Tuesday, February 21, 2023

ಶಿವಮೊಗ್ಗ ಜಿಲ್ಲೆಯ ರಾಜಕಾರಣಿಗಳಿಗೆ ರೈತರು, ಕಾರ್ಮಿಕರ ಬಗ್ಗೆ ಕಾಳಜಿ ಇಲ್ಲ : ಎಚ್.ಡಿ ಕುಮಾರಸ್ವಾಮಿ


ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಜೆಡಿಎಸ್ ಪಕ್ಷದ ಬಹು ನಿರೀಕ್ಷಿತ ಪಂಚರತ್ನ ಯಾತ್ರೆ ವೇದಿಕೆ ಕಾರ್ಯಕ್ರಮ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಸಿ.ಎಂ ಇಬ್ರಾಹಿಂ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.  
    ಭದ್ರಾವತಿ, ಫೆ. ೨೧: ಶಿವಮೊಗ್ಗ ಜಿಲ್ಲೆಯಲ್ಲಿ ರೈತರು, ಕಾರ್ಮಿಕರ ಸಮಸ್ಯೆಗಳು ಬಹಳಷ್ಟಿವೆ. ಆದರೆ ಜನರ ಅಗತ್ಯ ಸಮಸ್ಯೆಗಳಿಗೆ ಇಲ್ಲಿನ ರಾಜಕಾರಣಿಗಳು ಸ್ಪಂದಿಸದೆ ಹಣ ಲೂಟಿ ಮಾಡುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಇದರಿಂದಾಗಿ ದಲಿತರು, ರೈತರು, ಕಾರ್ಮಿಕರು ಬಡವರಾಗಿಯೇ ಉಳಿಯುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದರು.
    ಅವರು ಹಳೇನಗರದ ಕನಕಮಂಟಪ ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಜೆಡಿಎಸ್ ಪಕ್ಷದ ಬಹು ನಿರೀಕ್ಷಿತ ಪಂಚರತ್ನ ಯಾತ್ರೆ ವೇದಿಕೆ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದರು.
    ಜಿಲ್ಲೆಯಲ್ಲಿ ಅಡಕೆ ಬೆಳೆಗಾರರ ಸಮಸ್ಯೆ, ಬಗರ್‌ಹುಕುಂ ರೈತರ ಸಮಸ್ಯೆಗಳಿವೆ. ಅಭಿವೃದ್ಧಿಗಾಗಿ ಭೂಮಿ ಕಳೆದುಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ನೀಡಿಲ್ಲ. ಬೃಹತ್ ಕಾರ್ಖಾನೆಗಳು ಮುಚ್ಚಿ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಸಾಕಷ್ಟು ಬಡವರಿಗೆ ಮನೆಗಳಿಲ್ಲವಾಗಿದೆ. ಇಂತಹ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಜಿಲ್ಲೆಯ ರಾಜಕಾರಣಿಗಳು ವಿಫಲರಾಗಿದ್ದಾರೆ. ಈ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಡುವ ಉದ್ದೇಶವೇ ಪಂಚರತ್ನ ಯಾತ್ರೆಯಾಗಿದೆ. ಇದನ್ನು ಜನರು ಅರ್ಥ ಮಾಡಿಕೊಂಡು ಈ ಬಾರಿ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸಬೇಕೆಂದರು.
    ಜಿಲ್ಲೆಯ ರಾಜಕಾರಣಿಗಳು ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಕೇವಲ ಅವರು ಹಾಗು ಕುಟುಂಬದವರು ಸಮೃದ್ಧಿಯಾಗುತ್ತಿದ್ದಾರೆ. ಇಂತಹ ರಾಜಕಾರಣ ನಾನು ಎಂದಿಗೂ ಮಾಡಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾದರೂ ಸಹ ಪೂರ್ಣ ಅಧಿಕಾರ ನೀಡದಿದ್ದರೂ ಸಹ ರೈತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಎರಡು ಬಾರಿ ಸಾಲ ಮನ್ನಾ ಮಾಡಿದ್ದೇನೆ. ಬಡವರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸಲು ೨.೫ ಲಕ್ಷ ಕೋಟಿ ಅನುದಾನದ ಅಗತ್ಯವಿದೆ.  ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಮೂಲಕ ಅಗತ್ಯವಿರುವ ಅನುದಾನವನ್ನು ಜನರ ತೆರಿಗೆ ಹಣದಲ್ಲಿ ಬಳಸಿಕೊಳ್ಳುತ್ತೇನೆ. ಈ ಬಾರಿ ನನಗೆ ಪೂರ್ಣ ಪ್ರಮಾಣದ ಅಧಿಕಾರ ನೀಡುವಂತೆ ಮನವಿ ಮಾಡಿದರು.
    ಕ್ಷೇತ್ರದ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳನ್ನು ಮುಚ್ಚಲು ಹಣ ಬಿಡುಗಡೆ ಮಾಡಿರುವ ಈ ಹಿಂದಿನ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳಿಗೆ ಈ ಕಾರ್ಖಾನೆಗಳನ್ನು ಉಳಿಸಿಕೊಳ್ಳುವುದಾಗಿ ಭರವಸೆ ನೀಡುವ ಯಾವುದೇ ನೈತಿಕತೆ ಇಲ್ಲವಾಗಿದೆ. ನಮ್ಮ ಸರ್ಕಾರ ಈ ಎರಡು ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಲು ಬದ್ಧವಾಗಿದೆ. ರಾಜ್ಯ ಸರ್ಕಾರವೇ ಈ ಎರಡು ಕಾರ್ಖಾನೆಗಳನ್ನು ಮುನ್ನಡೆಸಿಕೊಂಡು ಹೋಗಲಿದೆ. ಅಲ್ಲದೆ ಇಲ್ಲಿನ ಬಗರ್ ಹುಕುಂ ರೈತರ ಸಮಸ್ಯೆಗಳನ್ನು ಪರಿಹರಿಸುತ್ತೇನೆ. ಈ ಬಾರಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಶಾರದ ಅಪ್ಪಾಜಿಯವರನ್ನು ಗೆಲ್ಲಿಸುವ ಮೂಲಕ ವಿಧಾನಸಭೆಗೆ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
    ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದಾ ಅಪ್ಪಾಜಿ, ವಿಧಾನ ಪರಿಷತ್ ಸದಸ್ಯ  ಎಸ್.ಎಲ್  ಬೋಜೇಗೌಡ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಜ್ಮಾ,  ರಾಜ್ಯ ಕಾರ್ಯದರ್ಶಿ ಜೆ.ಪಿ ಯೋಗೇಶ್,  ಜಿಲ್ಲಾಧ್ಯಕ್ಷ  ಎಂ. ಶ್ರೀಕಾಂತ್,  ಯುವ ಘಟಕದ ಜಿಲ್ಲಾಧ್ಯಕ್ಷ ಮಧು ಕುಮಾರ್, ಗೀತಾ,  ನಗರ ಘಟಕದ ಅಧ್ಯಕ್ಷ ಆರ್ ಕರುಣಾ ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಧರ್ಮಕುಮಾರ್, ಯುವ ಘಟಕದ ಅಧ್ಯಕ್ಷ ಎಂ.ಎ ಅಜಿತ್, ಕರಿಯಣ್ಣ, ಮೈಲಾರಪ್ಪ, ಮುರ್ತುಜಾಖಾನ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪಂಚರತ್ನ ಯಾತ್ರೆ ವೇದಿಕೆ ಕಾರ್ಯಕ್ರಮ ಉದ್ಘಾಟನೆ

