೧೪ ಶಾಲೆಗಳು ಶೇ.೧೦೦ರಷ್ಟು ಫಲಿತಾಂಶ
ಭದ್ರಾವತಿ ಕಾಗದನಗರ ನಿವಾಸಿ ಜಾನಿ ಹಾಗೂ ಲಿಲ್ಲಿ ಗ್ರೇಸ್‌ರವರ ಪುತ್ರಿ, ನ್ಯೂಟೌನ್ ಎಸ್.ಎ.ವಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶೈನಿ ಅಂಜಲ್ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೧ ಅತಿಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದು, ಈ ವಿದ್ಯಾರ್ಥಿನಿಯನ್ನು ಸೋಮವಾರ ಸನ್ಮಾನಿಸಿ ಅಭಿನಂದಿಸಲಾಯಿತು. ಪ್ರಮುಖರಾದ ಭಾಸ್ಕರ್ ಬಾಬು, ಆಮೋಸ್, ಅಂತೋಣಿ, ಜಯಶೀಲ ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ, ಮೇ. ೮: ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತಾಲೂಕು ಜಿಲ್ಲೆಗೆ ಕೊನೆಯ ೭ನೇ ಸ್ಥಾನ ಕಾಯ್ದುಕೊಂಡಿದ್ದು, ಶೇ.೭೫.೩೮ರಷ್ಟು ಫಲಿತಾಂಶ ಪಡೆದುಕೊಂಡಿದೆ.
ಪರೀಕ್ಷೆಗೆ ಹಾಜರಿದ್ದ ೪೧೨೬ ವಿದ್ಯಾರ್ಥಿಗಳ ಪೈಕಿ ೧೩೬೭ ಬಾಲಕರು, ೧೭೪೩ ಬಾಲಕಿಯರು ಸೇರಿದಂತೆ ಒಟ್ಟು ೩೧೧೦ ಮಂದಿ ಉತ್ತೀರ್ಣರಾಗಿದ್ದಾರೆ. ಉಳಿದಂತೆ ೧೦೧೬ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ಸರ್ಕಾರಿ ಶಾಲೆಯ ೪, ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಶಾಲೆಗಳ ೭, ಅನುದಾನಿತ ಶಾಲೆಯ ೧ ಮತ್ತು ಖಾಸಗಿ ಶಾಲೆಯ ೩೯ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೫೧ ವಿದ್ಯಾರ್ಥಿಗಳು ೬೦೦ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ.
ಗ್ರಾಮಾಂತರ ಭಾಗದ ೨೨೯೭ ವಿದ್ಯಾರ್ಥಿಗಳ ಪೈಕಿ ೧೭೧೫ ಹಾಗು ನಗರ ಭಾಗದ ೧೮೨೯ ವಿದ್ಯಾರ್ಥಿಗಳ ಪೈಕಿ ೧೩೯೫ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ತಾಲೂಕಿನ ೧ ಸರ್ಕಾರಿ ಶಾಲೆ, ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ೪ ಶಾಲೆಗಳು ಮತ್ತು ೯ ಖಾಸಗಿ ಶಾಲೆಗಳು ಸೇರಿದಂತೆ ಒಟ್ಟು ೧೪ ಶಾಲೆಗಳು ಶೇ.೧೦೦ರಷ್ಟು ಫಲಿತಾಂಶ ಪಡೆದುಕೊಂಡಿವೆ.
ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ, ಪ್ರೌಢಶಾಲೆ, ಲೋಯರ್ ಹುತ್ತಾ, ಬಿ.ಎಚ್ ರಸ್ತೆ, ಪೂರ್ಣಪ್ರಜ್ಞ ವಿದ್ಯಾಸಂಸ್ಥೆ, ಆನವೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹುತ್ತಾ ಕಾಲೋನಿ ಅನನ್ಯ ಪ್ರೌಢಶಾಲೆ, ಮಾವಿನಕೆರೆ ಸರ್ಕಾರಿ ಪ್ರೌಢಶಾಲೆ, ನ್ಯೂಟೌನ್ ತರಂಗ ಕಿವುಡು ಮತ್ತು ಮೂಕ ಮಕ್ಕಳ ಪ್ರೌಢಶಾಲೆ, ಕಾರೇಹಳ್ಳಿ ಶ್ರೀ ಆದಿಚುಂಚನಗಿರಿ ಕೇಂದ್ರೀಯ ವಿದ್ಯಾಲಯ(ಬಿಜಿಎಸ್ ಶಾಲೆ), ಹಂಚಿನ ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೇವರನರಸೀಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕವಲಗುಂದಿ ಹಳೇಜೇಡಿಕಟ್ಟೆ ಸೇಂಟ್ ತೆರೇಸಾ ಪ್ರೌಢ ಶಾಲೆ, ಹೊಳೆಹೊನ್ನೂರು ವಿವೇಕಾನಂದ ಲಯನ್ಸ್ ಆಂಗ್ಲ ಮಾದ್ಯಮ ಪ್ರೌಢಶಾಲೆ, ಅಂತರಗಂಗೆ ರಾಘವೇಂದ್ರ ಪ್ರೌಢಶಾಲೆ, ಹಳೇನಗರ ಬಸವೇಶ್ವರ ವೃತ್ತದ ಶ್ರೀ ಕನಕ ಪ್ರೌಢಶಾಲೆ ಮತ್ತು ದೊಡ್ಡೇರಿ ಅಲ್ಪ ಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶೇಕಡ ೧೦೦ರಷ್ಟು ಫಲಿತಾಂಶ ಪಡೆದುಕೊಂಡಿವೆ.
ಹಳ್ಳಿಕೆರೆ ಸೇಂಟ್ ಡೊಮೆನಿಕ್ ಶಾಲೆಯ ವಿದ್ಯಾರ್ಥಿನಿ ಎಸ್. ನಿಖಿತಾ ೬೨೫ಕ್ಕೆ ೬೨೩, ನ್ಯೂಟೌನ್ ಎಸ್.ಎ.ವಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶೈನಿ ಅಂಜಲ್ ೬೨೫ಕ್ಕೆ ೬೨೧, ಲೋಯರ್ ಹುತ್ತಾ, ಬಿ.ಎಚ್ ರಸ್ತೆ, ಪೂರ್ಣಪ್ರಜ್ಞ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಎಸ್. ಹರ್ಷಿಣಿ ೬೨೫ಕ್ಕೆ ೬೧೯ ಹಾಗು ಆರ್.ಎಲ್ ಮೌಲ್ಯ ೬೨೫ಕ್ಕೆ ೬೧೯ ತಾಲೂಕಿನಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಹಾಗು ಶೇ.೧೦೦ರಷ್ಟು ಫಲಿತಾಂಶ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.