೯ ದಿನ ಪೂರೈಸಿದ ಗುತ್ತಿಗೆ ಕಾರ್ಮಿಕರ ಹೋರಾಟ : ಎಚ್.ಆರ್ ಬಸವರಾಜಪ್ಪ, ಎಎಪಿ ಬೆಂಬಲ
![](https://blogger.googleusercontent.com/img/a/AVvXsEiYbp5pF_hUadwftwVl8FBVudKwSN4iTi55ofgi_CcgBLdiNfxxi94Ml9sp-7tanubwdp9GEtIkXu9EHfuhKiTvbq1YHJN9VbgPtc1D2Ypy00dbYdQumi1Dx9WYcejStujv56RooMdPKHy2jUDEAKAmz6nn2qExUs1QJAuojl2Svzobn6lzb2OUQiTsxQ=w400-h180-rw)
ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ೯ನೇ ದಿನದ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಚಿಕ್ಕಮಗಳೂರು ಗೌರಿಗದ್ದೆ ಆಶ್ರಮದ ಅವಧೂತ ಶ್ರೀ ವಿನಯ್ ಗುರೂಜಿ ಬೆಂಬಲ ಸೂಚಿಸಿ ಮಾತನಾಡಿದರು.
ಭದ್ರಾವತಿ, ಜ. ೨೭ : ಕೈಗಾರಿಕೆಗಳು ಎಂದರೆ ದೇವಸ್ಥಾನಗಳು. ನಮ್ಮ ಕಾಯಕದ ಮೂಲ ಕೇಂದ್ರಗಳು. ಇವುಗಳು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಚಿಕ್ಕಮಗಳೂರು ಗೌರಿಗದ್ದೆ ಆಶ್ರಮದ ಅವಧೂತ ಶ್ರೀ ವಿನಯ್ ಗುರೂಜಿ ಹೇಳಿದರು.
ಅವರು ಶುಕ್ರವಾರ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ೯ನೇ ದಿನದ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು.
ಜಗಜ್ಯೋತಿ ಬಸವಣ್ಣ, ರಾಷ್ಟ್ರಕವಿ ಕುವೆಂಪುರವರು ಕಾಯಕ ಕ್ಷೇತ್ರವನ್ನು ಕೈಲಾಸಕ್ಕೆ ಹೋಲಿಸುವ ಮೂಲಕ ಕಾರ್ಖಾನೆಗಳು ನಮ್ಮ ಬದುಕಿಗೆ ಅಗತ್ಯವಿರುವ ಎಲ್ಲವನ್ನು ನೀಡುವ ದೇವಸ್ಥಾನಗಳಾಗಿವೆ ಎಂಬ ಸಂದೇಶ ನೀಡಿದ್ದಾರೆ. ನಾವೆಲ್ಲರೂ ಇದನ್ನು ಅರ್ಥಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಾರ್ಖಾನೆಗಳು ಮುಚ್ಚಬಾರದು. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು. ಹೋರಾಟಕ್ಕೆ ಸಾಧು-ಸಂತರು, ಮಠಾಧೀಶರು ಸೇರಿದಂತೆ ಎಲ್ಲರ ಸಹಕಾರ ಪಡೆದುಕೊಳ್ಳಬೇಕೆಂದರು.
ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ :
ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕಾರ್ಖಾನೆ ಸಂಬಂಧ ಮನವಿ ಸಲ್ಲಿಸುವುದಾಗಿ ಭರವಸೆ ನೀಡಿದರು. ಪ್ರಸ್ತುತ ಕಾರ್ಖಾನೆಯಲ್ಲಿನ ಬೆಳವಣಿಗೆಗಳ ಬಗ್ಗೆ ಕಾರ್ಮಿಕ ಮುಖಂಡರು ಗುರೂಜಿಯವರಿಗೆ ಮಾಹಿತಿ ನೀಡಿದರು.
ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ವಿನಯ್ ಗುರೂಜಿಯವರು ಪವಾಡ ಪುರುಷರಾಗಿದ್ದಾರೆ. ಹೋರಾಟಕ್ಕೆ ಅವರ ಆಶೀರ್ವಾದ ಅಗತ್ಯವಿದೆ. ಅವರಲ್ಲಿರುವ ಪವಾಡ ಶಕ್ತಿಯಿಂದ ಕಾರ್ಮಿಕರಿಗೆ ಎದುರಾಗಿ ಸಂಕಷ್ಟಗಳು ದೂರವಾಗುವ ವಿಶ್ವಾಸವಿದೆ ಎಂದರು.
ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಮಾತನಾಡಿ, ಒಂದು ಕಾಲದಲ್ಲಿ ವೈಭವಯುತವಾಗಿ ಕೂಡಿದ್ದ ಕಾರ್ಖಾನೆ ಪ್ರಸ್ತುತ ಮುಚ್ಚುವ ಸ್ಥಿತಿಗೆ ಬಂದಿರುವುದು ವಿಷಾದನೀಯ ಬೆಳವಣಿಗೆಯಾಗಿದೆ. ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಮಹಿಳೆಯರು ಸಹ ಹೆಚ್ಚಿನ ಬೆಂಬಲ ನೀಡಬೇಕು. ಮಹಿಳೆಯರಲ್ಲಿ ಅದ್ಭುತವಾದ ಶಕ್ತಿ ಇದೆ. ಯಾವುದೇ ಹೋರಾಟವಿರಲಿ ಯಶಸ್ಸು ಖಂಡಿತ ಸಿಗಲಿದೆ. ಅಲ್ಲದೆ ಹೋರಾಟ ಗುರೂಜಿಯವರು ಬೆಂಬಲ ನೀಡಿರುವುದು ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ನಿವೃತ್ತ ಕಾರ್ಮಿಕ ಎಸ್.ಎಸ್ ಭೈರಪ್ಪ ಸೇರಿದಂತೆ ಇನ್ನಿತರರು ಮಾತನಾಡಿದರು.
ಚುಂಚಾದ್ರಿ ಮಹಿಳಾ ವೇದಿಕೆ ಪದಾಧಿಕಾರಿಗಳು ಸೇರಿದಂತೆ ನೂರಾರು ಮಹಿಳೆಯರು, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು.
ರೈತ ಮುಖಂಡ ಎಚ್.ಆರ್ ಬಸವರಾಜಪ್ಪ-ಎಎಪಿ ಬೆಂಬಲ:
ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ರೈತ ಮುಖಂಡ ಎಚ್.ಆರ್ ಬಸವರಾಜಪ್ಪ ಹಾಗು ಆಮ್ ಆದ್ಮಿ ಪಾರ್ಟಿ ಶಿವಮೊಗ್ಗ ವಿಧಾನಕ್ಷೇತ್ರದ ಆಕ್ಷಾಂಕ್ಷಿ ಟಿ. ನೇತ್ರಾವತಿ ಬೆಂಬಲ ಸೂಚಿಸಿದ್ದಾರೆ.
ಇಬ್ಬರು ಸಹ ಶುಕ್ರವಾರ ಹೋರಾಟ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸುವ ಮೂಲಕ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ಧೋರಣೆಗಳನ್ನು ಖಂಡಿಸಿದರು. ಹೋರಾಟಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ರೈತ ಮುಖಂಡರು, ಎಎಪಿ ಎಚ್. ರವಿಕುಮಾರ್ ಸೇರಿದಂತೆ ಪಕ್ಷದ ಪ್ರಮುಖರು, ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ಯುವ ಘಟಕದ ಅಧ್ಯಕ್ಷ ತ್ಯಾಗರಾಜ್, ತೀರ್ಥ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ರೈತ ಮುಖಂಡ ಎಚ್.ಆರ್ ಬಸವರಾಜಪ್ಪ ಹಾಗು ಆಮ್ ಆದ್ಮಿ ಪಾರ್ಟಿ ಶಿವಮೊಗ್ಗ ವಿಧಾನಕ್ಷೇತ್ರದ ಆಕ್ಷಾಂಕ್ಷಿ ಟಿ. ನೇತ್ರಾವತಿ ಬೆಂಬಲ ಸೂಚಿಸಿದ್ದಾರೆ.