೨ ದಿನದಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಹಿಂದಿರುಗಿದ ಬಿ.ವೈ ರಾಘವೇಂದ್ರ
ಭದ್ರಾವತಿಯಲ್ಲಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಸೋಮವಾರ ಶಾಸಕ ಬಿ.ಕೆ ಸಂಗಮೇಶ್ವರ್ ಬೆಂಬಲ ವ್ಯಕ್ತಪಡಿಸಿದರು.
ಭದ್ರಾವತಿ, ಜ. ೩೦ : ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಳೆದ ೧೨ ದಿನಗಳಿಂದ ನಿರಂತರವಾಗಿ ಕಾರ್ಖಾನೆ ಮುಂಭಾಗ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ಸೋಮವಾರ ಪ್ರತಿಭಟನೆ ಏಕಾಏಕಿ ತೀವ್ರಗೊಳಿಸಿದ್ದು, ಇದರಿಂದಾಗಿ ಸಂಸದ ಬಿ.ವೈ ರಾಘವೇಂದ್ರ ಸಹ ದಿಗ್ಭ್ರಮೆಗೊಳ್ಳುವಂತೆ ಮಾಡಿತು.
ನಗರದಲ್ಲಿ ಆಯೋಜಿಸಲಾಗಿದ್ದ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಸಂಸದರು ಆಗಮಿಸುವ ಹಿನ್ನಲೆಯಲ್ಲಿ ಪ್ರತಿಭಟನೆಗೆ ನಡೆಸಲು ಪೂರ್ವ ಸಿದ್ದತೆ ಮಾಡಿಕೊಂಡಿದ್ದ ಗುತ್ತಿಗೆ ಕಾರ್ಮಿಕರು ಕೆಎಸ್‌ಆರ್‌ಟಿಸಿ ಮುಖ್ಯಬಸ್‌ನಿಲ್ದಾಣದ ಬಳಿ ಆಗಮಿಸಿದ್ದು, ಅಷ್ಟರಲ್ಲಿ ಪೊಲೀಸರು ಬ್ಯಾರಿಗೇಡ್ ಬಳಸಿ ಗುತ್ತಿಗೆ ಕಾರ್ಮಿಕರನ್ನು ತಡೆಯುವಲ್ಲಿ ಯಶಸ್ವಿಯಾದರು. ಇದರಿಂದ ಆಕ್ರೋಶಗೊಂಡ ಕಾರ್ಮಿಕರು ಪ್ರತಿಭಟನೆಯನ್ನು ಏಕಾಏಕಿ ತೀವ್ರಗೊಳಿಸಿದ್ದು, ನಂತರ ಸ್ಥಳಕ್ಕೆ ಆಗಮಿಸಿದ ಸಂಸದರ ವಿರುದ್ಧ ಧಿಕ್ಕಾರ ಹಾಕುವ ಮೂಲಕ ತಮ್ಮ ಅಳಲು ತೋರ್ಪಡಿಸಿಕೊಂಡರು.
ಈ ನಡುವೆ ಕೆಲವು ಕಾರ್ಮಿಕರು ಸಂಸದರ ಕಾಲಿಗೆ ಬಿದ್ದರೇ, ಇನ್ನೂ ಕೆಲವು ಕಾರ್ಮಿಕರು ಕಣ್ಣೀರಿನ ಕೋಡಿ ಸುರಿಸಿ ತಮ್ಮ ಸಂಕಷ್ಟಗಳನ್ನು ತೋಪಡಿಸಿಕೊಂಡರು. ಮಹಿಳಾ ಕಾರ್ಮಿಕರು ಬಿ.ವೈ ರಾಘವೇಂದ್ರ ಹಾಗು ಬಿ.ಎಸ್ ಯಡಿಯೂರಪ್ಪನವರಿಗೆ ಹಿಡಿಶಾಪ ಹಾಕುತ್ತಿರುವುದು ಸಹ ಕಂಡು ಬಂದಿತು. ಕಾರ್ಮಿಕರ ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಸಂಸದರು ದಿಕ್ಕುಕಾಣದೆ ಮುಂದಿನ ೨ ದಿನಗಳ ಒಳಗಾಗಿ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ಸ್ಥಳದಿಂದ ಕಾಲ್ಕಿತ್ತರು.
ಸಂಸದರು ಹಿಂದಿರುಗಿದ ನಂತರ ಕಾರ್ಮಿಕರು ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.
ಕಾರ್ಮಿಕರ ಪ್ರತಿಭಟನೆಗೆ ಶಾಸಕ ಬಿ.ಕೆ ಸಂಗಮೇಶ್ವರ್, ಜೆಡಿಎಸ್ ಪಕ್ಷದ ಮುಖಂಡರ ಶಾರದ ಅಪ್ಪಾಜಿ, ಹಿರಿಯ ಕಾರ್ಮಿಕ ಮುಖಂಡರಾದ ಡಿ.ಸಿ ಮಾಯಣ್ಣ, ಕಾಳೇಗೌಡ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಎಎಪಿ ಎಚ್ ರವಿಕುಮಾರ್ ಸೇರಿದಂತೆ ಇನ್ನಿತರ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ, ಕಾರ್ಮಿಕ ಸಂಘಟನೆಗಳ ಮುಖಂಡರು ಬೆಂಬಲ ಸೂಚಿಸಿದರು. ಕಾರ್ಮಿಕರ ಪ್ರತಿಭಟನೆ ಹಿನ್ನಲೆಯಲ್ಲಿ ನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಭದ್ರಾವತಿಯಲ್ಲಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಸೋಮವಾರ ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಬೆಂಬಲ ವ್ಯಕ್ತಪಡಿಸಿದರು.