Friday, February 3, 2023

ಯಡಿಯೂರಪ್ಪ ವಿಐಎಸ್‌ಎಲ್ ಉಳಿಸಿ ಜಿಲ್ಲೆಯ ಜನರ ಋಣ ತೀರಿಸಲಿ : ಎಚ್.ಡಿ ಕುಮಾರಸ್ವಾಮಿ

ಭದ್ರಾವತಿಯಲ್ಲಿ ೧೬ ದಿನಗಳಿಂದ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಶುಕ್ರವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬೆಂಬಲ ಸೂಚಿಸಿ ಮಾತನಾಡಿದರು.
    ಭದ್ರಾವತಿ, ಫೆ. ೩ : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸರ್.ಎಂ ವಿಶ್ವೇಶ್ವರಾಯ ಹಾಗು ಮೈಸೂರು ಮಹಾರಾಜರ ಪರಿಶ್ರಮದ ಫಲವಾಗಿ ಸ್ಥಾಪನೆಗೊಂಡಿರುವ ಸರ್.ಎಂ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ರಾಜ್ಯದ ಜನತೆಗೆ ಉಳಿಸಿಕೊಡುವ ಮೂಲಕ ಶಿವಮೊಗ್ಗ ಜಿಲ್ಲೆಯ ಜನರ ಋಣ ತೀರಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆಗ್ರಹಿಸಿದರು.
     ಕಳೆದ ೧೬ ದಿನಗಳಿಂದ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಅವರು ಶುಕ್ರವಾರ ಬೆಂಬಲ ಸೂಚಿಸಿ ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗದಂತೆ ಧೈರ್ಯ ತುಂಬುವ ಮೂಲಕ ಬಹಿರಂಗ ಸಭೆಯಲ್ಲಿ ಮಾತನಾಡಿದರು.
    ಮಾಜಿ ಪ್ರಧಾನಿ ದೇವೇಗೌಡರು ಈ ಕಾರ್ಖಾನೆಯನ್ನು ಉಕ್ಕು ಪ್ರಾಧಿಕಾರಕ್ಕೆ ವಹಿಸಿಕೊಡುವ ಸಂದರ್ಭದಲ್ಲಿ ಸುಮಾರು ೬೫೦ ಕೋ.ರು. ವೆಚ್ಚದಲ್ಲಿ ಅಭಿವೃದ್ಧಿಗೆ ಸಂಬಂಧ ರೂಪುರೇಷೆ ಸಿದ್ದಪಡಿಸಿದ್ದರು. ಆದರೆ ಈ ರೂಪುರೇಷೆಯನ್ನು ಉಕ್ಕು ಪ್ರಾಧಿಕಾರ ಅನುಷ್ಠಾನಕ್ಕೆ ತರಲಿಲ್ಲ. ಅಷ್ಟರಲ್ಲಿ ದೇವೇಗೌಡರು ಅನಿವಾರ್ಯ ಕಾರಣಗಳಿಂದ ಪ್ರಧಾನಿ ಹುದ್ದೆಯಿಂದ ನಿರ್ಗಮಿಸಿದರು. ಆ ನಂತರದ ಬೆಳವಣಿಗೆಯಲ್ಲಿ ಕಾರ್ಖಾನೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಲಾಗಿದೆ ಎಂದು ಆರೋಪಿಸಿದರು.
    ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಈ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಇಚ್ಛಾಶಕ್ತಿ ಪ್ರದರ್ಶಿಸಿ ಜಿಲ್ಲೆಯ ಜನರ ಋಣ ತೀರಿಸಬೇಕು. ಕನಿಷ್ಠ ಪಕ್ಷ ಮುಂದಿನ ೩ ತಿಂಗಳವರೆಗೆ ಯಾವುದೇ ಬೆಳವಣಿಗೆಗಳು ನಡೆಯದಂತೆ ನೋಡಿಕೊಂಡರೇ ಸಾಕು. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಈ ಕಾರ್ಖಾನೆಯನ್ನು ನಮ್ಮ ಸರ್ಕಾರ ಶೇ.೪೦ ಕಮಿಷನ್ ದಂಧೆಗೆ ಕಡಿವಾಣ ಹಾಕಿ ಜನರ ತೆರಿಗೆ ಹಣದಲ್ಲಿ ಈ ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗಲಿದೆ. ಉಕ್ಕು ಪ್ರಾಧಿಕಾರ ಯಾವುದೇ ಬಂಡವಾಳ ಹೂಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರದ ಬಳಿ ನಾವು ಭಿಕ್ಷೆ ಬೇಡುವುದು ತಪ್ಪುತ್ತದೆ ಎಂದರು.
    ಕಾರ್ಖಾನೆ ಉಳಿಸಿ ಬೊಮ್ಮಾಯಿಯವರಿಗೆ ಗೌರವ ನೀಡಿ:  
    ಇಂದಿನ ಡಬ್ಬಲ್ ಇಂಜಿನ್ ಸರ್ಕಾರ ಶ್ರಮ ಜೀವಿಗಳಾದ ಕಾರ್ಮಿಕರನ್ನು ಬೀದಿಗೆ ತಳ್ಳುವುದು ಸರಿಯಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಆತ್ಮ ಸಾಕ್ಷಿ ಇದ್ದಲ್ಲಿ ಈ ಕಾರ್ಖಾನೆಯನ್ನು ಉಳಿಸುವ ಮೂಲಕ ಅಂದು ರಾಜ್ಯದ ಮಂತ್ರಿಯಾಗಿದ್ದ ಅವರ ತಂದೆ ಬೊಮ್ಮಾಯಿಯವರಿಗೆ ಗೌರವ ಸಲ್ಲಿಸುವಂತಹ ಕೆಲಸ ಮಾಡಲಿ ಎಂದರು.
    ಹೋರಾಟದ ಮುಂಚೂಣಿಗೆ ಬರಲು ಸಿದ್ದ :
    ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಿರುವುದು ತಿಳಿದು ಬಂದಿದೆ. ಈ  ಸಂದರ್ಭದಲ್ಲಿ  ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ಮೂಲಕ ಹೋರಾಟವನ್ನು ತೀವ್ರಗೊಳಿಸಬೇಕು. ಅನಿವಾರ್ಯವಾದಲ್ಲಿ ಈ ಹೋರಾಟದ ಮುಂಚೂಣಿಗೆ ಬಂದು ಪ್ರಧಾನಿಯವರನ್ನು ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಅಭಿವೃದ್ಧಿಗೊಳಿಸುವಂತೆ ಆಗ್ರಹಿಸಲಾಗುವುದು ಎಂದರು.  
    ವಿಐಎಸ್‌ಎಲ್-ಎಂಪಿಎಂ ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿ :
    ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಆರೋಗ್ಯ ಸರಿ ಇಲ್ಲದ ಕಾರಣ ಅವರು ಹೋರಾಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಪರವಾಗಿ ನಾನು ಹೋರಾಟಕ್ಕೆ ಸಿದ್ದವಾಗಿದ್ದೇನೆ. ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳನ್ನು ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕರು, ಕ್ಷೇತ್ರದ ಜನರು ಭಯಪಡುವ ಅಗತ್ಯವಿಲ್ಲ ಎಂದರು.
    ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಮಾತನಾಡಿ, ರಾಜ್ಯಾಧ್ಯಕ್ಷನಾದ ನಂತರ ನಾನು ಮೊದಲ ಬಾರಿಗೆ ನನ್ನ ತವರು ಮನೆಗೆ ಬಂದಿದ್ದೇನೆ. ಇತ್ತೀಚೆಗೆ ತಾಯಿ ಕಳೆದುಕೊಂಡಿರುವ ನನಗೆ ನನ್ನ ತಾಯಿಯನ್ನು ನೋಡಿದಷ್ಟು ಸಂಭ್ರಮ ಉಂಟಾಗುತ್ತಿದೆ ಎಂದರು.  ಈ ಕಾರ್ಖಾನೆಯಲ್ಲಿ ನಾನು ಸಹ ಒಬ್ಬ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡಿದ್ದು, ಈ ಕಾರ್ಖಾನೆಯ ಋಣ ನನ್ನ ಮೇಲಿದೆ. ಯಾರು ಸಹ ದೆಹಲಿ ಹೋಗಿ ಯಾರ ಕಾಲು ಸಹ ಹಿಡಿಯುವುದು ಬೇಡ. ಇನ್ನೇನು ಚುನಾವಣೆ ಬರಲಿದ್ದು, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವುದು ಖಚಿತ. ನಮ್ಮ ಸರ್ಕಾರ ಈ ಕಾರ್ಖಾನೆಯನ್ನು ಉಳಿಸಿಕೊಳ್ಳುವುದು ಖಚಿತ ಎಂದು ಭರವಸೆ ನೀಡಿದರು.
    ಅಧ್ಯಕ್ಷತೆವಹಿಸಿದ್ದ ಶಾರದ ಅಪ್ಪಾಜಿ ಮಾತನಾಡಿ, ನಾನು ಓರ್ವ ಕಾರ್ಮಿಕನ ಪತ್ನಿಯಾಗಿ ಅವರ ಸಂಕಷ್ಟಗಳನ್ನು ಅರಿತುಕೊಂಡಿದ್ದೇನೆ. ಕುಮಾರಸ್ವಾಮಿಯವರು ಈ ಕಾರ್ಖಾನೆಯನ್ನು ಉಳಿಸಿಕೊಡಲಿದ್ದಾರೆಂಬ ಸಂಪೂರ್ಣ ವಿಶ್ವಾಸವಿದೆ ಎಂದರು.
    ವಿಧಾನಪರಿಷತ್ ಸದಸ್ಯ ಭೋಜೇಗೌಡ, ಮಾಜಿ ಶಾಸಕಿ ಶಾರದ ಪೂರ‍್ಯನಾಯ್ಕ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಪ್ರಮುಖರಾದ ಜೆ.ಪಿ ಯೋಗೇಶ್, ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ಆರ್. ಕರುಣಾಮೂರ್ತಿ, ಮಧುಕುಮಾರ್, ಗೀತಾ ಪವಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಕಾರ್ಮಿಕರು ತಮ್ಮ ಅಳಲುಗಳನ್ನು ತೋರ್ಪಡಿಸಿಕೊಂಡರು.

