Wednesday, March 29, 2023

ಮಾ.೩೧ರವರೆಗೆ ಶ್ರೀ ಉದ್ದಾಮ ಕ್ಷೇತ್ರ ವಾರ್ಷಿಕ ಜಾತ್ರಾ ಮಹೋತ್ಸವ : ಅಂತರ್ಜಾಲ ತಾಣ ಲೋಕಾರ್ಪಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗಡೆಯವರು ಭದ್ರಾವತಿ ತಾಲೂಕಿನ ಪುರಾಣ ಪ್ರಸಿದ್ದ ಗಂಗೂರಿನ ಶ್ರೀ ಉದ್ದಾಂಜನೇಯ ಸ್ವಾಮಿ ದೇವಸ್ಥಾನ ಶ್ರೀ ಉದ್ದಾಮ ಕ್ಷೇತ್ರದ ನೂತನ ಅಂತರ್ಜಾಲ ತಾಣ ಲೋಕಾರ್ಪಣೆಗೊಳಿಸಿದರು.
    ಭದ್ರಾವತಿ, ಮಾ. ೨೯: ತಾಲೂಕಿನ ಪುರಾಣ ಪ್ರಸಿದ್ದ ಗಂಗೂರಿನ ಶ್ರೀ ಉದ್ದಾಂಜನೇಯ ಸ್ವಾಮಿ ದೇವಸ್ಥಾನ ಶ್ರೀ ಉದ್ದಾಮ ಕ್ಷೇತ್ರ ವಾರ್ಷಿಕ ಜಾತ್ರಾ ಮಹೋತ್ಸವ ಮಾ.೩೧ರವರೆಗೆ ನಡೆಯಲಿದೆ.
    ಬುಧವಾರ ಬೆಳಿಗ್ಗೆ ಕುಡಿಪೂಜೆ, ಧ್ವಜಾರೋಹಣ, ಉದ್ದಾಮನಿಗೆ ಪಂಚಾಮೃತ-ರುದ್ರಾಭಿಷೇಕ, ಗಣಪತಿ ಪುಣ್ಯಾಹ ನಾಂದಿ, ಮಹಾಸಂಕಲ್ಪ, ಅಷ್ಟದ್ರವ್ಯ ಮಹಾ ಗಣಪತಿ ಹೋಮ, ಪುರಸ್ಸರ ರುದ್ರಹೋಮ, ೧೦೮ ದಂಪತಿಗಳಿಂದ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ, ಕೆಂಚಾಂಬಿಕ ಮೂಲಮಂತ್ರ ಹೋಮ, ಮಧ್ಯಾಹ್ನ ಮಹಾಮಂಗಳಾರತಿ, ಮಹಾಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಜರುಗಿದವು. ಸ್ವಾಮಿಗೆ ವಿವಿಧ ಹಣ್ಣುಗಳಿಂದ ಅಲಂಕಾರ ಕೈಗೊಳ್ಳಲಾಗಿತ್ತು.
    ಸಂಜೆ ಮಂಡಲಪೂಜೆ, ವಾಸ್ತುರಾಕ್ಷೋಘ್ನ ಸುದರ್ಶನ ಹೋಮ, ಲಕ್ಷ್ಮೀನೃಸಿಂಹ ಹೋಮ, ದಿಗ್ಬಲಿ, ಪ್ರಾಕೋತ್ಸವ, ಅಶ್ಥಾವಧಾನ ಸೇವೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಮಾ.೩೦ರಂದು ಬೆಳಿಗ್ಗೆ ೬.೩೦ಕ್ಕೆ ಕುಂಭಾಭಿಷೇಕ ನಡೆಯಲಿದೆ. ೧೦೦೮ ಕಳಶಗಳ ಗಂಗಾ ಪೂಜೆ ಮತ್ತು ಗಂಗಾ ಕಳಶಗಳ ಮೆರವಣಿಗೆ, ಕುಂಭಾಭಿಷೇಕ, ಮೋದಕ ಅಥರ್ವಶೀರ್ಷ ಗಣಪತಿ ಹೋಮ, ರಾಮತಾರಕ ಹೋಮ, ಬನ್ನಿಮಹಾಕಾಳಿ ಹೋಮ ಹಾಗು ಮಧ್ಯಾಹ್ನ ಮಹಾಮಂಗಳಾರತಿ, ಮಹಾಪ್ರಸಾದ ವಿನಿಯೋಗ ನಡೆಯಲಿದೆ.
    ಸಂಜೆ ೪ ಗಂಟೆಗೆ ಶ್ರೀ ರಾಮತಾರಕ ಜಪ, ಸಂಜೆ ೬ ಗಂಟೆಗೆ ಪಂಚದುರ್ಗಾ ದೀಪ ನಮಸ್ಕಾರ, ವನದುರ್ಗಾ ಹೋಮ, ವಿಜಯದುರ್ಗ ಹೋಮ, ಪ್ರಾಕಾರೋತ್ಸವ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ಮಹಾಪ್ರಸಾದ ವಿನಿಯೋಗ ನಡೆಯಲಿದೆ. ಸ್ವಾಮಿಗೆ ವಿವಿಧ ಹೂವುಗಳಿಂದ ಅಲಂಕಾರ ನಡೆಯಲಿದೆ.
    ಮಾ.೩೧ರಂದು ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಬಾಲಾರ್ಕ ಗಣಪತಿ ಹೋಮಾರಂಭ, ಶನಿ ಶಾಂತಿ ಹೋಮ, ಸೂರ್ಯೋದಯಕ್ಕೆ ಸರಿಯಾಗಿ ಪೂರ್ಣಹುತಿ, ಸ್ವಾಮಿಗೆ ಪಂಚಾಮೃತ ಅಭಿಷೇಕ, ತುಪ್ಪ, ಜೇನು ತುಪ್ಪ, ಎಳನೀರು, ಕಬ್ಬಿನ ಹಾಲು ಮತ್ತು ರುದ್ರಾಭಿಷೇಕ, ಮಾರುತಿ ಮೂಲ ಮಂತ್ರ ಹೋಮ, ಕೆಂಚರಾಯ ಮೂಲ ಮಂತ್ರ ಹೋಮ, ನವಗ್ರಹ ಹೋಮ ನಡೆಯಲಿವೆ. ಸಂಜೆ ೬ ಗಂಟೆಗೆ ಆಶ್ಲೇಷ ಬಲಿ ಪೂಜೆ, ಶ್ರೀ ವಲ್ಲಿಸಹಿತ ಸುಬ್ರಹ್ಮಣ್ಯ ಶಕ್ತಿಧರ ಹೋಮ, ಆಶ್ಲೇಷ ಬಲಿ ಪೂಜೆ, ಮಹಾ ಮಂಗಳಾರತಿ ಮತ್ತು ಮಹಾಪ್ರಸಾದ ವಿನಿಯೋಗ ಜರುಗಲಿವೆ.
    ಅಂತರ್ಜಾಲ ತಾಣ(www.uddanaanjaneya.org) ಲೋಕಾರ್ಪಣೆ :
    ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗಡೆಯವರು ಶ್ರೀ ಕ್ಷೇತ್ರದ ನೂತನ ಅಂತರ್ಜಾಲ ತಾಣ ಲೋಕಾರ್ಪಣೆಗೊಳಿಸಿದರು.
    ಶ್ರೀ ಉದ್ದಾಂಜನೇಯ ಸೇವಾ ಟ್ರಸ್ಟ್ ಪ್ರಮುಖರಾದ ಜಯಶಂಕರ್, ಹೊಸಹಳ್ಳಿ ತಾಂಡದ ರಮೇಶ್‌ನಾಯ್ಕ, ಮಂಜಾನಾಯ್ಕ, ಎಚ್.ಎಂ ರಾಮಚಂದ್ರಪ್ಪ, ಗಂಗೂರು ಎಸ್. ವಾಗೀಶ್‌ರಾವ್, ಶ್ರೀರಾಮನಗರ ಎಂ.ಕೆ ನಾರಾಯಣಸ್ವಾಮಿ, ಹೊಸಹಳ್ಳಿ ತಾಂಡದ ಎಸ್. ಗೋವಿಂದನಾಯ್ಕ, ಅಣ್ಣಪ್ಪನಾಯ್ಕ ಮತ್ತು ದೊಡ್ಡೇರಿ ಡಿ.ಸಿ ತಿಮ್ಮಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಏ.5ರಿಂದ ಬೇಸಿಗೆ ಶಿಬಿರ



