Wednesday, May 31, 2023

ಭದ್ರಾವತಿಯಲ್ಲಿ ಸುಗ್ರಾಮ ಒಕ್ಕೂಟದ ಸಭೆ

ಭದ್ರಾವತಿ ತಾಲೂಕು ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಸಭೆ ನಗರದ ಕಾಂಚನ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.  
    ಭದ್ರಾವತಿ, ಮೇ. ೩೧ : ತಾಲೂಕು ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಸಭೆ ನಗರದ ಕಾಂಚನ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.  
    ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಕೆಲಸದ ಅನುಭವಿ ನಿಯಮದ ಮೂಲಕ ನಡೆಸಲಾದ ಕೆಲಸಗಳ ಬಗ್ಗೆ, ಗೌರವಧನ, ಸಭಾಬದ್ಧತೆ, ಅನುದಾನದ ಕೊರತೆ ಸೇರಿದಂತೆ ಇತ್ಯಾದಿ ವಿಷಯಗಳನ್ನು ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತರಲಾಯಿತು.
    ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್ ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷೆ ಗೌರಮ್ಮ ಮಹಾದೇವ್ ಕೂಡ್ಲಿಗೆರೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗೀತಾ ಅಂತರಗಂಗೆ, ಖಜಾಂಚಿ ಕವಿತಾ ರುದ್ರೇಶ್, ಒಕ್ಕೂಟದ ಸದಸ್ಯರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಇರುವೆ ಟ್ರಸ್ಟ್ ವತಿಯಿಂದ ಸಾರ್ವಜನಿಕ ಈಜು ಕೊಳ ನಿರ್ಮಿಸಲು ಮನವಿ

