ನಗರದ ಅಗತ್ಯತೆಗಳಲ್ಲಿ ಒಂದಾಗಿರುವ ಸಾರ್ವಜನಿಕ ಈಜು ಕೊಳ ನಿರ್ಮಿಸುವಂತೆ ಆಗ್ರಹಿಸಿ ಇರುವೆ ಟ್ರಸ್ಟ್ ವತಿಯಿಂದ ಭದ್ರಾವತಿ ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಮೇ. ೩೧ : ನಗರದ ಅಗತ್ಯತೆಗಳಲ್ಲಿ ಒಂದಾಗಿರುವ ಸಾರ್ವಜನಿಕ ಈಜು ಕೊಳ ನಿರ್ಮಿಸುವಂತೆ ಆಗ್ರಹಿಸಿ ಇರುವೆ ಟ್ರಸ್ಟ್ ವತಿಯಿಂದ ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ನಡಿಗೆ, ಓಟ, ಕಬಡ್ಡಿ, ವಾಲಿಬಾಲ್, ಕ್ರಿಕೆಟ್, ಖೋ ಖೋ ಸೇರಿದಂತೆ ಮುಂತಾದ ಕ್ರೀಡೆಗಳಿಗೆ ಕ್ರೀಡಾಂಗಣಗಳ ಕೊರತೆ ಇಲ್ಲ. ಆದರೆ ದೇಶದಲ್ಲಿ ಈಜು ಕ್ರೀಡೆಗೆ ಹೆಚ್ಚಿನ ಮಹತ್ವವಿದ್ದರೂ ಈಜು ಕೊಳವಿಲ್ಲದೆ ಈಜು ಉತ್ಸಾಹಿಗಳಿಗೆ ನಿರಾಸೆ ಹುಟ್ಟಿಸಿದೆ. ನಗರದ ಅನೇಕ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಈಜು ಕ್ರೀಡಾ ಪ್ರೇಮಿಗಳು ಬೇರೆ ಬೇರೆ ನಗರಗಳಿಗೆ ತೆರಳಿ ಹೆಚ್ಚಿನ ಹಣ ವ್ಯಯ ಮಾಡಿ ಈಜು ಕಲಿಕೆಯಲ್ಲಿ ತೊಡಗಿದ್ದಾರೆ. ಇದರಿಂದ ಪೋಷಕರಿಗೆ ಹೆಚ್ಚಿನ ಹೊರೆಯಾಗಿದೆ ಎಂದು ಅಳಲು ತೋರ್ಪಡಿಸಲಾಗಿದೆ.
ಸಾಮಾನ್ಯವಾಗಿ ಈಜು ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಕೆಲವು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹಾಜರಾಗದೆ ಅಥವಾ ರಜಾ ದಿನಗಳಲ್ಲಿ ಹೊಳೆ, ನದಿ, ಕೆರೆ, ಚಾನಲ್ ಮತ್ತಿತರೆಡೆ ಈಜು ಕಲಿಯಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಮತ್ತೆ ಕೆಲವರು ಈಜು ಕಲಿತು ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ. ನಗರದಲ್ಲಿ ರೈತರ, ಕಾರ್ಮಿಕರ ಹಾಗೂ ಬಡ ವರ್ಗದವರ ಮಕ್ಕಳಿಗೆ ಈಜು ಕಲಿಕೆ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದರೂ ಸಹ ಈಜು ಕೊಳವಿಲ್ಲದೆ ಪರಿತಪಿಸಿದ್ದಾರೆ. ಅದೆಷ್ಟೋ ಮಕ್ಕಳು ಈಜು ಕೊಳ ಕಾಣದೆ ಅದೊಂದು ಶ್ರೀಮಂತರ ಕ್ರೀಡೆ ಎಂದೂ ಭಾವಿಸಿದ್ದಾರೆ. ಈ ಭಾವನೆ ದೂರ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸುವಂತೆ ಕೋರಲಾಗಿದೆ.
ಈಜು ಕೊಳ ನಿರ್ಮಿಸುವ ನಿಟ್ಟಿನಲ್ಲಿ ಸಂಸದರು, ಶಾಸಕರು, ಜಿಲ್ಲಾಡಳಿತ ಮತ್ತು ನಗರಸಭೆ ಆಡಳಿತ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಈಜು ಕೊಳ ನಿರ್ಮಿಸುವ ಮೂಲಕ ನಗರವನ್ನು ವಿನೂತನವಾಗಿ ವಿಶಿಷ್ಟವಾಗಿ ಅಭಿವೃದ್ಧಿಗೊಳಿಸಬೇಕೆಂದು ಒತ್ತಾಯಿಸಲಾಗಿದೆ.
ಇರುವೆ ಟ್ರಸ್ಟ್ ಅಧ್ಯಕ್ಷ ಶಾಂತಕುಮಾರ್, ಉಪಾಧ್ಯಕ್ಷ ಕಿರಣ್‌ಕುಮಾರ್, ಸುಂದರ್‌ಬಾಬು, ಕೀರ್ತಿ, ಬಿಆರ್‌ಪಿ ಹೇಮಂತ್‌ಕುಮಾರ್, ಆರ್. ಮೋಹನ್, ಈಜು ತರಬೇತಿದಾರ ಪ್ರಕಾಶ್, ವೆಂಕಟೇಶ್, ಕೂಡ್ಲಿಗೆರೆ ತಿಪ್ಪೇಸ್ವಾಮಿ, ಅಂತರ ರಾಷ್ಟ್ರೀಯ ಈಜು ಪಟು ಮೋತಿನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.