ಭದ್ರಾವತಿ,  ಮಾ. 29: ನಗರದ ಜನ್ನಾಪುರ ಅಪರಂಜಿ ಅಭಿನಯ ಶಾಲೆ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ರಜಾ-ಮಜಾ 5 ದಿನಗಳ ಬೇಸಿಗೆ ಶಿಬಿರ ಏ.5ರಿಂದ ಆಯೋಜಿಸಲಾಗಿದೆ.
    ಮಕ್ಕಳಿಗೆ ರಂಗ ಕಲೆ ಮತ್ತು ಚಿತ್ರಕಲೆ ತರಬೇತಿ ನಡೆಯಲಿದೆ.  4 ರಿಂದ 15 ವರ್ಷದ ಮಕ್ಕಳು ಭಾಗವಹಿಸಬಹುದಾಗಿದೆ.  ಶಿಬಿರ ಬೆಳಿಗ್ಗೆ  10.30 ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ.
    ಹೆಚ್ಚಿನ ಮಾಹಿತಿಗೆ ಅಪರಂಜಿ ಶಿವರಾಜ್ ಮೊ: 9980534406 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಭದ್ರಗಿರಿಯಲ್ಲಿ ತಿರುಪಂಗುಣಿ ಉತ್ತರ ಜಾತ್ರಾ ಉತ್ಸವಕ್ಕೆ ಚಾಲನೆ

