Saturday, March 18, 2023

ಹೃದಯ ಭಾಗದಲ್ಲಿ ಭದ್ರಾ ನದಿ ಹರಿಯುತ್ತಿದ್ದರೂ ಕುಡಿಯುವ ನೀರಿನ ಸಮಸ್ಯೆ

ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಸದಸ್ಯರ ಆಕ್ರೋಶ

ಭದ್ರಾವತಿ ನಗರಸಭೆಯಲ್ಲಿ ಶನಿವಾರ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಅಧ್ಯಕ್ಷತೆ ಆರಂಭಗೊಂಡ ಸಾಮಾನ್ಯಸಭೆಯಲ್ಲಿ  ನೂತನ ಉಪಾಧ್ಯಕ್ಷೆ ಸರ್ವಮಂಗಳಮ್ಮ ಬೈರಪ್ಪ ಅವರಿಗೆ ನಗರಸಭೆ ವತಿಯಿಂದ ಮಾಲಾರ್ಪಣೆ ಮಾಡಿ ಸ್ವಾಗತಿಸಲಾಯಿತು.
    ಭದ್ರಾವತಿ, ಮಾ. ೧೮: ನಗರದ ಹೃದಯ ಭಾಗದಲ್ಲಿ ಭದ್ರಾ ನದಿ ಹರಿಯುತ್ತಿದ್ದರೂ ಸಹ ನಗರಸಭೆ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ಸಮಸ್ಯೆ ಇದುವರೆಗೂ ಬಗೆಹರಿಯದಿರುವ ಕುರಿತು ನಗರಸಭಾ ಸದಸ್ಯರು ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಸಭೆ ಆರಂಭದಲ್ಲಿ ಮಾತನಾಡಿದ ಸದಸ್ಯರಾದ ಬಿ.ಕೆ ಮೋಹನ್, ಬಿ.ಟಿ ನಾಗರಾಜ್, ಮಣಿ ಎಎನ್‌ಎಸ್, ಉದಯ್ ಕುಮಾರ್ ಮತ್ತು ಬಸವರಾಜ್, ಪ್ರಸ್ತುತ ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಹೃದಯ ಭಾಗದಲ್ಲಿ ಭದ್ರಾ ನದಿ ಹರಿಯುತ್ತಿದ್ದರೂ ಸಹ ವರ್ಷಪೂರ್ತಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರುತ್ತಿದೆ. ಇದೀಗ ಬೇಸಿಗೆ ಆರಂಭವಾಗಿರುವ ಹಿನ್ನಲೆಯಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಕುಡಿಯುವ ನೀರಿಗಾಗಿ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ. ನಿರ್ವಹಣೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ಇಂಜಿನಿಯರ್‌ಗಳು, ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೂ ಸಹ ಸಮರ್ಪಕವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯದಿರುವುದು ವಿಪರ್ಯಾಸದ ಬೆಳವಣಿಗೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಸದಸ್ಯೆ ವಿಜಿಯಮ್ಮ ಮಾತನಾಡಿ, ನಮ್ಮ ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಹಲವಾರು ಬಾರಿ ದೂರು ಕೊಟ್ಟರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಇಲ್ಲಿನ ನಿವಾಸಿಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ನಾನು ವಾರ್ಡಿನಲ್ಲಿ ಇರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋರ್ಪಡಿಸಿಕೊಂಡರು.
    ಇದಕ್ಕೆ ಎಂದಿನಂತೆ ಇಂಜಿನಿಯರ್‌ಗಳು ಉತ್ತರಿಸಿ ಪ್ರಸ್ತುತ ಎದುರಾಗಿರುವ ಸಮಸ್ಯೆಗಳನ್ನು ತೋರ್ಪಡಿಸಿಕೊಂಡರು. ಇದರಿಂದಾಗಿ ಮತ್ತಷ್ಟು ಆಕ್ರೋಶಗೊಂಡ ಸದಸ್ಯರು ಪ್ರತಿಬಾರಿ ಸಮಸ್ಯೆ ತೋರ್ಪಡಿಸಿಕೊಳ್ಳುವ ಬದಲು ಮೊದಲು ಬಗೆಹರಿಸುವ ನಿಟ್ಟಿನಲ್ಲಿ ಗಮನ ಹರಿಸಿ. ಇಂಜಿನಿಯರ್‌ಗಳು, ಸಿಬ್ಬಂದಿಗಳ ಕೊರತೆ ಇಲ್ಲದಿದ್ದರೂ ಸಹ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯದಿವುದು ನಾಚಿಗೇಡಿನ ಸಂಗತಿಯಾಗಿದೆ ಎಂದರು.
    ಪೌರಾಯುಕ್ತ ಮನುಕುಮಾರ್ ಮಾತನಾಡಿ, ಹೊರಗುತ್ತಿಗೆ ನೌಕರರು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಇದರ ಬಗ್ಗೆ ಪರಿಶೀಲನೆ ನಡೆಲು ಹೋದಾಗ ಅವರುಗಳ ಪರಿಸ್ಥಿತಿ ಹೇಗೆ ಇರುತ್ತದೆ ಎಂಬುದನ್ನು ಇಲ್ಲಿ ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಇರುತ್ತಾರೆ. ನಾವು ಸಂಬಂಧಿಸಿದ ಕೆಲಸವನ್ನು ಹೇಳಿ ಆ ರೀತಿಯಲ್ಲಿ ಮಾಡಬೇಕು ಎಂದಾಗ ಅವರು ಬೇರೆ ರೀತಿ ಮಾಡುತ್ತಾರೆ. ಹೀಗಾದರೆ ಏನು ಮಾಡುವುದು. ಏನು ಕೆಲಸ ಮಾಡಬೇಕೋ ಅದನ್ನು ಮಾಡುವುದಿಲ್ಲ. ಬೇರೆ ಏನೂ ಮಾಡುತ್ತಾರೆ ಎಂದು ತಮ್ಮ ಅಸಾಹಕತೆ ವ್ಯಕ್ತಪಡಿಸಿದರು.
