ಭದ್ರಾವತಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ, ಪಕ್ಷೇತರ ಅಭ್ಯರ್ಥಿ ಬಿ.ಎನ್ ರಾಜು ಮಾತನಾಡಿದರು.
ಭದ್ರಾವತಿ, ಏ. ೨೬ : ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಮತದಾರರು ನನ್ನನ್ನು ಆಯ್ಕೆಮಾಡಿದ್ದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವ ವಿಶ್ವಾಸವಿದೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎನ್ ರಾಜು ಹೇಳಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನನ್ನ ಗುರುತು ಕ್ರಮ ಸಂ. ೧೦ ಟಿ.ವಿ(ದೂರದರ್ಶನ) ಆಗಿದ್ದು, ಕಳೆದ ಸುಮಾರು ೩೦ ವರ್ಷಗಳಿಂದ ದೀನದಲಿತರ, ರೈತರ, ಕಾರ್ಮಿಕರ, ಬಡವರ ಬೆನ್ನೆಲುಬಾಗಿ ನಿರಂತರ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದೇನೆ. ಹೋರಾಟ ಎಂದಿಗೂ ದುರ್ಬಳಕೆ ಮಾಡಿಕೊಂಡಿಲ್ಲ. ರಾಜೀರಹಿತ ಹೋರಾಟ ನನ್ನದಾಗಿದೆ ಎಂದರು.
೨೦೧೩ರಲ್ಲಿ ಶಿವಮೊಗ್ಗದಿಂದ ಬೆಂಗಳೂರಿನವರೆಗೆ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಹಾಗು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪಾದಯಾತ್ರೆ ನಡೆಸಲಾಗಿದ್ದು, ಡಿ.೧೦, ೨೦೨೨ರಿಂದ ಮಾನವಹಕ್ಕುಗಳ ದಿನಾಚರಣೆ ಅಂಗವಾಗಿ ಉಪ್ಪಿನ ರುಣಕ್ಕಾಗಿ ಪಾದಯಾತ್ರೆ ಕೈಗೊಂಡಿದ್ದೇನೆ. ಕ್ಷೇತ್ರದ ನೂರಾರು ಹಳ್ಳಿಗಳಲ್ಲಿ ಹಾಗೂ ನಗರಸಭೆ ವ್ಯಾಪ್ತಿಯ ೩೫ ವಾರ್ಡ್‌ಗಳಲ್ಲಿ ಪ್ರತಿ ಮನೆ ಮನೆಗೆ ತೆರಳಿ ಉಪ್ಪನ್ನು ಸಂಗ್ರಹಿಸಿ ಸುಮಾರು ೪೭ ದಿನಗಳ ಕಾಲ ೫೧೦ಕಿ.ಮೀ. ಪಾದಯಾತ್ರೆ ಮೂಲಕ ಹೋರಾಟ ನಡೆಸಿದ್ದೇನೆ ಎಂದರು.
ನಗರದ ಬಿ.ಹೆಚ್ ರಸ್ತೆ ತಿಮ್ಮಯ್ಯ ಮಾರ್ಕೆಟ್ ಅಕ್ರಮ ನೆಲ ಸಮ ಖಂಡಿಸಿ ೨೦೦೯ರಲ್ಲಿ ಸುಮಾರು ೫೨೩ ದಿನಗಳು ಹಗಲು-ರಾತ್ರಿ ಸತ್ಯಾಗ್ರಹ ನಡೆಸಿದ್ದೇನೆ. ಡಾ. ಬಿ.ಆರ್ ಅಂಬೇಡ್ಕರ್ ಭವನ ನಗರದ ಕೇಂದ್ರ ಭಾಗವಾದ ಕನಕ ಮಂಟಪ ಸಮೀಪ ನಿರ್ಮಾಣಗೊಳ್ಳಲು ಪ್ರಮುಖ ಕಾರಣಕರ್ತನಾಗಿದ್ದೇನೆ. ೧೦೦ ದಿನ ಉದ್ಯೋಗ ಖಾತ್ರಿ ಕೆಲಸ ನೀಡದ ಎಲ್ಲಾ ಪಂಚಾಯಿತಿಗಳ ವಿರುದ್ಧ, ನಿವೇಶನ ರಹಿತರ ಬಡ ಜನರ ಬಗ್ಗೆ ಪಡಿತರ ಚೀಟಿ ಇತರೆ ಸಮಸ್ಯೆಗಳ ಬಗ್ಗೆ ನಿರಂತರ ಹೋರಾಟ ನಡೆಸಿದ್ದೇನೆ. ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ದಿಗಾಗಿ ನಿರಂತರ ಹೋರಾಟ ಹಾಗು ಮಾನವ ಹಕ್ಕುಗಳ ಸಂವಿಧಾನ ಹಕ್ಕುಗಳ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದು, ೨೦೧೮ರಲ್ಲಿ ವಿಧಾನಸಭೆ ಚುನಾವಣಿಯಲ್ಲಿ ಸ್ಪರ್ಧಿಸಿದ್ದು, ಇದೀಗ ೨ನೇ ಬಾರಿಗೆ ಚುನಾವಣಿಗೆ ಸ್ಪರ್ಧಿಸಿದ್ದೇನೆ ಎಂದರು.
ಕ್ಷೇತ್ರದಲ್ಲಿ ಅನೇಕ ಮಹನೀಯರು ಶಾಸಕರಾಗಿ ಸೇವೆ ಸಲ್ಲಿಸಿದ್ದು, ಇದುವರೆಗೂ ಯಾರು ಸಹ ಮಂತ್ರಿಯಾಗದೆ ಅವಮಾನಗೊಂಡಿರುವುದು ದುರ್ದೈವದ ಸಂಗತಿಯಾಗಿದೆ. ಈ ಬಾರಿ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಕಂಡು ಬರುತ್ತಿದ್ದು, ಯಾವುದೇ ಪಕ್ಷ ಪೂರ್ಣ ಬಹುಮತ ಪಡೆಯಲು ಸಾಧ್ಯವಿಲ್ಲದಿರುವ ಕಾರಣದಿಂದ ಸ್ವಂತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಾನು ಆಯ್ಕೆಯಾದರೆ ಎಲ್ಲಾ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಸಾಧ್ಯವಾದರೆ ರಾಜ್ಯದ ಮುಖ್ಯ ಮಂತ್ರಿ ಸ್ಥಾನ ಪಡೆಯಲು ಪ್ರಯತ್ನಿಸಲಾಗುವುದು. ಇದು ಆಶ್ಚರ್ಯಪಡುವ ಸಂಗತಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವೂ ಸಾಧ್ಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಪ್ರಧಾನ ಸಂಚಾಲಕ ಶ್ರೀನಿವಾಸ್, ಸಂಚಾಲಕ ವೀರೇಶ್, ಕಾರ್ಯದರ್ಶಿ ಅಜಿತ್, ಅಜಯ್ ಉಪಸ್ಥಿತರಿದ್ದರು.