ಭದ್ರಾವತಿ, ಫೆ. 21:  ಹಳೇನಗರದ ಕನಕಮಂಟಪ ಆಯೋಜಿಸಲಾಗಿದ್ದ  ಜೆಡಿಎಸ್ ಪಕ್ಷದ ಬಹು ನಿರೀಕ್ಷಿತ ಪಂಚರತ್ನ  ಯಾತ್ರೆ ವೇದಿಕೆ ಕಾರ್ಯಕ್ರಮ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಉದ್ಘಾಟಿಸಿದರು.
   ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದಾ ಅಪ್ಪಾಜಿ, ವಿಧಾನ ಪರಿಷತ್ ಸದಸ್ಯ  ಎಸ್.ಎಲ್  ಬೋಜೇಗೌಡ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಜ್ಮಾ,  ರಾಜ್ಯ ಕಾರ್ಯದರ್ಶಿ ಜೆ.ಪಿ ಯೋಗೇಶ್,  ಜಿಲ್ಲಾಧ್ಯಕ್ಷ  ಎಂ. ಶ್ರೀಕಾಂತ್,  ಯುವ ಘಟಕದ ಜಿಲ್ಲಾಧ್ಯಕ್ಷ ಮಧು ಕುಮಾರ್, ಗೀತಾ,  ನಗರ ಘಟಕದ ಅಧ್ಯಕ್ಷ ಆರ್ ಕರುಣಾ ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಧರ್ಮಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪಂಚರತ್ನ ಯಾತ್ರೆಯಲ್ಲಿ ಕುಮಾರ ಸ್ವಾಮಿಗೆ ವಿಶೇಷ ಹಾರತುರಾಯಿ

