Monday, June 12, 2023

ಬಜರಂಗದಳ ಜಿಲ್ಲಾ ಸಹ ಸಂಚಾಲಕ ಸುನಿಲ್‌ಕುಮಾರ್ ನಿಧನ

ಸುನಿಲ್‌ಕುಮಾರ್
    ಭದ್ರಾವತಿ, ಜೂ. ೧೩: ನಗರದ ಕೇಶವಪುರ-ಭೂತನಗುಡಿ ನಿವಾಸಿ, ಬಜರಂಗದಳ ಜಿಲ್ಲಾ ಸಹ ಸಂಚಾಲಕ ಸುನಿಲ್‌ಕುಮಾರ್(೩೯) ನಿಧನ ಹೊಂದಿದರು.
    ಅಪ್ಪ, ಅಮ್ಮ, ಪತ್ನಿ, ಇಬ್ಬರು ಪುತ್ರಿಯರು ಇದ್ದರು. ಸುನಿಲ್‌ಕುಮಾರ್ ಹಲವಾರು ವರ್ಷಗಳಿಂದ ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದು, ಚಿಕ್ಕ ವಯಸ್ಸಿನಿಂದಲೇ ಹಲವಾರು ಹಿಂದೂಪರ ಹೋರಾಟಗಳಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದರು. ವಿಶೇಷವಾಗಿ ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ಉಚಿತವಾಗಿ ಮೃತದೇಹಗಳ ಅಂತ್ಯಸಂಸ್ಕಾರ ನೆರವೇರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
    ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇವರ ನಿಧನಕ್ಕೆ ಸಂಸದ ಬಿ.ವೈ ರಾಘವೇಂದ್ರ, ಬಜರಂಗದಳ ಪ್ರಮುಖರು, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಶ್ರೀ ಕೆರೆಕೋಡಮ್ಮ ದೇವಿ ಸೇವಾ ಸಮಿತಿಯಿಂದ ಅಂಗನವಾಡಿ ಕಟ್ಟಡ ಲೋಕಾರ್ಪಣೆ

  

ಭದ್ರಾವತಿ ಹೊಸಮನೆ ಶ್ರೀ ಕೆರೆಕೋಡಮ್ಮ ದೇವಿ ಸೇವಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಅಂಗನವಾಡಿ ಕಟ್ಟಡವನ್ನು ಸೋಮವಾರ ಲೋಕಾರ್ಪಣೆಗೊಳಿಸಲಾಯಿತು. ನಗರಸಭಾ ಸದಸ್ಯ ಬಿ.ಕೆ ಮೋಹನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಜೂ. ೧೨ : ನಗರದ ಹೊಸಮನೆ ಶ್ರೀ ಕೆರೆಕೋಡಮ್ಮ ದೇವಿ ಸೇವಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಅಂಗನವಾಡಿ ಕಟ್ಟಡವನ್ನು ಸೋಮವಾರ ಲೋಕಾರ್ಪಣೆಗೊಳಿಸಲಾಯಿತು.
    ಶ್ರೀ ಕೆರೆಕೋಡಮ್ಮ ದೇವಿ ಸೇವಾ ಸಮಿತಿಗೆ ಸೇರಿರುವ ನಿವೇಶನದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಈ ಹಿಂದೆ ಸಮಿತಿ ನಿರ್ಧರಿಸಿತ್ತು. ಅದರಂತೆ ಸಮಿತಿ ತನ್ನ ಸ್ವಂತ ಹಣ ಹಾಗು ದಾನಿಗಳ ಸಹಕಾರದೊಂದಿಗೆ ಸುಮಾರು ೩.೫ ಲಕ್ಷ ರು. ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಿದೆ. ಕಟ್ಟಡವನ್ನು ಬಾಡಿಗೆ ಆಧಾರದಲ್ಲಿ ಸರ್ಕಾರಕ್ಕೆ ಹಸ್ತಾಂತರಿಸಿದ್ದು, ಇದರಿಂದ ಸಮಿತಿಯ ಆರ್ಥಿಕ ಕ್ರೋಢೀಕರಣಕ್ಕೆ ಸಹಕಾರಿಯಾಗಿದೆ.
    ಕಟ್ಟಡ ಲೋಕಾರ್ಪಣೆ ಅಂಗವಾಗಿ ಧಾರ್ಮಿಕ ಆಚರಣೆಗಳು ಜರುಗಿದವು. ನಗರಸಭಾ ಸದಸ್ಯ ಬಿ.ಕೆ ಮೋಹನ್ ಕಟ್ಟಡ ಲೋಕಾರ್ಪಣೆಗೊಳಿಸಿದರು. ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಮುಖಂಡರು, ನಿವಾಸಿಗಳು ಉಪಸ್ಥಿತರಿದ್ದರು. ಬಿ.ಕೆ ಮೋಹನ್ ಅವರನ್ನು ಸಮಿತಿವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಜೂ.೧೩ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ, ಜೂ. ೧೨ : ತಾಲೂಕಿನ ಮೆಸ್ಕಾಂ ಲಕ್ಕವಳ್ಳಿ ೬೬/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ.೧೩ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆವರೆಗೆ  ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ಗೋಣಿಬೀಡು, ಸಿಂಗನಮನೆ, ಗ್ಯಾರೇಜ್ ಕ್ಯಾಂಪ್, ಶಾಂತಿನಗರ, ಶಂಕರಘಟ್ಟ, ತಾವರಘಟ್ಟ, ಎಚ್.ಕೆ ಜಂಕ್ಷನ್, ಕುವೆಂಪು ವಿಶ್ವ ವಿದ್ಯಾನಿಲಯ, ರಂಗನಾಥಪುರ, ತಮ್ಮಡಿಹಳ್ಳಿ, ಮಾಳೇನಹಳ್ಳಿ, ನೆಲ್ಲಿಸರ, ಮಲ್ಲಿಗೇನಹಳ್ಳಿ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

ನಗರಸಭೆ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳು ಉಲ್ಬಣ : ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಆಕ್ರೋಶ

ಭದ್ರಾವತಿ ನಗರಸಭೆಯಲ್ಲಿ ಸೋಮವಾರ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಜೆಡಿಎಸ್ ಸದಸ್ಯರು ಸಭೆಯ ಬಾವಿಗಿಳಿದು ಮಾತಿನ ಚಕಮಕಿ ನಡೆಸಿದರು.
    ಭದ್ರಾವತಿ, ಜೂ. ೧೨ : ನಗರಸಭೆ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳು ಉಲ್ಬಣಗೊಂಡಿರುವ  ಕುರಿತು ಸೋಮವಾರ ನಡೆದ ಸಾಮಾನ್ಯಸಭೆಯಲ್ಲಿ ಸದಸ್ಯರು ಅಸಮಾಧಾನ ತೋರ್ಪಡಿಸುವ ಜೊತೆಗೆ ಅಧಿಕಾರಿಗಳ ನಿರ್ಲಕ್ಷ್ಯತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ವಿಧಾನಸಭಾ ಚುನಾವಣೆ ಪ್ರಕ್ರಿಯೆಗಳು ಮುಕ್ತಾಯಗೊಂಡು ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆದ ಮೊದಲ ಸಾಮಾನ್ಯಸಭೆಯಲ್ಲಿ ಸದಸ್ಯರು ನಗರಸಭೆ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳು ಉಲ್ಬಣಗೊಂಡಿರುವುದನ್ನು ಸಭೆಯ ಗಮನಕ್ಕೆ ತರುವ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಪ್ರಮುಖವಾಗಿ ನಗರದ ಹೃದಯ ಭಾಗದಲ್ಲಿ ಭದ್ರಾ ನದಿ ಹರಿಯುತ್ತಿದ್ದರೂ ಸಹ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಈ ನಡುವೆ ಕೆಲವೆಡೆ ನೀರು ಅನ್ಯಗತ್ಯವಾಗಿ ಪೋಲಾಗುತ್ತಿದೆ. ಈಗಾಗಲೇ ಕುಡಿಯುವ ನೀರಿನ ನಲ್ಲಿಗಳಿಗೆ ಮೀಟರ್ ಅಳವಡಿಸಿರುವ ಭಾಗಗಳಲ್ಲಿ ಚಾಲನೆ ನೀಡಬೇಕು. ಇದರಿಂದಾಗಿ ನೀರು ಪೋಲಾಗುವುದು ಸ್ವಲ್ಪಮಟ್ಟಿಗೆ ನಿಯಂತ್ರಿಸಲು ಸಾಧ್ಯ ಎಂದು ಸದಸ್ಯರು ಸಲಹೆ ವ್ಯಕ್ತಪಡಿಸಿದರು.
    ನಗರಸಭೆ ಎಲ್ಲಾ ವಾರ್ಡ್‌ಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಇದ್ದು, ಅಧಿಕಾರಿಗಳು ಸಮಸ್ಯೆ ಬಗೆ ಹರಿಸುವಲ್ಲಿ ನಿರ್ಲಕ್ಷ್ಯತನ ತೋರುತ್ತಿದ್ದಾರೆಂದು ಆರೋಪಿಸಿದರು. ಅಲ್ಲದೆ ಹಿರಿಯ ಸದಸ್ಯರಾದ ವಿ. ಕದಿರೇಶ್ ಮತ್ತು ಟಿಪ್ಪು ಸುಲ್ತಾನ್ ಸಭೆಯ ಬಾವಿಗಿಳಿದು ಮಲಗಿಕೊಂಡು ಪ್ರತಿಭಟಿಸುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದರು.
    ಸದಸ್ಯ ರಿಯಾಜ್ ಅಹಮದ್ ಮಾತನಾಡಿ, ವಾರ್ಡ್‌ಗಳಲ್ಲಿ ಸಮಸ್ಯೆಗಳು ಉಲ್ಬಣಗೊಂಡಿವೆ. ಸದಸ್ಯರು ಸಾಮಾನ್ಯಸಭೆಯಲ್ಲಿ ಹಲವು ಬಾರಿ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಿದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದಾಗಿ ವಾರ್ಡ್‌ಗಳಲ್ಲಿ ಸದಸ್ಯರಿಗೆ ಬೆಲೆ ಇಲ್ಲದಂತಾಗಿದೆ. ಸಾಮಾನ್ಯಸಭೆಗೆ ನೆಪಮಾತ್ರಕ್ಕೆ ಬಂದು ಹೋಗುವಂತಾಗಿದೆ ಎಂದು ಆಸಮಾಧಾನ ವ್ಯಕ್ತಪಡಿಸಿದರು.
    ಸದಸ್ಯ ಆರ್. ಮೋಹನ್‌ಕುಮಾರ್ ಮಾತನಾಡಿ, ಎಲ್ಲಾ ವಾರ್ಡ್‌ಗಳಲ್ಲೂ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಪರಿಸರ ಅಭಿಯಂತರ ಪ್ರಭಾಕರ್, ನಗರಸಭೆ ವತಿಯಿಂದ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಸದಸ್ಯ ಆರ್. ಮೋಹನ್‌ಕುಮಾರ್ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂಖ್ಯೆ ಎಷ್ಟಿದೆ, ಹಿಂದಿನ ವರ್ಷ ಎಷ್ಟು ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ನಡೆಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಿ. ನೆಪಮಾತ್ರ ಕೆಲವು ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ನಡೆಸಲಾಗಿದೆ ಎಂದು ಆರೋಪಿಸಿ ತಕ್ಷಣ ಬೀದಿನಾಯಿಗಳ ಹಾವಳಿ ನಿಯಂತ್ರಿಸಬೇಕೆಂದು ಆಗ್ರಹಿಸಿದರು.
    ಸದಸ್ಯೆ ಪಲ್ಲವಿ ಮಾತನಾಡಿ, ವಾರ್ಡ್‌ನಲ್ಲಿ ಕಳೆದ ೬ ತಿಂಗಳಿನಿಂದ ಶೌಚಾಲಯಗಳಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಹಲವು ಬಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಸಮಾಧಾನ ವ್ಯಕ್ತಪಡಿಸಿದರು.
    ಸದಸ್ಯ ಬಸವರಾಜ್ ಮಾತನಾಡಿ, ನಗರಸಭೆ ವತಿಯಿಂದ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಿ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಆದರೂ ಸಹ ರಾಜಕೀಯ ದುರುದ್ದೇಶದಿಂದ ಬೀದಿಬದಿ ವ್ಯಾಪಾರಿಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ಈ ನಡುವೆ ಕೆಲ ಸಮಯ ಗದ್ದಲದ ವಾತಾವರಣ ನಿರ್ಮಾಣಗೊಂಡಿತು. ಜೆಡಿಎಸ್ ಸದಸ್ಯರು ಸಭೆಯ ಬಾವಿಗಿಳಿದು ಮಾತಿನ ಚಕಮಕಿ ನಡೆಸಿದರು.
    ಸದಸ್ಯ ಚನ್ನಪ್ಪ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಬೀದಿಬದಿ ದೀಪಗಳ ಸಮಸ್ಯೆ ಹೆಚ್ಚಾಗಿದೆ. ಸಮಸ್ಯೆ ಬಗೆಹರಿಸಲು ಒಂದು ವರ್ಷದ ಹಿಂದೆಯೇ ಟೆಂಡರ್ ಕರೆದಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಮಾಧಾನ ವ್ಯಕ್ತಪಡಿಸಿದರು.
    ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಅನ್ವರ್ ಕಾಲೋನಿ ಭಾಗದಲ್ಲಿ ಎಲ್ಲಿಬೇಕೆಂದರಲ್ಲಿ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಅಂತಹವರಿಗೆ ದಂಡ ವಿಧಿಸಬೇಕೆಂದರು.
    ೧೫ನೇ ಹಣಕಾಸು ಯೋಜನೆಯ ಅನುದಾನದ ಕ್ರಿಯಾಯೋಜನೆ ಕಾಮಗಾರಿಗಳನ್ನು ಅನುಮೋದಿಸುವ ಕುರಿತು, ಎಸ್‌ಎಫ್‌ಸಿ ಅನುದಾನದಲ್ಲಿ ಕ್ರಿಯಾಯೋಜನೆಗಳನ್ನು ಅನುಷ್ಠಾನಗೊಳಿಸುವ ಕುರಿತು, ನೀರು ಸರಬರಾಜು ಯೋಜನೆಗಳ ನಿರ್ವಹಣೆಗಾಗಿ ಹಾಗು ಮಲೀನ ನೀರು ಶುದ್ಧೀಕರಣ ಘಟಕಗಳು ಮತ್ತು ವೆಟ್‌ವೆಲ್‌ಗಳ ನಿರ್ವಹಣೆಗಾಗಿ ಹೊರಗುತ್ತಿಗೆ ಆಧಾರದ ಮೇಲೆ ಗುತ್ತಿಗೆ ಸಿಬ್ಬಂದಿಗಳನ್ನು ಪಡೆಯುವ ಸಂಬಂಧ, ಜಿ+೩  ೨೦೪೮ ಗುಂಪು ಮನೆ ಯೋಜನೆಯಡಿ ಹೆಚ್ಚುವರಿಯಾಗಿ ಈಗಾಗಲೇ ಆಯ್ಕೆಗೊಂಡಿರುವ ಎಸ್‌ಸಿ/ಎಸ್‌ಟಿ ವರ್ಗ ೨೮ ಹಾಗು ಅಲ್ಪಸಂಖ್ಯಾತ ವರ್ಗ ೧೯೫ ಫಲಾನುಭವಿಗಳನ್ನು ಸಾಮಾನ್ಯ ವರ್ಗದಡಿ ಪರಿಗಣಿಸಿ ಆಯ್ಕೆಗೊಳಿಸಲು ಒಪ್ಪಿಗೆ ನೀಡುವ ಸಂಬಂಧ ಹಲವು ಪ್ರಸ್ತಾವನೆಗಳ ಕುರಿತು ಚರ್ಚಿಸಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
    ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನುಕುಮಾರ್ ಉಪಸ್ಥಿತರಿದ್ದರು.

