Sunday, June 11, 2023

ಪೋಷಕರ ಶ್ರಮಕ್ಕೆ ಸಾರ್ಥಕತೆ ತಂದು ಕೊಡಿ : ಎ. ಧರ್ಮೇಂದ್ರ

ಭದ್ರಾವತಿ ತಾಲೂಕಿನ ಅರಳಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೂಡ್ಲಿಗೆರೆ ಹರಿಹರೇಶ್ವರ ಪ್ರೌಢಶಾಲೆ ಮತ್ತು ನಾಗತಿಬೆಳಗಲು ಶ್ರೀ ನಂಜುಂಡೇಶ್ವರ ಪ್ರೌಢಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ಶ್ರೀ ವಿನಾಯಕ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿತರಿಸಲಾಯಿತು.
    ಭದ್ರಾವತಿ, ಜೂ. ೧೧ : ಮಕ್ಕಳು ಪೋಷಕರ ಶ್ರಮ ಅರ್ಥ ಮಾಡಿಕೊಳ್ಳಬೇಕು. ಅವರ ಶ್ರಮಕ್ಕೆ ಸಾರ್ಥಕತೆ ತಂದುಕೊಡುವ ನಿಟ್ಟಿನಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ಹರಿಸಿ ಸಾಧನೆ ದಾರಿಯಲ್ಲಿ ಸಾಗಬೇಕೆಂದು ಸಮಾಜ ಸೇವಕ, ದಾನಿ, ಶ್ರೀ ವಿನಾಯಕ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎ. ಧರ್ಮೇಂದ್ರ ಹೇಳಿದರು.
    ಪ್ರತಿ ವರ್ಷದಂತೆ ಈ ಬಾರಿ ಸಹ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ಶ್ರೀ ವಿನಾಯಕ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿತರಿಸಿ ಮಾತನಾಡಿದರು. ಪ್ರತಿಯೊಬ್ಬರಿಗೂ ಶಿಕ್ಷಣ ಬಹಳ ಮುಖ್ಯವಾಗಿದೆ. ಬಡತನ ಕಲಿಕೆಗೆ ಅಡ್ಡಿಯಾಗಬಾರದು. ನಾವು ಅನುಭವಿಸಿದ ಕಷ್ಟಗಳು ಇಂದಿನ ಮಕ್ಕಳು ಎದುರಿಸಬಾರದು ಎಂಬ ಉದ್ದೇಶದೊಂದಿಗೆ ಉಚಿತ ನೋಟ್ ಪುಸ್ತಕಗಳನ್ನು ಹಲವಾರು ವರ್ಷಗಳಿಂದ ವಿತರಿಸಲಾಗುತ್ತಿದೆ. ಇದನ್ನು ಮಕ್ಕಳು ಅರ್ಥ ಮಾಡಿಕೊಂಡು ಕಲಿಕೆಗೆ ಹೆಚ್ಚಿನ ಆಸಕ್ತಿ ತೋರಬೇಕೆಂದರು.
    ಅರಳಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೂಡ್ಲಿಗೆರೆ ಹರಿಹರೇಶ್ವರ ಪ್ರೌಢಶಾಲೆ ಮತ್ತು ನಾಗತಿಬೆಳಗಲು ಶ್ರೀ ನಂಜುಂಡೇಶ್ವರ ಪ್ರೌಢಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
    ಶ್ರೀ ವಿನಾಯಕ ಚಾರಿಟಬಲ್ ಟ್ರಸ್ಟ್ ಸೇವಾ ಕಾರ್ಯ ಸ್ಮರಿಸಿ ಎ. ಧರ್ಮೇಂದ್ರ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಆಯಾ ಶಾಲೆಗಳ  ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸಿಬ್ಬಂದಿ ವರ್ಗದವರು, ಪೋಷಕರು ಉಪಸ್ಥಿತರಿದ್ದರು.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ : ಸಂಭ್ರಮದ ದಿನ