    ಭದ್ರಾವತಿ, ಫೆ.21: ಉಕ್ಕಿನ ನಗರಕ್ಕೆ ಮಂಗಳವಾರ ಆಗಮಿಸಿದ ಪಂಚರತ್ನ ಯಾತ್ರೆಯಲ್ಲಿ ಹಲವು ವಿಶೇಷತೆಗಳು ಕಂಡುಬಂದವು. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿಯವರಿಗೆ ಆಭಿಮಾನಿಗಳು, ಕಾರ್ಯಕರ್ತರಿಂದ ವಿಶೇಷ ಹಾರತುರಾಯಿಗಳ ಅದ್ದೂರಿ ಸ್ವಾಗತ ಕಂಡು ಬಂದಿತು.


      ನೀರಿನ ಬಾಟಲಿಗಳಿಂದ, ಕಲ್ಲಂಗಡಿ ಹಣ್ಣುಗಳಿಂದ ಹಾಗು ಅಡಕೆ ತಟ್ಟೆಗಳಿಂದ ತಯಾರಿಸಿದ ಬೃಹತ್ ಹಾರಗಳನ್ನು ಕ್ರೇನ್ ಬಳಸಿ ಹಾಕುವ  ಮೂಲಕ ಸಂಭ್ರಮಿಸಿದರು.
   ಹಲವು ಗ್ರಾಮಗಳಲ್ಲಿ ಗ್ರಾಮಸ್ಥರು ತಮ್ಮ ಅಳಲನ್ನು ಕುಮಾರ ಸ್ವಾಮಿ ಬಳಿ ತೋರಿಕೊಂಡರು. ಸುಡು ಬಿಸಿಲಿನಲ್ಲೂ ಆಭಿಮಾನಿಗಳು, ಕಾರ್ಯಕರ್ತರು ಯಾತ್ರೆಯಲ್ಲಿ  ಪಾಲ್ಗೊಂಡು ಸಂಜೆವರೆಗೂ ಹೆಜ್ಜೆ ಹಾಕಿದರು.





ಸೋಗಾನೆ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ

ಶಿವಮೊಗ್ಗ, ಫೆ. 21 :  ಕೊನೆಗೂ ಮಲೆನಾಡಿನ ಜನರ ಬಹು ವರ್ಷಗಳ ಕನಸು ಈಡೇರಿದೆ.   ಸೋಗಾನೆ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ  ಮಂಗಳವಾರ  ಮಧ್ಯಾಹ್ನ ಬಂದಿಳಿದಿದ್ದು, ಜನರಲ್ಲಿ ಸಂಭ್ರಮ ಉಂಟುಮಾಡಿದೆ.  

