![](https://blogger.googleusercontent.com/img/a/AVvXsEg-TePwSfS67ZRUVBC4_Op2E8sokajQ03l7vhZsd9ecq1cUPf4vxtWP_NtpRzVLtCd1MkBQg64hsH0CteURAtDWdoGe8RL1b1O8Ds9UUyPp4ENj7tfcqcyKzH5HSnBsUd4NZlZUODxKMBJgONzLk5rxM6Awo67uPtJOzUiXGsyEUHhz7DQXWPJTMUhdwA=w399-h400-rw)
ಭದ್ರಾವತಿ , ಫೆ. 21: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮತ್ತು ಮೈಸೂರು ಕಾಗದ ಕಾರ್ಖಾನೆ ಪುನಶ್ಚೇತನಗೊಳಿಸುವುದು ನಮ್ಮ ಉದ್ದೇಶವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪುನರುಚ್ಚರಿಸಿದರು.
ಅವರ ಮಂಗಳವಾರ ತಾಲೂಕಿನ ಗಡಿ ಭಾಗದ ಕಾರೇನಹಳ್ಳಿಯಲ್ಲಿ ಜೆಡಿಎಸ್ ಪಕ್ಷದ ಬಹು ನಿರೀಕ್ಷಿತ ಪಂಚರತ್ನ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಣ, ಆಸ್ಪತ್ರೆ, ಸ್ವಾಭಿಮಾನಿ ರೈತ, ಉದ್ಯೋಗ, ಮನೆ ನಿರ್ಮಾಣ, ಪ್ರತಿ ಕುಟುಂಬದ ಹಿರಿಯರಿಗೆ 5 ಸಾವಿರ ರು., ಮಸಾಶನ 800 ರು. ಬದಲಾಗಿ 2000 ರು. ಏರಿಕೆ, ಶ್ರೀಮಂತ ಮತ್ತು ಬಡವರ ನಡುವಿನ ಆರ್ಥಿಕ ವ್ಯತ್ಯಾಸ ಕುಗ್ಗಿಸುವುದು. ಜನರ ಆತ್ಮವಿಶ್ವಾಸ ಹೆಚ್ಚಿಸಿ ಸದೃಢ ಸರ್ಕಾರ ನಿರ್ಮಾಣಕ್ಕೆ ಕರೆ ನೀಡುವುದು ಪಂಚರತ್ನ ಯಾತ್ರೆ ಉದ್ದೇಶವಾಗಿದೆ ಎಂದರು.
ಈ ಬಾರಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಶಾರದ ಅಪ್ಪಾಜಿ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ವಿಧಾನಸಭೆಗೆ ಆಯ್ಕೆ ಮಾಡಬೇಕು. ಆ ಮೂಲಕ ಆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಾರಣಕರ್ತರಾಗಬೇಕೆಂದು ಮನವಿ ಮಾಡಿದರು.
ಯಾತ್ರೆ ಕೆಂಪೇಗೌಡ ನಗರ, ಬಾರಂದೂರು, ಕೆಂಚೇನಹಳ್ಳಿ, ಮಾವಿನಕೆರೆ, ತಾಷ್ಕೆಂಟ್‌ನಗರ, ಯರೇಹಳ್ಳಿ, ಮಾರುತಿನಗರ, ಶಿವನಿಕ್ರಾಸ್, ಗೌರಾಪುರ, ಬಸವನಗುಡಿ, ಕೆ.ಎಚ್ ನಗರ, ಅಂತರಗಂಗೆ, ಕಾಚಗೊಂಡನಹಳ್ಳಿ, ಅಶ್ವಥ್‌ನಗರ, ಶಿವಾಜಿ ವೃತ್ತ, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ, ಅಂಡರ್‌ಬ್ರಿಡ್ಜ್, ಹೊಸ ಸೇತುವೆ, ಕೆಎಸ್‌ಆರ್‌ಟಿಸಿ ಬಸ್ ಡಿಪೋ ವೃತ್ತ, ಕಂಚಿಬಾಗಿಲು ವೃತ್ತ ಮೂಲಕ ಕನಕಮಂಟಪ ಮೈದಾನ ತಲುಪಲಿದೆ. ಸಂಜೆ ೪ ಗಂಟೆಗೆ ಕನಕಮಂಟಪ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ನವುಲೆ ಬಸಾವಪುರದಲ್ಲಿ ಕುಮಾರ ಸ್ವಾಮಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ.
ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದಾ ಅಪ್ಪಾಜಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡ, ರಾಜ್ಯ ಕಾರ್ಯದರ್ಶಿ ಜೆ.ಪಿ ಯೋಗೇಶ್, ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಯುವ ಘಟಕದ ಜಿಲ್ಲಾಧ್ಯಕ್ಷ ಮಧು ಕುಮಾರ್ ನಗರ ಘಟಕದ ಅಧ್ಯಕ್ಷ ಆರ್ ಕರುಣಾ ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಧರ್ಮಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.