ಭದ್ರಾವತಿ ನಗರಸಭೆಯಲ್ಲಿ ಸೋಮವಾರ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಜೆಡಿಎಸ್ ಸದಸ್ಯರು ಸಭೆಯ ಬಾವಿಗಿಳಿದು ಮಾತಿನ ಚಕಮಕಿ ನಡೆಸಿದರು.
ಭದ್ರಾವತಿ, ಜೂ. ೧೨ : ನಗರಸಭೆ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳು ಉಲ್ಬಣಗೊಂಡಿರುವ ಕುರಿತು ಸೋಮವಾರ ನಡೆದ ಸಾಮಾನ್ಯಸಭೆಯಲ್ಲಿ ಸದಸ್ಯರು ಅಸಮಾಧಾನ ತೋರ್ಪಡಿಸುವ ಜೊತೆಗೆ ಅಧಿಕಾರಿಗಳ ನಿರ್ಲಕ್ಷ್ಯತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭಾ ಚುನಾವಣೆ ಪ್ರಕ್ರಿಯೆಗಳು ಮುಕ್ತಾಯಗೊಂಡು ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆದ ಮೊದಲ ಸಾಮಾನ್ಯಸಭೆಯಲ್ಲಿ ಸದಸ್ಯರು ನಗರಸಭೆ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳು ಉಲ್ಬಣಗೊಂಡಿರುವುದನ್ನು ಸಭೆಯ ಗಮನಕ್ಕೆ ತರುವ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರಮುಖವಾಗಿ ನಗರದ ಹೃದಯ ಭಾಗದಲ್ಲಿ ಭದ್ರಾ ನದಿ ಹರಿಯುತ್ತಿದ್ದರೂ ಸಹ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಈ ನಡುವೆ ಕೆಲವೆಡೆ ನೀರು ಅನ್ಯಗತ್ಯವಾಗಿ ಪೋಲಾಗುತ್ತಿದೆ. ಈಗಾಗಲೇ ಕುಡಿಯುವ ನೀರಿನ ನಲ್ಲಿಗಳಿಗೆ ಮೀಟರ್ ಅಳವಡಿಸಿರುವ ಭಾಗಗಳಲ್ಲಿ ಚಾಲನೆ ನೀಡಬೇಕು. ಇದರಿಂದಾಗಿ ನೀರು ಪೋಲಾಗುವುದು ಸ್ವಲ್ಪಮಟ್ಟಿಗೆ ನಿಯಂತ್ರಿಸಲು ಸಾಧ್ಯ ಎಂದು ಸದಸ್ಯರು ಸಲಹೆ ವ್ಯಕ್ತಪಡಿಸಿದರು.
ನಗರಸಭೆ ಎಲ್ಲಾ ವಾರ್ಡ್‌ಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಇದ್ದು, ಅಧಿಕಾರಿಗಳು ಸಮಸ್ಯೆ ಬಗೆ ಹರಿಸುವಲ್ಲಿ ನಿರ್ಲಕ್ಷ್ಯತನ ತೋರುತ್ತಿದ್ದಾರೆಂದು ಆರೋಪಿಸಿದರು. ಅಲ್ಲದೆ ಹಿರಿಯ ಸದಸ್ಯರಾದ ವಿ. ಕದಿರೇಶ್ ಮತ್ತು ಟಿಪ್ಪು ಸುಲ್ತಾನ್ ಸಭೆಯ ಬಾವಿಗಿಳಿದು ಮಲಗಿಕೊಂಡು ಪ್ರತಿಭಟಿಸುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದರು.
ಸದಸ್ಯ ರಿಯಾಜ್ ಅಹಮದ್ ಮಾತನಾಡಿ, ವಾರ್ಡ್‌ಗಳಲ್ಲಿ ಸಮಸ್ಯೆಗಳು ಉಲ್ಬಣಗೊಂಡಿವೆ. ಸದಸ್ಯರು ಸಾಮಾನ್ಯಸಭೆಯಲ್ಲಿ ಹಲವು ಬಾರಿ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಿದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದಾಗಿ ವಾರ್ಡ್‌ಗಳಲ್ಲಿ ಸದಸ್ಯರಿಗೆ ಬೆಲೆ ಇಲ್ಲದಂತಾಗಿದೆ. ಸಾಮಾನ್ಯಸಭೆಗೆ ನೆಪಮಾತ್ರಕ್ಕೆ ಬಂದು ಹೋಗುವಂತಾಗಿದೆ ಎಂದು ಆಸಮಾಧಾನ ವ್ಯಕ್ತಪಡಿಸಿದರು.