    ನಗರದ ಚನ್ನಗಿರಿ ಮುಖ್ಯರಸ್ತೆ ಅಗಲೀಕರಣಗೊಳಿಸಿ ನಂತರ ಅಭಿವೃಧ್ಧಿ ಕಾಮಗಾರಿಗಳನ್ನು ಕೈಗೊಳ್ಳಿ ಎಂದು ಸದಸ್ಯ ಬಿ.ಟಿ ನಾಗರಾಜ್ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿ ಪೌರಾಯುಕ್ತರು, ರಸ್ತೆ ಆಗಲೀಕರಣದ ವಿಚಾರ ನಗರಸಭೆ ವ್ಯಾಪ್ತಿಗೆ ಬರುವುದಿಲ್ಲ. ಇದಕ್ಕೆ ಸಂಬಂಧಪಟ್ಟ ಇಲಾಖೆ ಬೇರೆ ಇದ್ದು, ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ಪ್ರಸ್ತಾವನೆ ಮಂಡಿಸಿರುವ ಹಿನ್ನಲೆಯಲ್ಲಿ ಇದನ್ನು ಪರಿಗಣನೆಗೆ ತೆಗೆದುಕೊಂಡು ಸಂಬಂಧಿಸಿದ ಇಲಾಖೆಗೆ ಕಳುಹಿಸಿಕೊಡಲಾಗುವುದು ಎಂದರು.
    ಈ ಹಿಂದೆ ಅಸ್ತಿತ್ವದಲ್ಲಿದ್ದ ಪುರಸಭೆ ನಗರಸಭೆಯಾಗಿ ರಚನೆಯಾದ ನಂತರ ಹೊಸದಾಗಿ ಕೆಲ ಗ್ರಾಮಾಂತರ ಪ್ರದೇಶಗಳು ನಗರಸಭೆಗೆ ಸೇರ್ಪಡೆಗೊಂಡವು. ಆ ಸಮಯದಲ್ಲಿ ಆ ಪ್ರದೇಶಗಳ ದಾಖಲಾತಿಗಳನ್ನು ಆಯಾ ಗ್ರಾಮ ಪಂಚಾಯಿತಿಯಿಂದ ನಗರಸಭೆಗೆ ಹಸ್ತಾಂತರ ಮಾಡಲಾಯಿತು. ಆದರೆ ಇಂದಿಗೂ ನಗರಸಭೆಯಲ್ಲಿ ಆ ಜಾಗಗಳನ್ನು ಅಳತೆ ಮಾಡಿ ದಾಖಖೆ ಮಾಡಿಕೊಟ್ಟಿಲ್ಲ. ಇದರಿಂದಾಗಿ ಇಲ್ಲಿನ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ತಕ್ಷಣ ಕ್ರಮ ಕೈಗೊಂಡು ದಾಖಲು ನೀಡುವಂತೆ ಸದಸ್ಯರಾದ ಚನ್ನಪ್ಪ, ಬಿ.ಕೆ ಮೋಹನ್, ಬಿ.ಟಿ ನಾಗರಾಜ್, ಕೋಟೇಶ್ವರ ರಾವ್ ಸೇರಿದಂತೆ ಇನ್ನಿತರರು ಆಗ್ರಹಿಸಿದರು.
    ಇದಕ್ಕೆ ಉತ್ತರಿಸಿದ ಪೌರಾಯುಕ್ತರು, ನಗರಸಭೆಯಲ್ಲಿ ಸೂಕ್ತ ದಾಖಲೆಗಳು ಲಭ್ಯವಾದಲ್ಲಿ  ಅಥವಾ ಗ್ರಾಮ ಪಂಚಾಯಿತಿಯಲ್ಲಿ ಯಾವುದಾರೂ ದಾಖಲೆ ಲಭ್ಯವಿದ್ದರೆ ಅಳತೆ ಮಾಡಿ ಖಾತೆ ಮಾಡಬಹುದು ಎಂದರು.
    ಈ ಬಾರಿ ಸಾಮಾನ್ಯಸಭೆಯಲ್ಲಿ ಬಹುತೇಕ ಕಾಮಗಾರಿಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳಿದ್ದು, ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡರು. ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್ ಉಪಸ್ಥಿತರಿದ್ದರು. ಸಭೆ ಆರಂಭದಲ್ಲಿ ನೂತನ ಉಪಾಧ್ಯಕ್ಷೆ ಸರ್ವಮಂಗಳಮ್ಮ ಬೈರಪ್ಪ ಅವರಿಗೆ ನಗರಸಭೆ ವತಿಯಿಂದ ಮಾಲಾರ್ಪಣೆ ಮಾಡಿ ಸ್ವಾಗತಿಸಲಾಯಿತು.

