ಗುರುವಾರ, ಮಾರ್ಚ್ 2, 2023

ಕೆಕೆಸಿ ರಾಜ್ಯ ಕಾರ್ಯದರ್ಶಿಯಾಗಿ ಎಂ. ಅನುಸೂಯಾ ನೇಮಕ



ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಮತ್ತು ನೌಕರರ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಭದ್ರಾವತಿ ಹಳೇನಗರ ಕೇಶವಪುರ ಬಡಾವಣೆ ನಿವಾಸಿ ಎಂ. ಅನುಸೂಯಾರವರನ್ನು ನೇಮಕಗೊಳಿಸಿ ಆದೇಶಿಸಲಾಗಿದೆ. 
    ಭದ್ರಾವತಿ, ಮಾ. ೨ :  ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಮತ್ತು ನೌಕರರ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಹಳೇನಗರ ಕೇಶವಪುರ ಬಡಾವಣೆ ನಿವಾಸಿ ಎಂ. ಅನುಸೂಯಾರವರನ್ನು ನೇಮಕಗೊಳಿಸಿ ಆದೇಶಿಸಲಾಗಿದೆ.
    ಅಖಿಲ ಭಾರತ ಅಸಂಘಟಿತ ಕಾರ್ಮಿಕರ ಮತ್ತು ನೌಕರರ (ಕೆ.ಕೆ.ಸಿ) ರಾಷ್ಟ್ರೀಯ ಅಧ್ಯಕ್ಷ ಡಾ. ಉದಿತ್ ರಾಜ್ ೫ ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರವರ ಸೂಚನೆ ಮೇರೆಗೆ  ಅಖಿಲ ಭಾರತ ಅಸಂಘಟಿತ ಕಾರ್ಮಿಕರ ಮತ್ತು ನೌಕರರ (ಕೆ.ಕೆ.ಸಿ) ರಾಜ್ಯಾಧ್ಯಕ್ಷ ಜಿ.ಎಸ್ ಮಂಜುನಾಥ್‌ರವರು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
    ಅಸಂಘಟಿತ ಕಾರ್ಮಿಕರನ್ನು ಸಂಘಟಿಸಿ ಪಕ್ಷದ ಬಲವರ್ಧನೆಗೆ ಹೆಚ್ಚಿನ ಸಹಕಾರಿಯಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯೋನ್ಮುಕರಾಗಬೇಕೆಂದು ಕೋರಿದ್ದಾರೆ.
    ಅಖಿಲ ಭಾರತ ಅಸಂಘಟಿತ ಕಾರ್ಮಿಕರ ಮತ್ತು ನೌಕರರ (ಕೆ.ಕೆ.ಸಿ) ಪ್ರಧಾನ ಕಾರ್ಯದರ್ಶಿ ಸಂತೋಷ್, ಸಂಚಾಲಕ ಡಾ. ವಿಜಯ್ ರಾಜೇಂದ್ರ ಹಾಗು ಉಡುಪಿ ಜಿಲ್ಲಾ ವೀಕ್ಷಕ ಎಸ್.ಎನ್ ಶಿವಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಳ್ಳಲು ಕಾರಣಕರ್ತರಾದ ಶಾಸಕ ಬಿ.ಕೆ ಸಂಗಮೇಶ್ವರ್, ಪಕ್ಷದ ಜಿಲ್ಲಾ ಹಾಗು ತಾಲೂಕು ಮುಖಂಡರುಗಳಿಗೆ ಅನುಸೂಯಾ ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಧಾನಿಯವರಿಗೆ ಮನವಿ ಸಲ್ಲಿಸಲು ಅವಕಾಶ ನೀಡದಿರುವುದು ಖಂಡನೀಯ

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಪ್ರಮುಖರ ಆಕ್ರೋಶ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ಮಾ. ೨ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗ ಶಾಂತಿಯುತವಾಗಿ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿದ್ದು,     ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಗುತ್ತಿಗೆ ಕಾರ್ಮಿಕರು ಮನವಿ ಸಲ್ಲಿಸಲು ಅವಕಾಶ ನೀಡದಿರುವುದ ಖಂಡನೀಯ ಎಂದು ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದರು.
    ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು, ಮುಖ್ಯವಾಗಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯಬೇಕು, ಅಗತ್ಯವಿರುವ ಬಂಡವಾಳ ತೊಡಗಿಸಬೇಕು ಹಾಗು ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ನೀಡಬೇಕೆಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜ.೧೯ರಿಂದ ಕಾರ್ಖಾನೆ ಮುಂಭಾಗ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ನಾವುಗಳು ಯಾವುದೇ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಅಥವಾ ವ್ಯಕ್ತಿಗಳ ಪರವಾಗಿಲ್ಲ. ನಮ್ಮ ಹೋರಾಟದಲ್ಲಿ ಎಲ್ಲರಿಗೂ ಮುಕ್ತವಾದ ಅವಕಾಶ ನೀಡಿದ್ದೇವೆ. ಇದುವರೆಗೂ ನಮ್ಮ ಹೋರಾಟಕ್ಕೆ ಕೇಂದ್ರ ಸರ್ಕಾರ ಅಥವಾ ಉಕ್ಕು ಪ್ರಾಧಿಕಾರ ಯಾವುದೇ ರೀತಿ ಸ್ಪಂದಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
    ರಾಜಕೀಯ ಇಚ್ಛಾಶಕ್ತಿ ಇಲ್ಲದೆ ಮತ್ತು ರಾಜಕೀಯ ಲಾಭ, ನಷ್ಟದ ಪಿತೂರಿಯಿಂದ ಈ ಕಾರ್ಖಾನೆಯನ್ನು ಮುಚ್ಚಲು ಹೊರಟಿರುವುದು ಖಂಡನೀಯ. ರಾಜಕೀಯವಾಗಿ ಎಲ್ಲಾ ಪ್ರಯತ್ನಗಳಾದ ಮೇಲೂ ನಮ್ಮ ಕಾರ್ಖಾನೆಯನ್ನು ಉಳಿಸಿಕೊಳ್ಳಲು ನಮಗೆ ಉಳಿದಿದ್ದು ಒಂದೇ ಮಾರ್ಗ ಪ್ರಧಾನ ಮಂತ್ರಿಯವರೊಂದಿನ ನೇರ ಭೇಟಿ.  ಈ ಹಿನ್ನಲೆಯಲ್ಲಿ ಫೆ.೨೭ರಂದು ಶಿವಮೊಗ್ಗ ಸೋಗಾನೆಯಲ್ಲಿ ನಿರ್ಮಿಸಲಾಗಿರುವ ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರ ಆಗಮನ ಎದುರು ನೋಡಲಾಗುತ್ತಿತ್ತು ಎಂದರು.
    ನಮಗೆ ದೊರಕಿರುವ ಅಮೂಲ್ಯವಾದ ಅವಕಾಶ ಕಾರ್ಖಾನೆ ಹಾಗು ಭದ್ರಾವತಿಯ ಉತ್ತಮ ಭವಿಷ್ಯದ ಸಲುವಾಗಿ ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಂಡು ಕಾರ್ಖಾನೆಯ ಸಂಕ್ಷಿಪ್ತ ವಿಚಾರವನ್ನು ಅವರ ಗಮನಕ್ಕೆ ತರಲು ಹಾಗು ಕಾರ್ಖಾನೆ ಮುಚ್ಚುವ ನಿರ್ಧಾರ ಕೈಬಿಟ್ಟು ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಮನವಿ ಮಾಡಿಕೊಳ್ಳಲು ತೀರ್ಮಾನಿಸಲಾಗಿತ್ತು. ನಮಗೆ ಪ್ರಧಾನ ಮಂತ್ರಿಯವರ ಅಧೀನ ಕಾರ್ಯದರ್ಶಿ(ಪಿ.ಎಸ್)ಯವರಿಗೆ ಮನವಿ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು. ಆದರೆ ನಮಗೆ ನೇರವಾಗಿ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಲು ಅವಕಾಶ ನೀಡುವಂತೆ ಕೋರಲಾಗಿತ್ತು. ಆದರೆ ಇದಕ್ಕೆ ಅವಕಾಶ ನೀಡಲಿಲ್ಲ. ಈ ಹಿನ್ನಲೆಯಲ್ಲಿ ಕಾರ್ಖಾನೆ ಮುಂಭಾಗದಿಂದ ಬೆಳಿಗ್ಗೆ ೬.೩೦ಕ್ಕೆ ಪಾದಯಾತ್ರೆ ಮೂಲಕ ವಿಮಾನ ನಿಲ್ದಾಣ ತಲುಪಲು ತೀರ್ಮಾನಿಸಲಾಯಿತು ಎಂದರು.
    ಪ್ರಧಾನ ಮಂತ್ರಿಯವರಿಗೆ ನಾವುಗಳು ಮನವಿ ಸಲ್ಲಿಸುವುದನ್ನು ತಪ್ಪಿಸಲು ಪೊಲೀಸರು ನಮ್ಮನ್ನು ಬೆಳಗಿನ ಜಾವ ಸುಮಾರು ೩ ಗಂಟೆ ಸಮಯದಲ್ಲಿ ಏಕಾಏಕಿ ಮನೆಯಿಂದ ಬಂಧಿಸಿ ಹೊಳೆಹೂನ್ನೂರು ಮಂಟದದಲ್ಲಿಡಲಾಗಿತ್ತು. ಸಂಜೆ ೪ ಗಂಟೆ ಸಮಯದಲ್ಲಿ ಬಿಡುಗಡೆಗೊಳಿಸಿದರು. ಈ ನಡುವೆ ನಮ್ಮನ್ನು ಬಂಧಿಸಿರುವ ವಿಷಯ ತಿಳಿದ ಗುತ್ತಿಗೆ ಕಾರ್ಮಿಕರು ಧೈರ್ಯಗೆಡದೆ ಹೋರಾಟ ಮುಂದುವರೆಸುವ ಮೂಲಕ ಪಾದಯಾತ್ರೆ ಆರಂಭಿಸಿದರು. ಆದರೆ ಮಾರ್ಗಮಧ್ಯ ಬಿಳಿ ಕ್ರಾಸ್ ಪಾದಯಾತ್ರೆ ತಡೆದು ವಶಕ್ಕೆ ಪಡೆಯಲಾಯಿತು. ನಮಗೆ ಮನವಿ ಸಲ್ಲಿಸಲು ಅವಕಾಶ ನೀಡದಿರುವುದು ಖಂಡನೀಯವಾಗಿದ್ದು, ಇದರ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು.
    ನಮಗೆ ಯಾರ ಮೇಲೂ ವೈಯಕ್ತಿಕವಾಗಿ ದ್ವೇಷವಿಲ್ಲ. ನಮ್ಮ ಹೋರಾಟಕ್ಕೆ ಬೆಂಬಲ ನೀಡುವ ನೆಪದಲ್ಲಿ ಕೆಲವರು ನಮ್ಮನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ನಮ್ಮ ಹೋರಾಟಕ್ಕೆ ಕಪ್ಪು ಚುಕ್ಕೆಯನ್ನು ತರಲು ಯತ್ನಿಸುತ್ತಿದ್ದಾರೆ. ಇದನ್ನು ಸಹ ನಾವುಗಳು ಖಂಡಿಸುತ್ತೇವೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರರವರ ಮೇಲೆ ನಮಗೆ ತುಂಬಾ ಗೌರವಿದೆ. ನಮ್ಮ ಹೋರಾಟ ಕಾರ್ಖಾನೆ ಉಳಿಸಿಕೊಳ್ಳುವುದಾಗಿದೆ ಎಂದರು.
 ನಮಸಂಘವು ನಮ್ಮ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರಾದ ಎಚ್.ಜಿ ಸುರೇಶ್, ಕುಮಾರಸ್ವಾಮಿ, ಪ್ರಮುಖರಾದ ಆರ್. ಮಂಜುನಾಥ್, ಪಿ. ರಾಕೇಶ್, ಎನ್.ಆರ್ ವಿನಯ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬುಧವಾರ, ಮಾರ್ಚ್ 1, 2023

ಸಂಚಾರಿ ಠಾಣೆ ಎಎಸ್‌ಐ ಕೆ.ಎನ್ ಚಂದ್ರಶೇಖರ್ ವಯೋ ನಿವೃತ್ತಿ : ಬೀಳ್ಕೊಡುಗೆ

ಭದ್ರಾವತಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಕೆ.ಎನ್ ಚಂದ್ರಶೇಖರ್(ಎಎಸ್‌ಐ)ರವರಿಗೆ ಜಿಲ್ಲಾ ಪೊಲೀಸ್ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
    ಭದ್ರಾವತಿ, ಮಾ. ೨ : ಇಲ್ಲಿನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಕೆ.ಎನ್ ಚಂದ್ರಶೇಖರ್(ಎಎಸ್‌ಐ)ರವರಿಗೆ ಜಿಲ್ಲಾ ಪೊಲೀಸ್ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
    ವೃತ್ತಿ ಅವಧಿಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿರುವುದನ್ನು ಇಲಾಖೆವತಿಯಿಂದ ಸ್ಮರಿಸಲಾಯಿತು. ಕೆ.ಎನ್ ಚಂದ್ರಶೇಖರ್‌ರವರು ಹೆಚ್ಚಿನ ಅವಧಿಯನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಪೂರೈಸಿದ್ದಾರೆ.
    ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿ ಸನ್ಮಾನಿಸಿದರು. ಮುಂದಿನ ನಿವೃತ್ತಿ ಜೀವನಕ್ಕೆ ಶುಭ ಕೋರಿದರು.  ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬಿಜೆಪಿ ಮುಖಂಡ, ಸಮಾಜ ಸೇವಕ ಎಚ್.ಸಿ ರಮೇಶ್ ಹುಟ್ಟುಹಬ್ಬ

ಭದ್ರಾವತಿಯಲ್ಲಿ ಬಿಜೆಪಿ ಪಕ್ಷದ ಮುಖಂಡ, ಸಮಾಜ ಸೇವಕ ಎಚ್.ಸಿ ರಮೇಶ್‌ರವರ ಹುಟ್ಟುಹಬ್ಬ ಆಚರಿಸಲಾಯಿತು. 
    ಭದ್ರಾವತಿ, ಮಾ. ೧ : ನಗರದ ಬಿಜೆಪಿ ಪಕ್ಷದ ಮುಖಂಡ, ಸಮಾಜ ಸೇವಕ ಎಚ್.ಸಿ ರಮೇಶ್‌ರವರ ಹುಟ್ಟುಹಬ್ಬ ಆಚರಿಸಲಾಯಿತು.
    ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನೌಕರ, ಕ್ರೀಡಾಪಟು ಚೆನ್ನಯ್ಯರವರ ಪುತ್ರರಾಗಿರುವ ಎಚ್.ಸಿ ರಮೇಶ್ ನಗರದಲ್ಲಿಯೇ ಹುಟ್ಟಿ ಬೆಳೆದಿದ್ದು, ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ, ಉದ್ಯಮಿಯಾಗಿ ಹಾಗು ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ.
    ಪಕ್ಷದ ರಾಷ್ಟ್ರ ಮತ್ತು ರಾಜ್ಯದ ಮಟ್ಟದ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ರಮೇಶ್‌ರವರು ತಮ್ಮ ಪ್ರಭಾವ ಬಳಸಿಕೊಂಡು ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಅಲ್ಲದೆ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ಎದುರು ನೋಡುತ್ತಿದ್ದಾರೆ.
    ಇವರ ಹುಟ್ಟುಹಬ್ಬಕ್ಕೆ ನಗರದ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು, ಹಿತೈಷಿಗಳು, ಅಭಿಮಾನಿಗಳು ಶುಭ ಕೋರುವ ಮೂಲಕ ಅಭಿನಂದಿಸಿದ್ದಾರೆ.

ಶೇ.೧೭ರಷ್ಟು ವೇತನ ಹೆಚ್ಚಳ ಮಧ್ಯಂತರ ಆದೇಶ : ಉತ್ತಮ ಬೆಳವಣಿಗೆ

ಹೋರಾಟಕ್ಕೆ ಸರ್ಕಾರ ಸ್ಪಂದನೆ : ಬಿ. ಸಿದ್ದಬಸಪ್ಪ

ಬಿ. ಸಿದ್ದಬಸಪ್ಪ 
    ಭದ್ರಾವತಿ, ಫೆ. ೧ : ಸರ್ಕಾರಿ ನೌಕರರ ವೇತನ ಶೇ.೧೭ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಮಧ್ಯಂತರ ಆದೇಶ ಹೊರಡಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ ತಿಳಿಸಿದ್ದಾರೆ.
    ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ, ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಪ್ರಸ್ತುತ ಮಧ್ಯಂತರ ಆದೇಶ ಸೂಕ್ತವಾಗಿದೆ. ಸರ್ಕಾರಿ ನೌಕರರಿಗೆ ಏ.೧ರಿಂದ ವೇತನ ಹೆಚ್ಚಳವಾಗಲಿದೆ. ನೂತನ ಪಿಂಚಣಿ ಯೋಜನೆ(ಎನ್‌ಪಿಎಸ್) ಕುರಿತು ವರದಿಪಡೆದು ಮರುಪರಿಶೀಲನೆ ನಡೆಸುವುದಾಗಿ ಸಹ ಭರವಸೆ ನೀಡಿದೆ.  ಒಟ್ಟಾರೆ ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.  