Sunday, June 11, 2023

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರಿಗೆ ಪುನಃ ಎದುರಾದ ಸಂಕಷ್ಟ

ಹಂತ ಹಂತವಾಗಿ ಉತ್ಪಾದನೆ ಸ್ಥಗಿತ : ಕೆಲಸ ಕಳೆದುಕೊಳ್ಳುವ ಭೀತಿ

ಭದ್ರಾವತಿಯಲ್ಲಿ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪುತ್ರ, ನಗರಸಭೆ ಮಾಜಿ ಸದಸ್ಯ ಎಂ.ಎ ಅಜಿತ್ ನೇತೃತ್ವದಲ್ಲಿ ಕಾರ್ಖಾನೆ ಉಳಿವಿಗಾಗಿ ಗುತ್ತಿಗೆ ಕಾರ್ಮಿಕರ ನಿಯೋಗ ಶ್ರೀ ಕ್ಷೇತ್ರ  ಆದಿಚುಂಚುನಗಿರಿ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಹಾಗು ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ
    ಭದ್ರಾವತಿ, ಜೂ. ೧೧: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಹಂತ ಹಂತವಾಗಿ ಉತ್ಪಾದನೆ ಸ್ಥಗಿತಗೊಳ್ಳುತ್ತಿದ್ದು, ಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಂಡು ಪರದಾಡುವಂತಾಗಿದೆ.
    ಸುಮಾರು ೫ ತಿಂಗಳ ಹಿಂದೆ ಕಾರ್ಖಾನೆ ಮುಚ್ಚುವ ತೀರ್ಮಾನ ಕೈಗೊಂಡು ಆದೇಶ ಹೊರಡಿಸಲಾಗಿದ್ದು, ಇದರ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಿರಂತರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಹೋರಾಟಕ್ಕೆ ರಾಜ್ಯದ ವಿವಿಧ ಮಠಗಳ ಮಠಾಧೀಶರು, ಗಣ್ಯರು, ವಿವಿಧ ರಾಜಕೀಯಗಳು ಪಕ್ಷಗಳು, ಸಂಘ-ಸಂಸ್ಥೆಗಳು, ನಾಗರೀಕರು ಬೆಂಬಲ ಸೂಚಿಸಿ ಪಾಲ್ಗೊಂಡಿದ್ದಾರೆ. ರಸ್ತೆ ತಡೆ, ಭದ್ರಾವತಿ ಬಂದ್, ಪಾದಯಾತ್ರೆ, ಪಂಜಿನ ಮೆರವಣಿಗೆ, ಅರಬೆತ್ತಲೆ ಮೆರವಣಿಗೆ, ಸಹಿ ಅಭಿಯಾನ, ಪತ್ರ ಚಳುವಳಿ ಸೇರಿದಂತೆ ವಿವಿಧ ರೀತಿಯ ಹೋರಾಟಗಳು ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ, ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಸಚಿವರಿಗೆ, ಸಂಸದರಿಗೆ, ಉಕ್ಕು ಪ್ರಾಧಿಕಾರದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ, ಗಣ್ಯರಿಗೆ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.  
    ಈ ನಡುವೆ ವಿಧಾನಸಭಾ ಚುನಾವಣೆ ಘೋಷಣೆಗೂ ಮೊದಲು ಕಾರ್ಖಾನೆಯಲ್ಲಿ ಉತ್ಪಾದನೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಭೀತಿ ಎದುರಾಗಿತ್ತು. ಸಂಸದ ಬಿ.ವೈ ರಾಘವೇಂದ್ರ ಕೇಂದ್ರ ಸರ್ಕಾರ ಮುಂದಿನ ೧ ವರ್ಷದವರೆಗೆ ಯಾವುದೇ ಪ್ರಕ್ರಿಯೆ ಕೈಗೊಳ್ಳದೆ ಯಥಾಸ್ಥಿತಿ ಕಾಯ್ದುಕೊಳ್ಳುವ ಭರವಸೆ ನೀಡಿದೆ ಎಂದು ಸ್ಪಷ್ಟಪಡಿಸಿದ್ದರು.
ಇದೀಗ ಕಾರ್ಖಾನೆಯಲ್ಲಿ ಹಂತ ಹಂತವಾಗಿ ಉತ್ಪಾದನೆ ಸ್ಥಗಿತಗೊಳ್ಳುತ್ತಿದ್ದು, ಎಚ್‌ಟಿಎಸ್ ಇಲಾಖೆಯಲ್ಲಿನ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಗುತ್ತಿಗೆ ಕಾರ್ಮಿಕರಲ್ಲಿ ಪುನಃ ಆತಂಕ ಎದುರಾಗಿದೆ.
    ಸಂಸದರನ್ನು ಭೇಟಿ ಮಾಡಿದ ಗುತ್ತಿಗೆ ಕಾರ್ಮಿಕರ ನಿಯೋಗ :
    ಸಂಸದ ಬಿ.ವೈ ರಾಘವೇಂದ್ರ ಅವರನ್ನು ಗುತ್ತಿಗೆ ಕಾರ್ಮಿಕರ ನಿಯೋಗ ಜೂ.೧೦ರ ಶನಿವಾರ ಶಿವಮೊಗ್ಗದಲ್ಲಿ ಭೇಟಿ ಮಾಡಿದ್ದು, ಕಾರ್ಖಾನೆಯಲ್ಲಿನ ಪ್ರಸ್ತುತ ಬೆಳವಣಿಗೆಗಳನ್ನು ಮನವರಿಕೆ ಮಾಡಿಕೊಡಲಾಗಿದೆ. ಇದಕ್ಕೆ ಸ್ಪಂದಿಸಿರುವ ಸಂಸದರು ಶೀಘ್ರದಲ್ಲಿಯೇ ದೆಹಲಿಗೆ ತೆರಳಲಿದ್ದು, ಸಂಬಂಧಪಟ್ಟ ಸಚಿವರು, ಅಧಿಕಾರಿಗಳನ್ನು ಸಂಪರ್ಕಿಸಿ ಚರ್ಚಿಸಲಿದ್ದು, ಕಾರ್ಮಿಕರ ನಿಯೋಗ ಸಹ ದೆಹಲಿಗೆ ಬರುವಂತೆ ಸೂಚಿಸಿದರು.
    ಜೂ.೧೪ರಂದು ದೆಹಲಿಗೆ ಡಾ. ಶ್ರೀ ನಿರ್ಮಲನಂದನಾಥ ಸ್ವಾಮೀಜಿ :
    ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪುತ್ರ, ನಗರಸಭೆ ಮಾಜಿ ಸದಸ್ಯ ಎಂ.ಎ ಅಜಿತ್ ನೇತೃತ್ವದಲ್ಲಿ ಕಾರ್ಖಾನೆ ಉಳಿವಿಗಾಗಿ ಕಾರ್ಮಿಕರ ನಿಯೋಗ ಶ್ರೀ ಕ್ಷೇತ್ರ  ಆದಿಚುಂಚುನಗಿರಿ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಹಾಗು ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಇದಕ್ಕೆ ಸ್ಪಂದಿಸಿರುವ ಶ್ರೀಗಳು ಜೂ.೧೪ರಂದು ಕಾರ್ಮಿಕರ ನಿಯೋಗ ದೆಹಲಿಗೆ ಬರುವಂತೆ ಸೂಚಿಸಿದ್ದು, ಕಾರ್ಖಾನೆ ಸಂಬಂಧ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಪೋಷಕರ ಶ್ರಮಕ್ಕೆ ಸಾರ್ಥಕತೆ ತಂದು ಕೊಡಿ : ಎ. ಧರ್ಮೇಂದ್ರ

