ಭದ್ರಾವತಿ ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ಹಾಗೂ ಅಭಿನಂದನೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಜೂ. ೨೬ : ಪ್ರತಿಯೊಬ್ಬರಲ್ಲೂ ಮಾನವೀಯ ಮೌಲ್ಯಗಳು ಅತ್ಯವಶ್ಯಕವಾಗಿದ್ದು, ೧೨ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಈ ನಿಟ್ಟಿನಲ್ಲಿಯೇ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು ಎಂದು ಸಂಕೇಶ್ವರದ ವಿಶ್ರಾಂತ ಪ್ರಾಧ್ಯಾಪಕ ಡಾ. ಗುರುಪಾದ ಎಸ್. ಮರಿಗುದ್ದಿ ಹೇಳಿದರು.
ಅವರು ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ಹಾಗೂ ಅಭಿನಂದನೆ ಕಾರ್ಯಕ್ರಮದಲ್ಲಿ 'ಮಾನವತೆಯ ಮಹಾಯಾನಿ ಬಸವಣ್ಣ' ವಿಷಯ ಮಾತನಾಡಿದರು.
ಜಗಜ್ಯೋತಿ ಬಸವಣ್ಣನವರ ವಚನಗಳು ಮಾನವತೆಯ ನೆಲೆಗಟ್ಟಿನ ಮೇಲೆ ರೂಪುಗೊಂಡಿವೆ. ಧರ್ಮ, ಜಾತಿ, ಲಿಂಗ ತಾರತಮ್ಯವಿಲ್ಲದೆ ಭೂಮಿ ಮೇಲೆ ಪ್ರತಿಯೊಬ್ಬರನ್ನು ಸಮಾನವಾಗಿ ಕಾಣುವ, ಪ್ರೀತಿಸುವ, ಗೌರವಿಸುವ, ಸಹಬಾಳ್ವೆ ಬದುಕು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಮಾನವೀಯ ಮೌಲ್ಯಗಳು ಸಹಕಾರಿಯಾಗಿವೆ. ನುಡಿದಂತೆ ನಡೆವ ಬಸವಣ್ಣನವರ ಬದುಕು, ವಚನಗಳು ಇಂದಿಗೂ ನಮ್ಮೆಲ್ಲರಿಗೂ ಆದರ್ಶತನವಾಗಿದೆ. ವಚನಗಳಲ್ಲಿನ ಪ್ರತಿಯೊಂದು ಮೌಲ್ಯಗಳನ್ನು ಅರ್ಥಮಾಡಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ಬದುಕೇ ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಅವರ ಆಶಯದಂತೆ ನಾವೆಲ್ಲರೂ ಮುನ್ನಡೆಯಬೇಕಾಗಿದೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್ವರ್, ೪ನೇ ಬಾರಿಗೆ ಕ್ಷೇತ್ರದ ಶಾಸಕರನ್ನಾಗಿ ಆಯ್ಕೆ ಮಾಡಿರುವ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯದಲ್ಲಿ ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಪ್ರತಿಯೊಬ್ಬರ ಏಳಿಗೆಗಾಗಿ ಶ್ರಮಿಸುತ್ತಿದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನಾನು ಬದ್ಧನಾಗಿದ್ದು, ಈಗಾಗಲೇ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸಾವಿರಾರು ಕೋ.ರು. ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಕ್ಷೇತ್ರದ ಜನರು ನನ್ನ ಮೇಲೆ ಹೊಂದಿರುವ ವಿಶ್ವಾಸಕ್ಕೆ ಚಿರಋಣಿಯಾಗಿರುವೆ ಎಂದರು.
ಚಿಕ್ಕಮಗಳೂರು ಶ್ರೀ ಬಸವತತ್ವ ಪೀಠ ಹಾಗು ಶಿವಮೊಗ್ಗ ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿದ್ದರು.
ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಅಭಿನಂದನಾ ನುಡಿಗಳನ್ನಾಡಿದರು. ಪರಿಷತ್ ತಾಲೂಕು ಅಧ್ಯಕ್ಷ ಎನ್.ಎಸ್ ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು. ಎಂ. ವಿರುಪಾಕ್ಷಪ್ಪ ಕಾರ್ಯಕ್ರಮ ನಿರೂಪಿಸಿದರು. ವಚನ ಗಾಯನ ನಡೆಯಿತು.
No comments:
Post a Comment