ವಿಐಎಸ್ಎಲ್ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (CITU) ಬೆಂಬಲ

ಭದ್ರಾವತಿ,  ಫೆ. 3:  ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ತಾಲೂಕು  ಸಮಿತಿಯಿಂದ ಕರ್ನಾಟಕ ಹೆಮ್ಮೆಯ ಉಕ್ಕು ಉದ್ಯಮ ವಿ.ಐ.ಎಸ್.ಪಿ  ಮುಚ್ಚದಂತೆ  ಶುಕ್ರವಾರ ತಹಸೀಲ್ದಾರ್  ಮುಖಾಂತರ  ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
    ನಂತರ ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿ ಬೆಂಬಲಿಸಿ ಮಾತನಾಡಿದ ಪ್ರಮುಖರು, ಕರ್ನಾಟಕ ಹೆಮ್ಮೆಯ ಉಕ್ಕು ಉದ್ಯಮ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಪ್ಲಾಂಟ್ ಭಾರತದ ಮೊಟ್ಟ ಮೊದಲ ಕೈಗಾರಿಕೆಯು ಕೂಡ ಆಗಿರುತ್ತದೆ. ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ನವರ ಪರಿಶ್ರಮದಿಂದ ನಿರ್ಮಣಗೊಂಡ ಈ ಕೈಗಾರಿಕೆಯು ರಾಜ್ಯದ ಹಾಗೂ ದೇಶದಲ್ಲಿನ ಆಣ್ಣೆಕಟ್ಟು, ಡ್ಯಾಂಗಳು, ರಕ್ಷಣಾ ವಲಯ, ರೈಲ್ವೆ ವಲಯ, ಬ್ರಿಡ್ಜ್‌ಗಳನ್ನು ಕಟ್ಟಲು ಈ ಕೈಗಾರಿಕೆಯ ಉತ್ತಮ ಕಬ್ಬಿಣದಿಂದ ನಿರ್ಮಾಣ ಮಾಡಲಾಗಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದರು.
    ಹೀಗೆ ಬೃಹದಾಕಾರವಾಗಿ ಬೆಳೆದ VISP ಕೈಗಾರಿಯು 80ರ ಧಶಕದಿಂದ ಅಲ್ಪ ಪ್ರಮಾಣದ ನಷ್ಟದ ಹಾದಿ
ಹಿಡಿಯಿತು. ಹಳೇಯ ತಂತ್ರಜ್ಞಾನದಿಂದ ಪ್ರತಿವರ್ಷ ಇನ್ನಷ್ಟು ನಷ್ಟದ ಪ್ರಮಾಣ ಹೆಚ್ಚಾಗಿದ್ದರಿಂದ ಅಂದಿನ
ಕರ್ನಾಟಕ ಸರ್ಕಾರವು ಭಾರತೀಯ ಉಕ್ಕು ಪ್ರಾಧಿಕಾರಕ್ಕೆ VISP ವಹಿಸಲು ತಿರ್ಮಾನಿಸಿ 1989ರಲ್ಲಿ ಕರ್ನಾಟಕ ಸರ್ಕಾರವು ಈ ಕೈಗಾರಿಕೆಯನ್ನು ಆಧುನಿಕರಿಸಿ ಅಭಿವೃದ್ಧಿ ಪಡಿಸುವಂತೆ ಕೋರಿ ಕೇಂದ್ರ ಸರ್ಕಾರದ ಅಧಿನದಲ್ಲಿರುವ SAIL ಗೆ ಹಸ್ತಾಂತರ ಮಾಡಲಾಯಿತು. ಆದರೆ ದುರಾದೃಷ್ಟವಶತ್ ಭಾರತೀಯ ಉಕ್ಕು ಪ್ರಾಧಿಕಾರ ಯಾವುದೇ ಬಂಡವಾಳವನ್ನು ತೊಡಗಿಸದೆ ಮಲತಾಯಿ ಧೋರಣೆಯನ್ನು ಅನುಸರಿಸಿತು ಎಂದು ದೂರಿದರು.        ಇಂತಹ ಸಂದಿಗ್ಧದ ಪರಿಸ್ಥಿತಿಯಲ್ಲಿ 2015ರಲ್ಲಿ ಕೇಂದ್ರದ ಉಕ್ಕು ಮಂತ್ರಿ ನರೇಂದ್ರಸಿಂಗ್ ತೋಮರ್ ಕಾರ್ಖಾನೆಗೆ ಭೇಟಿ ನೀಡಿ ಈ ಕಾರ್ಖಾನೆಯನ್ನು ಅಭಿವೃದ್ಧಿಪಡಿಸಲು ಒಂದು ಸಾವಿರ ಕೋಟಿ ನೀಡುವುದಾಗಿ ತಿಳಿಸಿ ಪ್ರಮುಖವಾಗಿ ಈ ಕಾರ್ಖಾನೆಗೆ ಬೇಕಾಗಿರುವ ಕಬ್ಬಿಣದ ಅದಿರಿನ ಗಣಿಯನ್ನು ಕೊಡುವಂತೆ ತಿಳಿಸಿದ್ದರು. ಅದೇ ಪ್ರಕಾರವಾಗಿ ಕರ್ನಾಟಕ ಸರ್ಕಾರವು 2018ರ
ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ರಮಣದುರ್ಗದಲ್ಲಿ 150 ಹೆಕ್ಟೇರ್ ಕಬ್ಬಿಣದ ಅದಿರನ ಗಣಿಯನ್ನು  ಮಂಜೂರು ಮಾಡಿದೆ,ಆದರೆ 2018ರಲ್ಲಿ ಕೇಂದ್ರದ ಉಕ್ಕು ಮಂತ್ರಿ ಬಿರೇಂದ್ರಸಿಂಗ್ ಚೌದರಿ, ಈ
ಕಾರ್ಖಾನೆಗೆ ಭೇಟಿ ನೀಡಿ ಈ ಕಾರ್ಖಾನೆಯನ್ನು ಖಾಸಗಿ ಮಾಡದೆ ಉಕ್ಕು ಪ್ರಧಿಕಾರದಲ್ಲೇ ಉಳಿಸಿಕೊಂಡು 6 ಸಾವಿರ ಕೋಟಿ ಬಂಡವಾಳ ಹೂಡುವುದಾಗಿ ನೀಡಿದ ಭರವಸೆ ಹುಸಿಯಾಯಿತು. ಕೈಗಾರಿಕೆಯು ಇನ್ನಷ್ಟು
ನಷ್ಟಕ್ಕೆ ಸಿಲುಕಿತು ಎಂದು  ಆರೋಪಿಸಿದರು.   ಇಂತಹ ಪರಿಸ್ಥಿತಿಯನ್ನು ದೌರ್ಬಲ್ಯ ಮಾಡಿಕೊಂಡ ಭಾರತೀಯ       ಉಕ್ಕು ಪ್ರಾಧಿಕಾರದ ಉನ್ನತ ಮಟ್ಟದ ಸಮಿತಿ ಜ. 16ರ ಸಭೆಯಲ್ಲಿ  ವಿ.ಐ.ಎಸ್.ಪಿ. ಕಾರ್ಖಾನೆಯನ್ನು ಮುಚ್ಚಲು ತೀರ್ಮಾನಿಸಿರುತ್ತಾರೆ. 1989ರಲ್ಲಿ ಕರ್ನಾಟಕ ಸರ್ಕಾರ ಈ ಕಾರ್ಖಾನೆಯನ್ನು ಆಧುನಿಕರಿಸಿ ಅಭಿವೃದ್ಧಿ ಪಡಿಸಿ ಮುನ್ನಡೆಸಲು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ವಹಿಸಿತ್ತೆ ಹೊರತು ಖಾಸಗಿಯವರಿಗೆ ಮಾರಾಟ ಮಾಡಲು  ಅಥವಾ ಈ ಕಾರ್ಖಾನೆಯನ್ನು ಮುಚ್ಚಲು ಕೊಟ್ಟಿಲ್ಲ. ಹಾಗಾಗಿ  ಕರ್ನಾಟಕ ಸರ್ಕಾರ
ಕೊಟ್ಟಿರುವ ಕಬ್ಬಿಣದ ಅದಿರಿನ ಗಣಿಯಿಂದ ಗಣಿಗಾರಿಕೆ ಮಾಡಲು ಈಗಾಗಲೇ ಸಿದ್ಧತೆ ಮಾಡುತ್ತಿರುವಾಗಲೇ
ವಿ.ಐ.ಎಸ್.ಪಿ. ಕಾರ್ಖಾನೆ ಮುಚ್ಚುವ ಸುದ್ದಿ ಇಡಿ ಕಾರ್ಮಿಕ ವಲಯಕ್ಕೆ ಬರ ಸಿಡಿಲು ಬಡಿದಂತಾಗಿದೆ. ಈ
ಕಾರ್ಖಾನೆಯನ್ನು ನಂಬಿ ಸುಮಾರು 22 ವರ್ಷಗಳಿಂದ 1500 ಕ್ಕೂ ಹೆಚ್ಚು ಗತ್ತಿಗೆ ಕಾರ್ಮಿಕರು ಹಾಗೂ
ಇವರನ್ನು ಅವಲಂಬಿಸಿದಂತ ಭದ್ರಾವತಿಯ ವ್ಯಾಪಾರಸ್ಥರೂ ಕಂಗಾಲಾಗಿದ್ದಾರೆ. ಆದ್ದರಿಂದ ಕರ್ನಾಟಕ ಸರ್ಕಾರದ ಪರವಾಗಿ ತಾವುಗಳು ಸರ್.ಎಂ.ವಿಶ್ವೇಶ್ವರಯ್ಯನವರ ದೂರದೃಷ್ಟಿ, ಕಾರ್ಮಿಕರ ಬದುಕು, ಯುವ ಜನರಿಗೆ ಹೊಸ ಉದ್ಯೋಗ ಸೃಷ್ಟಿ ಇವೆಲ್ಲವನ್ನು  ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡಿ ಕರ್ನಾಟಕದ ಹೆಮ್ಮೆಯ ವಿ.ಐ.ಎಸ್.ಪಿ   ಕೈಗಾರಿಕೆಯನ್ನು ಉಳಿಸಲು ಒತ್ತಾಯಿಸುತ್ತಿದ್ದೇವೆ ಎಂದರು.
   ಸಂಘದ ಅಧ್ಯಕ್ಷೆ ಹನುಮಮ್ಮ, ಪ್ರಧಾನ ಕಾರ್ಯದರ್ಶಿ ಎಂ. ನಾರಾಯಣ, ಎಸ್. ಲೀಲಾವತಿ, ಮೀನಾ, ಸರಸ್ವತಿ, ಸಾಮೀನಾ, ರೂಪ, ನಾಗರತ್ನ, ಎಂ. ಅನಂತ ರಾಮು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Thursday, February 2, 2023

