ಬಾಯಿ ಬಡಿದುಕೊಂಡು ಪ್ರತಿಭಟನೆ, ಮಾಜಿ ಸೈನಿಕರ ಸಂಘ ಬೆಂಬಲ, ಮೋದಿಗೆ ಎಚ್‌ಡಿಡಿ ಪತ್ರ
ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರ ಸಂಘ ಕಾರ್ಖಾನೆ ಮುಂಭಾಗ ಕೈಗೊಂಡಿರುವ ಅನಿರ್ಧಿಷ್ಟಾವಧಿ ಹೋರಾಟ ಮಂಗಳವಾರ ೬ನೇ ದಿನಕ್ಕೆ ಕಾಲಿಟ್ಟಿತು. ಗುತ್ತಿಗೆ ಕಾರ್ಮಿಕರು ಬಾಯಿ ಬಡಿದುಕೊಂಡು ಪ್ರತಿಭಟಿಸಿದರು.
ಭದ್ರಾವತಿ, ಜ. ೨೪ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರ ಸಂಘ ಕಾರ್ಖಾನೆ ಮುಂಭಾಗ ಕೈಗೊಂಡಿರುವ ಅನಿರ್ಧಿಷ್ಟಾವಧಿ ಹೋರಾಟ ಮಂಗಳವಾರ ೬ನೇ ದಿನಕ್ಕೆ ಕಾಲಿಟ್ಟಿತು.
ಮಧ್ಯಾಹ್ನ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಗುತ್ತಿಗೆ ಕಾರ್ಮಿಕರು ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ದರಿದ್ದಾರೆ. ಬೇಡಿಕೆ ಈಡೇರುವವರೆಗೂ ಹೋರಾಟ ನಡೆಯಲಿದೆ. ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ. ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸುವಂತೆ ಮನವಿ ಮಾಡಿದರು.
ಬಾಯಿ ಬಡಿದುಕೊಂಡು ಪ್ರತಿಭಟನೆ :
ಗುತ್ತಿಗೆ ಕಾರ್ಮಿಕರು ಕೇಂದ್ರ ಸರ್ಕಾರ ಹಾಗು ಉಕ್ಕು ಪ್ರಾಧಿಕಾರ ಮತ್ತು ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಧಿಕ್ಕಾರ ಕೂಗುವ ಜೊತೆಗೆ ಬಾಯಿ ಬಡಿದುಕೊಂಡು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಉಕ್ಕಿನ ನಗರ ಮಾಜಿ ಸೈನಿಕರ ಸಂಘ ಬೆಂಬಲ :
ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಉಕ್ಕಿನ ನಗರ ಮಾಜಿ ಸೈನಿಕರ ಸಂಘ ಬೆಂಬಲ ಸೂಚಿಸಿದೆ.
ಹೋರಾಟದ ಸ್ಥಳಕ್ಕೆ ಆಗಮಿಸಿದ ಸಂಘದ ಪದಾಧಿಕಾರಿಗಳು ಮಾತನಾಡಿ, ಕಾರ್ಖಾನೆ ಮುಚ್ಚುವ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು. ಕೇಂದ್ರ ಸರ್ಕಾರ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಅಭಿವೃದ್ಧಿಪಡಿಸಬೇಕು. ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಸಂಘ ಸಂಪೂರ್ಣವಾಗಿ ಬೆಂಬಲ ನೀಡುತ್ತದೆ ಎಂದು ಸಂಘದ ಕಾರ್ಯದರ್ಶಿ ವಿನೋದ್ ಪೂಜಾರಿ ಭರವಸೆ ನೀಡಿದರು.
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಪ್ರಧಾನಿ ಮೋದಿಗೆ ಪತ್ರ :
ಪ್ರಧಾನಮಂತ್ರಿ ನಗರೇಂದ್ರ ಮೋದಿಯವರಿಗೆ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚದಿರುವಂತೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಪತ್ರ ಬರೆದಿದ್ದಾರೆ. ಇತ್ತೀಚೆಗೆ ಕಾರ್ಖಾನೆಯ ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರು, ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ ನೇತೃತ್ವದಲ್ಲಿ ದೇವೇಗೌಡರಿಗೆ ಮನವಿ ಸಲ್ಲಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಒತ್ತಾಯಿಸುವಂತೆ ಕೋರಿದ್ದರು. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ದೇವೇಗೌಡರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಕಾರ್ಖಾನೆ ಮುಚ್ಚುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈ ಬಿಡಬೇಕು. ದೇಶಕ್ಕೆ ಅತ್ಯುನ್ನತ ಕೊಡುಗೆಯಾಗಿರುವ ಕಾರ್ಖಾನೆಯ ಮುಚ್ಚುವ ತೀರ್ಮಾನ ಸಮಂಜಸವಲ್ಲ. ರಾಜ್ಯದ ಏಕೈಕ ಸಾರ್ವಜನಿಕ ಸ್ವಾಮ್ಯದ ಉದ್ದಿಮೆ ಇದಾಗಿದೆ. ಕಾರ್ಖಾನೆ ಮರು ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಆತ್ಮನಿರ್ಭರ ಭಾರತದ ಪರಿಕಲ್ಪನೆಗೆ ಪೂರಕವಾಗಿ ಈ ಕಾರ್ಖಾನೆ ಅನೇಕ ಕೊಡುಗೆಗಳನ್ನು ನೀಡುವ ಸಾಮರ್ಥ್ಯ ಹೊಂದಿದೆ. ರಕ್ಷಣಾ ವಲಯ, ನ್ಯೂಕ್ಲಿಯರ್, ರೈಲ್ವೆ ಮುಂತಾದ ವಿಭಾಗದಲ್ಲಿ ಈ ಕಾರ್ಖಾನೆಯಿಂದ ಮಹತ್ವದ ಸಹಕಾರ ದೊರೆಯಲಿದೆ. ಮುಖ್ಯವಾಗಿ ೨೦ ಸಾವಿರಕ್ಕೂ ಹೆಚ್ಚು ಕುಟುಂಬಗಳು ಇದೇ ಕಾರ್ಖಾನೆಯನ್ನು ಅವಲಂಬಿಸಿವೆ. ಈ ಹಿನ್ನಲೆಯಲ್ಲಿ ಕಾರ್ಖಾನೆ ಮುಚ್ಚುವ ನಿರ್ಧಾರ ಕೈಬಿಡುವಂತೆ ಮನವರಿಕೆ ಮಾಡಿದ್ದಾರೆ.