ಶಕ್ತಿ ಯೋಜನೆ ಉದ್ಘಾಟಿಸಿದ ನಗರಸಭೆ ಸದಸ್ಯ ಬಿ.ಕೆ ಮೋಹನ್

ಭದ್ರಾವತಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಭಾನುವಾರ ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ರಾಜ್ಯಾದ್ಯಂತ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗು ವೇತದೂತ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಶಕ್ತಿ ಯೋಜನೆ ಉದ್ಘಾಟಿಸಲಾಯಿತು.  
    ಭದ್ರಾವತಿ, ಜೂ. ೧೧ : ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದು, ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಜೂ.೧೧ ಮಹಿಳೆಯರು ಸಂಭ್ರಮಿಸುವ ದಿನವಾಗಿದೆ ಎಂದು ನಗರಸಭೆ ಸದಸ್ಯ ಬಿ.ಕೆ ಮೋಹನ್ ಹೇಳಿದರು.
    ಅವರು ಭಾನುವಾರ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ರಾಜ್ಯಾದ್ಯಂತ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗು ವೇತದೂತ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಶಕ್ತಿ ಯೋಜನೆ ಉದ್ಘಾಟಿಸಿ ಮಾತನಾಡಿದರು.
    ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್‌ನಲ್ಲಿ  ಘೋಷಿಸಿರುವ ಯೋಜನೆಗಳ ಕುರಿತು ಟೀಕೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಕಾಂಗ್ರೆಸ್ ಪಕ್ಷದವರು ದಡ್ಡರಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಳಿತದಲ್ಲಿ ಹೆಚ್ಚಿನ ಅನುಭವ ಹೊಂದಿದ್ದಾರೆ. ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆಯಲಾಗುತ್ತಿದೆ. ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದರು.
    ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸದಸ್ಯರಾದ ಚನ್ನಪ್ಪ, ಗೀತಾ ರಾಜ್‌ಕುಮಾರ್, ಲತಾ ಚಂದ್ರಶೇಖರ್, ಶೃತಿ ವಸಂತ್, ಮಹಮದ್ ಯೂಸಫ್, ಉಪತಹಸೀಲ್ದಾರ್ ಮಂಜನಾಯ್ಕ, ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ ರಂಗನಾಥ್ ಅಂತರಗಟ್ಟಿ,  ಮುಖಂಡರಾದ ಎಚ್.ಎಲ್ ಷಡಾಕ್ಷರಿ, ಬಿ.ಕೆ ಜಗನ್ನಾಥ್, ಎಸ್. ಮಣಿಶೇಖರ್, ಅಮೀರ್‌ಜಾನ್, ವೈ.ಎಚ್ ನಾಗರಾಜ್, ಕೆಎಸ್‌ಆರ್‌ಟಿಸಿ ಭದ್ರಾವತಿ ಬಸ್ ಘಟಕದ ವ್ಯವಸ್ಥಾಪಕರು, ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Saturday, June 10, 2023

ಸುಮಾರು ೨೬ ದಿನಗಳಿಂದ ಕ್ಷೇತ್ರಕ್ಕೆ ಹಿಂದಿರುಗದ ಸಂಗಮೇಶ್ವರ್

ಎದುರು ನೋಡುತ್ತಿರುವ ಮತದಾರರು, ಕಾರ್ಯಕರ್ತರು, ಅಭಿಮಾನಿಗಳು

ಬಿ.ಕೆ ಸಂಗಮೇಶ್ವರ್
    ಭದ್ರಾವತಿ, ಜೂ. ೧೦ : ಕ್ಷೇತ್ರದ ಶಾಸಕರಾಗಿ ೪ನೇ ಬಾರಿಗೆ ಆಯ್ಕೆಯಾಗಿರುವ ಬಿ.ಕೆ ಸಂಗಮೇಶ್ವರ್ ಕಳೆದ ಸುಮಾರು ೨೬ ದಿನಗಳಿಂದ ಕ್ಷೇತ್ರದಿಂದ ಹೊರಗಿದ್ದು, ಅವರು ಕ್ಷೇತ್ರಕ್ಕೆ ಪುನಃ ಹಿಂದಿರುಗುವ ನಿರೀಕ್ಷೆಯಲ್ಲಿ ಇಲ್ಲಿನ ಮತದಾರರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
    ಬಹುತೇಕ ನಿರೀಕ್ಷೆಯಂತೆ ಈ ಬಾರಿ ಚುನಾವಣೆಯಲ್ಲೂ ಸಂಗಮೇಶ್ವರ್ ಗೆಲುವು ಸಾಧಿಸಿದ್ದು, ಮೇ.೧೩ರಂದು ಫಲಿತಾಂಶ ಹೊರಬಿದ್ದ ನಂತರ ಬೆಂಗಳೂರಿಗೆ ತೆರಲಿದ್ದು, ಪುನಃ ಕ್ಷೇತ್ರಕ್ಕೆ ಹಿಂದಿರುಗಿಲ್ಲ. ಸರ್ಕಾರ ರಚನೆ ಆರಂಭದಲ್ಲಿಯೇ ಸಚಿವ ಸ್ಥಾನಕ್ಕಾಗಿ ಸಂಗಮೇಶ್ವರ್ ತೀವ್ರ ಪೈಪೋಟಿ ನಡೆಸಿದ್ದು, ನಂತರದ ಬೆಳವಣಿಗೆಯಲ್ಲೂ ಸಂಪುಟ ವಿಸ್ತರಣೆ ಸಂದರ್ಭದಲ್ಲೂ ಸಹ ತೀವ್ರ ಪೈಪೋಟಿಗೆ ಮುಂದಾಗಿದ್ದರು. ಆದರೆ ಸಚಿವ ಸ್ಥಾನ ಕೊನೆ ಘಳಿಗೆಯಲ್ಲಿ ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಅವರಿಗೆ ಲಭಿಸಿದ್ದು, ಒಟ್ಟಾರೆ ಮೊದಲ ಅವಧಿಯಲ್ಲಿ ಸಚಿವ ಸ್ಥಾನದಿಂದ ಸಂಗಮೇಶ್ವರ್ ವಂಚಿತರಾಗಿದ್ದಾರೆ.   ಈ ನಡುವೆ ಇದೀಗ ಯಾವುದಾದರೂ ಪ್ರತಿಷ್ಠಿತ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸುವಂತೆ ಸಂಗಮೇಶ್ವರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಒತ್ತಾಯಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಯಾವುದಕ್ಕೂ ಖಚಿತಪಡಿಸಿಕೊಳ್ಳುವವರೆಗೂ ಕ್ಷೇತ್ರದ ಕಡೆ ಮುಖ ಮಾಡದಿರುವ ನಿಲುವಿಗೆ ಸಂಗಮೇಶ್ವರ್ ಅಂಟಿಕೊಂಡಿರುವಂತೆ ಕಂಡು ಬರುತ್ತಿದೆ.
    ಈ ನಡುವೆ ಕ್ಷೇತ್ರದ ವಿವಿಧ ಸಂಘ-ಸಂಸ್ಥೆಗಳು, ಮತದಾರರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ೪ನೇ ಬಾರಿಗೆ ಗೆಲುವು ಸಾಧಿಸಿರುವ ಸಂಗಮೇಶ್ವರ್ ಅವರನ್ನು ಅಭಿನಂದಿಸಲು ಎದುರು ನೋಡುತ್ತಿದ್ದಾರೆ.
    ಮತ್ತೊಂದೆಡೆ ಬೆಂಗಳೂರಿನಲ್ಲಿಯೇ ಉಳಿದುಕೊಂಡಿರುವ ಸಂಗಮೇಶ್ವರ್ ಬಳಿಗೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ತೆರಳುತ್ತಿದ್ದು, ಸಂಗಮೇಶ್ವರ್ ಅಲ್ಲಿಯೇ ಅವರ ಸಮಸ್ಯೆಗಳನ್ನು ಆಲಿಸಿ ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ಇದರಿಂದಾಗಿ  ಒಂದೆಡೆ ಶಾಸಕರ ಮೇಲಿನ ಅಸಮಾಧಾನ ಸ್ವಲ್ಪಮಟ್ಟಿಗೆ ದೂರವಾಗಿದೆ.  

ಜೂ.೧೧ರಂದು ಶಕ್ತಿ ಯೋಜನೆ ಉದ್ಘಾಟನೆ

    ಭದ್ರಾವತಿ, ಜೂ. ೧೦ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶಿವಮೊಗ್ಗ ವಿಭಾಗದ ಭದ್ರಾವತಿ ಘಟಕದಲ್ಲಿ ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ರಾಜ್ಯಾದ್ಯಂತ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗು ವೇಗದೂತ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಶಕ್ತಿ ಯೋಜನೆ ಉದ್ಘಾಟನೆ ಜೂ.೧೧ರಂದು ಮಧ್ಯಾಹ್ನ ೧೨.೩೦ಕ್ಕೆ ನಗರದ ಮುಖ್ಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ನಡೆಯಲಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಉಪವಿಭಾಗಾಧಿಕಾರಿ ರವಿಚಂದ್ರನಾಯಕ್, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ತಹಸೀಲ್ದಾರ್ ಸುರೇಶ್ ಆಚಾರ್, ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ನಗರಸಭೆ ಪೌರಾಯುಕ್ತ ಮನುಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಘಟಕ ವ್ಯವಸ್ಥಾಪಕಿ ಅಂಬಿಕಾ ಸುಧೀರ್ ಕೋರಿದ್ದಾರೆ.

Friday, June 9, 2023

ಬಿಜೆಪಿ ತಾಲೂಕು ಮಂಡಲ ಕಾರ್ಯದರ್ಶಿ ಕವಿತಾ ಸುರೇಶ್ ನಿಧನ

ಕವಿತಾ ಸುರೇಶ್ 
    ಭದ್ರಾವತಿ, ಜೂ. ೧೦: ತಾಲೂಕು ಬಿಜೆಪಿ ಮಂಡಲ ಕಾರ್ಯದರ್ಶಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಕವಿತಾ ಸುರೇಶ್(೪೦) ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.
    ಪತಿ ಛಾಯಾಗ್ರಾಹಕ ಸುರೇಶ್ ಹಾಗು ಒಂದು ಗಂಡು, ಒಂದು ಹೆಣ್ಣು ಮಕ್ಕಳು ಇದ್ದರು. ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿದ್ದ ಇವರನ್ನು ಶಿವಮೊಗ್ಗ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
    ನಗರದ ಬಿ.ಎಚ್ ರಸ್ತೆ ಪದ್ಮನಿಲಯ ಹೋಟೆಲ್ ಬಳಿ ವಾಸವಾಗಿದ್ದರು. ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತೆಯಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಸ್ನೇಹ ಮಿಲನ ಮಹಿಳಾ ಸಂಘಟನೆ ಅಧ್ಯಕ್ಷರಾಗಿದ್ದರು. ಅಲ್ಲದೆ ವೀರಶೈವ ಲಿಂಗಾಯತ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.
    ಇವರ ನಿಧನಕ್ಕೆ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಂಸದ ಬಿ.ವೈ ರಾಘವೇಂದ್ರ, ಕರ್ನಾಟಕ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ತಾಲೂಕು ಬಿಜೆಪಿ ಮಂಡಲ, ತಾಲೂಕು ಛಾಯಾಗ್ರಾಹಕರ ಸಂಘ, ಮಹಿಳಾ ಸಂಘಟನೆಗಳು ಹಾಗು ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

ಜೂ.೧೦ರಂದು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

    ಭದ್ರಾವತಿ, ಜೂ. ೯ :  ಸಮಾಜ ಸೇವಕ, ದಾನಿ ಎ. ಧರ್ಮೇಂದ್ರ ಅವರು ಪ್ರತಿ ವರ್ಷದಂತೆ ಈ ಬಾರಿ ಸಹ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ಜೂ. ೧೦ರಂದು ಶ್ರೀ ವಿನಾಯಕ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿತರಿಸುತ್ತಿದ್ದಾರೆ.  
    ೩ ಶಾಲೆಗಳ ವಿದ್ಯಾರ್ಥಿಗಳಿಗೆ ಒಟ್ಟು ೧೦ ಸಾವಿರ ಉಚಿತ ನೋಟ್ ಪುಸ್ತಕಗಳ ವಿತರಣೆ ನಡೆಯಲಿದೆ. ಬೆಳಿಗ್ಗೆ ೯ ಗಂಟೆಯಿಂದ ೧೦ ಗಂಟೆವರೆಗೆ ಅರಳಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ೧೦.೩೦ ರಿಂದ ೧೧.೩೦ರವರೆಗೆ ಕೂಡ್ಲಿಗೆರೆ ಹರಿಹರೇಶ್ವರ ಪ್ರೌಢಶಾಲೆಯಲ್ಲಿ ಹಾಗು ೧೨.೩೦ ರಿಂದ ೧ ಗಂಟೆವರೆಗೆ ನಾಗತಿಬೆಳಗಲು ಶ್ರೀ ನಂಜುಂಡೇಶ್ವರ ಪ್ರೌಢಶಾಲೆಯಲ್ಲಿ ಉಚಿತ ಪುಸ್ತಕಗಳ ವಿತರಣೆ ನಡೆಯಲಿದೆ.


    ಕಳೆದ ಬಾರಿ ಸುಮಾರು ೮ ಸಾವಿರ ನೋಟ್ ಪುಸ್ತಕಗಳನ್ನು ವಿತರಿಸಲಾಗಿತ್ತು. ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಉಚಿತ ಆಂಬ್ಯುಲೆನ್ಸ್ ಸೇವೆ ಒದಗಿಸಲಾಗಿತ್ತು.

ಕಾಲುದಾರಿ, ಸೈಕಲ್ ಟ್ರಾಕ್ ನಿರ್ಮಿಸುವ ಬದಲು ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿ

ಭದ್ರಾವತಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಬಸವೇಶ್ವರ ವೃತ್ತದವರೆಗೂ ರಸ್ತೆಯ ಎರಡು ೨ ಬದಿ ಕಾಲುದಾರಿ(ಪುಟ್‌ಪಾತ್) ಮತ್ತು ಸೈಕಲ್ ಟ್ರಾಕ್ ನಿರ್ಮಿಸುತ್ತಿರುವುದು.
    ಭದ್ರಾವತಿ, ಜೂ. ೯: ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಬಸವೇಶ್ವರ ವೃತ್ತದವರೆಗೂ ರಸ್ತೆಯ ಎರಡು ೨ ಬದಿ ಕಾಲುದಾರಿ(ಪುಟ್‌ಪಾತ್) ಮತ್ತು ಸೈಕಲ್ ಟ್ರಾಕ್ ನಿರ್ಮಿಸುವ ಬದಲು ದ್ವಿಚಕ್ರ ಮತ್ತು ಲಘು ವಾಹನ(ಕಾರು)ಗಳ ನಿಲುಗಡೆಗೆ ವ್ಯವಸ್ಥೆ ಮಾಡಿಕೊಡಬೇಕೆಂದು ಮನೆ ಮಾಲೀಕರ ಸಂಘ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದೆ.
    ರಸ್ತೆಯ ಎರಡು ಕಡೆ ಚರಂಡಿಗಳ ಸ್ಲಾಬ್ ಎತ್ತರ ಮಾಡಿ ಟ್ರಾಕ್ ನಿರ್ಮಿಸುತ್ತಿರುವುದಾಗಿ ತಿಳಿದುಬಂದಿದ್ದು, ಇದು ಸರಿಯಾದುದಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಬಸವೇಶ್ವರ ವೃತ್ತದವರೆಗೂ ರಸ್ತೆಯಲ್ಲಿ ಒಂದು ಬದಿಯಲ್ಲಿ ೩-೪ ಶಾಲೆಗಳಿವೆ ಇವು ತೆರೆದಿರುತ್ತವೆ. ಇನ್ನೊಂದು ಬದಿಯಲ್ಲಿ ಕನಕಮಂಟಪದ ಎರಡು ದ್ವಾರಗಳು, ಚಿತ್ರಮಂದಿರ, ಲಾರಿ ಕಛೇರಿ ಇದ್ದು, ಇವುಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕಾಗುತ್ತದೆ. ಒಂದು ವೇಳೆ ಸೈಕಲ್ ಟ್ರಾಕ್ ನಿರ್ಮಾಣ ಮಾಡಿದ್ದಲ್ಲಿ ಅದು ಯಾವುದಕ್ಕೂ ಪ್ರಯೋಜನಕ್ಕೆ ಬಾರದೆ ಕೈಗೊಂಡ ಕಾಮಗಾರಿಯ ಹಣ ವ್ಯಯವಾಗಲಿದೆ ಎಂದು ಮನವರಿಕೆ ಮಾಡಲಾಗಿದೆ.
    ರಸ್ತೆಯ ಎರಡೂ ಬದಿ ಇರುವ ಚರಂಡಿಯ ಮೇಲ್ಗಡೆ ಅದೇ ಮಟ್ಟದಲ್ಲಿ ಸ್ಲಾಬ್ ಹಾಕಿಸಿ ದ್ವಿಚಕ್ರ ಮತ್ತು ಲಘುವಾಹನ(ಕಾರು)ನಿಲ್ಲಿಸುವುದಕ್ಕೆ ಅನುವು ಮಾಡಿಕೊಡಬೇಕೆಂದು ಕೋರಲಾಗಿದೆ.
ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ, ಕಾರ್ಯದರ್ಶಿ ಎನ್. ರಘುನಾಥರಾವ್ ಹಾಗು ಪದಾಧಿಕಾರಿಗು ಮನವಿ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.