     ಪ್ರಾಯೋಗಿಕವಾಗಿ ವಾಯು ಸೇನೆಯ ಬೋಯಿಂಗ್ ವಿಮಾನ ಬಂದಿಳಿದಿದೆ.  ಬೋಯಿಂಗ್ 737 – 7HI ಮಾದರಿಯ ವಿಮಾನ  ಮಧ್ಯಾಹ್ನ 12 ಗಂಟೆಗೆ  ದೆಹಲಿಯಿಂದ ಹೊರಟಿದ್ದು, ಮಧ್ಯಾಹ್ನ 2.30ರ ಹೊತ್ತಿಗೆ ಸೋಗಾನೆ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.  

     ಯಾವುದೇ ಅಡೆತಡೆ ಇಲ್ಲದೆ  ವಿಮಾನ ಬಂದಿಳಿದಿದ್ದು, ಮಧ್ಯಾಹ್ನ ವಿಮಾನ  ಬರುತ್ತಿದ್ದಂತೆ ಸುತ್ತಮುತ್ತಲ ಪ್ರದೇಶದ ಜನರು ಕುತೂಹಲದಿಂದ ಗಮನಿಸಿದರು. 

ವಿಐಎಸ್ಎಲ್-ಎಂಪಿಎಂ ಕಾರ್ಖಾನೆಗಳ ಪುನಶ್ಚೇತನಕ್ಕೆ ಬದ್ದ : ಎಚ್.ಡಿ ಕುಮಾರಸ್ವಾಮಿ

ಭದ್ರಾವತಿ , ಫೆ. 21:   ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮತ್ತು ಮೈಸೂರು ಕಾಗದ ಕಾರ್ಖಾನೆ ಪುನಶ್ಚೇತನಗೊಳಿಸುವುದು ನಮ್ಮ ಉದ್ದೇಶವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪುನರುಚ್ಚರಿಸಿದರು.

       ಅವರ ಮಂಗಳವಾರ ತಾಲೂಕಿನ ಗಡಿ ಭಾಗದ  ಕಾರೇನಹಳ್ಳಿಯಲ್ಲಿ   ಜೆಡಿಎಸ್ ಪಕ್ಷದ ಬಹು ನಿರೀಕ್ಷಿತ ಪಂಚರತ್ನ   ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

      ಶಿಕ್ಷಣ, ಆಸ್ಪತ್ರೆ, ಸ್ವಾಭಿಮಾನಿ ರೈತ, ಉದ್ಯೋಗ, ಮನೆ ನಿರ್ಮಾಣ, ಪ್ರತಿ ಕುಟುಂಬದ ಹಿರಿಯರಿಗೆ 5 ಸಾವಿರ ರು., ಮಸಾಶನ 800 ರು. ಬದಲಾಗಿ 2000 ರು. ಏರಿಕೆ, ಶ್ರೀಮಂತ ಮತ್ತು ಬಡವರ ನಡುವಿನ ಆರ್ಥಿಕ ವ್ಯತ್ಯಾಸ ಕುಗ್ಗಿಸುವುದು. ಜನರ ಆತ್ಮವಿಶ್ವಾಸ ಹೆಚ್ಚಿಸಿ  ಸದೃಢ ಸರ್ಕಾರ ನಿರ್ಮಾಣಕ್ಕೆ ಕರೆ ನೀಡುವುದು ಪಂಚರತ್ನ ಯಾತ್ರೆ ಉದ್ದೇಶವಾಗಿದೆ ಎಂದರು.

    ಈ ಬಾರಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ  ಶಾರದ ಅಪ್ಪಾಜಿ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ವಿಧಾನಸಭೆಗೆ ಆಯ್ಕೆ ಮಾಡಬೇಕು. ಆ ಮೂಲಕ ಆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಾರಣಕರ್ತರಾಗಬೇಕೆಂದು ಮನವಿ ಮಾಡಿದರು.

