Tuesday, March 14, 2023

ಮಾದಕ ವಸ್ತು ಸೇವನೆ : ಪ್ರಕರಣ ದಾಖಲು


    ಭದ್ರಾವತಿ, ಮೇ. ೧೪ : ಮಾದಕ ವಸ್ತು ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧ ನ್ಯೂಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
    ನಗರಸಭೆ ವ್ಯಾಪ್ತಿಯ ಎನ್‌ಟಿಬಿ ಬಡಾವಣೆಯ ಉದ್ಯಾನವನ ಸಮೀಪ ಖಾಲಿ ಜಾಗದಲ್ಲಿ ಮಾದಕ ವಸ್ತು ಸೇವಿಸಿ ಅವಾಚ್ಯ ಶಬ್ದಗಳಿಂದ ಸಾರ್ವಜನಿಕರ ಶಾಂತಿಗೆ ಭಂಗ ಉಂಟುಮಾಡುತ್ತಿದ್ದು, ಈ ಭಾಗದಲ್ಲಿ ಗಸ್ತಿನಲ್ಲಿದ್ದ ಠಾಣಾಧಿಕಾರಿ ರಂಗನಾಥ ಅಂತರಗಟ್ಟಿಯವರು ಆತನನ್ನು ವಶಕ್ಕೆ ಪಡೆದು ಶಿವಮೊಗ್ಗ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ತಪಾಸಣೆಗೆ ಕಳುಹಿಸಿದ್ದಾರೆ. ಈತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Monday, March 13, 2023

ಕಸಾಪ ಅಧ್ಯಕ್ಷರಾಗಿ ಕೋಡ್ಲು ಯಜ್ಞಯ್ಯ, ಕಜಾಪ ಅಧ್ಯಕ್ಷರಾಗಿ ಎಂ.ಆರ್ ರೇವಣಪ್ಪ ಪದಗ್ರಹಣ

ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಹಿರಿಯ ಸದಸ್ಯರಾದ ಕೋಡ್ಲು ಯಜ್ಞಯ್ಯ ಹಾಗು ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷರಾಗಿ ಶಿಕ್ಷಕ ಎಂ.ಆರ್ ರೇವಣಪ್ಪ  ಸೋಮವಾರ ಅಧಿಕಾರ ಸ್ವೀಕರಿಸಿದರು.
    ಭದ್ರಾವತಿ, ಮಾ. ೧೩: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಹಿರಿಯ ಸದಸ್ಯರಾದ ಕೋಡ್ಲು ಯಜ್ಞಯ್ಯ ಹಾಗು ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷರಾಗಿ ಶಿಕ್ಷಕ ಎಂ.ಆರ್ ರೇವಣಪ್ಪ  ಸೋಮವಾರ ಅಧಿಕಾರ ಸ್ವೀಕರಿಸಿದರು.
      ನ್ಯೂಟೌನ್ ಪರಿಷತ್ ಕಚೇರಿಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಉದ್ಯಮಿ ಬಿ.ಕೆ ಜಗನ್ನಾಥ್, ಹಿರಿಯ ಸಾಹಿತಿ ಜಿ.ವಿ ಸಂಗಮೇಶ್ವರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಿಕಟ ಪೂರ್ವ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
    ಡಾ. ವಸುದೇವ ಭೂಪಾಳಂ ದತ್ತಿ ಕಾರ್ಯಕ್ರಮ ಸಹ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ ಮಂಜುನಾಥ್ ಆಶಯ ನುಡಿಗಳನ್ನಾಡಿದರು. ಪರಿಷತ್ ಕಾರ್ಯದರ್ಶಿ ಟಿ. ತಿಮ್ಮಪ್ಪ ನಿರೂಪಿಸಿದರು. ಕಾರ್ಯದರ್ಶಿ ಜಗದೀಶ್, ಸಂಘಟನಾ ಕಾರ್ಯದರ್ಶಿ ಬಿ. ಕಮಲಾಕರ್, ರೇವಪ್ಪ, ಕೆ.ಟಿ ಪ್ರಸನ್ನ, ಯು. ಮಹಾದೇವಪ್ಪ, ಸಿ. ಚನ್ನಪ್ಪ ಹಾಗು ಜಾನಪದ ಕಲಾವಿದರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ಮಾಹಿತಿ ಕಾರ್ಯಕ್ರಮ

ಭದ್ರಾವತಿ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಎಲ್ಲಾ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಇಲಾಖೆಯ ಕಾರ್ಯ ಚಟುವಟಿಕೆಗಳನ್ನು ಮತ್ತಷ್ಟು ಕ್ರಿಯಾಶೀಲಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ನಿರ್ದೇಶನದಂತೆ ಮಾಹಿತಿ ನೀಡಲಾಯಿತು.
    ಭದ್ರಾವತಿ, ಮಾ. ೧೩ : ಇಲ್ಲಿನ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಎಲ್ಲಾ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಇಲಾಖೆಯ ಕಾರ್ಯ ಚಟುವಟಿಕೆಗಳನ್ನು ಮತ್ತಷ್ಟು ಕ್ರಿಯಾಶೀಲಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ನಿರ್ದೇಶನದಂತೆ ಮಾಹಿತಿ ನೀಡಲಾಯಿತು.
    ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಖಾಜಿಮೊಹಲ್ಲಾದಲ್ಲಿ ಹಾಗು ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಉಂಳ್ಬೆಬೈಲು ರಸ್ತೆ ಮೆಸ್ಕಾಂ ಕಛೇರಿ ಬಳಿ ಅಧಿಕಾರಿಗಳು ಹಾಗು ಸಿಬ್ಬಂದಿಗಳಿಗೆ ಆಯಾ ಠಾಣಾಧಿಕಾರಿಗಳು ಸೂಕ್ಷ್ಮ ಪ್ರದೇಶಗಳಲ್ಲಿ ಬ್ರೀಫಿಂಗ್ ಮಾಡಿ ನಿರ್ವಹಿಸಬೇಕಾದ ಕರ್ತವ್ಯ ಮತ್ತು ಮೇಲಾಧಿಕಾರಿಗಳ ಸೂಚನೆಗಳ ಬಗ್ಗೆ ಮಾಹಿತಿ ನೀಡಲಾಯಿತು.


ತಾಲೂಕಿನಲ್ಲಿ ಸಂಚಾರಿ ಪೊಲೀಸ್ ಠಾಣೆ ಸೇರಿದಂತೆ ೬ ಠಾಣೆಗಳಿದ್ದು, ಪೊಲೀಸ್ ಉಪಾಧೀಕ್ಷಕರು, ನಗರ ಮತ್ತು ಗ್ರಾಮಾಂತರ ವೃತ್ತ ನಿರೀಕ್ಷಕರ ಕಛೇರಿಗಳಿವೆ. ಅಲ್ಲದೆ ಹೆಚ್ಚಿನ ಸೂಕ್ಷ್ಮ ಪ್ರದೇಶಗಳಿಂದ ಕೂಡಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಕಾಲ ಕಾಲಕ್ಕೆ ಸೂಕ್ತ ಮಾಹಿತಿ ನೀಡುವ ಮೂಲಕ ಮತ್ತಷ್ಟು ಕ್ರಿಯಾಶೀಲಗೊಳಿಸುವುದು ಸೂಕ್ತವಾಗಿದೆ.

Sunday, March 12, 2023

ಸರ್ಕಾರಿ ಆಸ್ಪತ್ರೆಯಲ್ಲಿ ನೆಲಕ್ಕುಳಿದ ಮರ

ಭದ್ರಾವತಿ, ಮಾ. 13:  ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮರ ನೆಲಕ್ಕುರುಳಿ ಬಿದ್ದಿರುವ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
    ಮರ ನೆಲಕ್ಕುರುಳಿ ಬಿದ್ದ ಪರಿಣಾಮ ಆಸ್ಪತ್ರೆ ವೈದ್ಯ ಡಾ. ಜ್ಞಾನಮೂರ್ತಿರವರ ಕಾರು ಜಖಂಗೊಂಡಿದ್ದು, ವಿದ್ಯುತ್ ತಂತಿ ಕತ್ತರಿಸಿ ಹೋಗಿದೆ. ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿಗಳು ಆಗಮಿಸಿದ್ದು, ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಪರಿಷತ್ ಅಧ್ಯಕ್ಷರಾಗಿ ಕೋಡ್ಲು ಯಜ್ಞಯ್ಯ, ಎಂ.ಆರ್ ರೇವಣಪ್ಪ