ಭದ್ರಾವತಿ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಧ್ವಜಾರೋಹಣದೊಂದಿಗೆ ತಿರುಪಂಗುಣಿ ಉತ್ತರ ಜಾತ್ರಾ ಉತ್ಸವಕ್ಕೆ ಚಾಲನೆ ನೀಡಲಾಯಿತು.
    ಭದ್ರಾವತಿ, ಮಾ. ೨೯ : ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಧ್ವಜಾರೋಹಣದೊಂದಿಗೆ ತಿರುಪಂಗುಣಿ ಉತ್ತರ ಜಾತ್ರಾ ಉತ್ಸವಕ್ಕೆ ಚಾಲನೆ ನೀಡಲಾಯಿತು.
    ಶ್ರೀ ಕ್ಷೇತ್ರದ ಶ್ರೀ ಮುರುಗೇಶ್ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಬೆಳಿಗ್ಗೆ ಹೋಮ-ಹವನ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.    ಎಂ.ಸಿ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಬಸಪ್ಪ, ಮಾಜಿ ಅಧ್ಯಕ್ಷೆ ಪದ್ಮ ಸಂಜೀವ್ ಕುಮಾರ್,  ದೇವಸ್ಥಾನ ಮಂಡಳಿ ಅಧ್ಯಕ್ಷ ಎ. ಚಂದ್ರಘೋಷನ್, ಪದಾಧಿಕಾರಿಗಳು, ಸೇವಾಕರ್ತರು ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.
    ಕಲ್ಲತ್ತಿಪುರದ ಆರ‍್ಮುಗಂರವರು ಶ್ರೀ ಕ್ಷೇತ್ರಕ್ಕೆ  ಗೋವು ದಾನ ನೀಡಿದರು. ಏ.೪ರಂದು ಮಹಾ ಚಂಡಿಕಾ ಯಾಗ ಮತ್ತು  ೫ ರಂದು ತಿರುಪಂಗಣಿ ಉತ್ಸವ ವಿಜೃಂಭಣೆಯಿಂದ ಜರುಗಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗಳಿಸುವಂತೆ ಕೋರಲಾಗಿದೆ.


ತರೀಕೆರೆ ತಾಲೂಕಿನ ಕಲ್ಲತ್ತಿಪುರದ ಆರ‍್ಮುಗಂರವರು ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಗೋವು ದಾನ ನೀಡಿದರು.