ಸದಸ್ಯ ಆರ್. ಮೋಹನ್‌ಕುಮಾರ್ ಮಾತನಾಡಿ, ಎಲ್ಲಾ ವಾರ್ಡ್‌ಗಳಲ್ಲೂ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಪರಿಸರ ಅಭಿಯಂತರ ಪ್ರಭಾಕರ್, ನಗರಸಭೆ ವತಿಯಿಂದ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಸದಸ್ಯ ಆರ್. ಮೋಹನ್‌ಕುಮಾರ್ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂಖ್ಯೆ ಎಷ್ಟಿದೆ, ಹಿಂದಿನ ವರ್ಷ ಎಷ್ಟು ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ನಡೆಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಿ. ನೆಪಮಾತ್ರ ಕೆಲವು ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ನಡೆಸಲಾಗಿದೆ ಎಂದು ಆರೋಪಿಸಿ ತಕ್ಷಣ ಬೀದಿನಾಯಿಗಳ ಹಾವಳಿ ನಿಯಂತ್ರಿಸಬೇಕೆಂದು ಆಗ್ರಹಿಸಿದರು.
ಸದಸ್ಯೆ ಪಲ್ಲವಿ ಮಾತನಾಡಿ, ವಾರ್ಡ್‌ನಲ್ಲಿ ಕಳೆದ ೬ ತಿಂಗಳಿನಿಂದ ಶೌಚಾಲಯಗಳಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಹಲವು ಬಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಸಮಾಧಾನ ವ್ಯಕ್ತಪಡಿಸಿದರು.
ಸದಸ್ಯ ಬಸವರಾಜ್ ಮಾತನಾಡಿ, ನಗರಸಭೆ ವತಿಯಿಂದ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಿ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಆದರೂ ಸಹ ರಾಜಕೀಯ ದುರುದ್ದೇಶದಿಂದ ಬೀದಿಬದಿ ವ್ಯಾಪಾರಿಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ಈ ನಡುವೆ ಕೆಲ ಸಮಯ ಗದ್ದಲದ ವಾತಾವರಣ ನಿರ್ಮಾಣಗೊಂಡಿತು. ಜೆಡಿಎಸ್ ಸದಸ್ಯರು ಸಭೆಯ ಬಾವಿಗಿಳಿದು ಮಾತಿನ ಚಕಮಕಿ ನಡೆಸಿದರು.
ಸದಸ್ಯ ಚನ್ನಪ್ಪ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಬೀದಿಬದಿ ದೀಪಗಳ ಸಮಸ್ಯೆ ಹೆಚ್ಚಾಗಿದೆ. ಸಮಸ್ಯೆ ಬಗೆಹರಿಸಲು ಒಂದು ವರ್ಷದ ಹಿಂದೆಯೇ ಟೆಂಡರ್ ಕರೆದಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಮಾಧಾನ ವ್ಯಕ್ತಪಡಿಸಿದರು.
ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಅನ್ವರ್ ಕಾಲೋನಿ ಭಾಗದಲ್ಲಿ ಎಲ್ಲಿಬೇಕೆಂದರಲ್ಲಿ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಅಂತಹವರಿಗೆ ದಂಡ ವಿಧಿಸಬೇಕೆಂದರು.
೧೫ನೇ ಹಣಕಾಸು ಯೋಜನೆಯ ಅನುದಾನದ ಕ್ರಿಯಾಯೋಜನೆ ಕಾಮಗಾರಿಗಳನ್ನು ಅನುಮೋದಿಸುವ ಕುರಿತು, ಎಸ್‌ಎಫ್‌ಸಿ ಅನುದಾನದಲ್ಲಿ ಕ್ರಿಯಾಯೋಜನೆಗಳನ್ನು ಅನುಷ್ಠಾನಗೊಳಿಸುವ ಕುರಿತು, ನೀರು ಸರಬರಾಜು ಯೋಜನೆಗಳ ನಿರ್ವಹಣೆಗಾಗಿ ಹಾಗು ಮಲೀನ ನೀರು ಶುದ್ಧೀಕರಣ ಘಟಕಗಳು ಮತ್ತು ವೆಟ್‌ವೆಲ್‌ಗಳ ನಿರ್ವಹಣೆಗಾಗಿ ಹೊರಗುತ್ತಿಗೆ ಆಧಾರದ ಮೇಲೆ ಗುತ್ತಿಗೆ ಸಿಬ್ಬಂದಿಗಳನ್ನು ಪಡೆಯುವ ಸಂಬಂಧ, ಜಿ+೩ ೨೦೪೮ ಗುಂಪು ಮನೆ ಯೋಜನೆಯಡಿ ಹೆಚ್ಚುವರಿಯಾಗಿ ಈಗಾಗಲೇ ಆಯ್ಕೆಗೊಂಡಿರುವ ಎಸ್‌ಸಿ/ಎಸ್‌ಟಿ ವರ್ಗ ೨೮ ಹಾಗು ಅಲ್ಪಸಂಖ್ಯಾತ ವರ್ಗ ೧೯೫ ಫಲಾನುಭವಿಗಳನ್ನು ಸಾಮಾನ್ಯ ವರ್ಗದಡಿ ಪರಿಗಣಿಸಿ ಆಯ್ಕೆಗೊಳಿಸಲು ಒಪ್ಪಿಗೆ ನೀಡುವ ಸಂಬಂಧ ಹಲವು ಪ್ರಸ್ತಾವನೆಗಳ ಕುರಿತು ಚರ್ಚಿಸಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನುಕುಮಾರ್ ಉಪಸ್ಥಿತರಿದ್ದರು.
No comments:
Post a Comment