ಭದ್ರಾವತಿ, ಮಾ. 13: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಹಿರಿಯ ಸದಸ್ಯರಾದ ಕೋಡ್ಲು ಯಜ್ಞಯ್ಯ ಹಾಗು ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷರಾಗಿ ಶಿಕ್ಷಕ ಎಂ.ಆರ್ ರೇವಣಪ್ಪ  ಇಂದು ಅಧಿಕಾರ  ಸ್ವೀಕರಿಸಲಿದ್ದಾರೆ. 
  ಸಂಜೆ ನ್ಯೂಟೌನ್ ಪರಿಷತ್ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪದಗ್ರಹಣ ಸ್ವೀಕಾರ ನಡೆಯಲಿದೆ. ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್, ಪರಿಷತ್ ಜಿಲ್ಲಾಧ್ಯಕ್ಷ ಡಿ ಮಂಜುನಾಥ್, ನಗರಸಭಾ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಿಕಟ ಪೂರ್ವ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಕನ್ನಡ ಸಾಹಿತ್ಯ ಸಾಂಸ್ಕೃತಿ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಸೇರಿದಂತೆ ಇತರರು ಉಪಸ್ಥಿತರಿರುವರು.
    ಡಾ. ವಸುದೇವ ಭೂಪಾಳಂ ದತ್ತಿ ನಡೆಯಲಿದ್ದು, ನಿವೃತ್ತ ಪ್ರಾಂಶುಪಾಲ ಡಾ. ಎಚ್.ಟಿ ಕೃಷ್ಣಮೂರ್ತಿ ಉಪನ್ಯಾಸ ನಡೆಸಿಕೊಡಲಿದ್ದಾರೆ. 

ವಿಐಎಸ್ಎಲ್ ಕಾರ್ಮಿಕರ ನಿಯೋಗದಿಂದ ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಭೇಟಿ


    ಭದ್ರಾವತಿ, ಮಾ. 13:  ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ  ಕಾರ್ಖಾನೆ ಇಂದಿನ ಸ್ಥಿತಿಗತಿ ಹಾಗೂ ಕಾರ್ಖಾನೆ ಉಳಿವಿನ ವಿಚಾರದಲ್ಲಿ ಗುತ್ತಿಗೆ ಕಾರ್ಮಿಕರ ಸಂಘ ನಡೆಸುತ್ತಿರುವ  ಅನಿರ್ಧಿಷ್ಟಾವಧಿ ಹೋರಾಟ ಕುರಿತು ಕಾರ್ಮಿಕರ ನಿಯೋಗ  ಬೆಂಗಳೂರಿನಲ್ಲಿ ಕಾರ್ಖಾನೆಯ ನಿವೃತ್ತ ನೌಕರ, ಹಿರಿಯ ಚಲನಚಿತ್ರ  ನಟ  ದೊಡ್ಡಣ್ಣ ಹಾಗೂ ಕಾರ್ಖಾನೆಯ ನಿವೃತ್ತ ಅಧಿಕಾರಿಗಳನ್ನು ಭೇಟಿಮಾಡಿ ಚರ್ಚೆ ನಡೆಸಿತು.
      ದೊಡ್ಡಣ್ಣ ಮಾತನಾಡಿ,  ನಮಗೆ ಅನ್ನ, ಬದುಕು ನೀಡಿರುವ ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚಬಾರದು.  ಮುಂದಿನ ಪೀಳಿಗೆಗೆ ಇದು ಉಳಿಯ ಬೇಕು.  ಈ ಹಿನ್ನೆಲೆಯಿಂದ  ವಿಐಎಸ್ಎಲ್  ಉಳಿಸಿ ಜಂಟಿ ಕ್ರಿಯಾ ಸಮಿತಿ ರಚಿಸಿ  ಮುಖ್ಯಮಂತ್ರಿ ಹಾಗು ರಾಜ್ಯದಿಂದ ಆಯ್ಕೆಯಾಗಿರುವ ಎಲ್ಲಾ ಸಂಸದರನ್ನು ತುರ್ತಾಗಿ ಭೇಟಿಯಾಗಿ ಕಾರ್ಖಾನೆ ಉಳುಸಿಕೊಳ್ಳಲು ಹೋರಾಟ ನಡೆಸುವುದಾಗಿ ಭರವಸೆ ನೀಡಿದರು.
    ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾಯಂ ಹಾಗು ನಿವೃತ್ತ ಕಾರ್ಮಿಕರು ಉಪಸ್ಥಿತರಿದ್ದರು.  

ಭೂ ಮಂಜೂರಾತಿ ರದ್ದುಗೊಳಿಸಲು, ಟಿಟಿ ದಂಡ ಶುಲ್ಕ ಮರುಪಾವತಿಸಲು ಕೋರಿ ಉಪವಿಭಾಗಾಧಿಕಾರಿಗಳಿಗೆ ಪ್ರಸ್ತಾವನೆ


    ಭದ್ರಾವತಿ, ಮಾ. ೧೨ : ತಾಲೂಕಿನ ಸಿದ್ದಾಪುರ ಗ್ರಾಮದ ಸರ್ವೆ ನಂ.೧೩೫ರ ಭೂ ಮಂಜೂರಾತಿ ರದ್ದುಗೊಳಿಸುವಂತೆ ಹಾಗು ಟಿಟಿ ದಂಡ ಶುಲ್ಕ ಅರ್ಜಿದಾರರಿಗೆ ಮರು ಪಾವತಿಸಲು ಕ್ರಮ ಕೈಗೊಳ್ಳುವಂತೆ ತಾಲೂಕು ದಂಡಾಧಿಕಾರಿ ತಹಸೀಲ್ದಾರ್‌ರವರು ಉಪವಿಭಾಗಾಧಿಕಾರಿಗಳಿಗೆ ಕೋರಿದ್ದಾರೆ.
    ಜಮೀನು ಕರ್ನಾಟಕ ಭೂ ಕಂದಾಯ ನಿಯಮಗಳು ೧೯೬೬ರ ನಿಯಮ ೧೦೮ (I) ರಂತೆ ನಗರ ವ್ಯಾಪ್ತಿ ಪ್ರದೇಶವಾಗಿದ್ದು, ಹಾಗು 'ಸಿದ್ದಾಪುರ ಆರ್‌ಎಲ್ ಅರಣ್ಯ ಪ್ರದೇಶ'ವಾಗಿರುವುದರಿಂದ ಪ್ರಸ್ತಾಪಿತ ಅನಧಿಕೃತ ಸಾಗುವಳಿ ಸಕ್ರಮಾತಿಗೆ ಸದಸ್ಯ ಕಾರ್ಯದರ್ಶಿಗಳ ಸಹಮತ ಇರುವುದಿಲ್ಲ. ಆದರೆ ಸದಸ್ಯ ಕಾರ್ಯದರ್ಶಿಗಳ ಅಭಿಪ್ರಾಯಕ್ಕೆ ವಿರುದ್ಧವಾಗಿ ಸಮಿತಿಯು ಬಹುಮತದ ಸದಸ್ಯ ಏಕಪಕ್ಷೀಯ ತೀರ್ಮಾನ ಕೈಗೊಂಡು ಅನಧಿಕೃತ ಸಾಗುವಳಿ ಸಕ್ರಮೀಕರಣ ಮಾಡಿದ್ದು, ಈ ಹಿನ್ನಲೆಯಲ್ಲಿ ೧೫ ಅರ್ಜಿದಾರರಿಗೆ ನೀಡಲಾದ ಭೂ ಮಂಜೂರಾತಿಯನ್ನು ಕರ್ನಾಟಕ ಭೂ ಕಂದಾಯ ನಿಯಮಗಳು ೧೯೬೬ರ ಕಲಂ ೧೦೮ (K) ರಡಿ ರದ್ದು ಪಡಿಸಲು ಹಾಗು ಸಮಿತಿಯ ತೀರ್ಮಾನದಂತೆ ಪಾವತಿಸಲಾದ ಟಿಟಿ ದಂಡ ಶುಲ್ಕ ಅರ್ಜಿದಾರರಿಗೆ ಮರು ಪಾವತಿಸಲು ಅವಕಾಶ ಕಲ್ಪಿಸಲು ಸ್ವಯಂ ಪ್ರಸ್ತಾವನೆ ಸಲ್ಲಿಸಿ ಕೋರಿದ್ದಾರೆ.
    ತಾಲೂಕಿನಲ್ಲಿ ಅರ್ಹ ಸಾಗುವಳಿದಾರರಿಗೆ ಉಂಟಾಗುತ್ತಿರುವ ಅನ್ಯಾಯ ಹಾಗು ತಾಲೂಕು ಕಛೇರಿಯಲ್ಲಿನ ಕೆಲವು ಭ್ರಷ್ಟ ಅಧಿಕಾರಿಗಳ ವಿರುದ್ಧ ಇತ್ತೀಚೆಗೆ ತಾಲೂಕು ಬಗರ್‌ಹುಕುಂ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು.