ಹಂತ ಹಂತವಾಗಿ ಉತ್ಪಾದನೆ ಸ್ಥಗಿತ : ಕೆಲಸ ಕಳೆದುಕೊಳ್ಳುವ ಭೀತಿ
ಭದ್ರಾವತಿಯಲ್ಲಿ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪುತ್ರ, ನಗರಸಭೆ ಮಾಜಿ ಸದಸ್ಯ ಎಂ.ಎ ಅಜಿತ್ ನೇತೃತ್ವದಲ್ಲಿ ಕಾರ್ಖಾನೆ ಉಳಿವಿಗಾಗಿ ಗುತ್ತಿಗೆ ಕಾರ್ಮಿಕರ ನಿಯೋಗ ಶ್ರೀ ಕ್ಷೇತ್ರ ಆದಿಚುಂಚುನಗಿರಿ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಹಾಗು ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ
ಭದ್ರಾವತಿ, ಜೂ. ೧೧: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಹಂತ ಹಂತವಾಗಿ ಉತ್ಪಾದನೆ ಸ್ಥಗಿತಗೊಳ್ಳುತ್ತಿದ್ದು, ಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಂಡು ಪರದಾಡುವಂತಾಗಿದೆ.
ಸುಮಾರು ೫ ತಿಂಗಳ ಹಿಂದೆ ಕಾರ್ಖಾನೆ ಮುಚ್ಚುವ ತೀರ್ಮಾನ ಕೈಗೊಂಡು ಆದೇಶ ಹೊರಡಿಸಲಾಗಿದ್ದು, ಇದರ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಿರಂತರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಹೋರಾಟಕ್ಕೆ ರಾಜ್ಯದ ವಿವಿಧ ಮಠಗಳ ಮಠಾಧೀಶರು, ಗಣ್ಯರು, ವಿವಿಧ ರಾಜಕೀಯಗಳು ಪಕ್ಷಗಳು, ಸಂಘ-ಸಂಸ್ಥೆಗಳು, ನಾಗರೀಕರು ಬೆಂಬಲ ಸೂಚಿಸಿ ಪಾಲ್ಗೊಂಡಿದ್ದಾರೆ. ರಸ್ತೆ ತಡೆ, ಭದ್ರಾವತಿ ಬಂದ್, ಪಾದಯಾತ್ರೆ, ಪಂಜಿನ ಮೆರವಣಿಗೆ, ಅರಬೆತ್ತಲೆ ಮೆರವಣಿಗೆ, ಸಹಿ ಅಭಿಯಾನ, ಪತ್ರ ಚಳುವಳಿ ಸೇರಿದಂತೆ ವಿವಿಧ ರೀತಿಯ ಹೋರಾಟಗಳು ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ, ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಸಚಿವರಿಗೆ, ಸಂಸದರಿಗೆ, ಉಕ್ಕು ಪ್ರಾಧಿಕಾರದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ, ಗಣ್ಯರಿಗೆ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ಈ ನಡುವೆ ವಿಧಾನಸಭಾ ಚುನಾವಣೆ ಘೋಷಣೆಗೂ ಮೊದಲು ಕಾರ್ಖಾನೆಯಲ್ಲಿ ಉತ್ಪಾದನೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಭೀತಿ ಎದುರಾಗಿತ್ತು. ಸಂಸದ ಬಿ.ವೈ ರಾಘವೇಂದ್ರ ಕೇಂದ್ರ ಸರ್ಕಾರ ಮುಂದಿನ ೧ ವರ್ಷದವರೆಗೆ ಯಾವುದೇ ಪ್ರಕ್ರಿಯೆ ಕೈಗೊಳ್ಳದೆ ಯಥಾಸ್ಥಿತಿ ಕಾಯ್ದುಕೊಳ್ಳುವ ಭರವಸೆ ನೀಡಿದೆ ಎಂದು ಸ್ಪಷ್ಟಪಡಿಸಿದ್ದರು.
ಇದೀಗ ಕಾರ್ಖಾನೆಯಲ್ಲಿ ಹಂತ ಹಂತವಾಗಿ ಉತ್ಪಾದನೆ ಸ್ಥಗಿತಗೊಳ್ಳುತ್ತಿದ್ದು, ಎಚ್‌ಟಿಎಸ್ ಇಲಾಖೆಯಲ್ಲಿನ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಗುತ್ತಿಗೆ ಕಾರ್ಮಿಕರಲ್ಲಿ ಪುನಃ ಆತಂಕ ಎದುರಾಗಿದೆ.
ಸಂಸದರನ್ನು ಭೇಟಿ ಮಾಡಿದ ಗುತ್ತಿಗೆ ಕಾರ್ಮಿಕರ ನಿಯೋಗ :
ಸಂಸದ ಬಿ.ವೈ ರಾಘವೇಂದ್ರ ಅವರನ್ನು ಗುತ್ತಿಗೆ ಕಾರ್ಮಿಕರ ನಿಯೋಗ ಜೂ.೧೦ರ ಶನಿವಾರ ಶಿವಮೊಗ್ಗದಲ್ಲಿ ಭೇಟಿ ಮಾಡಿದ್ದು, ಕಾರ್ಖಾನೆಯಲ್ಲಿನ ಪ್ರಸ್ತುತ ಬೆಳವಣಿಗೆಗಳನ್ನು ಮನವರಿಕೆ ಮಾಡಿಕೊಡಲಾಗಿದೆ. ಇದಕ್ಕೆ ಸ್ಪಂದಿಸಿರುವ ಸಂಸದರು ಶೀಘ್ರದಲ್ಲಿಯೇ ದೆಹಲಿಗೆ ತೆರಳಲಿದ್ದು, ಸಂಬಂಧಪಟ್ಟ ಸಚಿವರು, ಅಧಿಕಾರಿಗಳನ್ನು ಸಂಪರ್ಕಿಸಿ ಚರ್ಚಿಸಲಿದ್ದು, ಕಾರ್ಮಿಕರ ನಿಯೋಗ ಸಹ ದೆಹಲಿಗೆ ಬರುವಂತೆ ಸೂಚಿಸಿದರು.
ಜೂ.೧೪ರಂದು ದೆಹಲಿಗೆ ಡಾ. ಶ್ರೀ ನಿರ್ಮಲನಂದನಾಥ ಸ್ವಾಮೀಜಿ :
ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪುತ್ರ, ನಗರಸಭೆ ಮಾಜಿ ಸದಸ್ಯ ಎಂ.ಎ ಅಜಿತ್ ನೇತೃತ್ವದಲ್ಲಿ ಕಾರ್ಖಾನೆ ಉಳಿವಿಗಾಗಿ ಕಾರ್ಮಿಕರ ನಿಯೋಗ ಶ್ರೀ ಕ್ಷೇತ್ರ ಆದಿಚುಂಚುನಗಿರಿ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಹಾಗು ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಇದಕ್ಕೆ ಸ್ಪಂದಿಸಿರುವ ಶ್ರೀಗಳು ಜೂ.೧೪ರಂದು ಕಾರ್ಮಿಕರ ನಿಯೋಗ ದೆಹಲಿಗೆ ಬರುವಂತೆ ಸೂಚಿಸಿದ್ದು, ಕಾರ್ಖಾನೆ ಸಂಬಂಧ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
No comments:
Post a Comment