ಭದ್ರಾವತಿ, ಮಾ. ೨೪: ಸುಮಾರು ೧೩ ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಯುವಕನೋರ್ವನಿಗೆ ೨೦ ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ.
ತಾಲೂಕಿನ ಸುಮಾರು ೨೫ ವರ್ಷದ ಯುವಕ ಜೈಲು ಶಿಕ್ಷೆಗೆ ಗುರಿಯಾಗಿದ್ದು, ಆರೋಪ ದೃಢಪಟ್ಟ ಹಿನ್ನಲೆಯಲ್ಲಿ ಈತನಿಗೆ ೨೦ ವರ್ಷ ಕಠಿಣ ಜೈಲು ಶಿಕ್ಷೆ ಜೊತೆಗೆ ೧.೧೦ ಲಕ್ಷ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ, ಹೆಚ್ಚುವರಿಯಾಗಿ ೬ ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.
ಮಾ.೨೩ರಂದು ಹೆಚ್ಚುವರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ ಎಫ್‌ಟಿಎಸ್‌ಸಿ-FTSC-II(POCSO) ನ್ಯಾಯಾಧೀಶರಾದ ಮೋಹನ ಜೆ.ಎಸ್ ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹರಿಪ್ರಸಾದ್ ವಾದ ಮಂಡಿಸಿದ್ದರು.
ಘಟನೆ ಹಿನ್ನೆಲೆ:
ಶಿಕ್ಷೆಗೊಳಗಾದ ಯುವಕ ೨೦೧೯ರಲ್ಲಿ ಸುಮಾರು ೧೩ ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ನೊಂದ ಬಾಲಕಿಯ ತಂದೆ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅಂದಿನ ತನಿಖಾಧಿಕಾರಿಯಾಗಿದ್ದ ನಗರ ಪೊಲೀಸ್ ವೃತ್ತ ನಿರೀಕ್ಷಕ ನಂಜಪ್ಪ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ವಿಜಯಕಲಾ ಎಂ.ಎಚ್.ಸಿ ತನಿಖಾ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದರು.