್ಖಾನೆಯ ಕ್ರೇನ್ಸ್ ವಿಭಾಗದಲ್ಲಿ ಕೆಲಸ ಮಾಡುವ ಸುಮಾರು ೪೦ ವರ್ಷದ ಹೇಮಗಿರಿ ಎಂಬ ಗುತ್ತಿಗೆ ಕಾರ್ಮಿಕ ಕಾರ್ಖಾನೆ ಮುಚ್ಚುವ ಸುದ್ದಿಯಿಂದ ಹೃದಯಘಾತಗೊಂಡು ಮೃತಪಟ್ಟಿದ್ದಾನೆ.  ಇದೀಗ ಈತನ ಕುಟುಂಬ ಬೀದಿಗೆ ಬಿದ್ದಿದೆ ಎಂದು ಅಳಲು ತೋರ್ಪಡಿಸಿಕೊಂಡರು.
   ದಯಾಮರಣಕ್ಕೆ ಅರ್ಜಿ:
  ಪ್ರಸ್ತುತ ಕಾರ್ಖಾನೆಯಲ್ಲಿ ಸುಮಾರು ೧೫೦೦ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಒಂದು ವೇಳೆ ಕಾರ್ಖಾನೆ, ಮುಚ್ಚಲ್ಪಟ್ಟಲ್ಲಿ ಕಾರ್ಮಿಕರು ಉದ್ಯೋಗವಿಲ್ಲದೆ ಬೀದಿ ಪಾಲಾಗುವುದು ಖಚಿತವಾಗಿದೆ. ಭವಿಷ್ಯದಲ್ಲಿ ನಮಗೆ ಉದ್ಯೋಗ ಸಿಗುವ ಯಾವುದೇ ಭರವಸೆಗಳು ಸಹ ಇಲ್ಲವಾಗಿದೆ ಈ ಹಿನ್ನಲೆಯಲ್ಲಿ ನಾವೆಲ್ಲರೂ ಸರ್ವೋಚ್ಚ ನ್ಯಾಯಾಲಯಕ್ಕೆ ದಯಾಮರಣ ಕೋರಿ ಅರ್ಜಿ ಸಲ್ಲಿಸಲಿದ್ದೇವೆ. ಈಗಲಾದರೂ ಸರ್ಕಾರ ಕಾರ್ಖಾನೆಗೆ ಬಂಡವಾಳ ತೊಡಗಿಸಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಮನವಿ ಮಾಡಿದರು.
    ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಆರ್. ಮಂಜುನಾಥ್, ಪಿ. ರಾಕೇಶ್, ವಿ. ಗುಣಶೇಖರ್, ಎನ್.ಆರ್ ವಿನಯ್‌ಕುಮಾರ್, ಅಂತೋಣಿದಾಸ್, ಜಿ. ಆನಂದ್, ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಜೆ ವಾಸುದೇವ, ಶಂಕರಲಿಂಗೇಗೌಡ, ಎನ್.ಕೆ ಮಂಜುನಾಥ್, ಪ್ರಸನ್ನಬಾಬು, ನಂಜೇಗೌಡ, ಜೆ. ಕಿರಣ, ಶಿವಣ್ಣಗೌಡ, ಬಿ. ದೇವರಾಜ, ಆರ್. ಅರುಣ, ಪಿ. ಅವಿನಾಶ್, ಶೇಷಪ್ಪಗೌಡ, ಸುಬ್ರಮಣಿ, ಹಿರಿಯ ಕಾರ್ಮಿಕ ಮುಖಂಡ ಎಂ. ನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಅನಿರ್ಧಿಷ್ಟಾವಧಿ ಹೋರಾಟ ೩ನೇ ದಿನಕ್ಕೆ :
    ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಶನಿವಾರ ೩ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ವಿವಿಧ ಸಂಘ-ಸಂಸ್ಥೆಗಳು ಕಾರ್ಮಿಕರ ಹೋರಾಟ ಬೆಂಬಲ ವ್ಯಕ್ತಪಡಿಸಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಿವೆ. ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸುವುದಾಗಿ ಗುತ್ತಿಗೆ ಕಾರ್ಮಿಕರ ಸಂಘ ಸ್ಪಷ್ಟಪಡಿಸಿದೆ.