೧೫ನೇ ದಿನ ಪೂರೈಸಿದ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟ

ಕಾಲೇಜು ವಿದ್ಯಾರ್ಥಿಗಳಿಂದ ಪತ್ರ ಬರವಣಿಗೆ, ಫೆ.೩ರಂದು ಎಚ್‌ಡಿಕೆ ಬೆಂಬಲ, ಸೇಲಂನಲ್ಲಿ ಪ್ರತಿಭಟನೆ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟ ಬೆಂಬಲಿಸಿ ಕಾರ್ಖಾನೆ ಉಳಿವಿಗಾಗಿ ಕಾಲೇಜು ವಿದ್ಯಾರ್ಥಿಗಳಿಂದ ಪತ್ರ ಬರವಣಿಗೆ  ನಡೆಯಿತು.
    ಭದ್ರಾವತಿ, ಫೆ. ೨ :  ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಗುರುವಾರ ೧೫ನೇ ದಿನ ಪೂರೈಸಿತು. ಹೋರಾಟಕ್ಕೆ ವಿವಿಧೆಡೆಗಳಿಂದ ಬೆಂಬಲ ವ್ಯಕ್ತವಾಗುತ್ತಿದ್ದು, ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.
    ಕಾರ್ಖಾನೆ ಉಳಿವಿಗಾಗಿ ವಿದ್ಯಾರ್ಥಿಗಳಿಂದ ಪತ್ರ ಬರವಣಿಗೆ :  
    ಯುವ ಮುಖಂಡ ಬಿ.ಎಸ್ ಗಣೇಶ್ ಮಾರ್ಗದರ್ಶನದಲ್ಲಿ ಜೀವಸ್ವರ ಚಾರಿಟಬಲ್ ಟ್ರಸ್ಟ್ ಹಾಗು ಕುವೆಂಪು ಪ್ರವಾಸಿ ವಾಹನ ಚಾಲಕರ ಹಾಗು ಮಾಲೀಕರ ಸಂಘದ ಸಹಯೋಗದೊಂದಿಗೆ ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗು ಬೊಮ್ಮನಕಟ್ಟೆ ಸರ್.ಎಂ.ವಿ ಸರ್ಕಾರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಿಂದ 'ಸೇವ್ ವಿಐಎಸ್‌ಎಲ್, ಸೇವ್ ಭದ್ರಾವತಿ' (Save VISL, Save Bhadravathi)  ಎಂಬ ಘೋಷಣೆಯ ಪತ್ರ ಬರವಣಿಗೆ ನಡೆಯಿತು.
    ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗು ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಪತ್ರ ಬರೆವಣಿಗೆ ಬರೆಯುವ ಮೂಲಕ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ  ಬೆಂಬಲ ವ್ಯಕ್ತಪಡಿಸಲಾಯಿತು.
ಜೀವಸ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಫ್ರಾನ್ಸಿಸ್,  ಕಾರ್ಯದರ್ಶಿ ಪ್ರಸನ್ನ ಕುಮಾರ್, ಸತೀಶ್, ಪ್ರದೀಪ್, ವಾಸು, ಶಿವಣ್ಣ, ವೆಂಕಟ್, ಸೈಯದ್ ಅಲಿ, ರವಿ, ದಾಸ್, ಅಪ್ಪು, ಐಸಾಕ್, ವಿನ್ಸೆಂಟ್, ಚಂದ್ರಣ್ಣ ಹಾಗು ಕುವೆಂಪು ಪ್ರವಾಸಿ ವಾಹನ ಚಾಲಕರ ಹಾಗು ಮಾಲೀಕರ ಸಂಘದ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿಯಲ್ಲಿ ಗುತ್ತಿಗೆ ಕಾರ್ಮಿಕರಿಗೆ ಬೆಂಬಲ ವ್ಯಕ್ತಪಡಿಸಿ ಫೆ.೩ರ ಶುಕ್ರವಾರ ಜೆಡಿಎಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಶಾರದ ಅಪ್ಪಾಜಿ ಖುದ್ದಾಗಿ ಅಂಗಡಿ-ಮುಂಗಟ್ಟು, ಮನೆ ಮನೆಗಳಿಗೆ ತೆರಳಿ ಕರ ಪತ್ರಗಳನ್ನು ವಿತರಿಸುವ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡುತ್ತಿದ್ದಾರೆ.
    ಬೃಹತ್ ಪ್ರತಿಭಟನೆಗೆ ಜೆಡಿಎಸ್ ಸಿದ್ದತೆ :
    ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಜಾತ್ಯತೀತ ಜನತಾದಳ ಬೆಂಬಲ ವ್ಯಕ್ತಪಡಿಸಿದ್ದು, ಫೆ.೩ರ ಶುಕ್ರವಾರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ನೇತೃತ್ವದಲ್ಲಿ ಬೃಹತ್ ಪ್ರಭಟನೆಗೆ ಮುಂದಾಗಿದೆ. ಈ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ವಿಧಾನಪರಿಷತ್ ಸದಸ್ಯ ಬೋಜೇಗೌಡ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
    ಬೃಹತ್ ಪ್ರತಿಭಟನೆ ಹಿನ್ನಲೆಯಲ್ಲಿ ನಗರದೆಲ್ಲೆಡೆ ಕಳೆದ ೨ ದಿನಗಳಿಂದ ಫ್ಲೆಕ್ಸ್, ಬ್ಯಾನರ್‌ಗಳು ರಾರಾಜಿಸುತ್ತಿವೆ. ಈ ನಡುವೆ ಶಾರದ ಅಪ್ಪಾಜಿ ಖುದ್ದಾಗಿ ಅಂಗಡಿ-ಮುಂಗಟ್ಟು, ಮನೆ ಮನೆಗಳಿಗೆ ತೆರಳಿ ಕರ ಪತ್ರಗಳನ್ನು ವಿತರಿಸುವ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡುತ್ತಿದ್ದಾರೆ. ಪಕ್ಷದ ಮುಖಂಡರು, ಕಾರ್ಯಕರ್ತರು ಸಹ ಪ್ರತಿಭಟನೆ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ.
    ತಮಿಳುನಾಡು ಸೇಲಂ ಕಾರ್ಖಾನೆಯಲ್ಲಿ ಪ್ರತಿಭಟನೆ:
    ನಗರದ ವಿಐಎಸ್‌ಎಲ್ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಅಭಿವೃದ್ಧಿಗೊಳಿಸುವಂತೆ ಆಗ್ರಹಿಸಿ ಕಳೆದ ೨ ದಿನಗಳ ಹಿಂದೆ ತಮಿಳುನಾಡು ಸೇಲಂ ಸ್ಟೀಲ್ ಕಾರ್ಖಾನೆಯಲ್ಲಿ ಅಲ್ಲಿನ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿರುವುದು ತಿಳಿದು ಬಂದಿದೆ.
    ಕಾರ್ಮಿಕ ಸಂಘಟನೆಗಳ ಮುಖಂಡರು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆಗಳನ್ನು ಖಂಡಿಸುವ ಜೊತೆಗೆ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ ಆಗ್ರಹಿಸಿ ಕಾರ್ಮಿಕರ ಹಾಗು ಅವರ ಅವಲಂಬಿತರ ಹಿತಕಾಪಾಡುವಂತೆ ಒತ್ತಾಯಿಸಿದ್ದಾರೆ.  