ಭದ್ರಾವತಿ ತಾಲೂಕಿನ ಅರಳಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೂಡ್ಲಿಗೆರೆ ಹರಿಹರೇಶ್ವರ ಪ್ರೌಢಶಾಲೆ ಮತ್ತು ನಾಗತಿಬೆಳಗಲು ಶ್ರೀ ನಂಜುಂಡೇಶ್ವರ ಪ್ರೌಢಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ಶ್ರೀ ವಿನಾಯಕ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿತರಿಸಲಾಯಿತು.
    ಭದ್ರಾವತಿ, ಜೂ. ೧೧ : ಮಕ್ಕಳು ಪೋಷಕರ ಶ್ರಮ ಅರ್ಥ ಮಾಡಿಕೊಳ್ಳಬೇಕು. ಅವರ ಶ್ರಮಕ್ಕೆ ಸಾರ್ಥಕತೆ ತಂದುಕೊಡುವ ನಿಟ್ಟಿನಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ಹರಿಸಿ ಸಾಧನೆ ದಾರಿಯಲ್ಲಿ ಸಾಗಬೇಕೆಂದು ಸಮಾಜ ಸೇವಕ, ದಾನಿ, ಶ್ರೀ ವಿನಾಯಕ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎ. ಧರ್ಮೇಂದ್ರ ಹೇಳಿದರು.
    ಪ್ರತಿ ವರ್ಷದಂತೆ ಈ ಬಾರಿ ಸಹ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ಶ್ರೀ ವಿನಾಯಕ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿತರಿಸಿ ಮಾತನಾಡಿದರು. ಪ್ರತಿಯೊಬ್ಬರಿಗೂ ಶಿಕ್ಷಣ ಬಹಳ ಮುಖ್ಯವಾಗಿದೆ. ಬಡತನ ಕಲಿಕೆಗೆ ಅಡ್ಡಿಯಾಗಬಾರದು. ನಾವು ಅನುಭವಿಸಿದ ಕಷ್ಟಗಳು ಇಂದಿನ ಮಕ್ಕಳು ಎದುರಿಸಬಾರದು ಎಂಬ ಉದ್ದೇಶದೊಂದಿಗೆ ಉಚಿತ ನೋಟ್ ಪುಸ್ತಕಗಳನ್ನು ಹಲವಾರು ವರ್ಷಗಳಿಂದ ವಿತರಿಸಲಾಗುತ್ತಿದೆ. ಇದನ್ನು ಮಕ್ಕಳು ಅರ್ಥ ಮಾಡಿಕೊಂಡು ಕಲಿಕೆಗೆ ಹೆಚ್ಚಿನ ಆಸಕ್ತಿ ತೋರಬೇಕೆಂದರು.
    ಅರಳಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೂಡ್ಲಿಗೆರೆ ಹರಿಹರೇಶ್ವರ ಪ್ರೌಢಶಾಲೆ ಮತ್ತು ನಾಗತಿಬೆಳಗಲು ಶ್ರೀ ನಂಜುಂಡೇಶ್ವರ ಪ್ರೌಢಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
    ಶ್ರೀ ವಿನಾಯಕ ಚಾರಿಟಬಲ್ ಟ್ರಸ್ಟ್ ಸೇವಾ ಕಾರ್ಯ ಸ್ಮರಿಸಿ ಎ. ಧರ್ಮೇಂದ್ರ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಆಯಾ ಶಾಲೆಗಳ  ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸಿಬ್ಬಂದಿ ವರ್ಗದವರು, ಪೋಷಕರು ಉಪಸ್ಥಿತರಿದ್ದರು.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ : ಸಂಭ್ರಮದ ದಿನ