Friday, March 17, 2023

ಭದ್ರಾವತಿಯಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಅದ್ದೂರಿ ಸ್ವಾಗತ


ಭದ್ರಾವತಿ, ಮಾ. 18: ವಿಜಯ ಸಂಕಲ್ಪ ಯಾತ್ರೆ  ಶನಿವಾರ ಬೆಳಿಗ್ಗೆ  ನಗರದ ಲೋಯರ್ ಹುತ್ತಾ ಬಸ್ ನಿಲ್ದಾಣದಿಂದ ಆರಂಭಗೊಂಡಿತು.
     ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಂಸದ ಬಿ.ವೈ ರಾಘವೇಂದ್ರ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್,  ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ,  ಪಕ್ಷದ ಹಿರಿಯ ಪ್ರಮುಖರು, ಸ್ಥಳೀಯ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
   ಸಂಕಲ್ಪ  ಯಾತ್ರೆ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ, ನಂತರ ಹೊಸಮನೆ ಶಿವಾಜಿ ಸರ್ಕಲ್‌ವರೆಗೂ ಸಾಗಿತು.   
   ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಬೂತ್ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.  

ಮಾ.೧೮ರಂದು ನಗರಕ್ಕೆ ವಿಜಯ ಸಂಕಲ್ಪ ಯಾತ್ರೆ


    ಭದ್ರಾವತಿ, ಮಾ. ೧೭: ವಿಜಯ ಸಂಕಲ್ಪ ಯಾತ್ರೆ ಮಾ.೧೮ರ ಶನಿವಾರ ಬೆಳಿಗ್ಗೆ ೮.೩೦ಕ್ಕೆ ನಗರದ ಲೋಯರ್ ಹುತ್ತಾ ಬಸ್ ನಿಲ್ದಾಣದಿಂದ ಆರಂಭಗೊಳ್ಳಲಿದೆ ಎಂದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹೇಳಿದರು.
    ಅವರು ಈ ಕುರಿತು ಮಾಹಿತಿ ನೀಡಿ, ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಚಿವರಾದ ಆರಗ ಜ್ಞಾನೇಂದ್ರ, ಸುನಿಲ್‌ಕುಮಾರ್, ಸಂಸದ ಬಿ.ವೈ ರಾಘವೇಂದ್ರ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ, ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ಹಿರಿಯ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
    ಹುತ್ತಾ ಕಾಲೋನಿ ಬಸ್ ನಿಲ್ದಾಣದಿಂದ ಆರಂಭಗೊಳ್ಳುವ ಯಾತ್ರೆ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ, ನಂತರ ಹೊಸಮನೆ ಶಿವಾಜಿ ಸರ್ಕಲ್‌ವರೆಗೂ ಸಾಗಲಿದೆ. ಸಂಕಲ್ಪ ಯಾತ್ರೆ ಕುರಿತು ಪಕ್ಷದ ಪ್ರಮುಖರು ಮಾತನಾಡಲಿದ್ದು, ಇಲ್ಲಿಯೇ ಮುಕ್ತಾಯಗೊಳ್ಳಲಿದೆ.
    ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಬೂತ್ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.

ಮಾ.೧೮ರಂದು ನಗರಸಭೆ ಸಾಮಾನ್ಯ ಸಭೆ

    ಭದ್ರಾವತಿ, ಮಾ. ೧೭ : ನಗರಸಭೆ ಸಾಮಾನ್ಯ ಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ನೇತೃತ್ವದಲ್ಲಿ ಮಾ.೧೮ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ.
    ಸಾಮಾನ್ಯಸಭೆಗೆ ಸದಸ್ಯರು ಪಾಲ್ಗೊಳ್ಳುವ ಮೂಲಕ ಸಭೆ ಯಶಸ್ವಿಗೊಳಿಸಿ ಕೊಡುವಂತೆ ಪೌರಾಯುಕ್ತ ಮನು ಕುಮಾರ್ ಕೋರಿದ್ದಾರೆ. 

ಸಿಂಗನಮನೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಅಶ್ವಿನಿ ಶಶಿಕುಮಾರ್

ಭದ್ರಾವತಿ ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಅಶ್ವಿನಿ ಶಶಿಕುಮಾರ್ ಶಂಕರಘಟ್ಟ ಶುಕ್ರವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಮೇ. ೧೭: ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಅಶ್ವಿನಿ ಶಶಿಕುಮಾರ್ ಶಂಕರಘಟ್ಟ ಶುಕ್ರವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
    ಅಶ್ವಿನಿ ಶಶಿಕುಮಾರ್ ೧೬ ಮತಗಳು ಹಾಗು ಇವರ ಪ್ರತಿಸ್ಪರ್ಧಿ ಕವಿತಾ ಕವಿತಾ ಪುಟ್ಟೇಗೌಡ ೪ ಮತಗಳನ್ನು ಪಡೆದುಕೊಂಡರು. ೨೧ ಸದಸ್ಯ ಬಲ ಹೊಂದಿರುವ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಒಪ್ಪಂದದಂತೆ ಆಂತರಿಕವಾಗಿ ಅಧಿಕಾರ ಹಂಚಿಕೆ ಮಾಡಿಕೊಂಡಿದ್ದು, ಉಪಾಧ್ಯಕ್ಷರಾಗಿದ್ದ ಕವಿತಾ ರುದ್ರೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಚುನಾವಣೆ ನಡೆಯಿತು. ಓರ್ವ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ. ಪಶುಸಂಗೋಪನಾ ಇಲಾಖೆಯ ಹಿರಿಯ ಪಶು ವೈದ್ಯಾಧಿಕಾರಿ ಡಾ. ಬಸವರಾಜ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಹಿಂದುಳಿದ ವರ್ಗಗಳ ಗ್ರಾಮಾಂತರ ಅಧ್ಯಕ್ಷ ಎಂ. ರಮೇಶ್, ವಿಜಯ್ ಕುಮಾರ್, ಲೋಕೇಶ್, ಎಂ.ವಿ ಮುರುಗೇಶ್, ವೀರೇಶ್, ಶ್ರೀಕಾಂತ್ ಗ್ರಾಮದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ನೂತನ ಉಪಾಧ್ಯಕ್ಷ ಅಶ್ವಿನಿ ಶಶಿಕುಮಾರ್‌ರವರನ್ನು ಅಭಿನಂದಿಸಿದ್ದಾರೆ.

ಮಾ.೨೦ರಂದು ಎಸ್.ಸಿ ಮೋರ್ಚಾದಿಂದ “ನಮ್ಮ ನಡೆ ಭೀಮ ನಡೆ” ಬೃಹತ್ ಸಮಾವೇಶ

ಮಾ.೨೦ರಂದು ಜಿಲ್ಲಾ ಎಸ್.ಸಿ ಮೋರ್ಚಾದಿಂದ ಭದ್ರಾವತಿಯಲ್ಲಿ "ನಮ್ಮ ನಡೆ ಭೀಮ ನಡೆ" ಬೃಹತ್ ಸಮಾವೇಶ ಹಮ್ಮಿಕೊಂಡಿರುವ ಕುರಿತು ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕಾಸರವಳ್ಳಿ ಶ್ರೀನಿವಾಸ್ ಸೇರಿದಂತೆ ಪಕ್ಷದ ಪ್ರಮುಖರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    ಭದ್ರಾವತಿ, ಮೇ. ೧೭ : ಶಿವಮೊಗ್ಗ ಜಿಲ್ಲಾ ಬಿಜೆಪಿ ಎಸ್.ಸಿ ಮೊರ್ಚಾ ನೇತೃತ್ವದಲ್ಲಿ ಜಿಲ್ಲಾಮಟ್ಟದ "ನಮ್ಮ ನಡೆ ಭೀಮ ನಡೆ" ಬೃಹತ್ ಸಮಾವೇಶ ಭದ್ರಾವತಿ ಮಂಡಲ ಬಿಜೆಪಿ ಕಛೇರಿ ಮುಂಭಾಗದ ಆವರಣದಲ್ಲಿ ಮಾ.೨೦ರ ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕಾಸರವಳ್ಳಿ ಶ್ರೀನಿವಾಸ್ ಹೇಳಿದರು.
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸಮಾವೇಶದಲ್ಲಿ ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ ರಾಘವೆಂದ್ರ, ಎಸ್.ಸಿ ಮೊರ್ಜಾ ರಾಜ್ಯಧ್ಯಕ್ಷ  ಛಲವಾದಿ ನಾರಯಣಸ್ವಾಮಿ  ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಸೇರಿದಂತೆ ಪಕ್ಷದ ರಾಜ್ಯ, ಜಿಲ್ಲಾ ಮಟ್ಟದ ನಾಯಕರು, ಜಿಲ್ಲೆಯ ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.  
    ಎಸ್.ಸಿ ಮೊರ್ಚಾ ನೇತೃತ್ವದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಜಿಲ್ಲೆಯಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಪಲಾನುಭವಿಗಳಿಗೆ ಅನುದಾನ ಮಂಜೂರಾತಿ ಮಾಡಿಸಿಕೊಡಲಾಗಿದೆ.  ಪಕ್ಷ ಸಂಘಟನೆ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಸಾವಿರಾರು ಮಂದಿ ಬಡವರಿಗೆ ಆಹಾರದ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ. ಬೃಹತ್ ಸಸಿ ನೆಡುವ ಕಾರ್ಯಕ್ರಮ, ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್, ಪೆನ್ ವಿತರಣೆ, ಗರ್ಭಿಣಿ ಮಹಿಳೆಯರಿಗೆ ಮತ್ತು ಕುಷ್ಠ ರೋಗಿಗಳಿಗೆ ಪೌಷ್ಠಿಕ ಆಹಾರ ವಿತರಣೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು  ಆಯೋಜಿಸಲಾಗಿದ್ದು, ಹೆಚ್ಚು ಕ್ರಿಯಾಶೀಲವಾಗಿ ಮುನ್ನಡೆಯುತ್ತಿದೆ ಎಂದರು.
    ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯವರಿಗೆ ಶೇ.೧೫ರಷ್ಟಿದ್ದ ಮಿಸಲಾತಿಯನ್ನು ಶೇ.೧೭ಕ್ಕೆ ಹೆಚ್ಚಳ ಮಾಡಿರುವುದು ರಾಜ್ಯದಲ್ಲಿ ಬಿಜೆಪಿ ಪಕ್ಷದ ಮೇಲೆ ಪರಿಶಿಷ್ಟ ಜಾತಿಯವರು ನಂಬಿಕೆ, ವಿಶ್ವಾಸ ಹೊಂದುವಂತಾಗಿದೆ. ಅಲ್ಲದೆ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳುತ್ತಿದ್ದಾರೆ. ಬೃಹತ್ ಸಮಾವೇಶದಲ್ಲಿ ಪರಿಶಿಷ್ಟ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕೆಂದು ಕೋರಿದರು.
    ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಯರಾಮ್ ನಾಯ್ಕ್, ಎಂ. ರಾಜು, ಜಿಲ್ಲಾ ಪ್ರಭಾರಿ ದೇವರಾಜ್ ಮಂಡೇನ್ ಕೊಪ್ಪ, ತಾಲೂಕು ಅಧ್ಯಕ್ಷ ಗಣೇಶ್ ರಾವ್, ಪ್ರಮುಖರಾದ ಜಿ. ಆನಂದಕುಮಾರ್, ಮಂಗೋಟೆ ರುದ್ರೇಶ್, ಚಂದ್ರ ದೇವರನರಸೀಪುರ, ಆರ್.ಎಸ್ ಶೋಭಾ, ಅನ್ನಪೂರ್ಣ, ರೇಖಾ ಪದ್ಮಾವತಿ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಎಎಪಿ ಪಕ್ಷದ ರವಿಕುಮಾರ್, ರಮೇಶ್ ಕಾಂಗ್ರೆಸ್ ಸೇರ್ಪಡೆ

