Saturday, January 28, 2023

೧೦ ದಿನ ಪೂರೈಸಿದ ಗುತ್ತಿಗೆ ಕಾರ್ಮಿಕರ ಹೋರಾಟ : ಪಡಿತರ ವಿತರಕರ ಬೆಂಬಲ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಶನಿವಾರ ೧೦ ದಿನ ಪೂರೈಸಿದ್ದು, ಹೋರಾಟಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿತು.
    ಭದ್ರಾವತಿ, ಜ. ೨೮: ನಗರದ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಶನಿವಾರ ೧೦ ದಿನ ಪೂರೈಸಿದ್ದು, ಹೋರಾಟಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿತು.
    ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ ಮಾತನಾಡಿ, ವಿಐಎಸ್‌ಎಲ್ ಕಾರ್ಖಾನೆ ಹೋರಾಟಕ್ಕೆ ಸಂಘ ಸಂಪೂರ್ಣವಾಗಿ ಬೆಂಬಲ ನೀಡಲಿದೆ. ಯಾವುದೇ ರೀತಿಯ ಹೋರಾಟಕ್ಕೂ ಸಿದ್ದವಿದೆ. ಸರ್ಕಾರ ತಕ್ಷಣ ಮುಚ್ಚುವ ಆದೇಶ ಹಿಂಪಡೆಯಬೇಕು. ಅಗತ್ಯವಿರುವ ಬಂಡವಾಳ ತೊಡಗಿಸಬೇಕೆಂದು ಆಗ್ರಹಿಸಿದರು.
ಸಂಘದ ನಿರ್ದೇಶಕ, ನ್ಯಾಯವಾದಿ ಟಿ. ಚಂದ್ರೇಗೌಡ ಮಾತನಾಡಿ, ನಮ್ಮದು ಪಕ್ಷಾತೀತ ಹೋರಾಟವಾಗಬೇಕು. ರಾಜಕೀಯ ಬದಿಗಿಟ್ಟು ಎಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕೆ ಮುಂದಾಗಬೇಕು. ಕಾರ್ಮಿಕ ವಿರೋಧಿ ನೀತಿ ಅನುಸರಿಸುವ ಯಾವುದೇ ಸರ್ಕಾರವಿರಲಿ ಅದರ ವಿರುದ್ಧ ಜನರು ಹೋರಾಟಕ್ಕೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಹೋರಾಟಕ್ಕೆ ಸಂಪೂರ್ಣವಾಗಿ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
    ಸಂಘದ ಪ್ರಮುಖರಾದ ಜಿಲ್ಲಾ ಕಾರ್ಯದರ್ಶಿ ಜವರಾಯಿ, ನಿರ್ದೇಶಕ ವಾಗೀಶ್, ನಾಗರತ್ನ, ಸಚ್ಚಿದಾನಂದ ಗುಪ್ತ, ಉಮೇಶ್, ಪ್ರಕಾಶ್, ಎಸ್.ಕೆ ಸುಧೀಂದ್ರ, ಎಎಪಿ ಎಚ್. ರವಿಕುಮಾರ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಪಂಜಿನ ಮೆರವಣಿಗೆ :
    ಕಾರ್ಖಾನೆ ಮುಂಭಾಗ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ಶುಕ್ರವಾರ ರಾತ್ರಿ ನಗರದ ಪ್ರಮುಖ ರಸ್ತೆಗಳಲ್ಲಿ ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
    ಹೋರಾಟ ಸ್ಥಳದಿಂದ ಆರಂಭಗೊಂಡ ಮೆರವಣಿಗೆ ವಿಐಎಸ್‌ಎಲ್ ಡಬ್ಬಲ್ ರಸ್ತೆಯಲ್ಲಿ ಸಾಗಿ ಹೊಸಸೇತುವೆ ರಸ್ತೆ ಮೂಲಕ ತಾಲೂಕು ಕಛೇರಿ ರಸ್ತೆ, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ ಮೂಲಕ ಅಂಡರ್‌ಬ್ರಿಡ್ಜ್ ಅಂಬೇಡ್ಕರ್ ವೃತ್ತದಲ್ಲಿ ಅಂತ್ಯಗೊಂಡಿತು. ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಗುತ್ತಿಗೆ ಕಾರ್ಮಿಕರು ಹಾಗು ಮಹಿಳೆಯರು ಪಾಲ್ಗೊಂಡಿದ್ದರು.


ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಮುಂಭಾಗ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ಶುಕ್ರವಾರ ರಾತ್ರಿ ನಗರದ ಪ್ರಮುಖ ರಸ್ತೆಗಳಲ್ಲಿ ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.


ವಿಐಎಸ್‌ಎಲ್-ಎಂಪಿಎಂ ಕಾರ್ಖಾನೆ ಉಳಿಸುವ ಹೋರಾಟಕ್ಕೆ ಎಲ್ಲರೂ ಕೈಜೋಡಿಸಿ

ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಭದ್ರಾವತಿ ಹಳೇನಗರದ ವೀರಶೈವ ಸಭಾಭವನದಲ್ಲಿ ಶನಿವಾರ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆ ಉಳಿಸಲು ಸರ್ವ ಸಮಾಜದ ಮತ್ತು ಸಂಘ-ಸಂಸ್ಥೆಗಳ, ಕಾರ್ಮಿಕರ ಪೂರ್ವಭಾವಿ ಸಭೆ ಜರುಗಿತು.
    ಭದ್ರಾವತಿ, ಜ. ೨೮ : ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದು ಬಹುತೇಕ ಮುಖಂಡರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.


    ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಹಳೇನಗರದ ವೀರಶೈವ ಸಭಾಭವನದಲ್ಲಿ ಶನಿವಾರ ಜರುಗಿದ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆ ಉಳಿಸಲು ಸರ್ವ ಸಮಾಜದ ಮತ್ತು ಸಂಘ-ಸಂಸ್ಥೆಗಳ, ಕಾರ್ಮಿಕರ ಪೂರ್ವಭಾವಿ ಸಭೆಯಲ್ಲಿ  ಪ್ರಮುಖರಾದ ಟಿ. ಚಂದ್ರೇಗೌಡ, ಶಿವಮಾಧು, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಸೇರಿದಂತೆ ಮಾತನಾಡಿ, ಪ್ರಸ್ತುತ ಉಕ್ಕು ಪ್ರಾಧಿಕಾರ ಕಾರ್ಖಾನೆ ಮುಚ್ಚುವ ಅಂತಿಮ ಸಿದ್ದತೆಗೆ ಮುಂದಾಗಿದೆ. ಈ ಹಿಂದೆ ಕಾರ್ಖಾನೆ ಉಳಿಸುವ ಸಂಬಂಧ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದರೂ ಸಹ ಕಾರ್ಖಾನೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಉಕ್ಕು ಪ್ರಾಧಿಕಾರ ನಿರ್ಲಕ್ಷ್ಯತನದಿಂದ ವರ್ತಿಸುತ್ತಿದ್ದು, ಅಲ್ಲದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದರ ಪರಿಣಾಮ ಪ್ರಸ್ತುತ ಕಾರ್ಖಾನೆ ಮುಚ್ಚುವ ಹಂತಕ್ಕೆ ತಲುಪಿದೆ ಎಂದರು.
    ಇದೀಗ ಕಾರ್ಖಾನೆಯನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಕಾರ್ಖಾನೆ ಕೇವಲ ಕಾರ್ಮಿಕರಿಗೆ ಮಾತ್ರ ಸೇರಿಲ್ಲ. ಎಲ್ಲರಿಗೂ ಸೇರಿದ್ದಾಗಿದೆ. ರಾಜಕೀಯ ಬದಿಗಿಟ್ಟು, ಪಕ್ಷ ಭೇದ ಮರೆತು ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು. ಯಾವುದೇ ರೀತಿಯ ಹೋರಾಟಕ್ಕೂ ಎಲ್ಲರೂ ಸಿದ್ದರಾಗಬೇಕೆಂದರು.


    ಪ್ರಮುಖರಾದ ಹಿರಿಯ ಕಾರ್ಮಿಕ ಮುಖಂಡರಾದ ಡಿ.ಸಿ ಮಾಯಣ್ಣ, ಕಾಳೇಗೌಡ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು.


Friday, January 27, 2023

ಕಾರ್ಖಾನೆಗಳು ದೇವಸ್ಥಾನ, ಯಾವುದೇ ಕಾರಣಕ್ಕೂ ಮುಚ್ಚಲು ಅವಕಾಶ ನೀಡಬಾರದು : ಶ್ರೀ ವಿನಯ್ ಗುರೂಜಿ

೯ ದಿನ ಪೂರೈಸಿದ ಗುತ್ತಿಗೆ ಕಾರ್ಮಿಕರ ಹೋರಾಟ : ಎಚ್.ಆರ್ ಬಸವರಾಜಪ್ಪ, ಎಎಪಿ ಬೆಂಬಲ 

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ೯ನೇ ದಿನದ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಚಿಕ್ಕಮಗಳೂರು ಗೌರಿಗದ್ದೆ ಆಶ್ರಮದ ಅವಧೂತ ಶ್ರೀ ವಿನಯ್ ಗುರೂಜಿ ಬೆಂಬಲ ಸೂಚಿಸಿ ಮಾತನಾಡಿದರು. 
    ಭದ್ರಾವತಿ, ಜ. ೨೭ : ಕೈಗಾರಿಕೆಗಳು ಎಂದರೆ ದೇವಸ್ಥಾನಗಳು. ನಮ್ಮ ಕಾಯಕದ ಮೂಲ ಕೇಂದ್ರಗಳು. ಇವುಗಳು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಚಿಕ್ಕಮಗಳೂರು ಗೌರಿಗದ್ದೆ ಆಶ್ರಮದ ಅವಧೂತ ಶ್ರೀ ವಿನಯ್ ಗುರೂಜಿ ಹೇಳಿದರು. 
ಅವರು ಶುಕ್ರವಾರ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ೯ನೇ ದಿನದ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು. 


ಜಗಜ್ಯೋತಿ ಬಸವಣ್ಣ, ರಾಷ್ಟ್ರಕವಿ ಕುವೆಂಪುರವರು ಕಾಯಕ ಕ್ಷೇತ್ರವನ್ನು ಕೈಲಾಸಕ್ಕೆ ಹೋಲಿಸುವ ಮೂಲಕ ಕಾರ್ಖಾನೆಗಳು ನಮ್ಮ ಬದುಕಿಗೆ ಅಗತ್ಯವಿರುವ ಎಲ್ಲವನ್ನು ನೀಡುವ ದೇವಸ್ಥಾನಗಳಾಗಿವೆ ಎಂಬ ಸಂದೇಶ ನೀಡಿದ್ದಾರೆ. ನಾವೆಲ್ಲರೂ ಇದನ್ನು ಅರ್ಥಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಾರ್ಖಾನೆಗಳು ಮುಚ್ಚಬಾರದು. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು. ಹೋರಾಟಕ್ಕೆ ಸಾಧು-ಸಂತರು, ಮಠಾಧೀಶರು ಸೇರಿದಂತೆ ಎಲ್ಲರ ಸಹಕಾರ ಪಡೆದುಕೊಳ್ಳಬೇಕೆಂದರು. 
ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ : 
ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕಾರ್ಖಾನೆ ಸಂಬಂಧ ಮನವಿ ಸಲ್ಲಿಸುವುದಾಗಿ ಭರವಸೆ ನೀಡಿದರು. ಪ್ರಸ್ತುತ ಕಾರ್ಖಾನೆಯಲ್ಲಿನ ಬೆಳವಣಿಗೆಗಳ ಬಗ್ಗೆ ಕಾರ್ಮಿಕ ಮುಖಂಡರು ಗುರೂಜಿಯವರಿಗೆ ಮಾಹಿತಿ ನೀಡಿದರು. 
ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ವಿನಯ್ ಗುರೂಜಿಯವರು ಪವಾಡ ಪುರುಷರಾಗಿದ್ದಾರೆ. ಹೋರಾಟಕ್ಕೆ ಅವರ ಆಶೀರ್ವಾದ ಅಗತ್ಯವಿದೆ. ಅವರಲ್ಲಿರುವ ಪವಾಡ ಶಕ್ತಿಯಿಂದ ಕಾರ್ಮಿಕರಿಗೆ ಎದುರಾಗಿ ಸಂಕಷ್ಟಗಳು ದೂರವಾಗುವ ವಿಶ್ವಾಸವಿದೆ ಎಂದರು. 
ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಮಾತನಾಡಿ, ಒಂದು ಕಾಲದಲ್ಲಿ ವೈಭವಯುತವಾಗಿ ಕೂಡಿದ್ದ ಕಾರ್ಖಾನೆ ಪ್ರಸ್ತುತ ಮುಚ್ಚುವ ಸ್ಥಿತಿಗೆ ಬಂದಿರುವುದು ವಿಷಾದನೀಯ ಬೆಳವಣಿಗೆಯಾಗಿದೆ. ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಮಹಿಳೆಯರು ಸಹ ಹೆಚ್ಚಿನ ಬೆಂಬಲ ನೀಡಬೇಕು. ಮಹಿಳೆಯರಲ್ಲಿ ಅದ್ಭುತವಾದ ಶಕ್ತಿ ಇದೆ. ಯಾವುದೇ ಹೋರಾಟವಿರಲಿ ಯಶಸ್ಸು ಖಂಡಿತ ಸಿಗಲಿದೆ. ಅಲ್ಲದೆ ಹೋರಾಟ ಗುರೂಜಿಯವರು ಬೆಂಬಲ ನೀಡಿರುವುದು ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದರು. 
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ನಿವೃತ್ತ ಕಾರ್ಮಿಕ ಎಸ್.ಎಸ್ ಭೈರಪ್ಪ ಸೇರಿದಂತೆ ಇನ್ನಿತರರು ಮಾತನಾಡಿದರು. 
ಚುಂಚಾದ್ರಿ ಮಹಿಳಾ ವೇದಿಕೆ ಪದಾಧಿಕಾರಿಗಳು ಸೇರಿದಂತೆ ನೂರಾರು ಮಹಿಳೆಯರು, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು. 
ರೈತ ಮುಖಂಡ ಎಚ್.ಆರ್ ಬಸವರಾಜಪ್ಪ-ಎಎಪಿ ಬೆಂಬಲ: 
ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ರೈತ ಮುಖಂಡ ಎಚ್.ಆರ್ ಬಸವರಾಜಪ್ಪ ಹಾಗು ಆಮ್ ಆದ್ಮಿ ಪಾರ್ಟಿ ಶಿವಮೊಗ್ಗ ವಿಧಾನಕ್ಷೇತ್ರದ ಆಕ್ಷಾಂಕ್ಷಿ ಟಿ. ನೇತ್ರಾವತಿ ಬೆಂಬಲ ಸೂಚಿಸಿದ್ದಾರೆ. 
ಇಬ್ಬರು ಸಹ ಶುಕ್ರವಾರ ಹೋರಾಟ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸುವ ಮೂಲಕ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ಧೋರಣೆಗಳನ್ನು ಖಂಡಿಸಿದರು. ಹೋರಾಟಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ರೈತ ಮುಖಂಡರು, ಎಎಪಿ ಎಚ್. ರವಿಕುಮಾರ್ ಸೇರಿದಂತೆ ಪಕ್ಷದ ಪ್ರಮುಖರು, ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ಯುವ ಘಟಕದ ಅಧ್ಯಕ್ಷ ತ್ಯಾಗರಾಜ್, ತೀರ್ಥ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 


ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ರೈತ ಮುಖಂಡ ಎಚ್.ಆರ್ ಬಸವರಾಜಪ್ಪ ಹಾಗು ಆಮ್ ಆದ್ಮಿ ಪಾರ್ಟಿ ಶಿವಮೊಗ್ಗ ವಿಧಾನಕ್ಷೇತ್ರದ ಆಕ್ಷಾಂಕ್ಷಿ ಟಿ. ನೇತ್ರಾವತಿ ಬೆಂಬಲ ಸೂಚಿಸಿದ್ದಾರೆ. 


Thursday, January 26, 2023

ಸಂವಿಧಾನ ಗೌರವಿಸಿ ಭವಿಷ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಮುನ್ನಡೆಯೋಣ : ಬಿ.ಕೆ ಸಂಗಮೇಶ್ವರ್


ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಹಾಗು ಶಿಕ್ಷಣ, ಆರೋಗ್ಯ, ಪೊಲೀಸ್, ನ್ಯಾಯಾಂಗ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂಧಿಗಳನ್ನು ಭದ್ರಾವತಿಯಲ್ಲಿ ಆಯೋಜಿಸಲಾಗಿದ್ದ ೭೪ನೇ ಗಣರಾಜ್ಯೋತ್ಸವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು
    ಭದ್ರಾವತಿ, ಜ. ೨೬: ದೇಶದ ಸಂವಿಧಾನ ಪ್ರಪಂಚದಲ್ಲಿಯೇ ಶ್ರೇಷ್ಠ ಸಂವಿಧಾನವಾಗಿದ್ದು, ನಾವೆಲ್ಲರೂ ಸಂವಿಧಾನದ ಆಶಯಗಳನ್ನು ಅರಿತುಕೊಂಡು ಮುನ್ನಡೆಯಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಕರೆ ನೀಡಿದರು. 
ಅವರು ಹಳೇನಗರದ ಕನಕಮಂಟಪ ಮೈದಾನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೭೪ನೇ ಗಣರಾಜ್ಯೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿದರು. 
ಡಾ.ಬಿ.ಆರ್ ಅಂಬೇಡ್ಕರ್‌ರವರು ರಚಿಸಿದ ಸಂವಿಧಾನದಿಂದಾಗಿ ನಾವೆಲ್ಲರೂ ಶಾಂತಿ, ಸೌಹಾರ್ದತೆಯಿಂದ ಬದಕಲು ಸಾಧ್ಯವಾಗಿದೆ. ಗಣತಂತ್ರ ವ್ಯವಸ್ಥೆ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸುವಲ್ಲಿ ಸಂವಿಧಾನ ಪರಿಣಾಮಕಾರಿಯಾಗಿದೆ. ಇಂತಹ ಶ್ರೇಷ್ಠ ಸಂವಿಧಾನಕ್ಕೆ ನಾವೆಲ್ಲರೂ ಗೌರವ ನೀಡುವ ಜೊತೆಗೆ ನಮ್ಮ ಭವಿಷ್ಯದ ಮುಂದಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಮುನ್ನಡೆಯೋಣ ಎಂದರು. 
ಇದಕ್ಕೂ ಮೊದಲು ತಹಸೀಲ್ದಾರ್ ಆರ್. ಪ್ರದೀಪ್ ಧ್ವಜಾರೋಹಣ ನೆರವೇರಿಸಿದರು. ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಎಚ್.ಎಂ ಮನುಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಸೇರಿದಂತೆ ನಗರಸಭಾ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಹಾಗು ಶಿಕ್ಷಣ, ಆರೋಗ್ಯ, ಪೊಲೀಸ್, ಅರಣ್ಯ, ನ್ಯಾಯಾಂಗ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂಧಿಗಳನ್ನು ಹಾಗು ಹಿರಿಯ ಕಟ್ಟಡ ಕಾರ್ಮಿಕ ಮತ್ತು ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಲಾವಿದ ಅಪೇಕ್ಷ ಮಂಜುನಾಥ್ ನಿರೂಪಿಸಿದರು. 