ಶಕ್ತಿ ಯೋಜನೆ ಉದ್ಘಾಟಿಸಿದ ನಗರಸಭೆ ಸದಸ್ಯ ಬಿ.ಕೆ ಮೋಹನ್

ಭದ್ರಾವತಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಭಾನುವಾರ ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ರಾಜ್ಯಾದ್ಯಂತ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗು ವೇತದೂತ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಶಕ್ತಿ ಯೋಜನೆ ಉದ್ಘಾಟಿಸಲಾಯಿತು.  
    ಭದ್ರಾವತಿ, ಜೂ. ೧೧ : ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದು, ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಜೂ.೧೧ ಮಹಿಳೆಯರು ಸಂಭ್ರಮಿಸುವ ದಿನವಾಗಿದೆ ಎಂದು ನಗರಸಭೆ ಸದಸ್ಯ ಬಿ.ಕೆ ಮೋಹನ್ ಹೇಳಿದರು.
    ಅವರು ಭಾನುವಾರ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ರಾಜ್ಯಾದ್ಯಂತ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗು ವೇತದೂತ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಶಕ್ತಿ ಯೋಜನೆ ಉದ್ಘಾಟಿಸಿ ಮಾತನಾಡಿದರು.
    ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್‌ನಲ್ಲಿ  ಘೋಷಿಸಿರುವ ಯೋಜನೆಗಳ ಕುರಿತು ಟೀಕೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಕಾಂಗ್ರೆಸ್ ಪಕ್ಷದವರು ದಡ್ಡರಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಳಿತದಲ್ಲಿ ಹೆಚ್ಚಿನ ಅನುಭವ ಹೊಂದಿದ್ದಾರೆ. ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆಯಲಾಗುತ್ತಿದೆ. ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದರು.
    ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸದಸ್ಯರಾದ ಚನ್ನಪ್ಪ, ಗೀತಾ ರಾಜ್‌ಕುಮಾರ್, ಲತಾ ಚಂದ್ರಶೇಖರ್, ಶೃತಿ ವಸಂತ್, ಮಹಮದ್ ಯೂಸಫ್, ಉಪತಹಸೀಲ್ದಾರ್ ಮಂಜನಾಯ್ಕ, ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ ರಂಗನಾಥ್ ಅಂತರಗಟ್ಟಿ,  ಮುಖಂಡರಾದ ಎಚ್.ಎಲ್ ಷಡಾಕ್ಷರಿ, ಬಿ.ಕೆ ಜಗನ್ನಾಥ್, ಎಸ್. ಮಣಿಶೇಖರ್, ಅಮೀರ್‌ಜಾನ್, ವೈ.ಎಚ್ ನಾಗರಾಜ್, ಕೆಎಸ್‌ಆರ್‌ಟಿಸಿ ಭದ್ರಾವತಿ ಬಸ್ ಘಟಕದ ವ್ಯವಸ್ಥಾಪಕರು, ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.