ನಗರದ ಅಗತ್ಯತೆಗಳಲ್ಲಿ ಒಂದಾಗಿರುವ ಸಾರ್ವಜನಿಕ ಈಜು ಕೊಳ ನಿರ್ಮಿಸುವಂತೆ ಆಗ್ರಹಿಸಿ ಇರುವೆ ಟ್ರಸ್ಟ್ ವತಿಯಿಂದ ಭದ್ರಾವತಿ ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಮೇ. ೩೧ : ನಗರದ ಅಗತ್ಯತೆಗಳಲ್ಲಿ ಒಂದಾಗಿರುವ ಸಾರ್ವಜನಿಕ ಈಜು ಕೊಳ ನಿರ್ಮಿಸುವಂತೆ ಆಗ್ರಹಿಸಿ ಇರುವೆ ಟ್ರಸ್ಟ್ ವತಿಯಿಂದ ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
   ನಡಿಗೆ, ಓಟ, ಕಬಡ್ಡಿ, ವಾಲಿಬಾಲ್, ಕ್ರಿಕೆಟ್, ಖೋ ಖೋ ಸೇರಿದಂತೆ ಮುಂತಾದ ಕ್ರೀಡೆಗಳಿಗೆ ಕ್ರೀಡಾಂಗಣಗಳ ಕೊರತೆ ಇಲ್ಲ. ಆದರೆ ದೇಶದಲ್ಲಿ ಈಜು ಕ್ರೀಡೆಗೆ ಹೆಚ್ಚಿನ ಮಹತ್ವವಿದ್ದರೂ ಈಜು ಕೊಳವಿಲ್ಲದೆ ಈಜು ಉತ್ಸಾಹಿಗಳಿಗೆ ನಿರಾಸೆ ಹುಟ್ಟಿಸಿದೆ. ನಗರದ ಅನೇಕ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಈಜು ಕ್ರೀಡಾ ಪ್ರೇಮಿಗಳು ಬೇರೆ ಬೇರೆ ನಗರಗಳಿಗೆ ತೆರಳಿ ಹೆಚ್ಚಿನ ಹಣ ವ್ಯಯ ಮಾಡಿ ಈಜು ಕಲಿಕೆಯಲ್ಲಿ ತೊಡಗಿದ್ದಾರೆ. ಇದರಿಂದ ಪೋಷಕರಿಗೆ ಹೆಚ್ಚಿನ ಹೊರೆಯಾಗಿದೆ ಎಂದು ಅಳಲು ತೋರ್ಪಡಿಸಲಾಗಿದೆ.
    ಸಾಮಾನ್ಯವಾಗಿ ಈಜು ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಕೆಲವು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹಾಜರಾಗದೆ ಅಥವಾ ರಜಾ ದಿನಗಳಲ್ಲಿ ಹೊಳೆ, ನದಿ, ಕೆರೆ, ಚಾನಲ್ ಮತ್ತಿತರೆಡೆ ಈಜು ಕಲಿಯಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಮತ್ತೆ ಕೆಲವರು ಈಜು ಕಲಿತು ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.  ನಗರದಲ್ಲಿ ರೈತರ, ಕಾರ್ಮಿಕರ ಹಾಗೂ ಬಡ ವರ್ಗದವರ ಮಕ್ಕಳಿಗೆ ಈಜು ಕಲಿಕೆ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದರೂ ಸಹ ಈಜು ಕೊಳವಿಲ್ಲದೆ ಪರಿತಪಿಸಿದ್ದಾರೆ. ಅದೆಷ್ಟೋ ಮಕ್ಕಳು ಈಜು ಕೊಳ ಕಾಣದೆ ಅದೊಂದು ಶ್ರೀಮಂತರ ಕ್ರೀಡೆ ಎಂದೂ ಭಾವಿಸಿದ್ದಾರೆ. ಈ ಭಾವನೆ ದೂರ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸುವಂತೆ ಕೋರಲಾಗಿದೆ.  
    ಈಜು ಕೊಳ ನಿರ್ಮಿಸುವ ನಿಟ್ಟಿನಲ್ಲಿ ಸಂಸದರು, ಶಾಸಕರು, ಜಿಲ್ಲಾಡಳಿತ ಮತ್ತು ನಗರಸಭೆ ಆಡಳಿತ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಈಜು ಕೊಳ ನಿರ್ಮಿಸುವ ಮೂಲಕ ನಗರವನ್ನು ವಿನೂತನವಾಗಿ ವಿಶಿಷ್ಟವಾಗಿ ಅಭಿವೃದ್ಧಿಗೊಳಿಸಬೇಕೆಂದು ಒತ್ತಾಯಿಸಲಾಗಿದೆ.
    ಇರುವೆ ಟ್ರಸ್ಟ್ ಅಧ್ಯಕ್ಷ ಶಾಂತಕುಮಾರ್, ಉಪಾಧ್ಯಕ್ಷ ಕಿರಣ್‌ಕುಮಾರ್, ಸುಂದರ್‌ಬಾಬು, ಕೀರ್ತಿ, ಬಿಆರ್‌ಪಿ ಹೇಮಂತ್‌ಕುಮಾರ್, ಆರ್. ಮೋಹನ್, ಈಜು ತರಬೇತಿದಾರ ಪ್ರಕಾಶ್, ವೆಂಕಟೇಶ್, ಕೂಡ್ಲಿಗೆರೆ ತಿಪ್ಪೇಸ್ವಾಮಿ, ಅಂತರ ರಾಷ್ಟ್ರೀಯ ಈಜು ಪಟು ಮೋತಿನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, May 30, 2023