Tuesday, March 28, 2023

ವಿಐಎಸ್‌ಎಲ್ ಉಳಿವಿಗಾಗಿ ಗುತ್ತಿಗೆ ಕಾರ್ಮಿಕರಿಂದ ಉರುಳು ಸೇವೆ

ಭದ್ರಾವತಿ ಹಳೇನಗರ ಪುರಾಣ ಪ್ರಸಿದ್ದ, ಕ್ಷೇತ್ರ ಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಗುತ್ತಿಗೆ ಕಾರ್ಮಿಕರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಉರುಳು ಸೇವೆ ನಡೆಸಿದರು.
    ಭದ್ರಾವತಿ, ಮಾ. ೨೮: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇದೀಗ ಗುತ್ತಿಗೆ ಕಾರ್ಮಿಕರು ದೇವರ ಮೊರೆ ಹೋಗಿದ್ದಾರೆ.
    ಮಂಗಳವಾರ ಸಂಜೆ ಹಳೇನಗರ ಪುರಾಣ ಪ್ರಸಿದ್ದ, ಕ್ಷೇತ್ರ ಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉರುಳು ಸೇವೆ ನಡೆಸಿದರು. ಈಗಾಗಲೇ ಹಲವು ರೀತಿಯ ಹೋರಾಟಗಳನ್ನು ಕೈಗೊಂಡಿರುವ ಗುತ್ತಿಗೆ ಕಾರ್ಮಿಕರು ಹೋರಾಟದ ಒಂದು ಭಾಗವಾಗಿ ಧಾರ್ಮಿಕ ಆಚರಣೆಗಳನ್ನು ಸಹ ಕೈಗೊಳ್ಳುತ್ತಿದ್ದಾರೆ.
    ಈ ಹಿಂದೆ ಸಹ ಕಾಯಂ ಕಾರ್ಮಿಕರು ಹೋರಾಟದ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿ ಉರುಳು ಸೇವೆ ನಡೆಸಿದ್ದರು.  ಕೆಲವು ವರ್ಷಗಳ ಹಿಂದಿನ ಘಟನೆ ಇದೀಗ ಪುನಃ ಮರುಕಳುಹಿಸಿರುವುದು ವಿಶೇಷವಾಗಿದೆ.
    ಗಣಹೋಮ-ಶ್ರೀ ಚೌಡೇಶ್ವರಿ ಅಮ್ಮನವರ ಮಹಾಪೂಜೆ:
    ಮಾ.೩೧ರಂದು ವಿಐಎಸ್‌ಎಲ್ ಕಾರ್ಖಾನೆ ಆವರಣದಲ್ಲಿ ಟ್ರಾಫಿಕ್ ಇಲಾಖೆಯ ಅಧಿಕಾರಿಗಳು, ಕಾರ್ಮಿಕರು ಮತ್ತು ಗುತ್ತಿಗೆ ಕಾರ್ಮಿಕರ ವತಿಯಿಂದ ಬೆಳಿಗ್ಗೆ ೯ ಗಂಟೆಗೆ ಗಣಹೋಮ, ಶ್ರೀ ಚೌಡೇಶ್ವರಿ ಅಮ್ಮನವರ ಮಹಾಪೂಜೆ ಮತ್ತು ೧೨ ಗಂಟೆಗೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  

ವಿಶಾಲಾಕ್ಷಮ್ಮ ನಿಧನ

ವಿಶಾಲಾಕ್ಷಮ್ಮ 
    ಭದ್ರಾವತಿ, ಮಾ. ೨೮ : ನಗರದ ಹುತ್ತಾ ಕಾಲೋನಿ ಬಿಜೆಪಿ ಪಕ್ಷದ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್‌ಕುಮಾರ್‌ರವರ ಪತ್ನಿ ವಿಶಾಲಾಕ್ಷಮ್ಮ ನಿಧನ ಹೊಂದಿದರು.
    ಪತಿ ಸತೀಶ್‌ಕುಮಾರ್ ಹಾಗು ಇಬ್ಬರು ಹೆಣ್ಣು ಮಕ್ಕಳು ಇದ್ದರು. ಅಂತ್ಯಕ್ರಿಯೆ ಬುಧವಾರ ಬೆಳಿಗ್ಗೆ ನಡೆಯಲಿದೆ. ಸತೀಶ್‌ಕುಮಾರ್ ದಂಪತಿ ವಿವೇಕಾನಂದ ಜಾಗೃತಿ ಬಳಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
    ವಿಶಾಲಾಕ್ಷಮ್ಮನವರ ನಿಧನಕ್ಕೆ ಬಿಜೆಪಿ ಪಕ್ಷದ ಪ್ರಮುಖರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಯಡಿಯೂರಪ್ಪ ನಿವಾಸದ ಮೇಲೆ ದಾಳಿ : ಖಂಡನೆ