ಭದ್ರಾವತಿಯಲ್ಲಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ತಮಿಳುನಾಡು ಸೇಲಂ ಸ್ಟೀಲ್ ಕಾರ್ಖಾನೆಯಲ್ಲಿ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಫೆ.೭ರಂದು ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ



ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಜಾರಿಟೇಬಲ್ ಟ್ರಸ್ಟ್ ವತಿಯಿಂದ ಫೆ.೭ರಂದು ಬೆಳಿಗ್ಗೆ ಗಂಟೆಗೆ ಮೂಲೆಕಟ್ಟೆ ಇನ್ಫ್ಯಂಟ್ ಜೀಸಸ್ ಚರ್ಚ್ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಸೆಲ್ವರಾಜ್ ತಿಳಿಸಿದರು.
    ಭದ್ರಾವತಿ, ಫೆ. ೨ : ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಜಾರಿಟೇಬಲ್ ಟ್ರಸ್ಟ್ ವತಿಯಿಂದ ಫೆ.೭ರಂದು ಬೆಳಿಗ್ಗೆ ಗಂಟೆಗೆ ಮೂಲೆಕಟ್ಟೆ ಇನ್ಫ್ಯಂಟ್ ಜೀಸಸ್ ಚರ್ಚ್ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಸೆಲ್ವರಾಜ್ ತಿಳಿಸಿದರು.
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಕ್ರೈಸ್ತ ಸಮುದಾಯಕ್ಕೆ ಜಾಗವನ್ನು ದಾನವಾಗಿ ಕೊಟ್ಟಿದ್ದಾರೆ. ಈ ಜಾಗಕ್ಕೆ ಸಂಬಂಧಿಸಿದಂತೆ ಕ್ರೈಸ್ತರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಶಾಸಕರು ಕ್ರೈಸ್ತ ಸಮುದಾಯದವರ ಮೇಲೆ ಹೊಂದಿರುವ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
    ಈ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದರಿಂದ ಕ್ರೈಸ್ತ ಸಮುದಾಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಈಗಾಗಲೇ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ರು.೫೦ ಲಕ್ಷ ಅನುದಾನ ಸಹ ಬಿಡುಗಡೆಯಾಗಿದೆ. ಅಂದು ನಡೆಯಲಿರುವ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಫಾಸ್ಟರ್ ರೆವರೆಂಡ್ ಡಾ. ಎಸ್. ದೇವನೇಸನ್ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ರೈಸ್ತರು ಸಮುದಾಯದವರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
    ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಟ್ರಸ್ಟ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿದೆ. ಈಗಾಗಲೇ ಎಂಪಿಎಂ ಕಾರ್ಖಾನೆಯನ್ನು ರಾಜಕೀಯಕ್ಕೆ ದುರುದ್ದೇಶಕ್ಕೆ ಬಳಸಿಕೊಂಡು ಮುಚ್ಚಿಸಲಾಗಿದೆ. ಇದೀಗ ವಿಐಎಸ್‌ಎಲ್ ಕಾರ್ಖಾನೆ ಸಹ ಮುಚ್ಚಿಸುವ ಹುನ್ನಾರ ನಡೆಸುತ್ತಿರುವುದನ್ನು ಟ್ರಸ್ಟ್ ಖಂಡಿಸುತ್ತದೆ. ತಕ್ಷಣ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಅಭಿವೃದ್ಧಿ ಪಡಿಸಬೇಕೆಂದರು ಆಗ್ರಹಿಸಿದರು. 
    ಪತ್ರಿಕಾಗೋಷ್ಠಿಯಲ್ಲಿ ಪಾದರ್ ಆರೋಗ್ಯ ರಾಜ್, ನಗರಸಭೆ ಮಾಜಿ ಸದಸ್ಯ ಪ್ರಾನ್ಸಿಸ್, ಪಿ.ವಿ ಪೌಲ್, ದೇವಿಡ್, ದಾಸ್, ಫಾಸ್ಟರ್ ಪಾಂಡು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, February 1, 2023

ಕೇಂದ್ರ ಬಜೆಟ್ : ಗಣ್ಯರ ಮೆಚ್ಚುಗೆ

ಜಿ. ಧರ್ಮಪ್ರಸಾದ್-ಲೆಕ್ಕ ಪರಿಶೋಧಕರು, ಭದ್ರಾವತಿ.
    ಭದ್ರಾವತಿ, ಫೆ. ೧: ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ರವರು ಬುಧವಾರ ಮಂಡಿಸಿರುವ ಬಜೆಟ್ ಮಂಡನೆ ನಗರದ ಪ್ರಮುಖ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
    ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನೆಮ್ಮದಿಯ ಬದುಕು ನೀಡುವ ಬಜೆಟ್ :
    ಕೋವಿಡ್ ಸಂಕಷ್ಟದಲ್ಲಿ ಇಡೀ ಜಗತ್ತೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಈ ಸಂದರ್ಭದಲ್ಲಿ ೨೦೨೩-೨೪ನೇ ಸಾಲಿಗೆ ಸಂಬಂಧಿಸಿದಂತೆ ಮಂಡಿಸಿರುವ ಕೇಂದ್ರ ಬಜೆಟ್ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳುವ ಅವಕಾಶ ಕಲ್ಪಿಸಿದೆ.
    ರೈತರ ಬಾಳನ್ನು ಹಸನು ಮಾಡುವ ಕೃಷಿ ಆಧಾರಿತ ಸ್ಟಾರ್ಟಪ್‌ಗಳಿಗೆ ಉತ್ತೇಜನ, ಶಿಕ್ಷಣ ಕ್ಷೇತ್ರಕ್ಕೆ ಶೇಕಡ ೧೩ರಷ್ಟು ಹೆಚ್ಚಿನ ಅನುದಾನ ನಿಗದಿಪಡಿಸಿರುವುದು, ಬಂಡವಾಳ ವೆಚ್ಚ ಕ್ಯಾಪಿಟಲ್ ಎಕ್ಸ್ಪೆಂಡಿಚರ್ ಶೇ. ೩೩ರಷ್ಟು ಹೆಚ್ಚಿಸಿರುವ ಪರಿಣಾಮ ಸುಮಾರು ೧೦ ಲಕ್ಷ ಕೋಟಿ ವೆಚ್ಚ ಮಾಡುವ ಯೋಜನೆ ಭಾರತದಲ್ಲಿ ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶವನ್ನು ಸೃಷ್ಟಿಸುತ್ತದೆ. ಬಂಡವಾಳ ಹೂಡಿಕೆದಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಐವತ್ತಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿರುವುದು ಉದ್ಯೋಗಾವಕಾಶದ ಆಶಯಕ್ಕೆ ಪೂರಕವಾದ ಅಂಶವಾಗಿರುತ್ತದೆ. ಆದಾಯ ತೆರಿಗೆಯಲ್ಲಿ ಸಾಮಾನ್ಯ ವೇತನದಾರರಿಗೆ ಆರ್ಥಿಕ ಉತ್ತೇಜನ ನೀಡಿದ ಆಶಾದಾಯಕ ಬಜೆಟ್. ವಿಶ್ವದ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಈ ಸನ್ನಿವೇಶದಲ್ಲಿ  ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಅತ್ಯಂತ ಶ್ಲಾಘನೀಯ ಮತ್ತು ದೂರ ದೃಷ್ಟಿ ಹೊಂದಿರುವ ಬಜೆಟ್ ಆಗಿದೆ ಎಂದು ನಗರದ ಲೆಕ್ಕ ಪರಿಶೋಧಕ ಜಿ. ಧರ್ಮಪ್ರಸಾದ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


ಡಾ. ಬಿ.ಜಿ ಧನಂಜಯ
ಪ್ರಾಂಶುಪಾಲರು, ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಭದ್ರಾವತಿ.

    ಎಲ್ಲಾ ವರ್ಗದ ಜನರಿಗೂ ಪೂರಕವಾದ ಜನಪರ ಬಜೆಟ್ :
    ಸಂಪನ್ಮೂಲ ಕ್ರೋಢೀಕರಣಕ್ಕೆ ವಿಶೇಷ ಆದ್ಯತೆ ನೀಡಿರುವುದು ಆರ್ಥಿಕತೆ ಸದೃಢಗೊಳ್ಳಲಿದೆ. ರಫ್ತಿಗೆ ಉತ್ತೇಜನ ನೀಡಿರುವುದು ಸಹ ಒಳ್ಳೆಯ ಬೆಳವಣಿಗೆಯಾಗಿದೆ. ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುತ್ತಿರುವುದು ಒಕ್ಕೂಟ ವ್ಯವಸ್ಥೆಯಲ್ಲಿ ಸಣ್ಣ ರಾಜ್ಯಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ರಕ್ಷಣಾ ಕ್ಷೇತ್ರದಲ್ಲಿ ಆತ್ಮ ನಿರ್ಭರತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತದೆ. ತೆರಿಗೆ ವಂಚನೆ ವಿರುದ್ಧ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಒಟ್ಟಾರೆ ಭವಿಷ್ಯದಲ್ಲಿ ದೇಶ ಆರ್ಥಿಕವಾಗಿ ಸದೃಢಗೊಳ್ಳಲು ಅಗತ್ಯವಿರುವ ಎಲ್ಲಾ ವರ್ಗದ, ಎಲ್ಲಾ ಸಮಾಜದ ಜನಪರ ಬಜೆಟ್ ಆಗಿದೆ ಎಂದು ನಗರದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫೆ.೫ರಂದು ಬೌದ್ಧ ವಿಹಾರ ಲೋಕಾರ್ಪಣೆ ಸಮಾರಂಭ