ಮೇ.೩೧ರಂದು ಶಾಲಾ ಹಬ್ಬದೊಂದಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ

ಪೋಷಕರು ಸ್ವಯಂ ಪ್ರೇರಣೆಯಿಂದ ಮುಂದೆ ಬರಲಿ

ಭದ್ರಾವತಿ ನಗರಸಭೆ ವಾಪ್ತಿಯ ಹೃದಯ ಭಾಗದ ಜಟ್‌ಪಟ್ ನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣಕ್ಕೆ ಕಾಂಪೌಂಡ್ ಇಲ್ಲದೆ ಇರುವುದು.
    ಭದ್ರಾವತಿ, ಮೇ. ೩೦ : ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ಮೇ.೩೧ರಿಂದ ಶಾಲಾಹಬ್ಬದೊಂದಿಗೆ ಚಾಲನೆ ನೀಡಲಾಗುತ್ತಿದ್ದು, ಕ್ಷೇತ್ರ ಶಿಕ್ಷಣ ಇಲಾಖೆ ಈಗಾಗಲೇ ಎಲ್ಲಾ ರೀತಿಯ ಸಿದ್ದತೆಗಳನ್ನು ಕೈಗೊಂಡಿದೆ.
    ಆದರೆ ಕೆಲವು ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳು ಸಮರ್ಪಕವಾಗಿಲ್ಲದಿರುವುದು ಕಂಡು ಬರುತ್ತಿದೆ. ಶಾಲಾ ಹಬ್ಬದ ಹಿಂದಿನ ೨ ದಿನ ಶಾಲಾ ಕೊಠಡಿ ಹಾಗು ಆವರಣದಲ್ಲಿ ಸ್ವಚ್ಛತೆಗೆ ಗಮನ ನೀಡುವಂತೆ ಹಾಗು ಶಾಲಾ ವ್ಯಾಪ್ತಿಯಲ್ಲಿ ವಿಶೇಷ ದಾಖಲಾತಿ ಹಾಗು ಸಾಮಾನ್ಯ ದಾಖಲಾತಿ ಅಂದೋಲನ ಕೈಗೊಳ್ಳುವಂತೆ ಸಂಬಂಧಪಟ್ಟ ಶಾಲೆಗಳ ಶಾಲಾಭಿವೃದ್ಧಿ ಸಮಿತಿ ಹಾಗು ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಸೂಚಿಸಲಾಗಿತ್ತು. ಆದರೆ ಕೆಲವು ಶಾಲೆಗಳಲ್ಲಿ ಕೊಠಡಿ ಹಾಗು ಆವರಣದಲ್ಲಿ ಸ್ವಚ್ಛತೆ ಇನ್ನೂ ಸಮರ್ಪಕವಾಗಿ ಕೈಗೊಂಡಿಲ್ಲ.
    ಕೆಲವು ಸರ್ಕಾರಿ ಶಾಲೆಗಳಿಗೆ ಸೂಕ್ತ ರಕ್ಷಣೆ ಇಲ್ಲವಾಗಿದೆ. ಮುಖ್ಯವಾಗಿ ಶಾಲೆಯ ಆವರಣಕ್ಕೆ ಕಾಂಪೌಂಡ್ ಇಲ್ಲದೆ ಇರುವುದು ಕಂಡು ಬರುತ್ತಿದ್ದು, ಇದರಿಂದಾಗಿ ಈ ಶಾಲೆಗಳ ಬಳಿ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಅಲ್ಲದೆ ಪುಂಡ ಪೋಕರಿಗಳ, ಹಾವು, ಮುಂಗುಸಿ, ಬೀದಿ ನಾಯಿಗಳ, ದನ ಕರುಗಳ ತಾಣಗಳಾಗಿ ಮಾರ್ಪಟ್ಟಿವೆ. ಈ ಹಿಂದೆ ಸಂಬಂಧಪಟ್ಟ ಶಿಕ್ಷಣ ಸಚಿವರಿಗೆ ಈ ಸಂಬಂಧ ದೂರು ಸಲ್ಲಿಸಿ ತಕ್ಷಣ ಕಾಂಪೌಂಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಸಹ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
    ಕೆಲವು ಸರ್ಕಾರಿ ಶಾಲೆಗಳ ಬಳಿ ವಿಶೇಷ ದಾಖಲಾತಿ ಹಾಗೂ ಸಾಮಾನ್ಯ ದಾಖಲಾತಿ ಕುರಿತು ಹಾಗು ಶಾಲೆಯಲ್ಲಿ ಸರ್ಕಾರದ ಪೋತ್ಸಾಹದಾಯಕ ಯೋಜನೆಗಳು, ವಿಶೇಷ ಸೌಲಭ್ಯಗಳು ಹಾಗು ಶಾಲೆಯಲ್ಲಿ ಲಭ್ಯವಿರುವ ಇತರೆ ಸೌಲಭ್ಯಗಳ ಕುರಿತು ಪ್ಲೆಕ್ಸ್‌ಗಳನ್ನು ಹಾಕಲಾಗಿದೆ.
    ತಾಲೂಕಿನಲ್ಲಿ ಕೆಲವು ಸರ್ಕಾರಿ ಶಾಲೆಗಳು ಶಾಲಾಭಿವೃದ್ಧಿ ಸಮಿತಿ, ಸ್ವಯಂ ಸೇವಾ ಸಂಸ್ಥೆಗಳು, ದಾನಿಗಳು ಹಾಗು ಸ್ಥಳೀಯರ ಸಹಕಾರದೊಂದಿಗೆ ಖಾಸಗಿ ಶಾಲೆಗಳನ್ನು ಮೀರಿಸುವಂತೆ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಹಲವು ವಿಶೇಷ ಸೌಲಭ್ಯಗಳನ್ನು ಹೊಂದಿ ಮಕ್ಕಳನ್ನು ಶಾಲೆಗಳ ಕಡೆಗೆ ಆಕರ್ಷಿಸುತ್ತಿವೆ. ಅಲ್ಲದೆ ಉತ್ತಮ ಫಲಿತಾಂಶ ಸಹ ಪಡೆದುಕೊಳ್ಳುತ್ತಿವೆ.
    ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಸ್ವಯಂ ಪ್ರೇರಣೆಯಿಂದ ಮುಂದೆ ಬರಬೇಕಾಗಿದೆ. ಆಗ ಮಾತ್ರ ಸರ್ಕಾರಿ ಶಾಲೆಗಳು ಸಹ ಅಸ್ತಿತ್ವ ಕಂಡುಕೊಳ್ಳಲು ಸಾಧ್ಯ.


ಭದ್ರಾವತಿ ತಾಲೂಕು ಕಛೇರಿ ರಸ್ತೆಯ ಎ.ಕೆ ಕಾಲೋನಿ, ಹನುಮಂತ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ವಿಶೇಷ ದಾಖಲಾತಿ, ಸಾಮಾನ್ಯ ದಾಖಲಾತಿ ಹಾಗು ಸೌಲಭ್ಯಗಳ ಕುರಿತ ಮಾಹಿತಿಗಳನ್ನೊಳಗೊಂಡ ಪ್ಲೆಕ್ಸ್ ಹಾಕಿರುವುದು.

ಶ್ರೀ ಜಗದ್ಗುರು ರೇಣುಕಾಚಾರ್ಯರ ಶಿಲಾವಿಗ್ರಹ ನಿರ್ಮಾಣದ ೩ನೇ ಕಲ್ಲಿಗೆ ವಿಶೇಷ ಪೂಜೆ

ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ೭೫ ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಶಿಲಾವಿಗ್ರಹದ ಕೆತ್ತನೆ ಕಾರ್ಯ ಭರದಿಂದ ಸಾಗುತ್ತಿದ್ದು, ಪಾಣಿಪೀಠದ ಕಲ್ಲನ್ನು ಮಡಕಶಿರದಿಂದ ಸಾಗಿಸಲಾಗುತ್ತಿದ್ದು, ೩ನೇ ಬೃಹತ್ ಕಲ್ಲು ಮಂಗಳವಾರ ಭದ್ರಾವತಿ ನಗರವನ್ನು ಪ್ರವೇಶಿದ ಹಿನ್ನಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
    ಭದ್ರಾವತಿ, ಮೇ. ೩೦: ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ೭೫ ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಶಿಲಾವಿಗ್ರಹದ ಕೆತ್ತನೆ ಕಾರ್ಯ ಭರದಿಂದ ಸಾಗುತ್ತಿದ್ದು, ಪಾಣಿಪೀಠದ ಕಲ್ಲನ್ನು ಮಡಕಶಿರದಿಂದ ಸಾಗಿಸಲಾಗುತ್ತಿದ್ದು, ೩ನೇ ಬೃಹತ್ ಕಲ್ಲು ಮಂಗಳವಾರ ನಗರವನ್ನು ಪ್ರವೇಶಿದ ಹಿನ್ನಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
    ಬೃಹತ್ ಗಾತ್ರದ ಕಲ್ಲನ್ನು ೧೧೨ ಚಕ್ರ ಹೊಂದಿರುವ ಲಾರಿಯಲ್ಲಿ ಪೀಠಕ್ಕೆ ಸಾಗಿಸಲಾಗುತ್ತಿದ್ದು, ನಗರದ ಬೈಪಾಸ್ ರಸ್ತೆಗೆ ಆಗಮಿಸಿದ ಲಾರಿಗೆ ಉಜ್ಜನಿಪುರ ಬಳಿ ಬಾಳೆಹೊನ್ನೂರು ರಂಭಾಪುರಿ ಶಾಖಾ ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಭಕ್ತರು ಸ್ವಾಗತಿಸಿ ವಿಶೇಷ ಪೂಜೆ ಸಲ್ಲಿಸಿದರು.  
    ಪಾಣಿಪೀಠದ ೧ ಮತ್ತು ೨ನೇ ಕಲ್ಲಿಗೂ ಈ ಹಿಂದೆ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಸ್ವಾಗತಿಸಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಶ್ರೀ ಜಗದ್ಗುರು ರೇಣುಕಾಚಾರ್ಯರ ಶಿಲಾವಿಗ್ರಹದ ಕತ್ತನೆ ಕಾರ್ಯ ಕೆಲವೇ ದಿನಗಳಲ್ಲಿ ಮುಕ್ತಾಯಗೊಂಡು ವಿಗ್ರಹ ಲೋಕಾರ್ಪಣೆಗೊಳ್ಳಲಿದೆ.
       ಪ್ರಮುಖರಾದ ಜಿ.ಎಂ ಮೂರ್ತಿ, ಅಶೋಕ್, ಎಚ್. ಮಂಜುನಾಥ್, ಬಿ.ಎಂ ರಮೇಶ್, ಬಿ.ಎಂ ಮಂಜುನಾಥ, ಎಸ್. ವಾಗೀಶ್, ಸತೀಶ್, ಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಜೂ.೬ರಂದು ಚಾಮೇಗೌಡ ಏರಿಯಾ ಶ್ರೀ ಮಾರಿಯಮ್ಮ ದೇವಿ ಕರಗ ಮಹೋತ್ಸವ

ಶ್ರೀ ಮಾರಿಯಮ್ಮ ದೇವಿ
    ಭದ್ರಾವತಿ, ಮೇ. ೩೦ : ಬಿ.ಎಚ್ ರಸ್ತೆ, ಚಾಮೇಗೌಡ ಏರಿಯಾ, ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ಜೂ.೬ರಂದು ಶ್ರೀ ಅಮ್ಮನವರ ಕರಗ ಮಹೋತ್ಸವ ನಡೆಯಲಿದೆ.
    ಜೂ.೬ರಂದು ಬೆಳಿಗ್ಗೆ ೮.೩೦ಕ್ಕೆ ಶ್ರೀ ಮುನೇಶ್ವರಸ್ವಾಮಿ ಪೂಜೆ ನಂತರ ಭದ್ರಾನದಿ ತೀರದಿಂದ ಶ್ರೀ ಅಮ್ಮನವರ ಕರಗ ಜೋಡಿಸಿಕೊಂಡು ರಾಜಬೀದಿ ಮೆರವಣಿಗೆ ಮುಖಾಂತರ ಬಂದು ದೇವಸ್ಥಾನ ತಲುಪುವುದು. ಮಧ್ಯಾಹ್ನ ೧ ಗಂಟೆಗೆ ಮಹಾಮಂಗಳಾರತಿ ನಂತರ ಅಂಬಲಿ ಉಯ್ಯಲಾಗುವುದು ಸಂಜೆ ೬ ಗಂಟೆಗೆ ಶ್ರೀ ಅಮ್ಮನವರ ಕರಗ ರಾಜಬೀದಿ ಮೆರವಣಿಗೆ ಬರುವುದು.
    ಜೂ.೭ರಂದು ಬೆಳಿಗ್ಗೆ ೯ಕ್ಕೆ ಅಮ್ಮನವರಿಗೆ ಅರಿಶಿನ ಅಭಿಷೇಕ ನಡೆಯುವುದು. ಜೂ.೧೩ರಂದು ಸಂಜೆ ೭ ರಿಂದ ಶಾಂತಿ ಪೂಜೆ ನಡೆಯುವುದು. ಜೂ.೧೩ರಂದು ಮಧ್ಯಾಹ್ನ ೧೨.೩೦ಕ್ಕೆ ಅನ್ನದಾನ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ದೇವಸ್ಥಾನ ಸಮಿತಿ ಕೋರಿದೆ.

ಮೇ.೩೧ರಂದು ಬೀಳ್ಕೊಡುಗೆ ಸಮಾರಂಭ

    ಭದ್ರಾವತಿ, ಮೇ. ೩೦ : ಅನೌಪಚಾರಿಕ ಪಡಿತರ ತಾಲೂಕು ಕಛೇರಿ, ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ತಾಲೂಕು ಶಾಖೆ ವತಿಯಿಂದ ಮೇ.೩೧ರಂದು ಮಧ್ಯಾಹ್ನ ೩ ಗಂಟೆಗೆ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
    ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದು, ತಾಲೂಕು ಶಾಖೆ ನಗರ ಅಧ್ಯಕ್ಷ ಎಸ್.ಆರ್ ನಾಗರಾಜ್ ಮತ್ತು ಅನೌಪಚಾರಿಕ ಪಡಿತರ ಕಛೇರಿ ಸಹಾಯಕ ನಿರ್ದೇಶಕ ವಿ.ಎಸ್ ಅಂಕಯ್ಯ ಉಪಸ್ಥಿತರಿರುವರು.
    ಆಹಾರ ನಿರೀಕ್ಷಕಿ ಡಿ. ಗಾಯತ್ರಿ ದೇವಿ, ಕೆಎಫ್‌ಸಿಎಸ್‌ಸಿ ಮಳಿಗೆ ವ್ಯವಸ್ಥಾಪಕ ಜೆ.ಎಸ್ ಈಶ್ವರಪ್ಪ ಮತ್ತು ಆಹಾರ ಇಲಾಖೆ ಬಿ.ಆರ್ ಓಂಕಾರಯ್ಯ ಉಪಸ್ಥಿತರಿರುವರು. 

Monday, May 29, 2023

ಹೆಚ್ಚುತ್ತಿರುವ ರಸ್ತೆ ನಿಯಮ ಉಲ್ಲಂಘನೆ ಪ್ರಕರಣಗಳು : ಸಂಚಾರಿ ಪೊಲೀಸರ ಆತಂಕ

    ಭದ್ರಾವತಿ, ಮೇ. ೨೯ : ಶಿವಮೊಗ್ಗ ಪೊಲೀಸ್ ವತಿಯಿಂದ ರಸ್ತೆ ನಿಯಮ ಕುರಿತು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಸಹ ಇತ್ತೀಚಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ.
    ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಇಲಾಖೆ ನಿರಂತರವಾಗಿ ತೊಡಗಿಸಿಕೊಂಡಿದೆ. ಅದರಲ್ಲೂ ಯುವ ಸಮೂಹಕ್ಕೆ ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಇತ್ತೀಚಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಸಂಚಾರಿ ಪೊಲೀಸರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
    ಪ್ರಮುಖವಾಗಿ ಹೆಲ್ಮೆಟ್ ಧರಿಸದಿರುವ ಹಾಗು ಚಾಲನಾ ಪರವಾನಗಿ ಇಲ್ಲದ ಪ್ರಕರಣಗಳು ಹೆಚ್ಚಾಗುತ್ತಿವೆ. ಸಂಚಾರಿ ಪೊಲೀಸ್ ಠಾಣಾಧಿಕಾರಿ ಭಾರತಿ ಅನಿಲ್ ಪತ್ರಿಕೆಗೆ ಮಾಹಿತಿ ನೀಡಿ, ಇಲಾಖೆವತಿಯಿಂದ ರಸ್ತೆ ಸುರಕ್ಷತೆ ಹಾಗು ನಿಯಮ ಪಾಲನೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಸಹ ಹೆಲ್ಮೆಟ್ ಧರಿಸದಿರುವ ಪ್ರಕರಣಗಳು ಹೆಚ್ಚುತ್ತಿವೆ. ಪ್ರತಿ ದಿನ ಸುಮಾರು ೨೦ ಪ್ರಕರಣಗಳು ಹಾಗು ಚಾಲನಾ ಪರವಾನಗಿ ಇಲ್ಲದ ಸುಮಾರು ೨-೩ ಪಕರಣಗಳು ದಾಖಲಾಗುತ್ತಿವೆ. ಅಲ್ಲದೆ ಸರ್ಕಾರ ರಸ್ತೆ ಸುರಕ್ಷತೆ ಹಾಗು ನಿಯಮಗಳಿಗೆ ಸಂಬಂಧಿಸಿದಂತೆ ಹೊಸ ಹೊಸ ಕಾನೂನುಗಳನ್ನು ಜಾರಿಗೊಳಿಸುತ್ತಿದೆ. ಈ ಕಾನೂನುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಇಲಾಖೆ ಮುಂದಾಗುತ್ತಿದೆ ಎಂದರು.
    ನಗರದಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಚಾಲನಾ ಪರವಾನಗಿ ಇಲ್ಲದೆ ವಾಹನಗಳನ್ನು ಚಲಾಯಿಸುತ್ತಿದ್ದು, ಈ ಹಿನ್ನಲೆಯಲ್ಲಿ ಸುಮಾರು ೧೦೦೦ ಮಂದಿಗೆ ಉಚಿತವಾಗಿ ಚಾಲನಾ ಪರವಾನಗಿ ಮಾಡಿಸಿ ಕೊಡುವ ಬೃಹತ್ ಶಿಬಿರ ಆಯೋಜಿಸುವ ಅಗತ್ಯವಿದೆ.  ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಆಸಕ್ತರು ಮುಂದೆ ಬಂದಲ್ಲಿ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.