ಸರ್ಕಾರಿ ನೌಕರರ ಮುಷ್ಕರಕ್ಕೆ ತಾಲೂಕಿನಲ್ಲಿ ಪೂರಕ ಸ್ಪಂದನೆ

ಬೀಗಜಡಿದ ಸರ್ಕಾರಿ ಕಛೇರಿಗಳು

ಭದ್ರಾವತಿ ತಾಲೂಕು ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸೇರಿದಂತೆ ಬಹುತೇಕ ಕಛೇರಿಗಳು ಸ್ತಬ್ದಗೊಂಡಿದ್ದವು.
    ಭದ್ರಾವತಿ, ಮಾ. ೧ : ಸರ್ಕಾರಿ ನೌಕರರು ೭ನೇ ವೇತನ ಆಯೋಗ ಜಾರಿಗೆ  ಹಾಗು ನೂತನ ಪಿಂಚಣಿ ಯೋಜನೆ(ಎನ್‌ಪಿಎಸ್) ರದ್ದುಗೊಳಿಸಲು ಆಗ್ರಹಿಸಿ ರಾಜ್ಯಾದ್ಯಂತ ಕರೆ ನೀಡಲಾಗಿದ್ದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ತಾಲೂಕಿನಲ್ಲಿ ಪೂರಕ ಸ್ಪಂದನೆ ವ್ಯಕ್ತವಾಯಿತು.
    ತಾಲೂಕಿನ ಶಕ್ತಿ ಕೇಂದ್ರ ತಾಲೂಕು ಕಛೇರಿ ಮಿನಿವಿಧಾನಸೌಧ, ತಾಲೂಕು ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸೇರಿದಂತೆ ಬಹುತೇಕ ಕಛೇರಿಗಳು ಸ್ತಬ್ದಗೊಂಡಿದ್ದವು. ಕೆಲವು ಕಛೇರಿಗಳಿಗೆ ಬೀಗ ಜಡಿಯಲಾಗಿತ್ತು. ಇನ್ನೂ ಕೆಲ ಕಛೇರಿಗಳು ಅಧಿಕಾರಿಗಳು, ಸಿಬ್ಬಂದಿಗಳಿಲ್ಲದೆ ಬಣಗುಡುತ್ತಿದ್ದವು.


    ಸರ್ಕಾರಿ ಶಾಲಾ-ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರುಗಳು ಸಂಪೂರ್ಣವಾಗಿ ಗೈರು ಹಾಜರಾದ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳು ಸಹ ಮುಚ್ಚಲ್ಪಟ್ಟಿದ್ದವು. ಸರ್ಕಾರಿ ಸೇವೆಗಳಿಗಾಗಿ ಜನರು ಪರದಾಡುವಂತಾಯಿತು. ಜನಸಾಮಾನ್ಯರಿಗೆ ಮುಷ್ಕರದ ಬಿಸಿ ತಟ್ಟಿತು.
    ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಛೇರಿಯಲ್ಲಿ ನಿರ್ದೇಶಕರು ಸಭೆ ನಡೆಸಿ ದಿನದ ಬೆಳವಣಿಗೆಗಳನ್ನು ಗಮನಿಸಿದರು.  


ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಛೇರಿಯಲ್ಲಿ ಬುಧವಾರ ಅನಿರ್ಧಿಷ್ಟಾವಧಿ ಮುಷ್ಕರದ ಹಿನ್ನಲೆಯಲ್ಲಿ ನಿರ್ದೇಶಕರು ಸಭೆ ನಡೆಸಿ ದಿನದ ಬೆಳವಣಿಗೆಗಳನ್ನು ಗಮನಿಸಿದರು.  

ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದಕ್ಕೆ ಹಲ್ಲೆ, ಜೀವಬೆದರಿಕೆ




    ಭದ್ರಾವತಿ, ಮಾ. ೧ : ವ್ಯಕ್ತಿಯೊಬ್ಬರ ಮೇಲೆ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ ಹಿನ್ನಲೆಯಲ್ಲಿ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವ ಘಟನೆ ನಡೆದಿದೆ.
    ಹುತ್ತಾಕಾಲೋನಿ ನಿವಾಸಿ ಬಿ.ಎಂ ಈರಣ್ಣ ಎಂಬುವರು ವಿದ್ಯಾಮಂದಿರ ನಿವಾಸಿ ಸಂತೋಷ್ ಎಂಬುವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದು, ಈ ಹಿನ್ನಲೆಯಲ್ಲಿ ಮಂಗಳವಾರ ಸಂಜೆ ಈರಣ್ಣರವರ ಮನೆ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.