     ಯಾತ್ರೆ ಕೆಂಪೇಗೌಡ ನಗರ, ಬಾರಂದೂರು, ಕೆಂಚೇನಹಳ್ಳಿ, ಮಾವಿನಕೆರೆ, ತಾಷ್ಕೆಂಟ್‌ನಗರ, ಯರೇಹಳ್ಳಿ, ಮಾರುತಿನಗರ, ಶಿವನಿಕ್ರಾಸ್, ಗೌರಾಪುರ, ಬಸವನಗುಡಿ, ಕೆ.ಎಚ್ ನಗರ, ಅಂತರಗಂಗೆ, ಕಾಚಗೊಂಡನಹಳ್ಳಿ, ಅಶ್ವಥ್‌ನಗರ, ಶಿವಾಜಿ ವೃತ್ತ, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ, ಅಂಡರ್‌ಬ್ರಿಡ್ಜ್, ಹೊಸ ಸೇತುವೆ, ಕೆಎಸ್‌ಆರ್‌ಟಿಸಿ ಬಸ್ ಡಿಪೋ ವೃತ್ತ, ಕಂಚಿಬಾಗಿಲು ವೃತ್ತ ಮೂಲಕ ಕನಕಮಂಟಪ ಮೈದಾನ ತಲುಪಲಿದೆ. ಸಂಜೆ ೪ ಗಂಟೆಗೆ ಕನಕಮಂಟಪ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.  ನವುಲೆ ಬಸಾವಪುರದಲ್ಲಿ ಕುಮಾರ ಸ್ವಾಮಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. 

     ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದಾ ಅಪ್ಪಾಜಿ, ವಿಧಾನ ಪರಿಷತ್ ಸದಸ್ಯ  ಎಸ್.ಎಲ್  ಬೋಜೇಗೌಡ, ರಾಜ್ಯ ಕಾರ್ಯದರ್ಶಿ ಜೆ.ಪಿ ಯೋಗೇಶ್,  ಜಿಲ್ಲಾಧ್ಯಕ್ಷ  ಎಂ. ಶ್ರೀಕಾಂತ್,  ಯುವ ಘಟಕದ ಜಿಲ್ಲಾಧ್ಯಕ್ಷ ಮಧು ಕುಮಾರ್ ನಗರ ಘಟಕದ ಅಧ್ಯಕ್ಷ ಆರ್ ಕರುಣಾ ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಧರ್ಮಕುಮಾರ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.   

Monday, February 20, 2023

‎ ಐ.ವಿ ಸಂತೋಷ್, ಸ್ಟೀವನ್ ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಸೇರ್ಪಡೆ

   ಭದ್ರಾವತಿ, ಜ. 21:  ನ್ಯೂಕಾಲೋನಿ ಭಾಗದ ಯುವ ಮುಖಂಡರು, ಸಮಾಜ ಸೇವಕರುಗಳಾದ ರಾಷ್ಟ್ರೀಯ ಮಾನವ ಹಕ್ಕು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ತಾಲೂಕು ಅಧ್ಯಕ್ಷ  ಐ.ವಿ ಸಂತೋಷ್ ಕುಮಾರ್ ಮತ್ತು ಹಾಗೂ ಕಾಲ್ವರಿ ಕಾರುಣ್ಯ ಟ್ರಸ್ಟ್ ಸಂಸ್ಥಾಪಕ ಸ್ಟೀವನ್ ಜೋನಾಥನ್  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.      
 ಬೆಣ್ಣೆಕೃಷ್ಣ ವೃತ್ತದಲ್ಲಿ ಮಹಾಶಿವರಾತ್ರಿ ಅಂಗವಾಗಿ ಆಯೋಜಿಸಲಾಗಿದ್ದ  ಕಬಡ್ಡಿ ಪಂದ್ಯಾವಳಿಯಲ್ಲಿ ಯುವ ಮುಖಂಡ ಬಿ.ಎಸ್ ಗಣೇಶ್ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ತೊರೆದು  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 
    ನಗರಸಭೆ ಮಾಜಿ ಸದಸ್ಯರಾದ ಬಾಲಕೃಷ್ಣ ಫ್ರಾನ್ಸಿಸ್,  ಎಸ್.ಎಸ್ ಭೈರಪ್ಪ, ಹಾವು ಮಂಜ, ದಾಸ್, ನಾಸೀರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
 

ಪರವಾನಿಗೆ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ : ಸೂಕ್ತ ಕ್ರಮಕ್ಕೆ ಆಗ್ರಹ

ಜಯ ಕರ್ನಾಟಕ ಸಂಘಟನೆವತಿಯಿಂದ ನಗರಸಭೆ ಮುಂಭಾಗ ಪ್ರತಿಭಟನೆ

ಭದ್ರಾವತಿ ನಗರಸಭೆ ವಾರ್ಡ್ ನಂ.೨ರ ಬಿ.ಹೆಚ್ ರಸ್ತೆಯಲ್ಲಿ ನಿಯಮ ಉಲ್ಲಂಘನೆಮಾಡಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಅದನ್ನು ತೆರವುಗೊಳಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಸೋಮವಾರ ನಗರಸಭೆ ಮುಂಭಾಗ ಜಯ ಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.  
    ಭದ್ರಾವತಿ, ಫೆ. ೨೦ : ನಗರಸಭೆ ವಾರ್ಡ್ ನಂ.೨ರ ಬಿ.ಹೆಚ್ ರಸ್ತೆಯಲ್ಲಿ ನಿಯಮ ಉಲ್ಲಂಘನೆಮಾಡಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಅದನ್ನು ತೆರವುಗೊಳಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಸೋಮವಾರ ನಗರಸಭೆ ಮುಂಭಾಗ ಜಯ ಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.  
    ಬಿ.ಹೆಚ್ ರಸ್ತೆ ಖಾತೆ ನಂ. ೧೬೭-೧೮೦, ಪಿ.ಐ.ಡಿ: ೨-೨-೧-೨೮೬ರಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ನಿರ್ಮಾಣ ಹಂತದಲ್ಲಿರುವ ಕಟ್ಟಡ ಪರವಾನಿಗೆ ಪ್ರಕಾರ ನಿರ್ಮಾಣಗೊಳ್ಳುತ್ತಿಲ್ಲ. ನಿಯಮ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಕಂಡು ಬಂದಿರುತ್ತದೆ.  ಕೆರೆ-ಕಟ್ಟೆ ಮೊದಲಾದ ಜಲಕಾಯಗಳಲ್ಲಿನ ಹಾಗೂ ನಿರ್ಬಂಧಿತ ಪ್ರದೇಶದಲ್ಲಿನ (ಬಫರ್ ಝೋನ್) ಅಕ್ರಮ ಕಟ್ಟಡ/ಸಂರಚನೆಗಳನ್ನು ತೆರವುಗೊಳಿಸುವ ಕುರಿತು ಸರ್ಕಾರದ ಸುತ್ತೋಲೆ ದಿನಾಂಕ : ೧೧-೦೮-೨೦೨೧
ಹೊರಡಿಸಿದ್ದು, ಇದರ ಪ್ರಕಾರ ಕೆರೆ-ಕಟ್ಟೆ ಜಲಕಾಯಗಳ ಅಂಚಿನಿಂದ ೩೦ ಮೀಟರ್‌ವರೆಗಿನ ವಲಯದಲ್ಲಿ (ಬಫರ್ ಝೋನ್) ನಿರ್ಮಾಣವಾಗಿರುವ ಅಕ್ರಮ ಕಟ್ಟಡ/ಸಂರಚನೆಗಳನ್ನು ಸಹ ಕಟ್ಟುನಿಟ್ಟಾಗಿ ತೆರವು ಗೊಳಿಸುವಂತೆ ನಿರ್ದೇಶಿಸಿದೆ. ಆದರೆ ಪ್ರಸ್ತುತ ಕಟ್ಟಡ ನಿರ್ಮಾಣದಾರರು ದಿನಾಂಕ : ೨೦-೧೨-೨೦೨೧ರಂದು ಪರವಾನಿಗೆ ಪಡೆದಿರುತ್ತಾರೆ. ಅದರ ಪ್ರಕಾರ ಇವರು ೧೫ ಮೀಟರ್‌ಗಳು