ಭದ್ರಾವತಿಯಲ್ಲಿ ಮೊಟ್ಟಮೊದಲ ಭಗವಾನ್ ಬುದ್ಧವಿಹಾರ ನಿರ್ಮಿಸಲಾಗಿದೆ. ಫೆ.೫ರಂದು ಇದರ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಬುದ್ಧ ಧಮ್ಮಾಂಕುರ ಟ್ರಸ್ಟ್ ಅಧ್ಯಕ್ಷ ಪ್ರೊ. ರಾಚಪ್ಪ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
    ಭದ್ರಾವತಿ, ಫೆ. ೧:  ಭಗವಾನ್ ಬುದ್ಧ ಏಷ್ಯಾ ಖಂಡದ ಬೆಳಕು ಮಾತ್ರವಲ್ಲ ಜಗತ್ತಿನ ಬೆಳಕು, ಶಾಂತಿಯ ದೂತ ಹಾಗೂ ಭಾರತದ ಸಾಂಸ್ಕೃತಿಕ ರಾಯಭಾರಿ, ಇವರ ಬೋಧನೆಗಳಾದ ಪ್ರೀತಿ, ಕರುಣೆ, ಮೈತ್ರಿ, ಸಹೋದರತ್ವ ಹಾಗೂ ಸತ್ಯ, ಅಹಿಂಸೆ, ಸಮಾನತೆ ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ. ಮಾನವನ ನೆಮ್ಮದಿಗೆ ತಿಸರಣ, ಪಂಚಶೀಲ ಮತ್ತು ಅಷ್ಟಾಂಗ ಮಾರ್ಗಗಳನ್ನು ಸಮಾಜಕ್ಕೆ ಪ್ರಚುರಪಡಿಸಬೇಕಾಗಿದೆ. ಈ ಉದ್ದೇಶವನ್ನಿಟ್ಟುಕೊಂಡು ನಗರದಲ್ಲಿ ಮೊಟ್ಟಮೊದಲ ಭಗವಾನ್ ಬುದ್ಧವಿಹಾರ ನಿರ್ಮಿಸಲಾಗಿದೆ. ಫೆ.೫ರಂದು ಇದರ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಬುದ್ಧ ಧಮ್ಮಾಂಕುರ ಟ್ರಸ್ಟ್ ಅಧ್ಯಕ್ಷ ಪ್ರೊ. ರಾಚಪ್ಪ ತಿಳಿಸಿದರು.
  ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಟ್ರಸ್ಟ್ ಕಾರ್ಯದರ್ಶಿ ಶ್ರೀನಿವಾಸ್‌ರವರು ಹೊಸನಂಜಾಪುರದಲ್ಲಿ ತಮ್ಮ ಸ್ವಂತ ೨ ಎಕರೆ ಜಮೀನು ಬೌದ್ಧ ವಿಹಾರಕ್ಕೆ ದಾನವಾಗಿ ನೀಡಿದ್ದಾರೆ. ಈ ಜಮೀನಿನಲ್ಲಿ ಸರ್ಕಾರ ಹಾಗು ಸಾರ್ವಜನಿಕರಿಂದ ಯಾವುದೇ ದೇಣಿಗೆ ಸ್ವೀಕರಿಸದೆ ಟ್ರಸ್ಟ್ ವತಿಯಿಂದ ೧೫ ಲಕ್ಷ ರು. ವೆಚ್ಚದಲ್ಲಿ ಬೌದ್ಧ ವಿಹಾರ ನಿರ್ಮಿಸಲಾಗಿದೆ. ೩ ಅಡಿ ಎತ್ತರದ ಭಗವಾನ್ ಬುದ್ಧ ಪ್ರತಿಮೆ ಪ್ರತಿಷ್ಠಾಪಿಸಲಾಗಿದ್ದು, ಈ ವಿಹಾರ ಧ್ಯಾನ, ಪ್ರಾರ್ಥನೆ ಸೇರಿದಂತೆ ಜ್ಞಾನಾರ್ಜನೆಗೆ ಪೂರಕವಾದ ಸಾಮಾಜಿಕ ಕಾರ್ಯಗಳಿಗೆ ಸದ್ಬಳಕೆಯಾಗಬೇಕೆಂಬುದು ಟ್ರಸ್ಟ್ ಉದ್ದೇಶವಾಗಿದೆ ಎಂದರು.
    ಅಂದು ಬೆಳಿಗ್ಗೆ ೧೦.೩೦ಕ್ಕೆ ಶಾಸಕ ಬಿ.ಕೆ  ಸಂಗಮೇಶ್ವರ್ ವಿಹಾರ ಲೋಕಾರ್ಪಣೆಗೊಳಿಸಲಿದ್ದು, ಚೇತವನ ಬುದ್ಧವಿಹಾರ, ಕೊಳ್ಳೇಗಾಲದ ಭಂತೆ ಸುಗತ ಪಾಲರವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಲಿವೆ.   ಈ ಕಾರ್ಯಕ್ರಮದಲ್ಲಿ ರಾಜ್ಯ, ಜಿಲ್ಲೆ ಹಾಗೂ ತಾಲೂಕಿನ ಜನಪ್ರತಿನಿಧಿಗಳು, ವಿವಿಧ ಸಮಾಜದ ಮುಖಂಡರು ಹಾಗೂ ದಲಿತ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.  ಬೌದ್ದ ದಮ್ಮದಲ್ಲಿ ಅಸಕ್ತಿಯಿರುವವರೆಲ್ಲರೂ ಭಾಗವಹಿಸುವಂತೆ ಕೋರಿದರು.
    ಟ್ರಸ್ಟ್ ಕಾರ್ಯಕಾರಿ ಮಂಡಳಿ ಪ್ರಮುಖರಾದ ಲಕ್ಷ್ಮಣ್, ಸುರೇಶ್, ಡಿ. ನರಸಿಂಹಮೂರ್ತಿ, ಎ. ತಿಪ್ಪೇಸ್ವಾಮಿ, ಕೃಷ್ಣ ಛಲವಾದಿ ಮತ್ತು ಧರ್ಮರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಐಎಸ್‌ಎಲ್ ಹೋರಾಟಕ್ಕೆ ಜೆಡಿಯು ಸಂಪೂರ್ಣ ಬೆಂಬಲ : ಮಹಿಮಾ ಜೆ. ಪಟೇಲ್

ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಬುಧವಾರ ೧೪ನೇ ದಿನ ಪೂರೈಸಿತು. ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್‌ರವರಿಗೆ ಗುತ್ತಿಗೆ ಕಾರ್ಮಿಕರು ಮನವಿ ಸಲ್ಲಿಸಿದರು.
    ಭದ್ರಾವತಿ, ಫೆ. ೧ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಜನತಾದಳ(ಸಂಯುಕ್ತ) ಪಕ್ಷ ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ದವಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್ ಹೇಳಿದರು.
    ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಬುಧವಾರ ೧೪ನೇ ದಿನ ಪೂರೈಸಿತು. ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ನಮ್ಮ ಪಕ್ಷದ ವತಿಯಿಂದ ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಈ ಸಂಬಂಧ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಸಹ ಆಯೋಜಿಸಲಾಗುವುದು. ಅಲ್ಲದೆ ಬಿಹಾರ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದು, ಅಲ್ಲಿನ ಮುಖ್ಯಮಂತ್ರಿಗಳು, ಪಕ್ಷದ ಪ್ರಮುಖರಾದ ನಿತೀಶ್‌ಕುಮಾರ್‌ರವರ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.
    ನಮ್ಮ ತಂದೆಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂದು ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಹಿನ್ನಲೆಯಲ್ಲಿ ಈ ಕಾರ್ಖಾನೆಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸುವ ತೀರ್ಮಾನ ಕೈಗೊಳ್ಳಲಾಯಿತು. ನಂತರ ಕೇಂದ್ರ ಸರ್ಕಾರದ ಉಕ್ಕು ಪ್ರಾಧಿಕಾರಕ್ಕೆ ವಹಿಸಿಕೊಟ್ಟರೂ ಸಹ ಕಾರ್ಖಾನೆ ಅಭಿವೃದ್ಧಿ ಕಾಣದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಪ್ರಸ್ತುತ ಕಾರ್ಖಾನೆ ಮುಚ್ಚುವ ಹಂತಕ್ಕೆ ತಲುಪಿರುವುದು ವಿಷಾದನೀಯ ಬೆಳವಣಿಯಾಗಿದೆ. ಕಾರ್ಮಿಕರು ಯಾವುದೇ ಕಾರಣಕ್ಕೂ ವಿಚಲಿತರಾಗಬಾರದು. ತಮ್ಮಲ್ಲಿರುವ ಕೌಶಲ್ಯಗಳಿಗೆ ತಕ್ಕಂತೆ ಬದುಕಿಗೆ ಪೂರಕವಾದ ಉದ್ಯೋಗಗಳನ್ನು ಸೃಷ್ಟಿಸಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕೆಂದರು.  
    ಬೃಹತ್ ಕಾರ್ಖಾನೆಗಳ ಆರಂಭದಲ್ಲಿಯೇ ಇವುಗಳು ಒಂದಲ್ಲ ಒಂದು ದಿನ ಅವನತಿ ದಾರಿ ಹಿಡಿಯುತ್ತವೆ ಎಂಬುದನ್ನು ನಮ್ಮ ಪೂರ್ವಿಕರಿಗೆ ಮನವರಿಕೆಯಾಗಿತ್ತು. ಈ ಹಿನ್ನಲೆಯಲ್ಲಿಯೇ ಮಹಾತ್ಮಗಾಂಧಿಯವರು ದೇಶದಲ್ಲಿ ಗುಡಿ ಕೈಗಾರಿಕೆಗಳು, ಸಣ್ಣ ಕೈಗಾರಿಕೆಗಳು ಹೆಚ್ಚು ಹೆಚ್ಚು ಆರಂಭಗೊಳ್ಳಬೇಕೆಂದಿದ್ದರು. ಇದೀಗ ಅವರ ಮಾತು ಸತ್ಯವಾಗಿ ಕಾಣುತ್ತಿದೆ ಎಂದರು.
    ಪಕ್ಷದ ಪ್ರಮುಖರಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜ್, ವಕ್ತಾರ ಬಿ.ಟಿ ರಮೇಶ್‌ಗೌಡ, ರಾಜ್ಯ ಕಾರ್ಯದರ್ಶಿಗಳಾದ ಶಶಿಕುಮಾರ್ ಗೌಡ, ಕಲ್ಪನ ಗೌಡ, ರೈತ ಘಟಕದ ಅಧ್ಯಕ್ಷರಾದ ಲಕ್ಷ್ಮೀ, ಕಲಾವತಿ, ಶ್ರೀನಿವಾಸ್,  ಸೇರಿದಂತೆ ಇನ್ನಿತರರು ಮಾತನಾಡಿದರು. ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಬುದೀಪಕ್‌ಕುಮಾರ್, ಜಿಲ್ಲಾ ಸಂಚಾಲಕ ದೇವರಾಜ್ ಶಿಂಧೆ, ತಾಲೂಕು ಅಧ್ಯಕ್ಷ ರಘು ಸಂಕ್ಲಿಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ಬೆಂಬಲ ಸೂಚಿಸಿದೆ. ಮಂಡಳಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಿ.ಜೆ ಪ್ರಭು ಮಾತನಾಡಿದರು.

    ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ಬೆಂಬಲ:

    ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ಬೆಂಬಲ ಸೂಚಿಸಿದೆ. ಮಂಡಳಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಿ.ಜೆ ಪ್ರಭು ಮಾತನಾಡಿ, ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಹೂಡುವ ಮೂಲಕ ಪುನಶ್ಚೇತನ ಕೈಗೊಳ್ಳಲು ಇಚ್ಛಾಶಕ್ತಿ ಇಲ್ಲದ ಸರ್ಕಾರ ಹಾಗು ಜನಪ್ರತಿನಿಧಿಗಳ ವಿರುದ್ಧ ಕಾರ್ಮಿಕರು ಸೂಕ್ತ ನಿರ್ಣಯ ಕೈಗೊಳ್ಳುವವರೆಗೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಈಗಲಾದರೂ ಕಾರ್ಮಿಕರು ಎಚ್ಚೆತ್ತುಕೊಂಡು ತಮ್ಮ ಹೋರಾಟ ನಡೆಸಬೇಕೆಂದರು.  ಮಂಡಳಿ ತಾಲೂಕು ಅಧ್ಯಕ್ಷ ಸಂತೋಷ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.