ಭದ್ರಾವತಿಯಲ್ಲಿ ಮಂಗಳವಾರ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಶಿಕಾರಿಪುರದ ನಿವಾಸದ ಮೇಲೆ ಸೋಮವಾರ ಕಲ್ಲು ತೂರಾಟ ನಡೆಸಿ ದಾಳಿ ಮಾಡಿರುವ ಕೃತ್ಯವನ್ನು  ಖಂಡಿಸಿದರು.  
    ಭದ್ರಾವತಿ, ಮಾ. ೨೮: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಶಿಕಾರಿಪುರದ ನಿವಾಸದ ಮೇಲೆ ಸೋಮವಾರ ಕಲ್ಲು ತೂರಾಟ ನಡೆಸಿ ದಾಳಿ ಮಾಡಿರುವ ಕೃತ್ಯವನ್ನು ನಗರದ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಖಂಡಿಸಿದ್ದಾರೆ.
    ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಪ್ರಮುಖರು ಈ ಘಟನೆ ಸಮುದಾಯದಲ್ಲಿ ದಿಗ್ಭ್ರಮೆಯನ್ನುಂಟು ಮಾಡಿದೆ. ಸುಮಾರು ೫ ದಶಕಗಳ ರಾಜಕೀಯ ಅನುಭವ ಹೊಂದಿರುವ ನಾಡು ಕಂಡ ಧೀಮಂತ ನಾಯಕ ಬಿ.ಎಸ್ ಯಡಿಯೂರಪ್ಪ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಯಡಿಯೂರಪ್ಪನವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸದೆ ದೊಡ್ಡತನ ಪ್ರದರ್ಶಿಸಿದ್ದಾರೆ. ಈ ಕೃತಕ್ಕೆ ಸಂಬಂಧಿಸಿದಂತೆ ಯಾರನ್ನು ಬಂಧಿಸದಂತೆ ಮನವಿ ಮಾಡಿದ್ದಾರೆ.  ಈ ಕೃತ್ಯವನ್ನು ಖಂಡಿಸುವುದು ಸಮುದಾಯದ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
    ಯಡಿಯೂರಪ್ಪನವರು ಹೋರಾಟದಿಂದ ರಾಜಕೀಯಕ್ಕೆ ಬಂದವರು ಎಲ್ಲಾ ಸಮುದಾಯದ ಏಳಿಗೆಗಾಗಿ ಶ್ರಮಿಸಿದವರು. ಪ್ರಸ್ತುತ ಅವರು ರಾಜಕೀಯದಿಂದ ನಿವೃತ್ತಿ ಪಡೆದುಕೊಂಡಿದ್ದಾರೆ. ಆದರೂ ಸಹ ತನ್ನ ಪಕ್ಷಕ್ಕಾಗಿ ಶ್ರಮಿಸುತ್ತಿದ್ದಾರೆ. ದುರುದ್ದೇಶದಿಂದ ಇವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದರು.  
    ಹೋರಾಟ ನಡೆಸುವುದಕ್ಕೆ ಯಾವುದೇ ವಿರೋಧವಿಲ್ಲ. ಆದರೆ ಹೋರಾಟ ದಾರಿ ತಪ್ಪಬಾರದು. ಅದರಿಂದ ಮತ್ತೊಬ್ಬರಿಗೆ ತೊಂದರೆಯಾಗಬಾರದು. ಯಾರ ವಿರುದ್ಧ ಸಹ ಈ ರೀತಿಯ ಘಟನೆಗಳು ಸಮಾಜದಲ್ಲಿ ಮರುಕಳುಹಿಸಬಾರದು. ಈ ಹಿನ್ನಲೆಯಲ್ಲಿ ಈ ಘಟನೆ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
    ಪ್ರಮುಖರಾದ ತೀರ್ಥಯ್ಯ, ಜಿ. ಸುರೇಶಯ್ಯ, ಆರ್.ಎಸ್ ಶೋಭಾ, ರವಿಕುಮಾರ್, ಅನುಪಮ ಚನ್ನೇಶ್, ಶೋಭಾ ಪಾಟೀಲ್, ಕವಿತಾ ಸುರೇಶ್, ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, March 27, 2023

ಬಡವರಿಗೆ ನಿವೇಶನ ಹಂಚಿ : ಪಿಡಿಓ ಅಮಾನತುಗೊಳಿಸಿ

ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ

ಭದ್ರಾವತಿ ಹಳೇ ಹಿರಿಯೂರು ಗ್ರಾಮಠಾಣಾ ಜಾಗ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡುವಂತೆ ಹಾಗೂ ಗ್ರಾಮ ಪಂಚಾಯಿತಿ ಪಿಡಿಓ ಭ್ರಷ್ಟ ಅಧಿಕಾರಿಯನ್ನು ಅಮಾನತ್ತು ಮಾಡಲು ಆಗ್ರಹಿಸಿ ಸೋಮವಾರ ತಾಲೂಕು ಪಂಚಾಯತಿ ಮುಂಭಾಗ ಹಿರಿಯೂರು ಗ್ರಾಮಾಭವೃದ್ಧಿ ಹೋರಾಟ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಮಾ. ೨೭: ಹಳೇ ಹಿರಿಯೂರು ಗ್ರಾಮಠಾಣಾ ಜಾಗ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡುವಂತೆ ಹಾಗೂ ಗ್ರಾಮ ಪಂಚಾಯಿತಿ ಪಿಡಿಓ ಭ್ರಷ್ಟ ಅಧಿಕಾರಿಯನ್ನು ಅಮಾನತ್ತು ಮಾಡಲು ಆಗ್ರಹಿಸಿ ಸೋಮವಾರ ತಾಲೂಕು ಪಂಚಾಯತಿ ಮುಂಭಾಗ ಹಿರಿಯೂರು ಗ್ರಾಮಾಭವೃದ್ಧಿ ಹೋರಾಟ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಪ್ರತಿಭಟನೆ ನಡೆಸಲಾಯಿತು.
    ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಮುಖರು, ಹಿರಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇಹಿರಿಯೂರು ಗ್ರಾಮಠಾಣಾ ವಿಸ್ತೀರ್ಣ ೧೭.೦೮ ಎಕರೆ ಜಾಗದಲ್ಲಿ ಸರ್ಕಾರದ ವತಿಯಿಂದ ೧೯೯೨ರ ಅವಧಿಯಲ್ಲಿ ೧೩೯ ಕುಟುಂಬಕ್ಕೆ ನಿವೇಶನ ಪತ್ರವನ್ನು ಹಂಚಿಕೆ ಮಾಡಿದ್ದು, ಅಲ್ಲಿಂದ ಇಲ್ಲಿಯವರೆಗೆ ಇನ್ನೂ ನೂರಾರು ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡುವಷ್ಟು ಜಾಗವಿದ್ದರೂ ೩೦ ವರ್ಷಗಳಿಂದ ನಿವೇಶನ ರಹಿತ ದಲಿತ, ಹಿಂದುಳಿದ ವರ್ಗದ ಬಡಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡದೆ ಹಾಲಿ ಗ್ರಾಮಪಂಚಾಯತಿ ಸದಸ್ಯರುಗಳ ಕುಟುಂಬದವರು ಹಾಗೂ ಹಣವಂತರು ಎಕರೆಗಟ್ಟಲೇ ಜಾಗವನ್ನು ಆಕ್ರಮಿಸಿಕೊಂಡಿದ್ದು, ಇದರ ಬಗ್ಗೆ ನಮ್ಮ ಸಂಘಟನೆವತಿಯಿಂದ ೩ ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ ಎಂದರು.            
    ಹೋರಾಟದ ಫಲವಾಗಿ ದಿನಾಂಕ ೨೦-೦೮-೨೦೨೨ರಂದು ಜಿಲ್ಲಾಧಿಕಾರಿಯವರು ತಾಲೂಕು ಪಂಚಾಯಿತಿ ಅಧಿಕಾರಿಯವರಿಗೆ ಮಾಡಿದ ಆದೇಶದ ಅನ್ವಯ, ತಾಲೂಕು ಪಂಚಾಯಿತಿ ಮತ್ತು ಗ್ರಾಮಪಂಚಾಯಿತಿ ಅಧಿಕಾರಿಗಳು ಭೂಮಾಪನ ಇಲಾಖೆವತಿಯಿಂದ ಸರ್ವೆ ಕಾರ್ಯ ನಡೆಸಿ, ಗಡಿ ಗುರುತಿಸಿಕೊಟ್ಟ ನಂತರ  ಗ್ರಾಮಠಾಣಾ ತೆರುವು ಕಾರ್ಯಚರಣೆ ಮಾಡಲು ದಿನಾಂಕ ೨೬-೦೯-೨೦೨೨ರಂದು ಪೋಲಿಸ್ ಬಂದೋಬಸ್ತ್ ನೊಂದಿಗೆ  ಮುಂದಾದ ಸಂದರ್ಭದಲ್ಲಿ ರಾಜಕೀಯ ಒತ್ತಡದಿಂದ ಅಧಿಕಾರಿಗಳು ನಡೆಯಬೇಕಿದ್ದ ತೆರುವು ಕಾರ್ಯಚರಣೆಯನ್ನು ಸ್ಥಗಿತಗೊಳಿಸಿ, ಹೋರಾಟಗಾರರ ಮೇಲೆ ಉದ್ದೇಶ ಪೂರ್ವಕವಾಗಿ ಗ್ರಾಮಪಂಚಾಯತಿ ಪಿಡಿಓ ಹಾಗೂ ಸದಸ್ಯರುಗಳಿಂದ ಜಾತಿ ನಿಂದನೆ, ಮಹಿಳಾ ಸದಸ್ಯರ ಮೇಲೆ ದೌರ್ಜನ್ಯ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಪೇಪರ್ ಟೌನ್    ಪೋಲಿಸ್ ಠಾಣೆಯಲ್ಲಿ ದಿನಾಂಕ ೨೮-೦೯-೨೦೨೨ರಂದು ೨ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಆರೋಪಿಸಿದರು.
    ಹೋರಾಟಗಾರರ ಬಲವನ್ನು ಕುಗ್ಗಿಸುವ ವ್ಯರ್ಥ ಪ್ರಯತ್ನವನ್ನು ಮಾಡಿರುತ್ತಾರೆ. ಇದಕ್ಕೆ ನಮ್ಮ ಸಂಘಟನೆ ಯಾವ ಬೆದರಿಕೆಗಳಿಗೆ ಕುಗ್ಗದೆ ಕಾನೂನಿನ ರೀತಿಯಲ್ಲಿ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ.  ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪರಮೇಶ್ವರಪ್ಪ ಪಂಚಾಯಿತಿಯಲ್ಲಿ ನಡೆಸಿರುವ ಹಲವಾರು ಭ್ರಷ್ಟಾಚಾರದ ಬಗ್ಗೆ ಸಂಘಟನೆ ವತಿಯಿಂದ ದಾಖಲೆ ಸಮೇತ ಮೇಲಾಧಿಕಾರಿಗಳಿಗೆ ದೂರನ್ನು ಸಲ್ಲಿಸಿದರೂ, ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಒಳಗಾಗಿ ಇಂತಹ ಭ್ರಷ್ಟ ಅಧಿಕಾರಿಗಳ ಮೇಲೆ ಇದುವರೆವಿಗೂ ಯಾವುದೇ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳದೆ, ಅಮಾನತುಗೊಳಿಸದೇ ರಕ್ಷಿಸುತ್ತಿರುವುದರಿಂದ ಹಾಗೂ ಹಳೇ ಹಿರಿಯೂರು ಗ್ರಾಮಾಠಾಣಾ ಜಾಗವನ್ನು ತೆರುವು ಗೊಳಿಸದೇ ಒತ್ತುವರಿ ಮಾಡಿಕೊಂಡಿರುವವರನ್ನು ರಕ್ಷಿಸುತ್ತಿರುವ ಅಧಿಕಾರಿಗಳ ವಿರುದ್ಧ, ಗ್ರಾಮದ ನಿವೇಶನ ರಹಿತ ಬಡ ಕುಟುಂಬಗಳಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.                                        
    ನ್ಯಾಯ ಸಮ್ಮತ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರೆಸಲಿದ್ದೇವೆ. ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.
    ಪ್ರತಿಭಟನೆಯಲ್ಲಿ ಪ್ರಮುಖರಾದ ಸಂತೋಷ್, ಸತ್ಯನಾರಾಯಣ್ ರಾವ್, ರವಿ ಬಿ., ಕುಮಾರ್ ಹೆಚ್.ವೈ  ಮತ್ತು ಕೆ.ಟಿ. ಪ್ರಸನ್ನ ಗ್ರಾಮದ ಪ್ರಮುಖರು, ಗ್ರಾಮಸ್ಥರು ಪಾಲ್ಗೊಂಡಿದ್ದರು