ಕಾರ್ಖಾನೆಯ ಕ್ರೇನ್ಸ್ ವಿಭಾಗದಲ್ಲಿ ಕೆಲಸ ಮಾಡುವ ಸುಮಾರು ೪೦ ವರ್ಷದ ಹೇಮಗಿರಿ ಎಂಬ ಗುತ್ತಿಗೆ ಕಾರ್ಮಿಕ ಕಾರ್ಖಾನೆ ಮುಚ್ಚುವ ಸುದ್ದಿಯಿಂದ ಹೃದಯಘಾತಗೊಂಡು ಮೃತಪಟ್ಟಿದ್ದಾನೆ.  

903ನೇ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ

ಭದ್ರಾವತಿ,ಜ.21:  ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗು ಗಂಗಾಮತಸ್ಥರ ಸಂಘದ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ  ಶನಿವಾರ 903ನೇ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು.
     ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಕಾರ್ಯಕ್ರಮ ಉದ್ಘಾಟಿಸಿದರು. ಗಂಗಾಮತಸ್ಥರ ಸಂಘದ ಅಧ್ಯಕ್ಷ ಎಚ್.ಎ ಪರಮೇಶ್ವರಪ್ಪ ಆದ್ಯಕ್ಷತೆವಹಿಸಿದ್ದರು. 
    ತಹಸೀಲ್ದಾರ್  ಆರ್. ಪ್ರದೀಪ್, ಉಪ ತಹಸೀಲ್ದಾರ್  ಮಂಜನಾಯ್ಕ, ಅರಸು, ಶಿರಸ್ತೇದಾರ್ ರಾಧಾಕೃಷ್ಣಭಟ್, ಗಂಗಾಮತಸ್ಥರ ಸಂಘದ ಉಪಾಧ್ಯಕ್ಷರಾದ ಕೆ.ಎಂ ಅಣ್ಣಯ್ಯ, ಎಸ್. ಶಿವಕುಮಾರ್,  ಪ್ರಧಾನ ಕಾರ್ಯದರ್ಶಿ ಬಿ.ಆರ್ ಯಲ್ಲಪ್ಪ, ಕಾರ್ಯದರ್ಶಿ ಎಚ್.ಸಿ ಬೇಲೂರಪ್ಪ,   ಖಜಾಂಚಿ ವೈ.ಆರ್ ಮಂಜುನಾಥ್ ಯರೇಹಳ್ಳಿ, ಸಂಘಟನಾ ಕಾರ್ಯದರ್ಶಿಗಳಾದ ನಾಗರತ್ನ ಮತ್ತು ಮಂಜುಳಾ ಸೇರಿದಂತೆ ನಿರ್ದೇಶಕರು ಹಾಗು ತಾಲೂಕು ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜ.22ರಂದು ನಗರಕ್ಕೆ ಎಐಸಿಸಿ ಕಾರ್ಯದರ್ಶಿ ಆಗಮನ


ಭದ್ರಾವತಿ, ಜ. 21: ಎಐಸಿಸಿ ಕಾರ್ಯದರ್ಶಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ವೀಕ್ಷಕ ಡಾ. ಸಿರಿ ವೆಳ್ಳಾಪ್ರಸಾದ್ ಜ.22ರಂದು ನವ ದೆಹಲಿಯಿಂದ ನಗರಕ್ಕೆ ಆಗಮಿಸಲಿದ್ದಾರೆ.
     ಈ ಸಂಬಂಧ ಬೆಳಗ್ಗೆ 10.30 ಕ್ಕೆ ಶಾಸಕರ ಗೃಹ ಕಚೇರಿಯಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ ಪಕ್ಷದ ಎಲ್ಲಾ ಹಾಲಿ ಮತ್ತು ಮಾಜಿ ಚುನಾಯಿತ ಜನ ಪ್ರತಿನಿಧಿಗಳು, ಪಕ್ಷದ ನಗರ ಹಾಗೂ ಗ್ರಾಮಾಂತರ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಕಾಂಗ್ರೆಸ್   ಮತ್ತು ಯುವ ಕಾಂಗ್ರೆಸ್ ಸೇರಿದಂತೆ ಪಕ್ಷದ ಎಲ್ಲಾ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.

ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಲ್ಲಿ ಐತಿಹಾಸಿಕ ಸಾಧನೆ : ಆರ್. ವೇಣುಗೋಪಾಲ್

ಆರ್. ವೇಣುಗೋಪಾಲ್ 
    ಭದ್ರಾವತಿ, ಜ. ೨೧:   ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಳೆದ ೬೫ ವರ್ಷಗಳಿಂದ ಹಿಂದುಳಿದ ವರ್ಗ ಹಾಗೂ ದಲಿತ ವರ್ಗದವರ ಸಹಕಾರದಿಂದ ಪ್ರಬಲ ಮೂರು ಕೋಮಿನವರು ಶಾಸಕರಾಗಿ ಆಯ್ಕೆಯಾಗುತ್ತಾ ಬರುತ್ತಿದ್ದು,  ವಿಧಾನಸಭಾ ಕ್ಷೇತ್ರದ ಶೇಕಡ ೭೫ಕ್ಕೂ ಅಧಿಕ ಪ್ರಜ್ಞಾವಂತ ಮತದಾರರು ಈ ಬಾರಿ ನಡೆಯಲಿರುವ  ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ  ಯಾವುದೇ ಅಮಿಷಕ್ಕೆ ಒಳಗಾಗದೆ ಅಬ್ಬರದ ಪ್ರಚಾರ, ಭಾಷಣಕ್ಕೆ ಮನ್ನಣೆ ನೀಡದೇ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಾಳಜಿ ಇರುವ ಇತರೆ ಜನಾಂಗದ ಹೊಸ ಪ್ರತಿಭೆಯನ್ನು ಆಯ್ಕೆ ಮಾಡಲು ತೀರ್ಮಾನಿಸಿರುವುದು ತಿಳಿದು ಬಂದಿರುವುದರಿಂದ ಈ ಬಾರಿ ಚುನಾವಣೆಯಲ್ಲಿ ಹಿಂದುಳಿದ ವರ್ಗದ ಅಭ್ಯರ್ಥಿಯಾಗಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಮನವಿ ಮಾಡಿದ್ದಾರೆ.
    ಅವರು  ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿ, ಮುಂಬರುವ ೨೦೨೩ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ  ದಲಿತ ವರ್ಗದ ಅಭ್ಯರ್ಥಿ ಗೆಲ್ಲಬೇಕೆಂಬುದು ನನ್ನ ಅಭಿಲಾಷೆಯಾಗಿದ್ದು, ಈ ಹಿನ್ನೆಲೆಯಿಂದ ಹಿಂದುಳಿದ ವಿಶ್ವಕರ್ಮ ಜನಾಂಗಕ್ಕೆ ಸೇರಿದ ನನಗೆ ಅವಕಾಶ ನೀಡಬೇಕೆಂದರು.
  ಸುಮಾರು ೨ ಲಕ್ಷಕ್ಕೂ ಅಧಿಕ ಮತದಾರರಿದ್ದು, ಇದರಲ್ಲಿ ಸುಮಾರು ಒಂದು ಲಕ್ಷದ ಐವತ್ತು ಸಾವಿರಕ್ಕೂ ಅಧಿಕ ಹಿಂದುಳಿದ ವರ್ಗ, ದಲಿತ, ಅಲ್ಪಸಂಖ್ಯಾತ ಮತದಾರರು ಒಳಗೊಂಡಿದ್ದಾರೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಕಳೆದ  ಸುಮಾರು ೪೫ ವರ್ಷಗಳಿಂದ ನಾನು ಎಲೆಮರೆಯ ಕಾಯಿಯಂತೆ  ಶ್ರಮಿಸುತ್ತಿದ್ದು,  ನನ್ನನ್ನು ಬೆಂಬಲಿಸುವ ವಿಶ್ವಾಸ ಹೊಂದಿದ್ದೇನೆ ಎಂದರು.
    ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ನನಗೆ  ಲಕ್ಷಾಂತರ ಜನರಿಗೆ ಮೂಲಭೂತ ಸೌಕರ್ಯ ಒದಗಿಸಿಕೊಟ್ಟಿರುವ ಹೆಮ್ಮೆ ಇದೆ. ನಗರಸಭೆಯಲ್ಲಿ ೨ ಬಾರಿ ಪಕ್ಷೇತರ  ಸದಸ್ಯನಾಗಿ, ಒಂದು ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷನಾಗಿ, ಒಮ್ಮೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಅಲ್ಲದೆ ವಿವಿಧ ಸಂಘಸಂಸ್ಥೆಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಶಿವಮೊಗ್ಗ ಜಿಲ್ಲಾ ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಹಾಗೂ ಎರಡು ಬಾರಿ ಉಪಚುನಾವಣೆಯಲ್ಲಿ ಬಿ.ಜೆ.ಪಿ ಪರವಾಗಿ ಶಕ್ತಿ ಮೀರಿ ಶ್ರಮಿಸಿರುತ್ತೇನೆ. ಪದವೀದರ ಹಾಗೂ ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ನಡೆದ ವಿಧಾನಪರಿಷತ್ ಶಾಸಕರ ಚುನಾವಣೆಯಲ್ಲಿ ಆಯನೂರು ಮಂಜುನಾಥ್ ಹಾಗೂ ಡಿ.ಎಸ್ ಅರುಣ್ ರವರ ಪರವಾಗಿ ಕೆಲಸ ಮಾಡಿರುತ್ತೇನೆ. ಈ ಹಿನ್ನಲೆಯಲ್ಲಿ ನನಗೆ ಸ್ಪರ್ಧಿಸಲು ಅವಕಾಶ ನೀಡಿದ್ದಲ್ಲಿ ಹೆಚ್ಚಿನ ಮತಗಳನ್ನು ಪಡೆದು ಗೆಲುವು ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡುವ ವಿಶ್ವಾಸವಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಯೂನಸ್ ಬೇಗ, ಮಜರ್ ಉಲ್ಲಾ, ಎಸ್.ಎ ಜೇವಿಯರ್, ಪ್ರಸನ್ನ ಹಾಗು ಮಹಬೂಬ್ ಬಾಷ ಉಪಸ್ಥಿತರಿದ್ದರು.

