ಭದ್ರಾವತಿ, ಏ. ೮ : ತಾಲೂಕಿನ ಕೂಡ್ಲಿಗೆರೆ ಹೋಬಳಿ ನೆಟ್ಟಕಲ್ಲಹಟ್ಟಿ ಗ್ರಾಮದ ಸರ್ವೆ ನಂ.೮/೨ರ ಜಮೀನಿನಲ್ಲಿ ಬೆಳೆದಿರುವ ಹಾಗು ಕೆರೆ ಅಂಗಳದಲ್ಲಿನ ವಿವಿಧ ಜಾತಿಯ ನೂರಾರು ಮರಗಳ ಕಡಿತಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಗಿರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಮೊಗ್ಗ ಉಪವಿಭಾಗಾಧಿಕಾರಿಯಿಂದ ಕಂದಾಯ ಅಭಿಪ್ರಾಯ ಕೋರಿದ್ದಾರೆ.
ಗ್ರಾಮದ ಸರ್ವೆ ನಂ.೮/೨ರ ಜಮೀನು ಈ ಹಿಂದೆ ನಾಗರಾಜ ಬಿನ್ ಬೆಟ್ಟೇಗೌಡ ಎಂಬುವರ ಮಾಲೀಕತ್ವದಲ್ಲಿದ್ದು, ನಂತರ ಪಿ. ರೂಪಾ ಕೋಂ ತಿರುಪತಿರೆಡ್ಡಿ ಎಂಬುವರ ಹೆಸರಿಗೆ ಖಾತೆ ಬದಲಾವಣೆಯಾಗಿರುತ್ತದೆ. ಈ ಜಮೀನಿನಲ್ಲಿ ಬೆಳೆದಿರುವ ಹಾಗು ಜಮೀನಿಗೆ ಹೊಂದಿಕೊಂಡಂತೆ ಇರುವ ಕೆರೆ ಅಂಗಳದಲ್ಲಿನ ವಿವಿಧ ಜಾತಿಯ ನೂರಾರು ಮರಗಳನ್ನು ಕಡಿತಲೆ ಮಾಡಲಾಗಿತ್ತು. ಅರಣ್ಯ ಇಲಾಖೆ ಮರಗಳ ಕಡಿತಲೆಗೆ ಸಹಕರಿಸಿದೆ ಎಂದು ಇತ್ತೀಚೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಸಾರ್ವಜನಿಕ ಕುಂದುಕೊರತೆ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿತ್ತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯರವರು ಈ ಸಂಬಂಧ ಸೂಕ್ತ ತನಿಖೆ ಕೈಗೊಂಡು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಇದಕ್ಕೆ ಪೂರಕವೆಂಬಂತೆ ಚನ್ನಗಿರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಮೊಗ್ಗ ಉಪವಿಭಾಗಾಧಿಕಾರಿಯಿಂದ ಮತ್ತೊಮ್ಮೆ ಕಂದಾಯ ಅಭಿಪ್ರಾಯ ಕೋರಿ ಪತ್ರ ಬರೆದಿದ್ದಾರೆ.