Thursday, March 23, 2023

ಹೊಸ ಉತ್ಸಾಹ, ಹಲವು ಭರವಸೆಗಳೊಂದಿಗೆ ಜಾನ್ ಬೆನ್ನಿ ವಿಧಾನಸಭಾ ಚುನಾವಣೆಗೆ ಸ್ಪರ್ಧೆ

ಸುಮಾರು ೧ ವರ್ಷದಿಂದ ಕ್ಷೇತ್ರದಾದ್ಯಂತ ವ್ಯಾಪಕ ಪ್ರಚಾರ

ಜಾನ್ ಬೆನ್ನಿ
    ಭದ್ರಾವತಿ, ಮಾ. ೨೩ : ಈ ಬಾರಿ ಸಹ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಜಾನ್ ಬೆನ್ನಿ ಹೊಸ ಉತ್ಸಾಹ ಹಾಗು ಹಲವು ಭರವಸೆಗಳೊಂದಿಗೆ ಸ್ಪರ್ಧಿಸುತ್ತಿದ್ದು, ಕಳೆದ ಸುಮಾರು ೧ ವರ್ಷದಿಂದ ಕ್ಷೇತ್ರದಾದ್ಯಂತ ವ್ಯಾಪಕ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ದಿನಗಳಿಂದ ಪ್ರಚಾರ ಮತ್ತಷ್ಟು ತೀವ್ರಗೊಳಿಸಿದ್ದು, ಕ್ಷೇತ್ರದ ಪ್ರತಿಯೊಂದು ಮನೆಗೆ ತೆರಳಿ ಮತದಾರರಲ್ಲಿ ವಿಶ್ವಾಸ ಮೂಡಿಸುವ ಮೂಲಕ ಮತಯಾಚನೆ ಕೈಗೊಂಡಿದ್ದಾರೆ.
    ಸಾಮಾನ್ಯ ಕುಟುಂಬದ ವ್ಯಕ್ತಿಯಾಗಿರುವ ಜಾನ್ ಬೆನ್ನಿ ನಗರದಲ್ಲಿ ಸುಮಾರು ೩-೪ ದಶಕಗಳಿಂದ ವಾಹನ ಚಾಲನಾ ತರಬೇತಿ ಶಿಕ್ಷಕರಾಗಿ ಗುರುತಿಸಿಕೊಂಡು ಚಿರಪರಿಚಿತರಾಗಿದ್ದಾರೆ. ಕ್ಷೇತ್ರದ ಜನರ ಭವಿಷ್ಯದ ಬದುಕಿಗೆ ಹೊಸ ಮುನ್ನುಡಿ ಬರೆಯಬೇಕೆಂಬ ಹಂಬಲದೊಂದಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ವಿಶೇಷ ಎಂದರೆ ಇವರು ಯಾವುದೇ ರಾಜಕೀಯಗಳ ಪಕ್ಷಗಳಿಗೆ ಜೋತು ಬೀಳದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.   ತಿಂಗಳಿನಿಂದ
    ನಗರದ ಜನರ ಜೀವನಾಡಿಯಾಗಿರುವ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳು ಅವನತಿ ದಾರಿ ಹಿಡಿದು ಸಾವಿರಾರು ಕಾರ್ಮಿಕರು, ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿದ್ದು, ನಿರುದ್ಯೋಗ ಸಮಸ್ಯೆ ಉಲ್ಬಣಗೊಂಡಿದೆ, ಬೇರೆಡೆಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ, ಆರ್ಥಿಕ ಮಟ್ಟ ಕುಸಿತವಾಗಿದೆ ಹಾಗು ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಎದುರಾಗುತ್ತಿರುವ ಚುನಾವಣೆ ನಮ್ಮೆಲ್ಲರ ಪಾಲಿಗೆ ಮಹತ್ವದ್ದಾಗಿದೆ. ನಿಮ್ಮ ಅಧಿಕಾರ ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. "ನಿಂತಿರುವುದು ನಾನಲ್ಲ ನೀವೇ" ಅಭ್ಯರ್ಥಿ ಎಂದು ಪರಿಗಣಿಸಿ ನನಗೆ ಒಂದು ಅವಕಾಶ ಕೊಡಿ. ಅವಕಾಶ ನೀಡಿ ಎಂಬ ಮನವಿ ಇವರದ್ದಾಗಿದೆ. ಅಲ್ಲದೆ ಸುಮಾರು ೧೧ ಭರವಸೆಗಳೊಂದಿಗೆ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

No comments:

Post a Comment