Friday, June 2, 2023

ಆಧಾರ ಕಾರ್ಡ್ ಬ್ಯಾಂಕ್ ಉಳಿತಾಯ ಖಾತೆಗೆ ಜೋಡಣೆ ಮಾಡಿಸದಿದ್ದಲ್ಲಿ ಪಿಂಚಣಿ ಸ್ಥಗಿತ

    ಭದ್ರಾವತಿ, ಜೂ. ೨ :  ತಾಲೂಕಿನಲ್ಲಿ ಸಾಮಾಜಿಕ ಭದ್ರತೆ ಯೋಜನೆಯಡಿಯಲ್ಲಿ ಸಂಧ್ಯಾ ಸುರಕ್ಷಾ, ಇಂದಿರಾಗಾಂಧಿ ವೃದ್ಯಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ನಿರ್ಗತಿಕ ವಿಧವಾವೇತನ ಮುಂತಾದ ಸಾಮಾಜಿಕ ಭದ್ರತೆ ಯೋಜನೆಯಡಿಯಲ್ಲಿ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರು ತಮ್ಮ ಆಧಾರ ಕಾರ್ಡ್‌ನ್ನು ಬ್ಯಾಂಕ್ ಉಳಿತಾಯ ಖಾತೆಗೆ ಎನ್‌ಪಿಸಿಐ/ಡಿಬಿಟಿ ಮಾಡಿಸುವಂತೆ ಸರ್ಕಾರ ಸೂಚಿಸಿದೆ.
    ಫಲಾನುಭವಿಗಳು ಆಧಾರ ಜೋಡಣೆ ಮಾಡದೇ ಇದ್ದಲ್ಲಿ, ಜೂನ್ ತಿಂಗಳ ಅಂತ್ಯದೊಳಗಾಗಿ ಬ್ಯಾಂಕ್ ಉಳಿತಾಯ ಖಾತೆಗೆ ಎನ್‌ಪಿಸಿಐ/ಡಿಬಿಟಿ ಆಧಾರ್ ಜೋಡಣೆ ಮಾಡಿಸುವುದು. ಇಲ್ಲವಾದಲ್ಲಿ ಪಿಂಚಣಿ ನಿಲ್ಲಿಸಲು ಕ್ರಮ ವಹಿಸಲಾಗುವುದು, ಇದಕ್ಕೆ ಫಲಾನುಭವಿಗಳೇ ಜವಾಬ್ದಾರರಾಗಿರುತ್ತಾರೆ.
    ಆದ್ದರಿಂದ ಕಾರ್ಡ್‌ನ್ನು ಬ್ಯಾಂಕ್ ಉಳಿತಾಯ ಖಾತೆಗೆ ಜೋಡಣೆ ಮಾಡಲು ತಮ್ಮ ಆಧಾರ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ ದಾಖಲೆಯೊಂದಿಗೆ ಬ್ಯಾಂಕ್‌ಗೆ ತೆರಳಿ ಜೂ. ೧೦ರೊಳಗಾಗಿ ಪರಿಷ್ಕರಣೆ (ಅಪೇಟ್) ಮಾಡಿಸುವಂತೆ ತಹಸೀಲ್ದಾರ್ ಸುರೇಶ್ ಆಚಾರ್ ಕೋರಿದ್ದಾರೆ.

ಜೂ.೩ರಿಂದ ೪ ದಿನ ವಿದ್ಯುತ್ ವ್ಯತ್ಯಯ

    ಭದ್ರಾವತಿ, ಜೂ. ೨ : ಮೆಸ್ಕಾಂ ನಗರ ಉಪವಿಭಾಗ ಘಟಕ-೪ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ. ೩ ರಿಂದ ೪ ದಿನಗಳವರೆಗೆ ಬೆಳಿಗ್ಗೆ ೧೦.೩೦ ರಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ಜೂ.೩, ೫, ೬ ಮತ್ತು ೭ ಒಟ್ಟು ೪ ದಿನ ವಿಜಯನಗರ, ಶಿವಾಜಿ ವೃತ್ತ, ತ್ಯಾಗರಾಜ ಬಡಾವಣೆ, ಹನುಮಂತನಗರ, ಕಬಳಿಕಟ್ಟೆ ಮತ್ತು ಅಶ್ವಥ ನಗರ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ನಗರ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.

Thursday, June 1, 2023

ಬ್ಯಾಡ್ಮಿಂಟನ್ ಕ್ರೀಡಾಪಟು ಪವನ್‌ಕುಮಾರ್‌ಗೆ ೨ ಚಿನ್ನದ ಪದಕ

ಭದ್ರಾವತಿ ಬ್ಯಾಡ್ಮಿಂಟನ್ ಕ್ರೀಡಾಪಟು ಪವನ್‌ಕುಮಾರ್ ಎರಡು ರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಭಾಗವಹಿಸಿ ೨ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ, ಜೂ. ೧ : ನಗರದ ಬ್ಯಾಡ್ಮಿಂಟನ್ ಕ್ರೀಡಾಪಟು ಪವನ್‌ಕುಮಾರ್ ಎರಡು ರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಭಾಗವಹಿಸಿ ೨ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ನವದೆಹಲಿ ಜವಾಹರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿ ಮೇ.೨೪ ರಿಂದ ೨೬ರವರೆಗೆ ನಡೆದ ಎಸ್‌ಬಿಕೆಎಫ್ ೮ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಹಾಗೂ ಮೇ. ೨೬ ರಿಂದ ೨೯ರವರೆಗೆ ಹರಿಯಾಣದ ಗುರುಗ್ರಾಮ್‌ನಲ್ಲಿ ನಡೆದ ಓಪನ್ ನ್ಯಾಷನಲ್ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
    ಪವನ್ ಕುಮಾರ್ ರವರು ಒಂದೇ ತಿಂಗಳಲ್ಲಿ ಎರಡು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಎರಡು ಚಿನ್ನದ ಪದಕ ತಮ್ಮದಾಗಿಸಿಕೊಳ್ಳುವ ಮೂಲಕ  ತಾಲೂಕಿಗೆ ಕೀರ್ತಿ ತಂದಿದ್ದಾರೆ. ಇವರನ್ನು ನಗರದ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ.

ಸೈಲ್ ಅಧ್ಯಕ್ಷರಾಗಿ ಅಮರೇಂದು ಪ್ರಕಾಶ್ : ವಿಐಎಸ್‌ಎಲ್ ಗತ ವೈಭವ ಮರಳುವ ವಿಶ್ವಾಸ

ಭಾರತೀಯ ಉಕ್ಕು ಪ್ರಾಧಿಕಾರ ನೂತನ ಅಧ್ಯಕ್ಷ ಅಮರೇಂದು ಪ್ರಕಾಶ್
    ಭದ್ರಾವತಿ, ಜೂ. ೧: ಭಾರತೀಯ ಉಕ್ಕು ಪ್ರಾಧಿಕಾರದ(ಸೈಲ್) ಅಧ್ಯಕ್ಷರಾಗಿ ಅಮರೇಂದು ಪ್ರಕಾಶ್ ಬುಧವಾರ ಅಧಿಕಾರ ವಹಿಸಿಕೊಂಡರು.  
    ಸೈಲ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಪ್ರಕಾಶ್‌ರವರು ಬೊಕಾರೋ ಸ್ಟೀಲ್ ಪ್ಲಾಂಟ್ (ಬಿಎಸ್‌ಎಲ್), ಸೈಲ್ ಪ್ರಭಾರ ನಿರ್ದೇಶಕ ಹುದ್ದೆಯನ್ನು ಹೊಂದಿದ್ದರು.
    ಬಿಐಟಿ ಸಿಂಧಿಯಿಂದ ಮೆಟಲರ್ಜಿಕಲ್ ಇಂಜಿನಿಯರ್ ಆಗಿರುವ ಪ್ರಕಾಶ್‌ರವರು ೧೯೯೧ರಲ್ಲಿ ಸೈಲ್‌ಗೆ ಮ್ಯಾನೇಜ್‌ಮೆಂಟ್ ಟ್ರೈನಿ(ತಾಂತ್ರಿಕ) ಆಗಿ ಸೇರ್ಪಡೆಗೊಂಡರು. ಸ್ಥಾವರಗಳು ಮತ್ತು ಘಟಕಗಳಲ್ಲಿ ವಿವಿಧ ಜವಾಬ್ದಾರಿಗಳ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ ನಂತರ ೨೦೨೦ರಲ್ಲಿ ಬೊಕಾರೋ ಸ್ಟೀಲ್ ಪ್ಲಾಂಟ್ ಉಸ್ತುವಾರಿ ನಿರ್ದೇಶಕರಾಗಿ ಸೈಲ್ ಮಂಡಳಿಯಲ್ಲಿ ಆಯ್ಕೆಯಾದರು.
    ಇವರೊಬ್ಬ ನಿಪುಣ ತಂತ್ರಜ್ಞರಾಗಿದ್ದು, ಸೈಲ್‌ನ ಮೂರು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ ವಿಭಾಗೀಯ ಮಟ್ಟದಲ್ಲಿ ಸ್ಥಾವರ ಕಾರ್ಯಾಚರಣೆಗಳಿಗೆ ಒಡ್ಡಿಕೊಂಡಿದ್ದಾರೆ. ಪ್ರಧಾನ ಕಛೇರಿಯಲ್ಲಿ ಕಾರ್ಪೊರೇಟ್ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.  ಗಣಿಗಾರಿಕೆ ಕಾರ್ಯಾಚರಣೆಗಳೊಂದಿಗೆ ದೊಡ್ಡ ಉಕ್ಕಿನ ಕಾರ್ಖಾನೆಯನ್ನು ಮುನ್ನಡೆಸಿರುವ ಅನುಭವ ಹೊಂದಿದ್ದಾರೆ.
    ೨೦೧೫-೧೭ರಲ್ಲಿ ಸೈಲ್ ವ್ಯಾಪಾರ ರೂಪಾಂತರ ಮತ್ತು ಆರ್ಥಿಕ ಬದಲಾವಣೆಯನ್ನು ಮುನ್ನಡೆಸುತ್ತಿದ್ದ ತಂಡದ ಪ್ರಮುಖ ಸದಸ್ಯರಾಗಿದ್ದರು. ಬೊಕಾರೋ ಸ್ಟೀಲ್ ಪ್ಲಾಂಟ್‌ನ ಉಸ್ತುವಾರಿ ನಿರ್ದೇಶಕರಾಗಿ ಅಧಿಕಾರವಹಿಸಿಕೊಂಡ ನಂತರ, ವರ್ಷದಿಂದ ವರ್ಷಕ್ಕೆ ಎಲ್ಲಾ ಪ್ರಮುಖ ನಿಯತಾಂಕಗಳಲ್ಲಿ ತಮ್ಮ ಅತ್ಯುತ್ತಮ ಕಾರ್ಯಕ್ಷಮತೆಯನ್ನು ತಲುಪಲು ಸ್ಥಾವರ ತಂಡವನ್ನು ಮುನ್ನಡೆಸಿದ್ದಾರೆ. ಕಾರ್ಯಕ್ಷಮತೆಯ ಸುಧಾರಣೆಯು ಪರಿಮಾಣಾತ್ಮಕ ಮತ್ತು ಗುಣಾತ್ಮಕವಾಗಿದೆ. ಗಮನಾರ್ಹ ಸಾಂಸ್ಥಿಕ ಕೌಶಲ್ಯ ಮತ್ತು ಕಾರ್ಯತಂತ್ರದ ಯೋಜನಾ ಕುಶಾಗ್ರಮತಿಯೊಂದಿಗೆ, ವ್ಯಾಪಾರ ಪ್ರಕ್ರಿಯೆಗಳು ಮತ್ತು ಯೋಜನೆಯ ಅನುಷ್ಠಾನದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
    ತಾಂತ್ರಿಕವಾಗಿ ನಿಪುಣ ನಾಯಕರಾಗಿ, ಕಂಪನಿಯ ಡಿಜಿಟಲೀಕರಣದ ಪ್ರಯತ್ನಗಳನ್ನು ಮುನ್ನಡೆಸುತ್ತಿದ್ದಾರೆ. ಆದಾಯವನ್ನು ಹೆಚ್ಚಿಸುವ ತಂಡದ ಪ್ರಮುಖ ಸದಸ್ಯರಾಗಿ,  ಸಂಸ್ಥೆಗೆ ಮಾತ್ರವಲ್ಲದೆ ಗ್ರಾಹಕರಿಗೆ ಮೌಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಟ್ಟಾರೆ ಉತ್ಪಾದನೆ ಮತ್ತು ಮಾರಾಟ ಯೋಜನೆಯ ಕಾರ್ಯತಂತ್ರ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
    ದಾರ್ಶನಿಕ ಮತ್ತು ಶಕ್ತಿಯುತ ನಾಯಕರಾಗಿದ್ದು, ಉದ್ಯೋಗಿಗಳೊಂದಿಗೆ ಸಂಪರ್ಕ ಸಾಧಿಸುತ್ತಾ ವಿವಿಧ ಉಪಕ್ರಮಗಳ ಮೂಲಕ ಉತ್ಕೃಷ್ಟರಾಗಲು ಅವರನ್ನು ಪ್ರೇರೇಪಿಸುತ್ತಾರೆ. ಬೊಕಾರೋದಲ್ಲಿ ನಿರ್ದೇಶಕರಾಗಿದ್ದ ಅವಧಿಯಲ್ಲಿ ವಿಶೇಷ ಒಲಿಂಪಿಕ್ಸ್‌ಗೆ ಬೆಂಬಲ ನೀಡುವುದು ಸೇರಿದಂತೆ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದಾರೆ.
    ಸಾರ್ವಜನಿಕ ಸಹಭಾಗಿತ್ವವನ್ನು ಒಳಗೊಂಡ ಅನೇಕ ಸಾಮಾಜಿಕ ಉಪಕ್ರಮಗಳು ಬೊಕಾರೋ ನಗರ ಮತ್ತು ಅದರ ಬಾಹ್ಯ ಪ್ರದೇಶಗಳಲ್ಲಿ ಧನಾತ್ಮಕ ಬದಲಾವಣೆಗಳನ್ನು ತಂದಿವೆ. ವ್ಯಾಪಕವಾಗಿ ಪ್ರಯಾಣಿಸಿರುವ ತಂತ್ರಜ್ಞರಾಗಿದ್ದು, ಉಕ್ಕು ಮತ್ತು ಗಣಿಗಾರಿಕೆ ಉದ್ಯಮದ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುತ್ತಾರೆ.
    ಅಮರೇಂದು ಪ್ರಕಾಶ್‌ರವರು ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಸೈಲ್ ಅಧೀನದಲ್ಲಿಯೇ ಮುನ್ನಡೆಸಿಕೊಂಡು ಹೋಗುವ ಮೂಲಕ ಅಭಿವೃದ್ಧಿಗೊಳಿಸುವ ಜೊತೆಗೆ ಇತಿಹಾಸದ ಗತ ವೈಭವ ಮರುಕಳುಹಿಸುವಂತೆ ಮಾಡುತ್ತಾರೆಂಬ ವಿಶ್ವಾಸ, ಭರವಸೆ ಕಾರ್ಖಾನೆ ಆಡಳಿತ ಹಾಗು ಕಾರ್ಮಿಕ ವರ್ಗ ಹೊಂದಿದೆ.

ತಾಲೂಕು ಕಛೇರಿಯಿಂದ ಸಹಾಯವಾಣಿ ಕೇಂದ್ರ ಆರಂಭ

    ಭದ್ರಾವತಿ, ಜೂ. ೧ : ತಾಲೂಕಿನಾದ್ಯಂತ ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ತಾಲೂಕು ಆಡಳಿತ ಕಛೇರಿ ಹೆಲ್ಪ್ ಡೆಸ್ಕ್ ಸಹಾಯವಾಣಿ ಕೇಂದ್ರ ಆರಂಭಿಸಿದೆ.
    ಮಳೆಯಿಂದ ಯಾವುದೇ ರೀತಿ ಹಾನಿಯಾದಲ್ಲಿ ಅಥವಾ ಸಮಸ್ಯೆ ಎದುರಾದಲ್ಲಿ ತಕ್ಷಣ ತಾಲೂಕು ಕಛೇರಿ ಹೆಲ್ಪ್ ಡೆಸ್ಕ್ ಸಹಾಯವಾಣಿ ಕೇಂದ್ರ ದೂರವಾಣಿ ಸಂಖ್ಯೆ : ೦೮೨೮೨-೨೬೩೪೬೬ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ತಹಸೀಲ್ದಾರ್ ಸುರೇಶ್ ಆಚಾರ್ ತಿಳಿಸಿದ್ದಾರೆ.

Wednesday, May 31, 2023

ವಿಶ್ವ ತಂಬಾಕು ವಿರೋಧಿ ದಿನ : ಜಾಗೃತಿ ಜಾಥಾ

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಎನ್‌ಸಿಡಿ ಘಟಕ ಹಾಗು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವತಿಯಿಂದ ಬುಧವಾರ ವಿಶ್ವ ತಂಬಾಕು ವಿರೋಧಿ ದಿನ ಆಚರಿಸಲಾಯಿತು.
    ಭದ್ರಾವತಿ, ಮೇ. ೩೧: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಎನ್‌ಸಿಡಿ ಘಟಕ ಹಾಗು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವತಿಯಿಂದ ಬುಧವಾರ ವಿಶ್ವ ತಂಬಾಕು ವಿರೋಧಿ ದಿನ ಆಚರಿಸಲಾಯಿತು.
    ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಿಂದ ಪ್ಲೆಕ್ಸ್, ಫಲಕಗಳನ್ನು ಹಿಡಿದು ಜಾಥಾ ನಡೆಸುವ ಮೂಲಕ ತಂಬಾಕು ಉತ್ಪನ್ನಗಳಿಂದ ಉಂಟಾಗುವ ದುಷ್ಪರಿಣಾಗಳ ಕುರಿತು ಜಾಗೃತಿ ಮೂಡಿಸಲಾಯಿತು.
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಆಸ್ಪತ್ರೆಯ ಹಿರಿಯ ವೈದ್ಯ ಡಾ. ಡಿ.ಎಸ್ ಶಿವಪ್ರಕಾಶ್ ಸೇರಿದಂತೆ ವೈದ್ಯರು, ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು ಹಾಗು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಶಾಲಾ ಪ್ರಾರಂಭೋತ್ಸವ : ಸಂಭ್ರಮದ ಆಚರಣೆ

ಭದ್ರಾವತಿ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿ(ಪ್ರೌಢ ಶಾಲಾ ವಿಭಾಗ)ನಲ್ಲಿ ಬುಧವಾರ ಶಾಲಾ ಪ್ರಾರಂಭೋತ್ಸವ ಸಂಭ್ರಮದಿಂದ ಆಚರಿಸಲಾಯಿತು.  ಸರ್ಕಾರದ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಲಾಯಿತು.
    ಭದ್ರಾವತಿ, ಮೇ. ೩೧: ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿ(ಪ್ರೌಢ ಶಾಲಾ ವಿಭಾಗ)ನಲ್ಲಿ ಬುಧವಾರ ಶಾಲಾ ಪ್ರಾರಂಭೋತ್ಸವ ಸಂಭ್ರಮದಿಂದ ಆಚರಿಸಲಾಯಿತು.
    ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನರವರ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿನಿಯರಿಗೆ ಸರ್ಕಾರದ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಲಾಯಿತು. ಕಾಲೇಜು ಆವರಣ ತಳಿರುತೋರಣಗಳಿಂದ ಕಂಗೊಳಿಸುತ್ತಿತ್ತು. ಹಬ್ಬದ ವಾತಾವರಣ ಕಂಡು ಬರುತ್ತಿತ್ತು. ಮೊದಲ ದಿನ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿನಿಯರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
    ಉಪಪ್ರಾಚಾರ್ಯರಾದ ಟಿ.ಎಸ್ ಸುಮನ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಕಲಿಕೆಯಲ್ಲಿ ತೊಡಗಲು ಮತ್ತು ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಸಾರ್ಥಕ ಗೊಳಿಸಲು ಮಾರ್ಗದರ್ಶನ ನೀಡಿದರು.
    ನಗರಸಭಾ ಸದಸ್ಯ ಕಾಂತರಾಜು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.