‎ ಬಿಜೆಪಿಯಿಂದ ಮಂಗೋಟೆ ರುದ್ರೇಶ್ ಸ್ಪರ್ಧಿಸಲು ಅವಕಾಶ ನೀಡಿ : ಬಿಎಸ್ ವೈಗೆ ಮನವಿ

   ಭದ್ರಾವತಿ, ಜ. 21: ನಗರದ ಬಿಜೆಪಿ ಯುವ ಮುಖಂಡ ನ್ಯಾಯವಾದಿ, ಮಂಗೋಟೆ ರುದ್ರೇಶ್ ಈ ಬಾರಿ ವಿಧಾನಸಭಾ ಚುನಾವಣೆಗೆ ಭದ್ರಾವತಿ ವಿಧಾನಸಭಾ ಕ್ಷೇತ್ರದಿಂದ ಪಕ್ಷದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಅಭಿಮಾನಿಗಳು  ಹಿತೈಷಿಗಳು ಮನವಿ ಮಾಡಿದ್ದಾರೆ. 
   ವಿವಿಧ ಸಮಾಜಗಳ ಸುಮಾರು ನೂರಕ್ಕೂ ಹೆಚ್ಚು ಅಭಿಮಾನಿಗಳು,  ಹಿತೈಷಿಗಳು ಮನವಿ ಮಾಡಿ,  ಮಂಗೋಟೆ ರುದ್ರೇಶ್  ಈ ಬಾರಿ ಪಕ್ಷದಿಂದ  ಸ್ಪರ್ಧಿಸಿದ್ದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯ. ಈಗಾಗಲೇ  ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಒಂದು ಬಾರಿ ಅವಕಾಶ ಮಾಡಿಕೊಡುವಂತೆ ಕೋರಿದ್ದಾರೆ.
     ಸಚಿವ ಬೈರತಿ ಬಸವರಾಜ್ ಸಂಸದ ಬಿ ವೈ ರಾಘವೇಂದ್ರ ಮುಖಂಡರಾದ ಸಿದ್ದಲಿಂಗಯ್ಯ, ಜ್ಯೋತಿ ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.