ಗಣರಾಜ್ಯೋತ್ಸವ, ಸಂಗೊಳ್ಳಿರಾಯಣ್ಣ ಪುಣ್ಯಸ್ಮರಣೆ : ರಕ್ತದಾನ ಶಿಬಿರ


ಗಣರಾಜ್ಯೋತ್ಸವ ಹಾಗು ಕ್ರಾಂತಿಕಾರಿ ಸಂಗೊಳ್ಳಿರಾಯಣ್ಣ ಪುಣ್ಯಸ್ಮರಣೆ ಅಂಗವಾಗಿ ಭದ್ರಾವತಿ ನಗರದ ಕೇಸರಿಪಡೆ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಗುರುವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
    ಭದ್ರಾವತಿ, ಜ. ೨೬: ಗಣರಾಜ್ಯೋತ್ಸವ ಹಾಗು ಕ್ರಾಂತಿಕಾರಿ ಸಂಗೊಳ್ಳಿರಾಯಣ್ಣ ಪುಣ್ಯಸ್ಮರಣೆ ಅಂಗವಾಗಿ ನಗರದ ಕೇಸರಿಪಡೆ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಗುರುವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
    ಹೊಸಸೇತುವೆ ರಸ್ತೆಯ ಜಿ.ಎಸ್ ಆಟೋ ಮೊಬೈಲ್ಸ್ ಬಳಿ ಶಿಬಿರ ಆಯೋಜಿಸಲಾಗಿತ್ತು. ಶಿಬಿರ ಉದ್ದೇಶಿಸಿ ಮಾತನಾಡಿದ ಪ್ರಮುಖರು ಕೇಸರಿಪಡೆ ವತಿಯಿಂದ ಕಳೆದ ೫ ವರ್ಷಗಳಿಂದ ನಿರಂತರವಾಗಿ ರಕ್ತದಾನ ಶಿಬಿರ ಆಯೋಜಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಅಲ್ಲದೆ ಸಾಮಾಜಿಕ, ಧಾರ್ಮಿಕ ಹಾಗು ಶೈಕ್ಷಣಿಕ ಸೇವಾಕಾರ್ಯಗಳಲ್ಲೂ ಕೇಸರಿಪಡೆ ತೊಡಗಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವಾಕಾರ್ಯಗಳು ನಡೆಯುವಂತಾಗಲಿ ಎಂದರು.
    ಕೇಸರಿಪಡೆ, ತಾಲೂಕು ಕುರುಬ ಸಮಾಜ ಮತ್ತು ಸಂಗೊಳ್ಳಿರಾಯಣ್ಣ ವೇದಿಕೆ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸೇವೆಯಲ್ಲಿ ತೊಡಗಿಸಿಕೊಂಡಿರುವವರ ನೆರವಿಗೆ ಮುಂದಾಗಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ಜನ್ನಾಪುರ ಜಯಶ್ರೀ ಕಲ್ಯಾಣ ಮಂದಿರದ ಎಡಬದಿ ರಸ್ತೆಯಲ್ಲಿರುವ ಕಾರುಣ್ಯ ಚಾರಿಟಬಲ್ ಟ್ರಸ್ಟ್  ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಟ್ರಸ್ಟ್ ಕರಪತ್ರ ಮತ್ತು ದಿನದರ್ಶಿಕೆ ಬಿಡುಗಡೆಗೊಳಿಸಲಾಯಿತು.
    ಭದ್ರಾವತಿ, ಜ. ೨೬: ವಯೋವೃದ್ಧರು, ನಿರ್ಗತಿಕರು, ಅಶಕ್ತರಿಗೆ ಹಾಗು ಶೋಷಣೆಗೆ ಒಳಗಾದವರಿಗೆ ಆಶ್ರಯ ನೀಡುವ ಮನೋಭಾವದೊಂದಿಗೆ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಎಲ್ಲರೂ ಸಹಕಾರ ನೀಡುವುದು ಅಗತ್ಯವಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಗುರುವಾರ ನಗರದ ಜನ್ನಾಪುರ ಜಯಶ್ರೀ ಕಲ್ಯಾಣ ಮಂದಿರದ ಎಡಬದಿ ರಸ್ತೆಯಲ್ಲಿರುವ ಕಾರುಣ್ಯ ಚಾರಿಟಬಲ್ ಟ್ರಸ್ಟ್  ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಟ್ರಸ್ಟ್ ಕರಪತ್ರ ಮತ್ತು ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
    ಪ್ರಸ್ತುತ ಸಮಾಜದಲ್ಲಿ ಬಹಳಷ್ಟು ಕುಟುಂಬಗಳಲ್ಲಿ ವಯೋವೃದ್ಧರನ್ನು ಕಡೆಗಣಿಸುವ ಮೂಲಕ ಅವರನ್ನು ಮನೆಯಿಂದ ಹೊರಗಿಡುವ ಮನಸ್ಥಿತಿ ಹೆಚ್ಚಾಗುತ್ತಿದೆ. ಅಲ್ಲದೆ ನಿರ್ಗತಿಕರು, ಅಶಕ್ತರು ಹಾಗು ಶೋಷಣೆಗೆ ಒಳಗಾದವರು ಸಹ ಹೆಚ್ಚಾಗಿ ಕಂಡು ಬರುತ್ತಿದ್ದಾರೆ. ಇವರ ನೆರವಿಗೆ ಮುಂದಾಗಿ ಸೇವೆಯಲ್ಲಿ ತೊಡಗಿಸಿಕೊಂಡಿರುವವರ  ಕಾರ್ಯ ಶ್ಲಾಘನೀಯವಾಗಿದ್ದು, ಇದಕ್ಕೆ ಯಾರು ಸಹ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
    ಕಾರುಣ್ಯ ಚಾರಿಟಬಲ್ ಟ್ರಸ್ಟ್ ಕಾರ್ಯಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ದವಿದ್ದೇನೆ. ಅಲ್ಲದೆ ವೈಯಕ್ತಿಕವಾಗಿ ಸಹ ಹೆಚ್ಚಿನ ನೆರವು ನೀಡುವುದಾಗಿ ಭರವಸೆ ನೀಡಿದರು.
    ಸಾಮಾಜಿಕ ಚಿಂತಕ, ಕೋಮು ಸೌಹಾರ್ದ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸದಸ್ಯ ಮಣಿ ಎಎನ್‌ಎಸ್, ಮಾಜಿ ಸದಸ್ಯ ಬಾಲಕೃಷ್ಣ, ವೈದ್ಯ ಡಾ. ಎಚ್.ಆರ್ ನರೇಂದ್ರ, ಆರ್. ಮೋಸಸ್, ಜೈಪಾಲ್, ರಘು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸವಿತಾ, ವೈ.ಕೆ ಹನುಮಂತಯ್ಯ, ವಿಲ್ಸನ್ ಬಾಬು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಜಿ. ರಾಜು ಹಾಗೂ ಸೇವಾಕರ್ತರು ಮತ್ತು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹೊಸ ಮುಕ್ತಿವಾಹಿನಿ ವಾಹನ ಖರೀದಿಸಲು ಜೆಡಿಎಸ್ ಮನವಿ

