ವಿಐಎಸ್‌ಎಲ್ ಆಡಳಿತ ಮಂಡಳಿ ಜೊತೆಗೆ ಶಾಸಕ ಸಂಗಮೇಶ್ವರ್ ಚರ್ಚೆ
ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಳಿಸದೆ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದರು.
ಭದ್ರಾವತಿ, ಜೂ. ೨೭: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಳಿಸದೆ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದರು.
ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯುವಂತೆ ಹಾಗು ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಮತ್ತು ಗುತ್ತಿಗೆ ಕಾರ್ಮಿಕರ ಹಿತಕಾಪಾಡುವಂತೆ ಆಗ್ರಹಿಸಿ ಕಳೆದ ಸುಮಾರು ೬ ತಿಂಗಳಿನಿಂದ ನಿರಂತರವಾಗಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಆರಂಭದಿಂದಲೂ ಶಾಸಕ ಬಿ.ಕೆ ಸಂಗಮೇಶ್ವರ್ ಬೆಂಬಲ ಸೂಚಿಸಿಕೊಂಡು ಬಂದಿದ್ದು, ಈ ನಡುವೆ ವಿಧಾನಸಭಾ ಚುನಾವಣೆ ಎದುರಾದ ಹಿನ್ನಲೆಯಲ್ಲಿ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಸ್ಪಂದಿಸಲು ಅವರಿಗೆ ಸಾಧ್ಯವಾಗಿರಲಿಲ್ಲ.
ಕಳೆದ ತಿಂಗಳು ಚುನಾವಣೆ ಮುಕ್ತಾಯಗೊಂಡಿದ್ದು, ೪ನೇ ಬಾರಿಗೆ ಕ್ಷೇತ್ರದ ಶಾಸಕರಾಗಿ ಸಂಗಮೇಶ್ವರ್ ಆಯ್ಕೆಯಾಗಿದ್ದಾರೆ. ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದ ಇವರು ಕಳೆದ ೪ ತಿಂಗಳ ಹಿಂದೆ ನಗರಕ್ಕೆ ಆಗಮಿಸಿದ್ದು, ಈ ಹಿನ್ನಲೆಯಲ್ಲಿ ಮಂಗಳವಾರ ಕಾರ್ಖಾನೆ ಆಡಳಿತ ಮಂಡಳಿ ಜೊತೆ ಪ್ರಸ್ತುತ ಬೆಳವಣಿಗೆಗಳ ಕುರಿತು ಮಾಹಿತಿ ಪಡೆದು ಗುತ್ತಿಗೆ ಕಾರ್ಮಿಕರ ಹಿತಕಾಪಾಡುವ ನಿಟ್ಟಿನಲ್ಲಿ ಮುಂದಿನ ಕ್ರಮಗಳನ್ನು ಚರ್ಚಿಸಿದರು.
ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ, ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್‌ಕುಮಾರ್ ಹಾಗು ಕಾಯಂ ಮತ್ತು ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.