ಮಾತ್ರ ಬಫರ್ ಝೋನ್ ಬಿಟ್ಟಿರುತ್ತಾರೆ. ಅಲ್ಲದೆ ದಿನಾಂಕ: ೨೪-೦೧-೨೦೨೦ರ ಕಟ್ಟಡ ಪರವಾನಿಗೆಯ ಪ್ರಕಾರ ಇದು ಪಾರ್ಕಿಂಗ್ ಸ್ಥಳವಾಗಿದ್ದು, ಈ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುತ್ತಿರುವುದು ಕಂಡುಬಂದಿರುತ್ತದೆ ಎಂದು ದೂರಿದರು.
    ಈ ಹಿಂದೆ ವಿಶಾಲ್ ಮಾರ್ಟ್ ಕಟ್ಟಡವನ್ನು ಸಹ ಯಾವುದೇ ಸೆಟ್‌ಬ್ಯಾಕ್ ಜಾಗ ಹಾಗು ಪಾರ್ಕಿಂಗ್ ಜಾಗ ಬಿಡದೆ ಹಾಗೂ ಪರವಾನಿಗೆ ಕಾನೂನುಗಳನ್ನು ದುರುಪಯೋಗ ಮಾಡಿಕೊಂಡು ನಿರ್ಮಿಸಿದ್ದು, ಅಲ್ಲದೆ ನದಿ ಜಾಗ ಒತ್ತುವರಿ ಮಾಡಿಕೊಂಡಿರುತ್ತಾರೆಂದು ಆರೋಪಿಸಿದರು.
    ಈ ಹಿಂದೆ ಸಂಘಟನೆ ವತಿಯಿಂದ ದೂರು ನೀಡಿದ ಹಿನ್ನಲೆಯಲ್ಲಿ ನಗರಸಭೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಕಟ್ಟಡ ನಿರ್ಮಾಣದ ಸರ್ವೆಯನ್ನು ಪೂರ್ಣಗೊಳಿಸಿ ನಮಗೆ ಹಿಂಬರಹದಲ್ಲಿ ಸೆಟ್‌ಬ್ಯಾಕ್ ನಿರ್ಮಾಣದಲ್ಲಿ ಉಲ್ಲಂಘನೆಯಾಗಿರುತ್ತದೆ ಮತ್ತು ನದಿ ಜಾಗ ಒತ್ತುವರಿಯಾಗಿದೆ ಎಂದು ಹಿಂಬರಹ ನೀಡಿರುತ್ತಾರೆ.
    ಈ ಹಿನ್ನಲೆಯಲ್ಲಿ ವಿಶಾಲ್ ಮಾರ್ಟ್ ಕಟ್ಟಡ ಮತ್ತು ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡ ಕಾಮಗಾರಿ ತಕ್ಷಣ ಸ್ಥಗಿತಗೊಳಿಸುವ ಜೊತೆಗೆ ಆಕ್ರಮ ಕಟ್ಟಡ ತೆರವುಗೊಳಿಸಬೇಕು. ಅಲ್ಲದೆ ಈ ಆಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅಮನಾತುಗೊಳಿಸಬೇಕೆಂದು ಆಗ್ರಹಿಸಿದರು.
    ಸಂಘಟನೆ ಜಿಲ್ಲಾ ಕಾರ್ಯಾಧ್ಯಕ್ಷ ಎಂ. ಮುಕುಂದ, ಗೌರವಾಧ್ಯಕ್ಷ ಶರವಣ, ತಾಲೂಕು ಅಧ್ಯಕ್ಷ ಆರ್. ಅರುಣ, ತಾಲೂಕು ಕಾರ್ಯಾಧ್ಯಕ್ಷ ಚೇತನ್‌ಕುಮಾರ್, ಪ್ರಧಾನ ಕಾರ್ಯಧರ್ಶಿ ಸಿ. ಜೀವನ್‌ಕುಮಾರ್, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್, ಪ್ರಮುಖರಾದ ಡಿ.ಟಿ ಶಶಿಕುಮಾರ್, ಆಟೋ ಶಂಕರ್, ವರಲಕ್ಷ್ಮೀ, ಬಿ.ಆರ್ ಜಯ, ಚಂದ್ರಶೇಖರ್, ಯೋಗೇಶ್, ತ್ಯಾಗರಾಜ್, ಶಿವಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.