    ಭದ್ರಾವತಿ, ಜ. ೨೬ : ಮುಕ್ತಿವಾಹಿನಿ ವಾಹನ ಸೇವೆ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಹೊಸ ವಾಹನ ಖರೀದಿಸುವಂತೆ ಜೆಡಿಎಸ್ ಪಕ್ಷದಿಂದ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.
    ೩೫ ವಾರ್ಡ್‌ಗಳನ್ನು ಹೊಂದಿರುವ ನಗರಸಭೆಯಲ್ಲಿ ೨ ಮುಕ್ತಿವಾಹಿನಿ ವಾಹನಗಳಿದ್ದು,  ಈ ಪೈಕಿ ಒಂದು ವಾಹನ ಮಾತ್ರ ಸೇವೆಯಲ್ಲಿರುತ್ತದೆ. ಮತ್ತೊಂದು ವಾಹನ ಹಲವಾರು ದಿನಗಳಿಂದ ದುರಸ್ತಿಯಲ್ಲಿದೆ.  ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸೂಕ್ತ ಸಮಯದಲ್ಲಿ ಸೇವೆ ಒದಗಿಸಲು ಹೊಸ ಮುಕ್ತಿವಾಹಿನಿ ವಾಹನ ಖರೀದಿಸಿ ತೊಂದರೆಯನ್ನು ತಪ್ಪಿಸುವಂತೆ ಪಕ್ಷದ ನಗರ ಘಟಕದ ಅಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ, ಸದಸ್ಯರಾದ ಬಸವರಾಜ ಬಿ. ಆನೇಕೊಪ್ಪ, ಉದಯ್‌ಕುಮಾರ್, ಸವಿತಾ ಉಮೇಶ್, ನಾಗರತ್ನ ಅನಿಲ್‌ಕುಮಾರ್, ಮಂಜುಳ ಸುಬ್ಬಣ್ಣ ಸೇರಿದಂತೆ ಇನ್ನಿತರರು ಮನವಿಯಲ್ಲಿ ಆಗ್ರಹಿಸಿದ್ದಾರೆ.