 ಇತ್ತೀಚೆಗೆ ಆಮ್ ಆದ್ಮಿ ಪಾರ್ಟಿ(ಎಎಪಿ) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಭದ್ರಾವತಿ ಎಚ್. ರವಿಕುಮಾರ್ ಹಾಗು ತಾಲೂಕು ಅಧ್ಯಕ್ಷ ಬಿ.ಕೆ ರಮೇಶ್‌ರವರು ಶುಕ್ರವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಭದ್ರಾವತಿ, ಮಾ. ೧೭ : ಇತ್ತೀಚೆಗೆ ಆಮ್ ಆದ್ಮಿ ಪಾರ್ಟಿ(ಎಎಪಿ) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಹಾಗು ತಾಲೂಕು ಅಧ್ಯಕ್ಷ ಬಿ.ಕೆ ರಮೇಶ್‌ರವರು ಶುಕ್ರವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ನಗರಸಭೆ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಬಿ.ಕೆ ಮೋಹನ್ ಕಾಂಗ್ರೆಸ್ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಸ್ವಾಗತಿಸಿದರು. ಬಿ.ಕೆ ಮೋಹನ್ ಮಾತನಾಡಿ, ರವಿಕುಮಾರ್ ಹಾಗು ಅವರ ಬೆಂಬಲಿಗರು ಬಹಳಷ್ಟು ಹೋರಾಟದಲ್ಲಿ ತೊಡಗಿಸಿಕೊಳ್ಳುವ ಮೂಲಕ ಗುರುತಿಸಿಕೊಂಡಿದ್ದಾರೆ. ಇವರ ಸೇರ್ಪಡೆಯಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ ಎಂದರು.
    ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ರವಿಕುಮಾರ್ ಹಾಗು ಬೆಂಬಲಿಗರು ಮಾತನಾಡಿ, ಬಹಳಷ್ಟು ಭರವಸೆ, ವಿಶ್ವಾಸಗಳನ್ನು ಹೊಂದುವ ಮೂಲಕ ಎಎಪಿ ಪಕ್ಷಕ್ಕೆ ಸೇರ್ಪಡೆಗೊಂಡು ಪಕ್ಷವನ್ನು ಸಂಘಟಿಸುವಲ್ಲಿ ಶ್ರಮಿಸಿದ್ದೇವೆ. ಆದರೆ ಇತ್ತೀಚಿಗೆ ಪಕ್ಷದಲ್ಲಿ ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ. ಪಕ್ಷದ ರಾಜ್ಯಾಧ್ಯಕ್ಷರು ರಾಜ್ಯದೆಲ್ಲೆಡೆ ಹಣವಂತರಿಗೆ ಮಣೆ ಹಾಕುತ್ತಿದ್ದಾರೆ. ಇದರಿಂದಾಗಿ ಪ್ರಾಮಾಣಿಕ ಕಾರ್ಯಕರ್ತರು ಪಕ್ಷದಿಂದ ಹೊರಬರುವಂತಾಗಿದೆ. ರಾಜ್ಯದಲ್ಲಿ ಎಎಪಿ ಪಕ್ಷಕ್ಕೆ ಮತ ಹಾಕುವುದು ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸಿದಂತಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಎಎಪಿ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಾಗುತ್ತಿದೆ ಎಂದರು.
    ಜೆಡಿಎಸ್ ಪಕ್ಷದ ಮಹಿಳಾ ಮುಖಂಡರಾದ ರೇಷ್ಮಬಾನುರವರು ಸಹ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ರೇಷ್ಮಬಾನು ಸಹ ಈ ಹಿಂದೆ ಬಹಳ ವರ್ಷಗಳಿಂದ ಎಎಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.


    ಪಕ್ಷದ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಮಾಜಿ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸದಸ್ಯರಾದ ಲತಾ ಚಂದ್ರಶೇಖರ್, ಶೃತಿ ವಸಂತ್, ಕಾಂತರಾಜ್, ಮುಖಂಡರಾದ ಅಮೀರ್‌ಜಾನ್, ಶ್ರೀನಿವಾಸ್, ತಬ್ರೇಸ್ ಖಾನ್, ವರುಣ್‌ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.